ಬೀದಿ ಬದಿಯ ಆಹಾರದ ರುಚಿಯೇ ಬೇರೆ , ಹಾಗೂ ಇದು ನಿಮ್ಮ ಜೇಬಿಗೂ ಉತ್ತಮ. ಸ್ವಚ್ಛತೆ ಇಲ್ಲ, ಬೀದಿಯಲ್ಲೇ ತಯಾರಿಸುತ್ತಾರೆ ಎಂದೆಲ್ಲಾ ದೂರುಗಳಿದ್ದರೂ ಇದರ ರುಚಿಗೆ ಮಾರು ಹೋಗದವರು ತೀರಾ ಕಡಿಮೆ. ತಿಂಡಿಪೋತರಾಗಿದ್ದರಂತೂ ನೀವು ಬೀದಿ ಬದಿ ಆಹಾರ ಇಷ್ಟಪಡದಿರಲು ಸಾಧ್ಯವಿಲ್ಲ.
ನವದೆಹಲಿ: ಬೀದಿ ಬದಿಯ ಆಹಾರದ ರುಚಿಯೇ ಬೇರೆ , ಹಾಗೂ ಇದು ನಿಮ್ಮ ಜೇಬಿಗೂ ಉತ್ತಮ. ಸ್ವಚ್ಛತೆ ಇಲ್ಲ, ಬೀದಿಯಲ್ಲೇ ತಯಾರಿಸುತ್ತಾರೆ ಎಂದೆಲ್ಲಾ ದೂರುಗಳಿದ್ದರೂ ಇದರ ರುಚಿಗೆ ಮಾರು ಹೋಗದವರು ತೀರಾ ಕಡಿಮೆ. ತಿಂಡಿಪೋತರಾಗಿದ್ದರಂತೂ ನೀವು ಬೀದಿ ಬದಿ ಆಹಾರ ಇಷ್ಟಪಡದಿರಲು ಸಾಧ್ಯವಿಲ್ಲ. ಅದರಲ್ಲೂ ಪಾನಿಪುರಿಯಂತೂ ಬಹುತೇಕರ ಬಹಳ ಪ್ರಿಯವಾದ ಬೀದಿ ಬದಿ ಆಹಾರ ಇದನ್ನು ಇಷ್ಟಪಡದವರಿಲ್ಲ. ಹಾಗೆಯೇ ಬೀದಿ ಬದಿ ಆಹಾರವೆನಿಸಿದ ಈ ಪಾನಿಪುರಿಯನ್ನು ಬೀದಿ ಬದಿಯೇ ಈಗ ಕೊರಿಯನ್ ಪ್ರಜೆಯೊಬ್ಬ ತಿಂದು ಬಾಯಿ ಚಪ್ಪರಿಸುತ್ತಿದ್ದು, ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇತ್ತೀಚೆಗೆ ಪಾನಿಪುರಿಯಲ್ಲೂ ಹಲವರು ವಿಧಗಳಿವೆ. ವಿವಿಧ ರುಚಿಗಳಲ್ಲಿ ಪಾನಿಪುರಿಯನ್ನು ನೀವು ಸವಿಯಬಹುದಾಗಿದ್ದು, ಸಿಹಿ, ಖಾರದ ಜೊತೆ ಅದೆರಡರ ಮಿಶ್ರಣವಲ್ಲದೇ ಪುದೀನಾ, ಅನಾನಸ್, ಸ್ಟ್ರಾಬೆರಿ ಸೇರಿದಂತೆ ಹಲವು ವಿವಿಧ ರುಚಿಗಳಲ್ಲಿ ನಿಮಗೆ ಪಾನಿಪುರಿ ಈಗ ಲಭ್ಯವಿದೆ. ಹಾಗೇಯೇ ಇಲ್ಲಿ ಕೊರಿಯನ್ ವ್ಯಕ್ತಿಯೊಬ್ಬ ಬೀದಿ ಬದಿ ಪಾನಿಪುರಿ ಸವಿದಿದ್ದು, ಅದು ಆತನಿಗೆ ಇಷ್ಟವಾಗಿದೆ. ಬಾಯಿ ಚಪ್ಪರಿಸುತ್ತಾ ಪಾನಿಪುರಿ ತಿಂದ ಆತ ಮತ್ತಷ್ಟು ಪಾನಿಪುರಿ ನೀಡುವಂತೆ ಮಾರಾಟಗಾರನನ್ನು ಕೇಳಿದ್ದಾನೆ. ಈ ವಿಡಿಯೋಗೆ ಭಾರತೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಹೀಗೆ ಪಾನಿಪುರಿ ಸವಿದು ಮೆಚ್ಚುಗೆ ವ್ಯಕ್ತಪಡಿಸಿದ ವ್ಯಕ್ತಿ ಓರ್ವ ಕೊರಿಯನ್ ಯೂಟ್ಯೂಬರ್ ಆಗಿದ್ದು, ಭಾರತ ಭೇಟಿ ವೇಳೆ ಇಲ್ಲಿನ ಬೀದಿ ಬದಿ ಆಹಾರ ಸವಿದು ಅದರ ರುಚಿ ಹೇಳಿದ್ದಾನೆ. ಕೊರಿಯನ್ ಲಡ್ಕಾ ಹೆಸರಿನಿಂದ ಇನ್ಸ್ಟಾಗ್ರಾಮ್‌ನಲ್ಲಿ (Instagram) ಈ ವಿಡಿಯೋ ಪೋಸ್ಟ್ ಆಗಿದೆ. ಕಳೆದ 5 ವರ್ಷಗಳಿಂದ ಈತ ಭಾರತದಲ್ಲಿ ವಾಸಿಸುತ್ತಿದ್ದು, ತನ್ನ ಅನುಭವವನ್ನು ಸಾಕ್ಷ್ಯಾಚಿತ್ರ ಮಾಡಲು ನಿರ್ಧರಿಸಿದ್ದಾನೆ. ದೇಶಾದ್ಯಂತ ಓಡಾಡುವ ಈತ ತನ್ನ ಅನುಭವಗಳನ್ನು ಶಾರ್ಟ್ ವಿಡಿಯೋ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿಕೊಳ್ಳುತ್ತಾನೆ. ಹಾಗೆಯೇ ಇತ್ತೀಚೆಗೆ ಈತ ಪಾನಿಪುರಿ ತಿನ್ನುವ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡಿದ್ದು, ಈತನ ಈ ವೀಡಿಯೋಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
ಮೊದಲಿಗೆ ಒಂದು ಪಾನಿಪುರಿ (pani puri) ಬಾಯಿಗಿರಿಸಿಕೊಂಡ ಈತ ನಂತರದಲ್ಲಿ ಸಿಹಿ, ಖಾರ, ಹಾಗೂ ಹುಳಿ ರುಚಿಯ ಪಾನಿ ತುಂಬಿದ್ದ ಪಾನಿಪುರಿಯನ್ನು ಟ್ರೈ ಮಾಡಿದ್ದಾನೆ. ನಾನು ಹೊಸದನ್ನು ತಿನ್ನಲು ಪ್ರಯತ್ನಿಸುತ್ತಿದ್ದು, ನಿಮಗಿಷ್ಟದ ಭಾರತೀಯ ಬೀದಿ ಬದಿ ಆಹಾರ ಯಾವುದು ಕಾಮೆಂಟ್ ಮಾಡಿ ಎಂದು ಆತ ಕೇಳಿದ್ದಾನೆ. ಅಲ್ಲದೇ ನೀವು ಹೇಳುವ ಆಹಾರವನ್ನು ಮುಂದಿನ ಬಾರಿ ತಾನು ಪ್ರಯತ್ನಿಸುವುದಾಗಿ ಆತ ಹೇಳಿಕೊಂಡಿದ್ದಾನೆ. ಈ ವೀಡಿಯೋವನ್ನು ಒಂದು ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದು, ಅನೇಕರು ಕಾಮೆಂಟ್ ಮಾಡಿದ್ದಾರೆ. ಈ ವೀಡಿಯೋಗೆ ದೇಸಿ ನೆಟ್ಟಿಗರು ಕಾಮೆಂಟ್ ಮಾಡಿದ್ದು, ಅನೇಕರು ತಮಗೆ ತಿಳಿದ ಭಾರತದ ಹಲವು ಬಗೆಯ ಬೀದಿ ಬದಿ ಆಹಾರಗಳನ್ನು ಪ್ರಯತ್ನಿಸುವಂತೆ ಆತನಿಗೆ ಸಲಹೆ ನೀಡಿದ್ದಾರೆ.
ನಾವು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋದಾಗ ಅಲ್ಲಿನ ಆಹಾರವನ್ನು ತಿನ್ನಲು ಪ್ರಯತ್ನಿಸುತ್ತೇವೆ. ಅಲ್ಲಿನ ಬಗ್ಗೆ ಹೆಚ್ಚು ಹೆಚ್ಚು ತಿಳಿದುಕೊಳ್ಳಲು ಬಯಸುವುದಲ್ಲದೇ ಪ್ರಮುಖವಾಗಿ ಅಲ್ಲಿನ ವಿಶೇಷ ಆಹಾರಗಳನ್ನು ತಿಂದು ಇಷ್ಟವಾದರೆ ಬಾಯಿ ಚಪ್ಪರಿಸುತ್ತೇವೆ. ವೈವಿಧ್ಯಮಯವಾದ ಆಹಾರ ಸಂಸ್ಕೃತಿಯನ್ನು ಹೊಂದಿರುವ ಭಾರತದಲ್ಲಿ ಯಾವ ಪ್ರದೇಶಕ್ಕೆ ಹೋದರೂ ಅಲ್ಲಿಗೆ ಸಂಬಂಧಿಸಿದ ವಿಶೇಷ ಆಹಾರವೊಂದು ನಮ್ಮನ್ನು ಸೆಳೆಯುತ್ತದೆ. ಭಾರತದಲ್ಲಂತೂ ಸಾವಿರಕ್ಕೂ ಹೆಚ್ಚು ಬಗೆಯ ರುಚಿ ರುಚಿಯಾದ ಆಹಾರಗಳು ಪ್ರವಾಸಿಗರನ್ನು ಸೆಳೆಯುವುದರಲ್ಲಿ ಅಚ್ಚರಿಯೇ ಇಲ್ಲ.