Tender Coconut Jelly: ಎಳನೀರು ಜೆಲ್ಲಿ ತಿನ್ನಬೇಕೆ? ಬನ್ನಿ ಮಡಿಕೇರಿಯ ದೇವರಕೊಲ್ಲಿಗೆ

By Kannadaprabha News  |  First Published Feb 23, 2022, 7:56 AM IST

*   ಸಂಪಾಜೆಯ ರೈತ ಮಹಿಳೆ ವಸಂತಲಕ್ಷ್ಮಿಯವರಿಂದ ತೆಂಗಿನ ಉತ್ಪನ್ನ
*   ಥಾಯ್ಲೆಂಡ್‌ನಲ್ಲಿ ಸಿಗುವ ತಿನಿಸು ಕೊಡಗಲ್ಲೂ ಲಭ್ಯ, 1 ಕಪ್‌ಗೆ 40 ರು.
*   ಸರಳ ವಿಧಾನ, ಬಂಡವಾಳ ಬೇಡ
 


ಕೃಷ್ಣಮೋಹನ ತಲೆಂಗಳ

ಮಂಗಳೂರು(ಫೆ.23):  ನೀವು ಮಡಿಕೇರಿ-ಮಂಗಳೂರು ಹೆದ್ದಾರಿಯಲ್ಲಿ ಸಾಗುತ್ತಿದ್ದರೆ ಮಡಿಕೇರಿಯಿಂದ 19 ಕಿ.ಮೀ. ಮುಂದೆ ದೇವರಕೊಲ್ಲಿ ಎಂಬಲ್ಲಿ ರಬ್ಬರ್‌ ತೋಟದ ನಡುವೆ ಪುಟ್ಟದೊಂದು ಹಳ್ಳಿ ಕ್ಯಾಂಟೀನ್‌ ಎದುರು ಕಾರುಗಳ ಸಾಲು ಕಂಡರೆ ಗೊಂದಲಕ್ಕೆ ಒಳಗಾಗಬೇಡಿ. ಅವರು ಅಲ್ಲಿ ನಿಂತಿದ್ದು ‘ವಸುಧಾ ಕ್ಯಾಂಟೀನ್‌’ನಲ್ಲಿ ಸಿಗುವ ‘ಎಳನೀರು ಜೆಲ್ಲಿ’(Tender Coconut Jelly) ತಿನ್ನಲು!

Tap to resize

Latest Videos

ಹೌದು, ಮಂಗಳೂರು(Mangaluru) ಸಮೀಪದ ಕಲ್ಲಡ್ಕದ ಕೆ.ಟಿ. ಚಹಾದಷ್ಟೇ ಹೆಸರುವಾಸಿ ದೇವರಕೊಲ್ಲಿಯ ಈ ಎಳನೀರು ಜೆಲ್ಲಿ. ಕೊಡಗು(Kodagu) ಜಿಲ್ಲೆ ಮಡಿಕೇರಿ ತಾಲೂಕು ಬೆಟ್ಟತ್ತೂರು ಗ್ರಾಮದ ದೇವರಕೊಲ್ಲಿಯಲ್ಲಿ ತೆಂಗಿನ ಮೌಲ್ಯವರ್ಧಿತ ಉತ್ಪನ್ನ ಉದ್ದಿಮೆಯನ್ನು ಸಂಪಾಜೆಯ ವಸಂತಲಕ್ಷ್ಮಿ ಹಾಗೂ ಅವರ ಪತಿ ಸುಬ್ರಹ್ಮಣ್ಯ ಭಟ್‌ ಯಶಸ್ವಿಯಾಗಿ ನಡೆಸುತ್ತಿದ್ದಾರೆ.

ಗಂಜಿ ಎಳನೀರಿಗಿಂತ ಆರೋಗ್ಯಕ್ಕೆ ಹೆಚ್ಚು ಒಳಿತು

ಶುರುವಾಗಿದ್ದು ಹೀಗೆ: 

ಸಂಪಾಜೆಯಲ್ಲಿ ನೆಲೆಸಿರುವ ಈ ರೈತ ದಂಪತಿಗೆ ಅಡಕೆ, ತೆಂಗಿನ ತೋಟ ಇದೆ. ಕಾಡು ಪ್ರಾಣಿಗಳ ಹಾವಳಿಯಿಂದ ಫಸಲು ಸರಿಯಾಗಿ ಕೈಸೇರುತ್ತಿರಲಿಲ್ಲ. ಅವರು ದೇವರಕೊಲ್ಲಿಯ ಹೆದ್ದಾರಿ ಪಕ್ಕ ಟೀ, ಕಾಫಿ, ಎಳನೀರು ಮಾರುವ ಪುಟ್ಟ ಕ್ಯಾಂಟೀನ್‌ ಆರಂಭಿಸಿದ್ದರು. ಈ ನಡುವೆ, ಅಡಿಕೆ ಪತ್ರಿಕೆಯಲ್ಲಿ ಪ್ರಕಟವಾದ ಎಳನೀರು ಜೆಲ್ಲಿ ಉತ್ಪನ್ನದ ಕುರಿತ ಲೇಖನ ಆಕರ್ಷಿಸಿತು. ಥಾಯ್ಲಾಂಡ್‌(Thailand) ದೇಶದಲ್ಲಿ ಜನಪ್ರಿಯವಾಗಿರುವ ಈ ಉತ್ಪನ್ನದ ಕುರಿತ ಲೇಖನ ನೋಡಿಯೇ ಎಳನೀರು ಜೆಲ್ಲಿ ತಯಾರಿಸಿದರು ವಸಂತಲಕ್ಷ್ಮಿ.

ಬಳಿಕ ಧೈರ್ಯವಾಗಿ ತಮ್ಮ ಕ್ಯಾಂಟೀನಿನಲ್ಲಿ ಜೆಲ್ಲಿ ಮಾರಾಟ ಶುರು ಮಾಡಿದರು. ಕ್ರಮೇಣ ಗ್ರಾಹಕರು(Customers) ಇದರ ರುಚಿ ಹಿಡಿದು, ಕ್ಯಾಂಟೀನನ್ನು ಹುಡುಕಿ ಬಂದು ಜೆಲ್ಲಿ ತಿಂದು ಪಾರ್ಸೆಲ್‌ ಕೊಂಡು ಹೋಗುವಷ್ಟು ಜನಪ್ರಿಯವಾಯಿತು. ಎಳನೀರು ಖರೀದಿಸಿ ಎರಡು ದಿನದ ಬಳಿಕ ಬಳಕೆಗೆ ಯೋಗ್ಯವಾಗಿರಲ್ಲ. ಜೆಲ್ಲಿ ತಯಾರಿಸಿದರೆ ಆರ್ಥಿಕ ಲಾಭ ಇದೆ ಎಂಬ ಅಂಶ ವಸಂತಲಕ್ಷ್ಮಿ ಅವರು ಉದ್ಯಮದಲ್ಲಿ ಮುಂದುವರಿಯಲು ಪ್ರೇರೇಪಿಸಿತು. ಎಳನೀರು ಖರೀದಿಸಿ ಉದ್ದಿಮೆ ನಡೆಸುತ್ತಿದ್ದಾರೆ.

ಸರಳ ವಿಧಾನ, ಬಂಡವಾಳ ಬೇಡ

ಎಳನೀರು ಹಾಗೂ ಅದರ ತಿಳಿಗಂಜಿ ಬಳಸಿ ಸರಳವಾಗಿ ಈ ಜೆಲ್ಲಿ ತಯಾರಿಸಬಹುದು. ಹೆಚ್ಚಿನ ಬಂಡವಾಳವೂ ಬೇಕಿಲ್ಲ. ಸದ್ಯ ದಿನಕ್ಕೆ ಸರಾಸರಿ 50-75 ಕಪ್‌ ಜೆಲ್ಲಿ ಮಾರಾಟ ಆಗುತ್ತದೆ. ಕೊಡಗಿಗೆ ಭೀಕರ ಪ್ರವಾಹ(Flood) ಕಾಡುವ ತನಕ ಹಿಂದೆಲ್ಲ ದಿನಕ್ಕೆ 125-150 ಕಪ್‌ ತನಕ (ಕಪ್‌ಗೆ .40) ಮಾರಾಟ ಆಗುತ್ತಿತ್ತು. ಜೆಲ್ಲಿಯನ್ನು ಮೈಸೂರು, ಬೆಂಗಳೂರಿನವರೂ ಪಾರ್ಸೆಲ್‌ ಮಾಡಿಸಿ ತೆಗೆದುಕೊಂಡು ಹೋಗುತ್ತಾರೆ. ಸಭೆ ಸಮಾರಂಭಗಳಿಗೂ ಇವರು ದೊಡ್ಡ ಪ್ರಮಾಣದಲ್ಲಿ ಜೆಲ್ಲಿ ತಯಾರಿಸಿ ಪೂರೈಸುತ್ತಿದ್ದಾರೆ. ಫ್ರಿಜ್‌ನಿಂದ ತೆಗೆದು ಜೆಲ್ಲಿಯನ್ನು ಥರ್ಮಾಕೂಲ್‌ ಬಾಕ್ಸಿನಲ್ಲಿ ಇರಿಸಿದರೆ 24 ಗಂಟೆ ತನಕ ಜೆಲ್ಲಿಯನ್ನು ರಕ್ಷಿಸಬಹುದು.

ತೆಂಗಿನ ಹಾಲು ಮತ್ತು ತೆಂಗಿನ ನೀರಿಗೇನು ವ್ಯತ್ಯಾಸ?

ಅದ್ಭುತವಾದ ಮೌಲ್ಯವರ್ಧಿತ ಉತ್ಪನ್ನ ಎಳನೀರು ಜೆಲ್ಲಿ. ಥಾಯ್ಲಾಂಡ್‌, ಮಲೇಷಿಯಾದಂಥಹ ದೇಶಗಳಲ್ಲಿ ಬ್ರಾಂಡಿಂಗ್‌ ಮಾಡಿದ್ದಾರೆ. ದುರಾದೃಷ್ಟವಶಾತ್‌ ಕೇರಳ, ಕರ್ನಾಟಕ ಸೇರಿದಂತೆ ಭಾರತದಲ್ಲಿ ಯಾರೂ ಇದನ್ನು ಸರಿಯಾಗಿ ಕಲಿತಿಲ್ಲ ಅಂತ ಕೃಷಿ ಬರಹಗಾರ, ‘ಅಡಿಕೆ ಪತ್ರಿಕೆ’ ಪ್ರಧಾನ ಸಂಪಾದಕ ಶ್ರೀಪಡ್ರೆ ತಿಳಿಸಿದ್ದಾರೆ. 

ಜೆಲ್ಲಿ ತಯಾರಿಸುವ ವಿಧಾನ

1 ಲೀಟರ್‌ ಎಳನೀರಿಗೆ 10 ಗ್ರಾಂ. ಚೈನಾ ಗ್ರಾಸ್‌, ಎಳನೀರಿನ ತಿರುಳು ಹಾಗೂ 100 ಗ್ರಾಂ ಸಕ್ಕರೆ ಹಾಕಿ ಕುದಿಸಬೇಕು. ಅದು ತಣಿದ ಬಳಿಕ ಕಪ್‌ಗೆ ಹಾಕಿ ಫ್ರಿಡ್ಜ್‌ನಲ್ಲಿಡಬೇಕು. ಸುಮಾರು 10 ದಿನ ಫ್ರಿಡ್ಜಿನಲ್ಲಿಟ್ಟು ಬಳಸಬಹುದು. 1 ಲೀ. ಎಳನೀರಿನಲ್ಲಿ 7 ಕಪ್‌ ಜೆಲ್ಲಿ ತಯಾರಾಗುತ್ತದೆ. ಪೇಪರ್‌ ಗಂಜಿ ರೀತಿಯ ತಿರುಳು ಮಾತ್ರ ಇದಕ್ಕೆ ಉಪಯೋಗ ಆಗುತ್ತದೆ.
 

click me!