
1. ಹಿತಕವರೆ ಕಾಯಿ ಹುಳಿ, ವೈಯನ್ಕೆ ಶೈಲಿ
ಅವರೆಕಾಯಿಯನ್ನು ಬಿಡಿಸಿ, ಸಿಪ್ಪೆ ತೆಗೆದು ಚೆನ್ನಾಗಿ ತೊಳೆಯಬೇಕು. ನಂತರ ರಾತ್ರಿ ನೆನೆಸಿಡಬೇಕು. ಬೆಳಗ್ಗೆ ಎದ್ದು ಎರಡು ಬೆರಳುಗಳ ನಡುವೆ ಇಟ್ಟು ನುಣುಚಿದರೆ ಸಿಪ್ಪೆ ಹೋಗಿ ಹಿಸುಕಿದ ಅವರೆ, ಹಿತಕವರೆ ಸಿಗುತ್ತದೆ.
ಒಂದು ಬಾಣಲೆಗೆ ಎರಡು ಚಮಚ ಎಣ್ಣೆ ಹಾಕಿ. ಸಾಸಿವೆ, ಒಣಮೆಣಸು ಒಗ್ಗರಣೆ ಹಾಕಬೇಕು. ಅದಕ್ಕೆ ಈ ಹಿತಕವರೆಯನ್ನು ನೀರು ಸೋಸಿ ಹಾಕಿಕೊಂಡು ಹುರಿಯಬೇಕು. ಒಂದೈದಾರು ನಿಮಿಷ ಹುರಿದ ನಂತರ ಅದು ಮುಳುಗುವಷ್ಟು ನೀರು ಹಾಕಿ ಬೇಯಿಸಬೇಕು. ಬೇಳೆಯನ್ನು ಹಿಸುಕಿದರೆ ಅದು ಬೆಂದಿದೆಯೋ ಇಲ್ಲವೋ ತಿಳಿಯುತ್ತದೆ.
ಬೊಜ್ಜು ಕರಗಿಸಿ ದೇಹ ಫಿಟ್ ಮಾಡುತ್ತೆ ಕರಿಮೆಣಸು..! ಸ್ಪೈಸಿ ರೆಸಿಪಿ ಇಲ್ಲಿದೆ
ಇದಕ್ಕೆ ಹಾಕುವ ಮಸಾಲೆ ಅರ್ಧ ಕಡಿ ತೆಂಗಿನಕಾಯಿ. ಬಾಣಲೆಯಲ್ಲಿ ಎಣ್ಣೆ ಸೋಕಿಸಿ ಹುರಿದ ಒಣಮೆಣಸು, ಕೊತ್ತಂಬರಿ ಬೀಜ, ಈರುಳ್ಳಿ, ಬೆಳ್ಳುಳ್ಳಿ, ಚಕ್ಕೆ, ಲವಂಗ. ಇವನ್ನೆಲ್ಲ ಸೇರಿಸಿ ರುಬ್ಬಿಕೊಳ್ಳಿ. ಜಾಸ್ತಿ ನೀರು ಬೇಡ.
ಬೆಂದ ಅವರೇಕಾಳಿಗೆ ಇದನ್ನು ಸೇರಿಸಿರಿ. ಕೊತ್ತಂಬರಿ ಉದುರಿಸಿ, ಕರಿಬೇಕು ಸಾಸಿವೆ ಒಗ್ಗರಣೆ ಹಾಕಿ. ಇಂಗು ನಿಷಿದ್ಧ.
ಊಟ ಮಾಡುವಾಗ ಈ ಹುಳಿ ಹಾಕಿಕೊಂಡು, ಒಂಚೂರು ನಿಂಬೆಹಣ್ಣು ಹಿಂಡಿಕೊಳ್ಳಿ,
2. ಅವರೇಕಾಳು ಪಲ್ಯ
ಹಿತಕವರೆಕಾಳು- ಎರಡು ಲೋಟ. ಬ್ಯಾಡಗಿ ಮೆಣಸು- 5 ಕೊತ್ತಂಬರಿ ಬೀಜ - 3 ಚಮಚ. ಈರುಳ್ಳಿ- ಒಂದು, ಬೆಳ್ಳುಳ್ಳಿ- ಎರಡು ದೊಡ್ಡ ಎಸಳು. ಕಿರುಬೆರಳು ಗಾತ್ರದ ಚಕ್ಕೆ, ನಾಲ್ಕು ಕಾಳು ಲವಂಗ. ಒಂದು ಲೋಟ ತೆಂಗಿನ ತುರಿ. ಒಣಕೊಬ್ಬರಿ- ಕಾಲು ಗಿಟುಕು. ಗಸಗಸೆ ಒಂದು ಚಟಾಕು. ಶುದ್ಧ ತುಪ್ಪ. ಮಿಕ್ಕಂತೆ ಉಪ್ಪು, ಬೆಲ್ಲ, ಹುಣಸೇಹಣ್ಣು.
ಅವರೇಕಾಳನ್ನು ನೆನೆಹಾಕುವುದು ಕಡ್ಡಾಯ. ಕನಿಷ್ಠ ಐದಾರು ಗಂಟೆಯಾದರೂ ನೆನದರೆ ಚೆಂದ. ಆಮೇಲೆ ಒಂಚೂರು ದಪ್ಪ ತಳವುಳ್ಳ ಬಾಣಲೆಗೆ ಐದಾರು ಚಮಚ ಎಣ್ಣೆ ಹಾಕಿ ಬಿಸಿಯಾಗಲು ಬಿಡಿ. ನಂತರ ಒಂದು ಚಮಚ ತುಪ್ಪ ಹಾಕಿ. ಸಾಸಿವೆ, ಇಂಗು, ಕರಿಬೇಕು ಹಾಕಿ ಸಾಸಿವೆ ಸಿಡಿಯುವ ತನಕ ಹುರಿಯಿರಿ. ನಂತರ ಸಣ್ಣಗೆ ಹೆಚ್ಚಿದ ಈರುಳ್ಳಿ, ಒಂಚೂರು ಜಜ್ಜಿದ ಬೆಳ್ಳುಳ್ಳಿ ಎಸಳು ಹಾಕಿ ಮತ್ತೆ ಹುರಿಯಿರಿ. ಈರುಳ್ಳಿ ನಸುಗೆಂಪು ಆಗುತ್ತಿದ್ದಂತೆ ಅವರೇಕಾಳು ಹಾಕಿ ಒಂದೈದು ನಿಮಿಷ ಸೌಟು ಆಡಿಸುತ್ತಿರಿ.
ಮೋದಿ ಅವರ ಫೇವರೇಟ್ ನುಗ್ಗೆ ಸೋಪ್ಪಿನ ಪರೋಟಾ ರೆಸಿಪಿ!
ಇದಕ್ಕೂ ಮುಂಚೆ ಮಸಾಲೆ ರೆಡಿ ಮಾಡಿಟ್ಟುಕೊಂಡಿರಿ. ಒಣಮೆಣಸು, ಈರುಳ್ಳಿ, ಬೆಳ್ಳುಳ್ಳಿ, ಚಕ್ಕೆ, ಲವಂಗ, ಕೊತ್ತಂಬರಿ ಬೀಜ, ತೆಂಗಿನ ತುರಿ ಎಲ್ಲವನ್ನೂ ಒಂದೂವರೆ ಚಮಚ ಎಣ್ಣೆಯಲ್ಲಿ ಹುರಿದು ರುಬ್ಬಿಟ್ಟುಕೊಂಡಿರಬೇಕು. ಅವರೇಕಾಳಿಗೆ ಇದನ್ನು ಹಾಕಿ ಮತ್ತೆ ಹುರಿಯಬೇಕು. ಆಗ ಅವರೇಕಾಳು ಮೈಮುರಿದ ಘಮ್ಮನೆ ಪರಿಮಳ ಬರುತ್ತದೆ.
ನಂತರ ಅದನ್ನು ಕುಕ್ಕರಿಗೆ ಬಸಿದುಕೊಳ್ಳಿ. ಅದು ಮುಳುಗುವಷ್ಟುನೀರು ಹಾಕಿ, ಒಂದೆರಡು ಕೂಗು ಕೂಗಿಸಿ. ಒಂಚೂರು ಹುರಿದ ಗಸಗಸೆ ಮತ್ತು ತುರಿದ ಒಣಕೊಬ್ಬರಿ ರುಬ್ಬಿ ಬೆರೆಸಿ. ಉಪ್ಪು, ಹುಣಸೇಹಣ್ಣು, ಬೆಲ್ಲ ಹಾಕಿ ಕುದಿಸಿ. ನಂತರ ಒಂದು ಚಮಚ ತುಪ್ಪ ಮೇಲೆ ಹಾಕಿ ಶಿವಾ ಅನ್ನಿ.
3. ಅವರೇ ಕಾಳು ಸಾರು
ಎರಡು ಕಪ್ ಹಿತಕವರೆ, ಒಂದು ಚಮಚ ತುಪ್ಪ, ಅರ್ಧ ಚಮಚ ಮೆಂತ್ಯೆ, ತೆಂಗಿನಕಾಯಿ ಒಂದು ಬಟ್ಟಲು, ಒಂದು ಚಮಚ ಹುರಿಗಡಲೆ, ಅರ್ಧಚಮಚ ಅರಿಶಿನ, ಒಂದು ಚಮಚ ಜೀರಿಗೆ, ಒಂದು ಚಮಚ ಕೊತ್ತಂಬರಿ ಬೀಜ, ಗಸಗಸೆ, ನಾಲ್ಕು ಈರುಳ್ಳಿ, ಬ್ಯಾಡಗಿ ಮೆಣಸು, ಪಾಲಾಕ್ ಸೊಪ್ಪು ಒಂದು ಸಣ್ಣ ಕಟ್ಟು
ದಪ್ಪ ತಳದ ಬಾಣಲೆಗೆ ತುಪ್ಪ ಹಾಕಿ. ಅದು ಕಾದ ನಂತರ ಅವರೇಕಾಳು ಹಾಕಿ ಹುರಿಯಿರಿ. ನಂತರ ಆ ಕಾಳನ್ನು ಕುಕ್ಕರಿನಲ್ಲಿಡಿ. ಎರಡು ಕಪ್ ಕಾಳಿಗೆ ಮೂರು ಕಪ್ ನೀರು ಹಾಕಿದರೆ ಸಾಕು. ಎರಡು ಕೂಗು ಬೇಯಿಸಿದರೆ ಸಾಕು.
ಅದು ಬೇಯುವ ಹೊತ್ತಲ್ಲಿ ಮೆಂತ್ಯೆ, ತೆಂಗಿನತುರಿ, ಅರಿಶಿನ,ಜೀರಿಗೆ, ಕೊತ್ತಂಬರಿ ಬೀಜ, ಗಸಗಸೆ, ಬ್ಯಾಡಗಿ ಮೆಣಸು ಮತ್ತು ಈರುಳ್ಳಿಯನ್ನು ಒಂಚೂರು ಎಣ್ಣೆ ಹಾಕಿ ಹುರಿಯಿರಿ. ಹುರಿಗಡಲೆಯನ್ನು ಹುರಿಯಬಾರದು. ಅದನ್ನು ಪ್ರತ್ಯೇಕವಾಗಿ ಸೇರಿಸಿ ರುಬ್ಬಿ.
ಮೋದಿ ಅವರ ಫೇವರೇಟ್ ನುಗ್ಗೆ ಸೋಪ್ಪಿನ ಪರೋಟಾ ರೆಸಿಪಿ!
ಬೆಂದ ಕಾಳಿಗೆ ಈ ಮಸಾಲೆ ಸೇರಿಸಿ, ನಂತರ ಸಣ್ಣಗೆ ಹೆಚ್ಚಿದ ಪಾಲಕ್ ಸೊಪ್ಪನ್ನು ಸಿಂಪಡಿಸಿ. ಉಪ್ಪು ಹಾಕಿ ಕುದಿಸಿ. ಇಳಿಸುವ ಮುಂಚೆ ಅರ್ಧಚಮಚ ತುಪ್ಪ ಹಾಕಲು ಮರೆಯದಿರಿ.
4. ಅವರೆಕಾಳು ಉಪ್ಪಿಟ್ಟು
ಮೂರು ಕಪ್ ಹಿತಕವರೆ. ಒಂದು ಕಪ್ ಕೃಷ್ಣಾ ರವೆ ಅಥವಾ ಬನ್ಸೀರವೆ, ಎಣ್ಣೆ 6 ಚಮಚ, ತುಪ್ಪ 2 ಚಮಚ, ಒಂದೊಂದು ಚಮಚ ಸಾಸಿವೆ, ಕಡ್ಲೆಬೇಳೆ, ಉದ್ದಿನಬೇಳೆ, ಜೀರಿಗೆ, ಹಸಿಮೆಣಸಿನಕಾಯಿ, ಜಜ್ಜಿದ ಶುಂಠಿ, ನಾಲ್ಕು ಕಾಳುಮೆಣಸು, ಒಂದು ಬಟ್ಟಲು ತೆಂಗಿನ ತುರಿ, ಕೊತ್ತಂಬರಿ ಸೊಪ್ಪು.
ಹಾಗಲಕಾಯಿ ಟೇಸ್ಟಿ ರೆಸಿಪಿ, ಈ ಸೀಕ್ರೇಟ್ ಮಸಾಲೆ ಹಾಕಿದ್ರೆ ಕಹಿ ಮಾಯ..!
ರವೆಯನ್ನು ಒಂದು ಚಮಚ ತುಪ್ಪದಲ್ಲೋ ಎಣ್ಣೆಯ್ಲಲೋ ಘಮಘಮಿಸುವ ತನಕ ಹುರಿದುಕೊಳ್ಳಿ. ಅವರೇಕಾಳನ್ನು ಒಂಚೂರು ಉಪ್ಪು ಸೇರಿಸಿ, ಬೇಯಿಸಿ ಇಟ್ಟುಕೊಳ್ಳಿ. ದಪ್ಪ ತಳದ ಬಾಣಲೆಗೆ ಆರು ಚಮಚ ಎಣ್ಣೆ ಹಾಕಿ, ಸಾಸಿವೆ, ಜೀರಿಗೆ ಹಾಕಿ ಸಿಡಿಸಿ. ನಂತರ ಕಡ್ಲೆಬೇಳೆ, ಉದ್ದಿನಬೇಳೆ ಹಾಕಿ, ನಂತರ ಸೀಳಿದ ಆರು ಹಸಿಮೆಣಸಿನಕಾಯಿ ಹಾಕಿ ಬಾಡಿಸಿ. ನಂತರ ಶುಂಠಿ, ಒಂಚೂರು ಮೆಣಸಿನ ಪುಡಿ, ಬೇಯಿಸಿಟ್ಟಅವರೇಕಾಳು, ನೀರು, ಉಪ್ಪು ಹಾಕಿ ಕುದಿಸಿ. ನಂತರ ಹುರಿದ ರವೆಯನ್ನು ನಿಧಾನವಾಗಿ ಹಾಕಿ ನಿಧಾನವಾಗಿ ಕದಡುತ್ತಿರಿ.
ರವೆ ಬೆಂದ ನಂತರ ಒಂದು ಚಮಚ ತುಪ್ಪ ಹಾಕಿ ಮಗುಚಿ, ತೆಂಗಿನಕಾಯಿ ತುರಿ ಹಾಕಿ ಬೆರೆಸಿ. ನಂತರ ಕೊತ್ತಂಬರಿ ಸೊಪ್ಪು ಚಿಮುಕಿಸಿ.
5. ಅವರೇಕಾಳು ಕೋಡುಬಳೆ
ಎರಡು ಬಟ್ಟಲು ಅಕ್ಕಿಹಿಟ್ಟು, ಒಂದು ಬಟ್ಟಲು ಅವರೆಕಾಯಿ, ಕಾಲು ಕಪ್ ಮೈದಾ, ಅಷ್ಟೇ ಒಣಕೊಬ್ಬರಿ ತುರಿ, ಮೆಣಸಿನಪುಡಿ, ಉಪ್ಪು ತಲಾ ಒಂದು ಚಮಚ, ಅರ್ಧ ಚಮಚ ಜೀರಿಗೆ, ಒಂಚೂರು ಇಂಗು, ಉಪ್ಪು, ಕೊತ್ತಂಬರಿ ಸೊಪ್ಪು, ಕರಿಬೇವು, ಒಂದು ಲಿಂಬೆಹಣ್ಣು ಗಾತ್ರದ ಬೆಣ್ಣೆ, ಕರಿಯಲು ಶುದ್ಧ ಎಣ್ಣೆ.
ಅವರೇಕಾಳು ತೊಳೆದು, ಸುಲಿದು, ಹಿಚುಕಿ ಇಟ್ಟುಕೊಳ್ಳಿ. ಕುಕ್ಕರಿನಲ್ಲಿಟ್ಟು ಬೇಯಿಸಿ. ತಣ್ಣಗಾದ ನಂತರ ಬಸಿದು ಅದನ್ನು ಚೆನ್ನಾಗಿ ನುಲಿಯಿರಿ. ಹಿಟ್ಟಿನಂತೆ ಆಗುವಷ್ಟುಪುಡಿಮಾಡಿಕೊಳ್ಳಿ. ಅದಕ್ಕೆ ತೆಂಗಿನ ತುರಿ, ಮೆಣಸು, ಇಂಗು, ಜೀರಿಗೆ ಹಾಕಿ ಮತ್ತೆ ಕಲಸಿ, ನಂತರ ಸಣ್ಣಗೆ ಹೆಚ್ಚಿದ ಕರಿಬೇವು, ಕೊತ್ತಂಬರಿ ಸೊಪ್ಪು ಹಾಕಿ ಮತ್ತೆ ಕಲಸಿ. ಅದಾದ ನಂತರ ಅಕ್ಕಿ ಹಿಟ್ಟು, ಮೈದಾ ಹಾಕಿ. ಮೂರು ಚಮಚ ಕಾದ ಎಣ್ಣೆ ಹಾಕಿ. ಚಮಚದಲ್ಲಿ ಚೆನ್ನಾಗಿ ಮಿಶ್ರ ಮಾಡಿಕೊಳ್ಳಿ. ಇದರ ಬದಲು ಬೆಣ್ಣೆ ಹಾಕಿದರೂ ನಡೆಯುತ್ತದೆ. ಈಗ ಉಪ್ಪು ಹಾಕಿ ಕೈಯಲ್ಲಿ ಹದವಾಗಿ ಕಲಸಿಕೊಳ್ಳಿ. ತುಂಬ ತೆಳ್ಳಗೆ ಮಾಡಬೇಡಿ. ಕೋಡುಬಳೆ ಗಟ್ಟಿಯಾಗುತ್ತದೆ. ನಂತರ ಅದನ್ನು ಉದ್ದುದ್ದದ ಬೆರಳಿನ ಸೈಜಿನ ಕಡ್ಡಿಗಳಾಗಿ ಮಾಡಿಕೊಂಡು ಬಳೆಯಂತೆ ಮಡಿಚಿ. ತಳ ದಪ್ಪವಿರುವ ಅಗಲ ಬಾಣಲೆಯಲ್ಲಿ ಹುರಿಯಿರಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.