
ಜಗತ್ತಿಗೆ ಕೊರೋನಾ ಮಹಾಮಾರಿ ಎಂಟ್ರಿ ಕೊಟ್ಟ ಬಳಿಕ ಇಮ್ಯುನಿಟಿ ಹೆಚ್ಚಿಸೋ ಪದಾರ್ಥಗಳಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್. ಇದನ್ನೇ ಬಂಡವಾಳವನ್ನಾಗಿಸಿಕೊಂಡಿರೋ ಉದ್ಯಮಿಗಳು,ಕಂಪನಿಗಳು ಈಗಾಗಲೇ ಮಾರುಕಟ್ಟೆಗೆ ಅನೇಕ ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡಿದ್ದಾರೆ. ಈಗ ತ್ರಿಪುರಾ ಸರ್ಕಾರ ಕೂಡ ಇಂಥ ವಿನೂತನ ಪ್ರಯತ್ನಕ್ಕೆ ಕೈ ಹಾಕಿದೆ. ಇತ್ತೀಚೆಗಷ್ಟೇ ತ್ರಿಪುರಾ ಸಿಎಂ ಬಿದಿರಿನ ಬಿಸ್ಕತ್ ಹಾಗೂ ಜೇನು ಬಾಟಲ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದಾರೆ. ಅರೇ, ಬಿದಿರಿನ ಬಿಸ್ಕತ್ ! ಏನಪ್ಪ ಇದು,ಇದ್ರ ರುಚಿ ಹೇಗಿರಬಹುದು? ಎಂದು ನೀವು ಯೋಚಿಸುತ್ತಿರಬಹುದು. ಕರಾವಳಿ, ಮಲೆನಾಡು ಹಾಗೂ ಕೊಡಗಿನ ಜನರಿಗೆ ಬಿದಿರಿನ ಚಿಗುರು ಅಥವಾ ಕಳಲೆ ಬಗ್ಗೆ ಚೆನ್ನಾಗಿ ಗೊತ್ತಿದೆ. ಈ ಭಾಗಗಳಲ್ಲಿ ಕಳಲೆಯಿಂದ ನಾನಾ ವಿಧದ ಖಾದ್ಯಗಳನ್ನು ತಯಾರಿಸುತ್ತಾರೆ. ಅದೇ ರೀತಿ ಭಾರತದ ಈಶಾನ್ಯ ರಾಜ್ಯಗಳ ಜನಪ್ರಿಯ ಆಹಾರ ಪದಾರ್ಥಗಳಲ್ಲಿ ಕಳಲೆ ಕೂಡ ಒಂದು. ನಮಗೆ ಬಿದಿರಿನ ಬಿಸ್ಕತ್ ವಿಶೇಷ ಅಥವಾ ವಿಚಿತ್ರ ತಿನಿಸಾಗಿ ಕಂಡರೂ ಈಶಾನ್ಯ ರಾಜ್ಯಗಳಲ್ಲಿ ಇದು ಈಗಾಗಲೇ ಜನಪ್ರಿಯತೆ ಗಳಿಸಿದೆ. ಹಾಗಾದ್ರೆ ಈ ಬಿದಿರಿನ ಬಿಸ್ಕತ್ ವೈಶಿಷ್ಟ್ಯವೇನು? ಇದ್ರಿಂದ ಏನೆಲ್ಲ ಆರೋಗ್ಯ ಲಾಭಗಳಿವ?
ಅಂತಿಂಥ ಅಣಬೆಯಲ್ಲಈ ಗುಚ್ಚಿ,ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
ಹೇಗೆ ಮಾಡ್ತಾರೆ?
ಬಿದರಿನ ಬಿಸ್ಕತ್ ಅಂದ ತಕ್ಷಣ ಅದನ್ನು ಹೇಗೆ ಮಾಡ್ತಾರೆ ಅನ್ನೋದನ್ನು ತಿಳಿಯೋ ಕುತೂಹಲ ಮೂಡೋದು ಸಹಜ. ಈ ಕುಕ್ಕೀಸ್‌ಗೆ ತೆಳ್ಳಗಿನ, ನೈಸರ್ಗಿಕವಾಗಿ ಸಿಹಿಯಾಗಿರೋ ಮುಲಿ ಎಂಬ ಬಿದಿರಿನ ಚಿಗುರನ್ನು ಬಳಸುತ್ತಾರೆ. ಕುಕ್ಕೀಸ್ ಸಿದ್ಧಪಡಿಸಲು ಬಳಸೋ ಗೋಧಿಹಿಟ್ಟು,ಬೆಣ್ಣೆ ಹಾಗೂ ಇತರ ಕೆಲವು ಪದಾರ್ಥಗಳೊಂದಿಗೆ ಮಿಕ್ಸ್ ಮಾಡೋ ಮೊದಲು ಬಿದಿರಿನ ಚಿಗುರನ್ನು ಪುಡಿ ಮಾಡಿ ಸಂಸ್ಕರಿಸುತ್ತಾರೆ. ತ್ರಿಪುರಾದಲ್ಲಿಈ ಬಿಸ್ಕತ್ ಈಗಾಗಲೇ ಜನಪ್ರಿಯತೆ ಗಳಿಸಿದೆ.
ಬಿದಿರಿನ ಬಿಸ್ಕತ್ ಏಕೆ ತಿನ್ನಬೇಕು ಗೊತ್ತಾ?
೨೦೧೮ರಲ್ಲಿ ಮೆಕ್ಸಿಕೋದಲ್ಲಿ ನಡೆದ ೧೧ನೇ ವಿಶ್ವ ಬಿದಿರು ಕಾಂಗ್ರೆಸ್‌ನಲ್ಲಿ ಮಂಡಿಸಿದ ಅಧ್ಯಯನ ವರದಿಯೊಂದರ ಪ್ರಕಾರ ಬಿದಿರಿನ ಚಿಗುರಿನಲ್ಲಿ ಬಯೋಆಕ್ಟಿವ್ ಕಂಪೌಂಡ್‌ಗಳು ಹಾಗೂ ಪೌಷ್ಟಿಕಾಂಶಗಳು ಹೇರಳವಾಗಿವೆ. ಇವು ಕುಕ್ಕೀಸ್‌ನಲ್ಲಿ ಆಂಟಿಆಕ್ಸಿಡೆಂಟ್ ಮಟ್ಟವನ್ನು ಹೆಚ್ಚಿಸೋದ್ರಿಂದ ಇತರ ಬಿಸ್ಕತ್‌ಗಳಿಗೆ ಹೋಲಿಸಿದ್ರೆ ಇವು ಅತ್ಯಂತ ಆರೋಗ್ಯಕರ. ಅಲ್ಲದೆ, ಒವನ್‌ನಲ್ಲಿ ಒಣಗಿಸಿ ಸಿದ್ಧಪಡಿಸಿರೋ ಬಿದಿರಿನ ಪುಡಿಯಿಂದ ಮಾಡಿರೋ ಬಿಸ್ಕತ್‌ಗಳಲ್ಲಿ ಇತರ ಬಿಸ್ಕತ್‌ಗಳಿಗಿಂತ ಹೆಚ್ಚಿನ ಪೌಷ್ಟಿಕಾಂಶವಿರೋದು ಸಾಬೀತಾಗಿದೆ. ಬಿದಿರಿನ ಬಿಸ್ಕತ್‌ಗಳು ರಕ್ತದೊತ್ತಡ ಹಾಗೂ ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸೋ ಜೊತೆ ಹಸಿವನ್ನು ಹೆಚ್ಚಿಸುತ್ತವೆ ಎಂದು ಫುಡ್ ಸೈನ್ಸ್ ಆಂಡ್ ಟೆಕ್ನಾಲಜಿ ಜರ್ನಲ್‌ನಲ್ಲಿ ಪ್ರಕಟವಾದ ಸಂಶೋಧನಾ ವರದಿಯೊಂದು ಹೇಳಿದೆ.
ಬಾಣಂತಿ ಈ ಆಹಾರ ಸೇವಿಸಿದರೆ ಶಿಶುವಿಗೆ ಹೃದ್ರೋಗ! ಎಚ್ಚರ
ಆರೋಗ್ಯ ಪ್ರಯೋಜನಗಳು
-ಬಿದಿರಿನ ಬಿಸ್ಕತ್ ನಾಲಿಗೆಗೆ ರುಚಿ ನೀಡೋದು ಮಾತ್ರವಲ್ಲ,ಅದ್ರಿಂದ ಆರೋಗ್ಯಕ್ಕೆ ಅನೇಕ ಪ್ರಯೋಜನಗಳಿವೆ ಕೂಡ. ಈ ಬಿಸ್ಕತ್‌ನಲ್ಲಿ ಬಳಸೋ ಮುಲಿ ಎಂಬ ಬಿದಿರಿನ ಚಿಗುರು ಪ್ರೋಟೀನ್, ಮಿನರಲ್ಸ್, ವಿಟಮಿನ್ಸ್, ಫೈಬರ್‌ಗಳಿಂದ ಸಮೃದ್ಧವಾಗಿದೆ. ಅಲ್ಲದೆ,. ಕಡಿಮೆ ಕೊಬ್ಬನ್ನು ಹೊಂದಿರೋ ಕಾರಣ ಇದನ್ನು ಪೌಷ್ಟಿಕ ಆಹಾರಗಳ ಪಟ್ಟಿಗೆ ಸೇರಿಸಬಹುದು. ಬಿದಿರಿನ ಬಿಸ್ಕತ್‌ನಲ್ಲಿ ಸಕ್ಕರೆ ಹಾಗೂ ಕ್ಯಾಲೊರಿ ಕಡಿಮೆಯಿರೋ ಕಾರಣ ಮಧುಮೇಹ ಹೊಂದಿರೋರು ಕೂಡ ಸೇವಿಸಬಹುದು.
-ಬಿದಿರಿನ ಬಿಸ್ಕತ್‌ನಲ್ಲಿ ಫೈಬರ್ ಹೇರಳವಾಗಿದ್ದು,ಕ್ಯಾಲೊರಿ ಕಡಿಮೆಯಿರೋ ಕಾರಣ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ (ಎಲ್‌ಡಿಎಲ್ ಕೊಲೆಸ್ಟ್ರಾಲ್) ಮಟ್ಟವನ್ನು ತಗ್ಗಿಸಲು ನೆರವು ನೀಡುತ್ತದೆ. ಇದ್ರಿಂದ ಹೃದ್ರೋಗಗಳ ಅಪಾಯ ಕೂಡ ತಗ್ಗುತ್ತದೆ.
-ಅಜೀರ್ಣ ಸೇರಿದಂತೆ ಪಚನ ಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳಿಂದ ಹಿಡಿದು ಗರ್ಭಧಾರಣೆ ಸಮಯದಲ್ಲಿ ಕಾಡೋ ವಾಕರಿಕೆ ಸೇರಿದಂತೆ ಅನೇಕ ಕಾರಣಗಳಿಂದ ನೀವು ನಿಮ್ಮ ಹಸಿವನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಿದ್ರೆ, ತಪ್ಪದೆ ಬಿದಿರಿನ ಬಿಸ್ಕತ್ ತಿನ್ನಿ. ಹದವಾದ ಸಿಹಿ ಹಾಗೂ ಬಿದಿರಿನ ಕುರುಕಲು ರುಚಿ ಹೊಟ್ಟೆಸಮಸ್ಯೆಯನ್ನು ಪರಿಹರಿಸುತ್ತದೆ ಎಂದು ಭಾವಿಸಬೇಡಿ, ಬಿದಿರಿನಲ್ಲಿ ಸೆಲುಲೋಸ್ ಅತ್ಯಧಿಕ ಪ್ರಮಾಣದಲ್ಲಿದ್ದು,ಹಸಿವು ಹೆಚ್ಚಿಸಿ, ಮಲಬದ್ಧತೆಯನ್ನು ದೂರ ಮಾಡೋ ಜೊತೆ ಜೀರ್ಣಕ್ರಿಯೆಯನ್ನು ಉತ್ತಮಪಡಿಸುತ್ತದೆ.
-ಬಿದಿರಿನ ಚಿಗುರು ಹೃದಯದ ಆರೋಗ್ಯವರ್ಧನೆಗೆ ನೆರವು ನೀಡುತ್ತದೆ. ಹೀಗಾಗಿ ಹೃದಯ ಸಮಸ್ಯೆಗಳಿಂದ ಮುಕ್ತಿ ಪಡೆಯಲು ಬಿದಿರನ ಬಿಸ್ಕತ್‌ಗಳನ್ನು ಪ್ರತಿದಿನ ಸೇವಿಸಬಹುದು.
-ಬಿದಿರಿನ ಬಿಸ್ಕತ್‌ನಲ್ಲಿ ವಿಟಮಿನ್ಸ್ ಹಾಗೂ ಮಿನರಲ್ಸ್ ಹೆಚ್ಚಿನ ಪ್ರಮಾಣದಲ್ಲಿದ್ದು,ರೋಗನಿರೋಧಕ ಶಕ್ತಿ ಹೆಚ್ಚಲು ನೆರವು ನೀಡುತ್ತದೆ. ಮಳೆಗಾಲ ಹಾಗೂ ಚಳಿಗಾಲದಲ್ಲಿ ಕೊರೋನಾ ಸೇರಿದಂತೆ ನಾನಾ ತರಹದ ವೈರಸ್ ಹಾಗೂ ಬ್ಯಾಕ್ಟೀರಿಯಾಗಳಿಂದ ಉಂಟಾಗೋ ಕಾಯಿಲೆಗಳಿಂದ ತಪ್ಪಿಸಿಕೊಳ್ಳಲು ಈ ಬಿಸ್ಕತ್ ನೆರವು ನೀಡುತ್ತದೆ.
-ಬಿದಿರಿನ ಚಿಗುರು ಗರ್ಭಕೋಶದ ಸಂಕೋಚನವನ್ನು ಉತ್ತೇಜಿಸುವ ಗುಣ ಹೊಂದಿದೆ. ಹೀಗಾಗಿ ಚೀನಾದಲ್ಲಿ ಗರ್ಭಾವಸ್ಥೆಯ ಕೊನೆಯ ಹಂತದಲ್ಲಿ ಗರ್ಭಿಣಿಯರ ಆಹಾರದಲ್ಲಿ ಸಣ್ಣ ಪ್ರಮಾಣದಲ್ಲಿ ಬಿದಿರಿನ ಖಾದ್ಯಗಳನ್ನು ಸೇರಿಸುತ್ತಾರೆ. ಇದ್ರಿಂದ ಹೆರಿಗೆ ಸಹಜವಾಗಿ ಆಗುತ್ತದೆ ಎಂದು ಹೇಳಲಾಗುತ್ತದೆ. ಆದ ಕಾರಣ ಗರ್ಭಿಣಿಯರು ಕೂಡ ಬಿದಿರಿನ ಬಿಸ್ಕತ್ ಸೇವಿಸಬಹುದು.
-ಕ್ಯಾನ್ಸರ್ ಬಾರದಂತೆಯೂ ತಡೆಯೋ ಸಾಮರ್ಥ್ಯ ಬಿದಿರಿನ ಚಿಗುರಿಗಿದೆ.
-ಬಿದಿರಿನ ಚಿಗುರು ಅನೇಕ ಚರ್ಮ ವ್ಯಾಧಿಗಳನ್ನು ದೂರ ಮಾಡಬಲ್ಲದು.
ಅನ್ನಕ್ಕೂ ಸೈ, ಚಪಾತಿಗೂ ಜೈ, ನೋಡಿ ಒಂದು ಕೈ
ಪರಿಸರಸ್ನೇಹಿ ಬಿದಿರಿನ ಬಾಟಲ್
ಬಿದಿರಿನ ಬಿಸ್ಕತ್ ಜೊತೆ ತ್ರಿಪುರಾ ಸರ್ಕಾರ ಬಿದಿರಿನ ಬಾಟಲ್‌ಗಳನ್ನು ಕೂಡ ಬಿಡುಗಡೆ ಮಾಡಿದೆ. ಈ ಬಾಟಲ್‌ಗಳಲ್ಲಿ ಸ್ಥಳೀಯವಾಗಿ ಉತ್ಪಾದಿಸಿದ ಜೇನುತುಪ್ಪವನ್ನು ಸಂಗ್ರಹಿಸಿ ಮಾರಾಟ ಮಾಡಲಾಗುತ್ತಿದೆ. ಈ ಬಾಟಲ್‌ಗಳು ನೈಸರ್ಗಿಕ ಹಾಗೂ ಪರಿಸರಸ್ನೇಹಿಯಾಗಿದ್ದು,ಅಪಾಯಕಾರಿ ಪ್ಲಾಸ್ಟಿಕ್ ಬಾಟಲ್‌ಗಳಿಗೆ ಉತ್ತಮ ಪರ್ಯಾಯವಾಗಿವೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.