ಇಂಗಿಲ್ಲದ ಅಡುಗೆ ರುಚಿ,ಪರಿಮಳ ಎರಡ್ರಲ್ಲೂ ಹಿಂದೆ. ಭಾರತೀಯರ ಅಡುಗೆ ಮನೆಗಳಲ್ಲಿ ತಪ್ಪದೆ ಇರೋ ಮಸಾಲ ಪದಾರ್ಥಗಳಲ್ಲಿ ಒಂದಾಗಿರೋ ಈ ಇಂಗಿನ ರುಚಿ ಮತ್ತು ಪರಿಮಳದ ಬಗ್ಗೆ ಎಲ್ಲರಿಗೂ ಗೊತ್ತು. ಆದ್ರೆ ಅದರಾಚೆಗೂ ಇಂಗಿನ ಬಗ್ಗೆ ತಿಳಿದುಕೊಳ್ಳಬೇಕಾದ ವಿಚಾರಗಳು ಸಾಕಷ್ಟಿವೆ.
ಇಂಗು ಮತ್ತು ತೆಂಗಿದ್ರೆ ಮಂಗನೂ ಅಡುಗೆ ಮಾಡುತ್ತೆ ಎಂಬ ಮಾತಿದೆ.ಅದ್ರಲ್ಲೂಇಂಗು ಬಿದ್ರೆ ಅಡುಗೆಯ ಘಮಲೇ ಬೇರೆ. ಇಂಗಿನ ಒಗ್ಗರಣೆ ಹಾಕಿದ ಸಾಂಬಾರು,ಪಲ್ಯಗಳ ಪರಿಮಳವೇ ಊಟದ ಸ್ವಾದವನ್ನು ಇನ್ನಷ್ಟು ಹೆಚ್ಚಿಸುತ್ತವೆ. ಭಾರತದ ಪ್ರತಿ ಮನೆಯಲ್ಲೂ ಅಡುಗೆಗೆ ಇಂಗು ಬಳಸುತ್ತಾರೆ. ಹಾಗಾದ್ರೆ ಈ ಇಂಗು ಭಾರತದ ಅಡುಗೆಮನೆಯನ್ನು ಹೇಗೆ ಪ್ರವೇಶಿಸಿತು? ಇದರ ಹುಟ್ಟಿನ ಗುಟ್ಟೇನು?
ಇಂಗು ಭಾರತಕ್ಕೆ ಬಂದಿದ್ದು ಹೇಗೆ?
ಇಂಗಿನ ವಿಶಿಷ್ಟ ಪರಿಮಳ ಹಾಗೂ ರುಚಿ ಇಂದ್ರಿಯಗಳನ್ನು ಆಕರ್ಷಿಸೋ ಜೊತೆ ಆರೋಗ್ಯಕ್ಕೂ ಹಿತ ನೀಡುತ್ತವೆ. ಅಡುಗೆಯಲ್ಲಿಇಂಗು ಬಳಸೋದ್ರಿಂದ ಹೊಟ್ಟೆ ಸಂಬಂಧಿ ಸಮಸ್ಯೆಗಳನ್ನು ದೂರವಿಡಬಹುದಾಗಿದೆ. ಇಂಥ ವಿಶಿಷ್ಟ ಮಸಾಲ ಪದಾರ್ಥವನ್ನು ಭಾರತೀಯ ಪಾಕಶಾಸ್ತ್ರಕ್ಕೆ ಪರಿಚಯಿಸಿದ ಹೆಗ್ಗಳಿಕೆ ಮೊಘಲರಿಗೆ ಸಲ್ಲಬೇಕು. ಜಾನ್ ಒ ಕೊನ್ನೆಲ್ ಬರೆದಿರೋ ʼದಿ ಬುಕ್ ಆಫ್ ಸ್ಪೈಸ್ʼ ಎಂಬ ಕೃತಿಯಲ್ಲಿರೋ ಮಾಹಿತಿ ಪ್ರಕಾರ ಇಂಗಿನ ಮೂಲ ಮಧ್ಯ ಪ್ರಾಚ್ಯ. 16ನೇ ಶತಮಾನದಲ್ಲಿ ಮೊಘಲರು ಈ ಸುವಾಸನೆಭರಿತ ಮಸಾಲ ಪದಾರ್ಥವನ್ನು ಭಾರತೀಯ ಅಡುಗೆಗೆ ಪರಿಚಯಿಸಿದರು. ಆದ್ರೆ ಭಾರತೀಯ ಆಹಾರ ಇತಿಹಾಸ ತಜ್ಞ ಕೆ.ಟಿ.ಆಚಾರ್ಯ ಅವರ ಪ್ರಕಾರ ಮಹಾಭಾರತದ ಕಥೆಗಳಲ್ಲಿ ಕೂಡ ಇಂಗಿನ ಉಲ್ಲೇಖವಿದ್ದು, ಇದನ್ನು ಮಾಂಸಹಾರಿ ಪದಾರ್ಥಗಳಿಗೆ ಬಳಸೋ ಮಸಾಲ ಪದಾರ್ಥ ಎಂದು ವಿವರಿಸಲಾಗಿದೆಯಂತೆ. ಕಾಶ್ಮೀರಿ ಪಂಡಿತರು ಇಂಗನ್ನು ಅನಾದಿ ಕಾಲದಿಂದಲೂ ಬಳಸುತ್ತಿದ್ದರು ಎಂಬ ಬಗ್ಗೆಯೂ ಅನೇಕ ಗ್ರಂಥಗಳಲ್ಲಿ ಉಲ್ಲೇಖವಿದೆ. ಇಂಗಿನ ಮೂಲ ಸ್ಥಾನ ಇರಾನ್ ಹಾಗೂ ಅಫ್ಘಾನಿಸ್ತಾನ ಎಂದು ಹೇಳಲಾಗುತ್ತದೆ. ಇಂದಿಗೂ ಈ ಭಾಗದಲ್ಲಿ ಬೆಳೆಯೋ ಕಂಧರಿ ಇಂಗು ಜಗತ್ತಿನ ಅತ್ಯುತ್ತಮ ಗುಣಮಟ್ಟದ ಇಂಗು ಎಂದು ಗುರುತಿಸಲ್ಪಟ್ಟಿದೆ.
ಅನ್ನಕ್ಕೂ ಸೈ, ಚಪಾತಿಗೂ ಜೈ, ನೋಡಿ ಒಂದು ಕೈ
ಇಂಗು ಅಂದ್ರೇನು?
ಅಸಪೊಯ್ಟಿಡ ಅಥವಾ ಇಂಗು ಎನ್ನೋದು ಮೂಲತಃ ಒಂದು ಜಾತಿಯ ಮೇಣ. ಇದನ್ನು ಫೆರುಲ ಅಸ್ಸ-ಫೊಯ್ಟಿಡ ಎಂಬ ಬಳ್ಳಿಯಿಂದ ತೆಗೆಯಲಾಗುತ್ತದೆ. ಇಂಗಿನಲ್ಲಿ ಆರೋಗ್ಯಕ್ಕೆ ಪೂರಕವಾದ ಅನೇಕ ನೈಸರ್ಗಿಕ ಗುಣಗಳಿವೆ. ರುಚಿ ಹಾಗೂ ಪರಿಮಳಕ್ಕೆ ಹೊಸ ಅನುಭೂತಿ ನೀಡೋ ಸಾಮರ್ಥ್ಯದ ಜೊತೆ ಹೊಟ್ಟೆ ಹಾಗೂ ಕರುಳಿನ ಆರೋಗ್ಯದ ಮೇಲೆ ಕೂಡ ಇಂಗು ಉತ್ತಮ ಪರಿಣಾಮ ಬೀರಬಲ್ಲದು. ಜೀರ್ಣಕ್ರಿಯೆಯನ್ನು ನೈಸರ್ಗಿಕವಾಗಿ ಉತ್ತಮಪಡಿಸೋ ಗುಣ ಇಂಗಿನಲ್ಲಿದೆ. ಇದು ಎರಡು ಸ್ವರೂಪಗಳಲ್ಲಿ ಮಾರುಕಟ್ಟೆಯಲ್ಲಿ ಲಭಿಸುತ್ತದೆ. ಒಂದು ಹಳದಿ ಬಣ್ಣದಲ್ಲಿರುತ್ತೆ, ಇದು ಅರಿಶಿಣ ಅಥವಾ ಅಕ್ಕಿಯ ಪುಡಿಯೊಂದಿಗೆ ಬೆರೆತಿರೋ ಇಂಗು. ಇದರ ಪರಿಮಳ ಹಾಗೂ ರುಚಿ ಅಷ್ಟೊಂದು ಸ್ಟ್ರಾಂಗ್ ಆಗಿರೊಲ್ಲ.ಇನ್ನೊಂದು ಕಂದು ಬಣ್ಣದಲ್ಲಿರೋ ಅಂಟಿನಂತಹ ಮುದ್ದೆ,ಈ ಇಂಗು ಶುದ್ಧವಾಗಿದ್ದು,ಆಯುರ್ವೇದಿಕ್,ಯುನಾನಿ ಮತ್ತು ಸಿದ್ಧ ಔಷಧಗಳಲ್ಲಿ ಬಳಸಲ್ಪಡುತ್ತದೆ. ಈ ಔಷಧೀಯ ಗುಣಗಳಿಂದಾಗಿಯೇ ಇಂಗು ದುಬಾರಿ ಮಸಾಲ ಪದರ್ಥವಾಗಿ ಗುರುತಿಸಲ್ಪಟ್ಟಿದೆ.
ಆರೋಗ್ಯ ಪ್ರಯೋಜನಗಳು
ದೇವರ ಆಹಾರ ಎಂದು ಕರೆಯಲ್ಪಡೋ ಕೆಲವೇ ಕೆಲವು ಮಸಾಲ ಪದಾರ್ಥಗಳಲ್ಲಿ ಇಂಗು ಕೂಡ ಒಂದು. ಇಂಗಿನಲ್ಲಿ ಅನೇಕ ಔಷಧೀಯ ಗುಣಗಳಿವೆ.ಬ್ಯಾಕ್ಟೀರಿಯಾ, ವೈರಸ್‌ಗಳನ್ನು ಮಣಿಸೋ ಸಾಮರ್ಥ್ಯವಿದೆ. ಹೊಟ್ಟೆ ಸಂಬಂಧಿ ಸಮಸ್ಯೆಗಳಿಂದ ಹಿಡಿದು ತಲೆನೋವಿನ ತನಕ ವಿವಿಧ ನೋವುಗಳನ್ನು ಇದು ಶಮನಗೊಳಿಸಬಲ್ಲದು. ಹಾಗಾದ್ರೆ ಇಂಗು ಯಾವೆಲ್ಲ ಆರೋಗ್ಯ ಸಮಸ್ಯೆಗಳಿಗೆ ಅತ್ಯುತ್ತಮ ಮನೆಮದ್ದು?
-ಹೊಟ್ಟೆಯುಬ್ಬರ, ಗ್ಯಾಸ್, ಅಜೀರ್ಣದಂತಹ ಸಮಸ್ಯೆಗಳು ಕಾಡಿದಾಗ ಮಜ್ಜಿಗೆಯೊಂದಿಗೆ ಸ್ವಲ್ಪ ಇಂಗು ಬೆರೆಸಿ ಕುಡಿದರೆ ಕೆಲವೇ ಕ್ಷಣಗಳಲ್ಲಿ ಆರಾಮ ಸಿಗುತ್ತದೆ.
-ಇಂಗು ಉಸಿರಾಟ ಸಂಬಂಧಿ ಸಮಸ್ಯೆಗಳಿಂದ ರಿಲೀಫ್ ನೀಡಬಲ್ಲದು. ಅಸ್ತಮಾದಂತಹ ಸಮಸ್ಯೆಗೂ ಇದನ್ನು ಮನೆಮದ್ದಾಗಿ ಬಳಸುತ್ತಾರೆ.
ಕೊರೋನಾ ಸೋಂಕಿತರು ಬೇಗ ಗುಣಮುಖರಾಗೋಕೆ ಬೇಕು ವಿಟಮಿನ್ D, ಯಾವ್ಯಾವ ಆಹಾರದಲ್ಲಿದೆ
-ಕೆಲವೊಂದು ಕೀಟಗಳ ಕಡಿತದಿಂದಾದ ನೋವು ಶಮನಕ್ಕೆ ಇಂಗು ಔಷಧವಾಗಿದೆ.
-ಇಂಗಿನಲ್ಲಿ ರಕ್ತವನ್ನು ತೆಳ್ಳಗಾಗಿಸೋ ಗುಣವಿದ್ದು, ರಕ್ತದೊತ್ತಡ ತಗ್ಗಿಸಲು ನೆರವು ನೀಡುತ್ತದೆ.
-ಮುಟ್ಟಿನ ಸಮಯದಲ್ಲಿ ಕಾಡೋ ಹೊಟ್ಟೆ ನೋವಿನ ಶಮನಕ್ಕೂ ಇಂಗು ಮದ್ದು. ಇದ್ರಲ್ಲಿ ಪ್ರೊಜೆಸ್ಟ್ರೋನ್ ಸ್ರವಿಕೆಯನ್ನು ಹೆಚ್ಚಿಸೋ ಸಾಮರ್ಥ್ಯವಿದ್ದು, ರಕ್ತದ ಹರಿವನ್ನು ಸರಾಗಗೊಳಿಸಿ ನೋವನ್ನು ತಗ್ಗಿಸುತ್ತದೆ.