ಇತ್ತೀಚಿನ ದಿನಗಳಲ್ಲಿ ಹವಾಮಾನ ಪದೇ ಪದೇ ಬದಲಾಗುತ್ತಿದೆ. ಬೆಳಗ್ಗೆ ಬಿಸಿಲು, ಸಂಜೆ ಮಳೆ.. ಇಂತಹ ವಾತಾವರಣದಲ್ಲಿ ಶೀತ, ಕೆಮ್ಮು ಮತ್ತು ಗಂಟಲು ನೋವಿನಂತಹ ಸಮಸ್ಯೆಗಳು ಕಾಡುವುದು ಸಹಜ. ಇಂತಹ ಸಮಯದಲ್ಲಿ ನಾಲಿಗೆಗೆ ರುಚಿಯಾದ, ಖಾರವಾದ ಮತ್ತು ಘಾಟು ಇರುವ ಬಿಸಿಬಿಸಿ ಆಹಾರವನ್ನು ಸೇವಿಸಬೇಕೆನಿಸುತ್ತದೆ. ಅದಕ್ಕೆ ಮಸಾಲೆಯುಕ್ತ ನಾನ್-ವೆಜ್ ಖಾದ್ಯಕ್ಕಿಂತ ಉತ್ತಮವಾದದ್ದು ಯಾವುದಿದೆ? ಅದರಲ್ಲೂ ವಿಶೇಷವಾಗಿ ಕಾಳುಮೆಣಸು ಅಥವಾ ಪೆಪ್ಪರ್ ಚಿಕನ್ ಗ್ರೇವಿ ತಯಾರಿಸಿ ಸವಿದರೆ ಆ ಮಜವೇ ಬೇರೆ!
ಕಾಳುಮೆಣಸು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ಶೀತ ಮತ್ತು ಕೆಮ್ಮನ್ನು ಕಡಿಮೆ ಮಾಡಿ ಗಂಟಲಿಗೆ ಆರಾಮ ನೀಡುತ್ತದೆ. ಈ ಚಿಕನ್ ಪೆಪ್ಪರ್ ಗ್ರೇವಿ ಕೇವಲ ಬಿಸಿಬಿಸಿ ಅನ್ನಕ್ಕೆ ಮಾತ್ರವಲ್ಲದೆ, ಇಡ್ಲಿ, ದೋಸೆ, ಚಪಾತಿ, ಪೂರಿ ಮತ್ತು ಪರೋಟಗಳೊಂದಿಗೂ ಅದ್ಭುತವಾದ ಕಾಂಬಿನೇಷನ್ ಆಗಿದೆ.
ಮಸಾಲಾ ಪೇಸ್ಟ್ ತಯಾರಿಸಲು
ಅಡುಗೆ ಎಣ್ಣೆ - 1 ಟೀಸ್ಪೂನ್
ಕಾಳುಮೆಣಸು - 2 ಟೇಬಲ್ ಸ್ಪೂನ್
ಧನಿಯಾ (ಕೊತ್ತಂಬರಿ ಬೀಜ) - 1 ಟೇಬಲ್ ಸ್ಪೂನ್
ಜೀರಿಗೆ - 1 ಟೀಸ್ಪೂನ್
ಸೋಂಪು - ಅರ್ಧ ಟೀಸ್ಪೂನ್
ಚಕ್ಕೆ - 1 ಸಣ್ಣ ತುಂಡು
ಕಲ್ಲು ಹೂವು - ಸ್ವಲ್ಪ
ನಕ್ಷತ್ರ ಮೊಗ್ಗು - 1
ಲವಂಗ - 2
ಏಲಕ್ಕಿ - 2
ಒಣ ಮೆಣಸಿನಕಾಯಿ - 5
ಗೋಡಂಬಿ - 5
ಶುಂಠಿ - 1 ಇಂಚು
ಬೆಳ್ಳುಳ್ಳಿ - 5 ಎಸಳು
ಹಸಿ ಅಥವಾ ಒಣ ಕೊಬ್ಬರಿ - 2 ಸಣ್ಣ ತುಂಡು
ಚಿಕನ್ - 1 ಕೆಜಿ
ಅಡುಗೆ ಎಣ್ಣೆ - 3 ಟೇಬಲ್ ಸ್ಪೂನ್ (ಎಳ್ಳೆಣ್ಣೆ ಬಳಸಿದರೆ ಹೆಚ್ಚು ರುಚಿ)
ಈರುಳ್ಳಿ - 2 (ಸಣ್ಣಗೆ ಹೆಚ್ಚಿದ್ದು)
ಟೊಮೆಟೊ - 1
ಹಸಿಮೆಣಸಿನಕಾಯಿ - 4
ಕರಿಬೇವು - 1 ಕಟ್ಟು
ಅರಿಶಿನ - 1/4 ಟೀಸ್ಪೂನ್
ಉಪ್ಪು - ರುಚಿಗೆ ತಕ್ಕಷ್ಟು
ಕೊತ್ತಂಬರಿ ಸೊಪ್ಪು - ಸ್ವಲ್ಪ
ಮೊದಲು ಸ್ಟವ್ ಹಚ್ಚಿ ಒಂದು ಪ್ಯಾನ್ ಇಡಿ. ಅದಕ್ಕೆ 1 ಟೀಸ್ಪೂನ್ ಎಣ್ಣೆ ಹಾಕಿ ಬಿಸಿ ಮಾಡಿ. ಎಣ್ಣೆ ಬಿಸಿಯಾದ ನಂತರ ಕಾಳುಮೆಣಸು, ಜೀರಿಗೆ, ಸೋಂಪು, ಚಕ್ಕೆ, ಕಲ್ಲು ಹೂವು, ನಕ್ಷತ್ರ ಮೊಗ್ಗು, ಲವಂಗ ಮತ್ತು ಏಲಕ್ಕಿ ಹಾಕಿ ಲಘುವಾಗಿ ಹುರಿಯಿರಿ. ನಂತರ ಒಣ ಮೆಣಸಿನಕಾಯಿ, ಧನಿಯಾ, ಗೋಡಂಬಿ, ಶುಂಠಿ ತುಂಡುಗಳು, ಬೆಳ್ಳುಳ್ಳಿ ಎಸಳು ಮತ್ತು ಕೊಬ್ಬರಿ ಸೇರಿಸಿ ಹಸಿ ವಾಸನೆ ಹೋಗಿ ಘಮ ಬರುವವರೆಗೆ ಹುರಿಯಿರಿ. ಇದು ತಣ್ಣಗಾದ ನಂತರ ಮಿಕ್ಸಿ ಜಾರ್‌ಗೆ ಹಾಕಿ ಸ್ವಲ್ಪ ನೀರು ಸೇರಿಸಿ ನಯವಾದ ಪೇಸ್ಟ್ ಮಾಡಿಕೊಳ್ಳಿ.
ಈಗ ಗ್ಯಾಸ್ ಮೇಲೆ ಒಂದು ದಪ್ಪ ತಳದ ಪಾತ್ರೆ ಇಟ್ಟು, ಅದಕ್ಕೆ 3 ಟೇಬಲ್ ಸ್ಪೂನ್ ಎಣ್ಣೆ ಹಾಕಿ. ಎಣ್ಣೆ ಬಿಸಿಯಾದ ನಂತರ ಕರಿಬೇವು ಮತ್ತು ಹಸಿಮೆಣಸಿನಕಾಯಿ ಹಾಕಿ ಸಿಡಿಸಿ. ನಂತರ ಸಣ್ಣಗೆ ಹೆಚ್ಚಿದ ಈರುಳ್ಳಿ ಸೇರಿಸಿ, ಅದು ಬೇಗ ಬೇಯಲು ಸ್ವಲ್ಪ ಉಪ್ಪು ಹಾಕಿ. ಈರುಳ್ಳಿ ಹೊಂಬಣ್ಣಕ್ಕೆ ಬರುವವರೆಗೆ ಚೆನ್ನಾಗಿ ಹುರಿಯಿರಿ. ಈರುಳ್ಳಿ ಬೆಂದ ನಂತರ ಅರಿಶಿನ ಸೇರಿಸಿ ಮಿಕ್ಸ್ ಮಾಡಿ. ಈಗ ಹೆಚ್ಚಿದ ಟೊಮೆಟೊ ಸೇರಿಸಿ ಅದು ಮೃದುವಾಗುವವರೆಗೆ ಬೇಯಿಸಿ.
ಟೊಮೆಟೊ ಚೆನ್ನಾಗಿ ಬೆಂದ ನಂತರ ಸ್ವಚ್ಛಗೊಳಿಸಿದ 1 ಕೆಜಿ ಚಿಕನ್ ತುಂಡುಗಳನ್ನು ಸೇರಿಸಿ ಚೆನ್ನಾಗಿ ಕಲಸಿ. ಚಿಕನ್ ಅನ್ನು ಎಣ್ಣೆಯಲ್ಲೇ ಸುಮಾರು 5 ನಿಮಿಷಗಳ ಕಾಲ ಹುರಿಯಿರಿ.
ನಂತರ ಮೊದಲೇ ರುಬ್ಬಿಟ್ಟುಕೊಂಡ ಮಸಾಲಾ ಪೇಸ್ಟ್ ಅನ್ನು ಚಿಕನ್‌ಗೆ ಸೇರಿಸಿ ಎಲ್ಲಾ ತುಂಡುಗಳಿಗೂ ಮಸಾಲೆ ಹಿಡಿಯುವಂತೆ ಮಿಕ್ಸ್ ಮಾಡಿ.
ನಿಮಗೆ ಗ್ರೇವಿ ಎಷ್ಟು ಬೇಕೋ ಅಷ್ಟು ನೀರನ್ನು ಸೇರಿಸಿ, ಮುಚ್ಚಳ ಮುಚ್ಚಿ ಸಣ್ಣ ಉರಿಯಲ್ಲಿ 10 ರಿಂದ 15 ನಿಮಿಷಗಳ ಕಾಲ ಚಿಕನ್ ಚೆನ್ನಾಗಿ ಬೇಯುವವರೆಗೆ ಬಿಡಿ.
ಕೊನೆಯಲ್ಲಿ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಮೇಲೆ ಉದುರಿಸಿದರೆ ಘಮಘಮಿಸುವ ಪೆಪ್ಪರ್ ಚಿಕನ್ ಗ್ರೇವಿ ಸವಿಯಲು ಸಿದ್ಧ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.