ಪರಿಮಳದಿಂದಲೇ ಎಲ್ಲರನ್ನೂ ತನ್ನತ್ತ ಸೆಳೆಯುವ ಹಲಸು, ರುಚಿಯಲ್ಲೂ ಇತರ ಹಣ್ಣುಗಳಿಗಿಂತ ಡೆಫರೆಂಟ್. ಹಳ್ಳಿಗಾಡಿನಲ್ಲಿ ಅದೆಷ್ಟೋ ಜನರ ಹಸಿವನ್ನು ನೀಗಿಸಿದ ಖ್ಯಾತಿ ಹೊಂದಿರುವ ಈ ಹಣ್ಣಿನಿಂದ ಸಿದ್ಧಪಡಿಸಬಹುದಾದ 2 ರೆಸಿಪಿಗಳು ಇಲ್ಲಿವೆ.
ಹಲಸಿನ ಹಣ್ಣು ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಈಗಂತೂ ಹಲಸಿನ ಸೀಸನ್ ಬೇರೆ. ಹಲಸಿನ ಹಣ್ಣು ತಿನ್ನೋದಕ್ಕೆ ರುಚಿಯಾಗಿರುವ ಜೊತೆಗೆ ಅನೇಕ ಪೋಷಕಾಂಶಗಳ ಆಗರವಾಗಿದೆ. ವಿಟಮಿನ್ ಎ, ಸಿ ಮತ್ತು ಬಿ ಕಾಂಪ್ಲೆಕ್ಸ್ ಹೇರಳವಾಗಿವೆ. ಜೊತೆಗೆ ಪೊಟ್ಯಾಸಿಯಂ, ಮೆಗ್ನೇಷಿಯಂ, ಮ್ಯಾಂಗನೀಸ್ ಹಾಗೂ ಕಬ್ಬಿಣಾಂಶ ಕೂಡ ಇದೆ. ಹಲಸಿನ ಹಣ್ಣಿನಿಂದ ಅನೇಕ ಖಾದ್ಯಗಳನ್ನು ಕೂಡ ತಯಾರಿಸಬಹುದು. ಈಗಂತೂ ಲಾಕ್‍ಡೌನ್ ಇರೋದ್ರಿಂದ ಹೊಸ ರೆಸಿಪಿ ಟ್ರೈ ಮಾಡಿ ನೋಡುವ ಮೂಡ್‍ನಲ್ಲಿ ನೀವಿದ್ರೆ ಹಲಸಿನ ಹಣ್ಣಿನ ಕಡುಬು ಹಾಗೂ ಹಲ್ವಾ ಸಿದ್ಧಪಡಿಸಿ, ರುಚಿ ನೋಡಲು ಮರೆಯಬೇಡಿ.
ಹಲಸಿನ ಹಣ್ಣಿನ ಕಡುಬು
ಇದು ಕರಾವಳಿ ಭಾಗದ ಜನಪ್ರಿಯ ತಿಂಡಿ. ಹಲಸಿನ ಹಣ್ಣಿನ ಸೀಸನ್‍ನಲ್ಲಿ ಕರಾವಳಿಯ ಪ್ರತಿ ಮನೆಯಲ್ಲೂ ಹಲಸಿನ ಹಣ್ಣಿನ ಕಡುಬು ಅಥವಾ ಇಡ್ಲಿಯನ್ನು ಬೆಳಗ್ಗಿನ ತಿಂಡಿಗೆ ಮಾಡೋದು ಕಾಮನ್. ಈ ಕಡುಬು ಸ್ವಲ್ಪ ಸಿಹಿಯಾಗಿರುವ ಕಾರಣ ಹಾಗೆಯೇ ತಿನ್ನಬಹುದು. ಕೆಂಪು ಚಟ್ನಿ ಅಥವಾ ಜೇನುತುಪ್ಪ ಹಲಸಿನ ಹಣ್ಣಿನ ಕಡುಬಿಗೆ ಬೆಸ್ಟ್ ಕಾಂಬೀನೇಷನ್.
ಬೇಕಾಗುವ ಸಾಮಗ್ರಿಗಳು:
ಹಲಸಿನ ಹಣ್ಣಿನ ತೊಳೆ- 15-20
ಅಕ್ಕಿ-3 ಕಪ್
ಬೆಲ್ಲ- 1/4 ಕಪ್
ತೆಂಗಿನ ತುರಿ-1/2 ಕಪ್
ಬಾಳೆ ಎಲೆ
ಈಗ ಟ್ರೈ ಮಾಡಬಲ್ಲ ಬಾಯಲ್ಲಿ ನೀರೂರಿಸುವ ಬಾಳೆಹಣ್ಣಿನ ರೆಸಿಪಿ
ಮಾಡುವ ವಿಧಾನ
-ಅಕ್ಕಿಯನ್ನು 3-4 ಗಂಟೆಗಳ ಕಾಲ ನೀರಿನಲ್ಲಿ ನೆನೆ ಹಾಕಿ.
-ಹಲಸಿನ ಹಣ್ಣಿನ ಪ್ರತಿ ತೊಳೆಯನ್ನು ಮೂರ್ನಾಲ್ಕು ಹೋಳುಗಳನ್ನಾಗಿ ಕತ್ತರಿಸಿಕೊಂಡು ಮಿಕ್ಸಿಗೆ ಹಾಕಿ ರುಬ್ಬಿ.
-ಹಲಸಿನ ಹಣ್ಣಿನ ತೊಳೆಗಳು ಅರೆಬರೆ ನುಣ್ಣಗಾದ ಬಳಿಕ ಅದಕ್ಕೆ ತೊಳೆದ ಅಕ್ಕಿ, ತೆಂಗಿನ ಕಾಯಿ ತುರಿ ಹಾಗೂ ಬೆಲ್ಲ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ರುಬ್ಬುವಾಗ ನೀರು ಸೇರಿಸಬೇಡಿ. ಹಲಸಿನ ಹಣ್ಣಿನ ತೊಳೆಯಲ್ಲಿ ನೀರಿನಾಂಶವಿರುವ ಕಾರಣ ನೀರಿನ ಅಗತ್ಯವಿರುವುದಿಲ್ಲ. ಅಲ್ಲದೆ, ಬಾಳೆಎಲೆಗೆ ಹಾಕಿ ಬೇಯಿಸುವ ಕಾರಣ ಹಿಟ್ಟು ತೆಳ್ಳಗಾದ್ರೆ ಸೋರಿ ಹೋಗುತ್ತದೆ. ಆದ್ರೆ ಹಿಟ್ಟು ತುಂಬಾ ಗಟ್ಟಿಯಾಗಿ ರುಬ್ಬಲು ಕಷ್ಟವಾದ್ರೆ ಮಾತ್ರ ಸ್ವಲ್ಪ ನೀರು ಸೇರಿಸಿ.
-ಈಗ ಬಾಳೆಎಲೆಯನ್ನು ಚೆನ್ನಾಗಿ ಒರೆಸಿ. ಸ್ಟೌವ್ ಆನ್ ಮಾಡಿ, ಬೆಂಕಿ ತಾಗದಂತೆ ಬಾಳೆಎಲೆಯನ್ನು ಮೇಲಿನಿಂದ ಹಿಡಿಯಿರಿ. ಹೀಗೆ ಮಾಡೋದ್ರಿಂದ ಬಾಳೆಎಲೆ ಮೃದುವಾಗಿ, ಹಿಟ್ಟು ಹಾಕಿ ಮಡಚುವಾಗ ಮುರಿಯೋದಿಲ್ಲ.
-ಬಾಳೆಎಲೆಗೆ ಎಣ್ಣೆ ಅಥವಾ ತುಪ್ಪ ಸವರಿ ಅದರ ಮೇಲೆ ಹಿಟ್ಟು ಹಾಕಿ ಕೈಯಿಂದ ಚೆನ್ನಾಗಿ ಹರಡಿ, ಮಡಚಿ. ತುಂಬಾ ತೆಳ್ಳಗೆ ಹರಡೋದು ಬೇಡ.
-ಇಡ್ಲಿ ಪಾತ್ರೆಯಲ್ಲಿ ಮಡಚಿದ ಬಾಳೆಎಲೆಗಳನ್ನಿಟ್ಟು ಹಬೆಯಲ್ಲಿ 20-25 ನಿಮಿಷ ಬೇಯಿಸಿದ್ರೆ ಹಲಸಿನ ಹಣ್ಣಿನ ಕಡುಬು ಸಿದ್ಧ.
-ಬೆಂದ ಬಳಿಕ ಬಾಳೆಎಲೆಗಳನ್ನು ಇಡ್ಲಿ ಪಾತ್ರೆಯಿಂದ ಹೊರತೆಗೆದಿಡಿ. ಬಿಸಿ ಆರಿದ ನಂತರ ಚಾಕುವಿನಿಂದ ಚಿಕ್ಕ ಚಿಕ್ಕ ತುಂಡುಗಳನ್ನಾಗಿ ಕತ್ತರಿಸಿ ಕೆಂಪು ಚಟ್ನಿಯೊಂದಿಗೆ ಸರ್ವ್ ಮಾಡಿ.
ವಿ.ಸೂ: ಬಾಳೆಎಲೆಗಳ ಬದಲು ಇಡ್ಲಿ ತಟ್ಟೆಗಳನ್ನು ಕೂಡ ಬಳಸಬಹುದು.
ಜಗತ್ತಿನ ಅತಿ ದುಬಾರಿ ಹಣ್ಣುಗಳು- ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ!
ಹಲಸಿನ ಹಣ್ಣಿನ ಹಲ್ವಾ
ಹಲ್ವಾ ಅಂದ್ರೆ ಬಾಯಿಯಲ್ಲಿ ನೀರಿಳಿಯದೆ ಇರುತ್ತದೆಯೇ? ಅದ್ರಲ್ಲೂ ಹಲಸಿನ ಹಣ್ಣಿನ ರುಚಿ ಹಾಗೂ ಪರಿಮಳ ಇಷ್ಟಪಡುವವರಿಗೆ ಅದರಿಂದ ತಯಾರಿಸಿದ ಹಲ್ವಾ ಇಷ್ಟವಾಗದಿರಲು ಸಾಧ್ಯವೇ ಇಲ್ಲ.
ಬೇಕಾಗುವ ಸಾಮಗ್ರಿಗಳು
ಸಣ್ಣಗೆ ಹಚ್ಚಿದ ಹಲಸಿನ ಹಣ್ಣಿನ ತೊಳೆ- 2 ಕಪ್
ಬೆಲ್ಲದ ಪುಡಿ-3/4 ಕಪ್
ತುಪ್ಪ- 5 ಟೇಬಲ್ ಚಮಚ
ಏಲಕ್ಕಿ ಪುಡಿ-1/2 ಟೀ ಚಮಚ
ನೀರು
ಗೋಡಂಬಿ
ದ್ರಾಕ್ಷಿ
ಗೋವಾದಲ್ಲಿದೆ ಆಕಾಶದಲ್ಲಿ ಊಟ ಮಾಡೋ ಅವಕಾಶ
ಮಾಡುವ ವಿಧಾನ
-ಹಚ್ಚಿದ ಹಲಸಿನ ಹಣ್ಣಿನ ತೊಳೆಗಳನ್ನು ಕುಕ್ಕರ್‍ನಲ್ಲಿ 3 ವಿಶಲ್ ಬರುವ ತನಕ ಬೇಯಿಸಿ.
-ಬಿಸಿ ಆರಿದ ಬಳಿಕ ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.
-ಬೆಲ್ಲದ ಪುಡಿಗೆ ಸ್ವಲ್ಪ ನೀರು ಸೇರಿಸಿ ಸ್ಟೌವ್ ಮೇಲಿಟ್ಟು ಬಿಸಿ ಮಾಡಿ. ಆಗಾಗ ಸೌಟಿನಿಂದ ತಿರುವುತ್ತಿರಿ. ಬೆಲ್ಲ ಕರಗಿ ಪಾಕ ಬರಲು ಪ್ರಾರಂಭಿಸಿದ ತಕ್ಷಣ ರುಬ್ಬಿಕೊಂಡಿರುವ ಹಲಸಿನ ಹಣ್ಣನ್ನು ಸೇರಿಸಿ ಮಧ್ಯಮ ಉರಿಯಲ್ಲಿ ಬೇಯಿಸಿ.
-ಈ ಮಿಶ್ರಣಕ್ಕೆ ತುಪ್ಪ ಸೇರಿಸಿ ಸೌಟಿನಿಂದ ತಿರುಗಿಸುತ್ತ ಇರಿ. ಹಲಸಿನ ಹಣ್ಣು ಬೆಲ್ಲದ ಪಾಕ್‍ದೊಂದಿಗೆ ಸೇರಿ ದಪ್ಪಗಾಗುತ್ತಿದ್ದಂತೆ ತಳಬಿಡಲು ಪ್ರಾರಂಭಿಸುತ್ತದೆ. ಆಗ ಏಲಕ್ಕಿ ಪೌಡರ್ ಸೇರಿಸಿ ಮಿಕ್ಸ್ ಮಾಡಿ ಸ್ಟೌವ್ ಆಪ್ ಮಾಡಿ.
-ಹಲಸಿನ ಹಣ್ಣಿನ ಹಲ್ವಾಕ್ಕೆ ತುಪ್ಪದಲ್ಲಿ ಹುರಿದ ಗೋಡಂಬಿ ಹಾಗೂ ದ್ರಾಕ್ಷಿ ಸೇರಿಸಿ ಸರ್ವ್ ಮಾಡಿ.