
ಹೆಸರಿನ ಕಾರಣಕ್ಕಾಗಿ ಉಬರ್‌ನ ರೈಡ್-ಷೇರ್ ಮತ್ತು ಆಹಾರ ವಿತರಣಾ ಸೇವೆಯನ್ನು ಬಳಸದಂತೆ ಮಹಿಳೆಯನ್ನು ನಿಷೇಧಿಸಿರುವ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದೆ. ಸ್ವಸ್ತಿಕಾ ಚಂದ್ರ ಎಂಬ ಹೆಸರಿನ ಮಹಿಳೆ ಉಬರ್ ಈಟ್ಸ್‌ನಿಂದ ಆಹಾರವನ್ನು ಆರ್ಡರ್ ಮಾಡಲು ಪ್ರಯತ್ನಿಸಿದರು. ಆದರೆ ಅವರು ತಮ್ಮ ಹೆಸರನ್ನು ಟೈಪ್ ಮಾಡಿದಾಗ, ಪಾಪ್-ಅಪ್ ಕಂಪನಿಯ ನಿಯಮಗಳನ್ನು ಉಲ್ಲಂಘಿಸಿದೆ ಮತ್ತು ಹೆಸರನ್ನು ಬದಲಾಯಿಸಬೇಕು ಎಂದು ಸೂಚಿಸಿತು.. ತಕ್ಷಣ ಉಬರ್‌ನಲ್ಲಿ ಫುಡ್ ಆರ್ಡರ್ ಮಾಡಲು ಸಾಧ್ಯವಾಗದಂತೆ ಮಹಿಳೆಯನ್ನು ನಿಷೇಧಿಸಲಾಯಿತು.
'ಸ್ವಸ್ತಿಕಾ ಚಂದ್ರ, ತಮ್ಮ ಹೆಸರು ಸಂಸ್ಕೃತದಲ್ಲಿ 'ಅದೃಷ್ಟ' ಎಂಬ ಅರ್ಥ ತರುತ್ತದೆ. ನಾನು ಹುಟ್ಟಿ ಬೆಳೆದ ಫಿಜಿಯಲ್ಲಿ ಈ ರೀತಿ ಹೆಸರಿಡುವುದು ಸಾಮಾನ್ಯವಾಗಿದೆ' ಎಂದು ತಿಳಿಸಿದರು. ಗಮನಾರ್ಹವಾಗಿ, ಪಾಶ್ಚಾತ್ಯ ದೇಶಗಳಲ್ಲಿ, ಈ ಪದವು ಪ್ರಧಾನವಾಗಿ ಜರ್ಮನಿಯ ನಾಜಿ ಪಕ್ಷದೊಂದಿಗೆ ಸಂಪರ್ಕ ಹೊಂದಿದೆ. ಹೀಗಾಗಿಯೇ ಉಬರ್ ಸ್ವಸ್ತಿಕಾ ಚಂದ್ರ ಅಕೌಂಟ್‌ನ್ನು ಬ್ಲಾಕ್ ಮಾಡಿದೆ.
ಉಬರ್ ಬುಕ್ ಮಾಡಿದ್ದು ಚಂದ್ರಯಾನಕ್ಕಾ? ಕೋಟಿ ಮೀರಿದ ಕ್ಯಾಬ್ ಬಿಲ್ ನೋಡಿ ಪ್ರಯಾಣಿಕ ಶಾಕ್
'ಹಿಟ್ಲರ್ ಸ್ವಸ್ತಿಕಾ ಚಂದ್ರ ಎಂಬುದನ್ನು ತಪ್ಪು ರೀತಿಯಲ್ಲಿ ಬಳಸುವುದಕ್ಕಿಂತ ಮುಂಚೆ ಸಾವಿರಾರು ವರ್ಷಗಳಿಂದ ಹಿಂದೂಗಳು ಅದನ್ನು ಬಳಸುತ್ತಿದ್ದರು ಎಂಬುದು ಅವರಿಗೆ ತಿಳಿದಿಲ್ಲ. ಇದು ಬಹಳ ಸಾಮಾನ್ಯವಾದ ಹೆಸರು. ಅದೇ ಹೆಸರಿನ ನಾಲ್ಕೈದು ಹುಡುಗಿಯರು ನನಗೆ ಗೊತ್ತು. ಶಾಲೆಯಲ್ಲಿ, ಅದೇ ಹೆಸರಿನ ಇಬ್ಬರು ಅಥವಾ ಮೂರು ಹುಡುಗಿಯರಿದ್ದರು. ಇದರರ್ಥ ಅದೃಷ್ಟ. ನನ್ನ ಹೆಸರಿನ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ. ನಾನು ಅದರೊಂದಿಗೆ ಬರುವ ಒಳ್ಳೆಯದನ್ನು ನಂಬುತ್ತೇನೆ ಮತ್ತು ನಾನು ಅದನ್ನು ಯಾರಿಗಾಗಿಯೂ ಬದಲಾಯಿಸುವುದಿಲ್ಲ' ಎಂದು ಸ್ವಸ್ತಿಕಾ ಚಂದ್ರ ಹೇಳಿದರು.
ಉಬರ್ ಮಹಿಳೆಯ ಮೇಲಿನ ಬ್ಯಾನ್ ತೆಗೆದುಹಾಕಲು ಐದು ತಿಂಗಳುಗಳನ್ನು ತೆಗೆದುಕೊಂಡಿತು ಮತ್ತು ಆಕೆಯ ಖಾತೆಯನ್ನು ಮರುಸ್ಥಾಪಿಸಲು ಹಿಂದೂ ಕೌನ್ಸಿಲ್ ಆಫ್ ಆಸ್ಟ್ರೇಲಿಯಾ ಮತ್ತು ನ್ಯೂ ಸೌತ್ ವೇಲ್ಸ್ ಅಟಾರ್ನಿ ಜನರಲ್ ಮಧ್ಯಸ್ಥಿಕೆ ವಹಿಸಿತು. ಯಹೂದಿ ಬೋರ್ಡ್ ಆಫ್ ಡೆಪ್ಯೂಟೀಸ್ ಸಹ ಸ್ವಸ್ತಿಕಾ ಚಂದ್ರ ಅವರ ಹೋರಾಟವನ್ನು ಬೆಂಬಲಿಸಿತು.
ನಾಲ್ಕು ಕಿಲೋಮೀಟರ್ ಪ್ರಯಾಣಕ್ಕೆ 4 ಸಾವಿರ ನೀಡಿದ ಉಬರ್ ಪ್ರಯಾಣಿಕ!
ಐದು ತಿಂಗಳ ನಂತರ, ಉಬರ್ ಸ್ವಸ್ತಿಕಾ ಚಂದ್ರ ಖಾತೆಯನ್ನು ಮರುಸ್ಥಾಪಿಸಿತು. 'ಸ್ವಸ್ತಿಕಾ ಚಂದ್ರ ಅವರಿಗೆ ಇದರಿಂದ ಉಂಟಾದ ಅನಾನುಕೂಲತೆಗಾಗಿ ನಾವು ಕ್ಷಮೆಯಾಚಿಸಿದ್ದೇವೆ. ಅವರ ತಾಳ್ಮೆಯನ್ನು ಪ್ರಶಂಸಿಸುತ್ತೇವೆ. ಇನ್ನೆಂದಿಗೂ ಇಂಥಾ ತಪ್ಪಾಗುವುದಿಲ್ಲ' ಎಂದು ಉಬರ್ ಸಂಸ್ಥೆ ಕ್ಷಮೆಯಾಚಿಸಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.