ಬೆಳಿಗ್ಗೆ ಬ್ರೇಕ್ ಫಾಸ್ಟ್ ಏನು ಎಂಬ ಪ್ರಶ್ನೆ ಕಿವಿಗೆ ಬಿದ್ರೆ ಕೆಲ ಮಹಿಳೆಯರ ಕೋಪ ನೆತ್ತಿಗೇರುತ್ತೆ. ಯಾಕೆಂದ್ರೆ ಪ್ರತಿ ದಿನ ಯಾವ ಉಪಹಾರ ಮಾಡ್ಬೇಕು ಎಂಬುದೇ ಅವ್ರಿಗೆ ದೊಡ್ಡ ಪ್ರಶ್ನೆಯಾಗಿರುತ್ತದೆ. ಕೆಲಸಕ್ಕೆ ಹೋಗುವ ತರಾತುರಿ ಮಧ್ಯೆ ಬೇಗ ಬ್ರೇಕ್ ಫಾಸ್ಟ್ ಸಿದ್ಧವಾಗ್ಬೇಕು ಎನ್ನುವವರು ಇದನ್ನು ಟ್ರೈ ಮಾಡ್ಬಹುದು.
ಬೆಳಗ್ಗೆ ತಿಂಡಿಗೆ ಏನು ಮಾಡೋದು? ಇದು ಬಹುತೇಕ ಮಹಿಳೆಯರನ್ನು ಕಾಡುವ ಯಕ್ಷಪ್ರಶ್ನೆ. ಸಂಜೆಯಾಗ್ತಿದ್ದಂತೆ ಬೆಳಿಗ್ಗೆ ಏನು ಉಪಹಾರ, ಮಧ್ಯಾಹ್ನ ಏನು ಅಡುಗೆ, ಸಂಜೆಗೆ ಯಾವ ಪಲ್ಯ ಎಂಬ ಚಿಂತೆ ಕಾಡುತ್ತದೆ. ಆರೋಗ್ಯವಾಗಿರಬೇಕು, ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರಿಗೂ ಇಷ್ಟವಾಗ್ಬೇಕು, ಅಂತ ಅಡುಗೆ ಮಾಡೋದು ಚಾಲೆಂಜಿಂಗ್ ಆಗಿರುತ್ತದೆ. ಪ್ರತೀ ದಿನ ಒಂದೇ ರೀತಿಯ ತಿಂಡಿ ಮಾಡುವುದರಿಂದ ಮಕ್ಕಳಿಗೂ ಬೇಸರ ಬಂದಿರುತ್ತದೆ. ಬೆಳ್ಳಂಬೆಳಿಗ್ಗೆ ವಿಪರೀತ ಮಸಾಲೆಯುಕ್ತ ಆಹಾರವನ್ನು ತಿಂದರೂ ಅದರಿಂದ ಉದರ ಸಂಬಂಧಿ ಸಮಸ್ಯೆಗಳು ತಲೆದೋರಬಹುದು. ಹಾಗಾಗಿ ಬೆಳಗ್ಗಿನ ತಿಂಡಿ ಆರೋಗ್ಯಕ್ಕೆ ಪೂರಕವಾಗಿದ್ದಾಗ ಮಾತ್ರ ಶಾಲೆಗೆ ಹೋಗುವ ಮಕ್ಕಳು, ಕಚೇರಿಗೆ ಹೋಗುವ ಪುರುಷರ ಹೆಲ್ತ್ ಚೆನ್ನಾಗಿರಲು ಸಾಧ್ಯ. ಇಲ್ಲವಾದಲ್ಲಿ ಎಸಿಡಿಟಿ, ಹೊಟ್ಟೆಉರಿ, ಗ್ಯಾಸ್ ಮುಂತಾದ ಸಮಸ್ಯೆಗಳು ಉಂಟಾಗುತ್ತವೆ.
ಕೆಲಸಕ್ಕೆ ಹೋಗುವ ಮಹಿಳೆಯರು ಬೆಳಿಗ್ಗೆ ಸುಲಭವಾಗಿ ಮಾಡುವಂತಹ ತಿಂಡಿ (Breakfast ) ಯನ್ನು ಆಯ್ಕೆ ಮಾಡಿಕೊಳ್ತಾರೆ. ಏಕೆಂದರೆ ಅವರು ಬೆಳಗ್ಗಿನ ತಿಂಡಿ, ಊಟದ ಡಬ್ಬಿ ಎಲ್ಲವನ್ನೂ ತಯಾರಿಸಿಕೊಂಡು ಹೋಗುವ ತರಾತುರಿಯಲ್ಲಿ ಇರುತ್ತಾರೆ. ಹಾಗಿ ಸುಲಭವಾಗಿ ಮಾಡಬಹುದಾದ, ಹೆಚ್ಚು ಸಮಯ (Time) ತೆಗೆದುಕೊಳ್ಳದ ತಿಂಡಿಗಳು ಅವರ ವೇಗದ ಜೀವನಶೈಲಿಗೆ ಸೂಕ್ತವಾಗುತ್ತದೆ. ಹಾಗಾಗಿಯೇ ನಾವು ನಿಮಗೆ ಆರೋಗ್ಯಕ್ಕೆ ಉತ್ತಮವಾದ, ರುಚಿಕರ (Delicious) ವಾದ ಒಂದು ಬೆಳಿಗ್ಗಿನ ತಿಂಡಿಯನ್ನು ಹೇಳಲಿದ್ದೇವೆ. ಇದನ್ನು ಬಹಳ ಕಡಿಮೆ ಸಮಯದಲ್ಲಿ ಕಡಿಮೆ ಸಾಮಗ್ರಿಯಿಂದ ಸುಲಭವಾಗಿ ಮಾಡಬಹುದಾಗಿದೆ. ಮಕ್ಕಳು ಕೂಡ ಇದನ್ನು ಬಹಳ ಇಷ್ಟಪಟ್ಟು ತಿನ್ನುತ್ತಾರೆ.
Healthy Food : ಹಲಸಿನ ಹಿಟ್ಟಿನಿಂದ ಎಷ್ಟು ಲಾಭವಿದೆ ಗೊತ್ತಾ?
ಸೂಜಿ/ರವೆ ರೋಲ್ (Roll) :
ಇದಕ್ಕೆ ಬೇಕಾಗುವ ಸಾಮಗ್ರಿ : ರವೆ 1 ಕಪ್, ಮೈದಾ ಹಿಟ್ಟು 2 ಚಮಚ, ಸಣ್ಣ ಚೂರು ಶುಂಠಿ, ಮೊಸರು ½ ಕಪ್, ನೀರು ½ ಕಪ್, ಚಿಲ್ಲಿ ಫ್ಲೇಕ್ಸ್ 1 ದೊಡ್ಡ ಚಮಚ, ಹಸಿಮೆಣಸು 2-3, ಕರಿಬೇವಿನ ಎಲೆ 5-6, ಕುತ್ತುಂಬರಿ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು
ಸೂಜಿ ರೋಲ್ ತಯಾರಿಸುವ ವಿಧಾನ
• ಸೂಜಿ ರೋಲ್ ಮಾಡಲು ಮೊದಲು ರವೆ ಮತ್ತು ಮೈದಾ ಹಿಟ್ಟನ್ನು ಮಿಕ್ಸಿ ಜಾರ್ ನಲ್ಲಿ ಗ್ರೈಂಡ್ ಮಾಡಿಕೊಳ್ಳಬೇಕು. ಈ ಮಿಶ್ರಣಕ್ಕೆ ಶುಂಠಿ, ನೀರು, ಉಪ್ಪು, ಮೊಸರನ್ನು ಕೂಡ ಹಾಕಿ ಗ್ರೈಂಡ್ ಮಾಡಿ.
• ಗ್ರೈಂಡ್ ಮಾಡಿದ ನಂತರ ತಯಾರಾದ ಪೇಸ್ಟ್ ಗೆ ಚಿಲ್ಲಿ ಫ್ಲೇಕ್ಸ್, ಚಿಕ್ಕದಾಗಿ ಕತ್ತರಿಸಿದ ಹಸಿಮೆಣಸು, ಕರಿಬೇವು, ಕುತ್ತುಂಬರಿ ಸೊಪ್ಪನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
• ಒಂದು ಪ್ಯಾನ್ ನಲ್ಲಿ ನೀರು ಹಾಕಿ ಕುದಿಸಿ. ಆ ಪ್ಯಾನ್ ಮಧ್ಯದಲ್ಲಿ ಒಂದು ಸ್ಟ್ಯಾಂಡ್ ಇರಿಸಿ. ನಂತರ ಒಂದು ಪ್ಲೇಟ್ ತೆಗೆದುಕೊಂಡು ಅದಕ್ಕೆ ಎಣ್ಣೆ ಹಚ್ಚಿ ರವೆಯ ಪೇಸ್ಟ್ ಅನ್ನು ದೋಸೆಯ ತರಹ ಅದರ ಮೇಲೆ ಹಾಕಿ.
• ರವೆಯ ಪೇಸ್ಟ್ ಹಾಕಿದ ಪ್ಲೇಟ್ ಅನ್ನು ಕುದಿಯುವ ನೀರಿನ ಮೇಲಿರುವ ಸ್ಟ್ಯಾಂಡ್ ಮೇಲಿಟ್ಟು ಅದನ್ನು ಇನ್ನೊಂದು ಪ್ಲೇಟ್ ಸಹಾಯದಿಂದ ಮುಚ್ಚಿ 3-5 ನಿಮಿಷಗಳ ಕಾಲ ಬೇಯಿಸಿ.
• ರವೆ ಚೆನ್ನಾಗಿ ಬೆಂದ ನಂತರ ಚಾಕುವಿನ ಸಹಾಯದಿಂದ ಅದನ್ನು ಕಟ್ ಮಾಡಿ ರೋಲ್ ಮಾಡಿ.
• ಹೀಗೆ ತಯಾರಾದ ರುಚಿಕರ ರವೆ ರೋಲ್ ಅನ್ನು ಟೊಮೆಟೊ ಸಾಸ್ ಅಥವಾ ಹಸಿಮೆಣಸಿನ ಚಟ್ನಿಯ ಜೊತೆ ಸವಿಯಬಹುದು.
Healthy Snack : ಸ್ವಾದಿಷ್ಟಕರ ಮಖಾನಾ ಚಾಟ್ ರುಚಿಗೂ ಸೈ ಆರೋಗ್ಯಕ್ಕೂ ಸೈ
ರವೆ ರೋಲ್ ನಲ್ಲಿ ರವೆಯನ್ನು ಬಳಸುವುದರಿಂದ ಇದು ಸುಲಭವಾಗಿ ಜೀರ್ಣವಾಗುತ್ತದೆ. ಇದರಲ್ಲಿ ಬಳಸುವ ಶುಂಠಿ, ಕರಿಬೇವು, ಕೊತ್ತುಂಬರಿ ಸೊಪ್ಪುಗಳು ಶರೀರಕ್ಕೆ ಬಹಳ ಒಳ್ಳೆಯದು. ಮಕ್ಕಳು ಇದನ್ನು ಸ್ನ್ಯಾಕ್ಸ್ ತರಹದೇ ತಿಂಡಿಯೆಂದು ಇಷ್ಟಪಟ್ಟು ತಿನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ.