ರಾಗಿ ಮುದ್ದೆ ಎಂದರೆ ಇಷ್ಟಪಡದವರು ಯಾರಿದ್ದಾರೆ? ಆದರೆ ಹೊಸದಾಗಿ ಅಡುಗೆ ಕಲಿಯುವವರಿಗೆ ಮುದ್ದೆ ಗಂಟಾಗುವುದು, ಸರಿಯಾಗಿ ಬೇಯದಿರುವುದು ಅಥವಾ ಗಟ್ಟಿಯಾಗುವುದು ದೊಡ್ಡ ಸವಾಲು. ಆದರೆ, ಒಂದೇ ಒಂದು ತೊಟ್ಟು ಎಣ್ಣೆ ಅಥವಾ ತುಪ್ಪವನ್ನು ಬಳಸದೇ, ಕೇವಲ ರಾಗಿ ಹಿಟ್ಟು ಹಾಗೂ ನೀರಿನ ಸರಿಯಾದ ಅಳತೆಯಿಂದ ಬೆಣ್ಣೆಯಂತಹ ಸಾಫ್ಟ್ ರಾಗಿ ಮುದ್ದೆಯನ್ನು ಅತ್ಯಂತ ಸುಲಭವಾಗಿ ಮಾಡಬಹುದು. ಮುದ್ದೆ ಮಾಡುವುದು ಹೇಗೆ ಮತ್ತು ಅದರ ಸೂಕ್ಷ್ಮ ಹಂತಗಳೇನು? ಇಲ್ಲಿದೆ ಸಂಪೂರ್ಣ ವಿವರ.
ರಾಗಿ ಹಿಟ್ಟು: 1 ಲೋಟ (ತುಂಬಿ ಹಗುರವಾಗಿ ತಗೊಂಡದ್ದು)
ನೀರು: 2 ಲೋಟ
ಕೊಟ್ರೆ ಮಾಡಲು: 1.5 ಚಮಚ ರಾಗಿ ಹಿಟ್ಟು
ಕೊಟ್ರೆ ಸಿದ್ಧತೆ
ಒಂದು ಪಾತ್ರೆಗೆ 1.5 ಲೋಟ ನೀರು ಹಾಕಿ ಕಾಯಲು ಇಡಿ. ಇನ್ನುಳಿದ ಅರ್ಧ ಲೋಟ ನೀರಿಗೆ 1.5 ಚಮಚ ರಾಗಿ ಹಿಟ್ಟು ಸೇರಿಸಿ ಗಂಟಿಲ್ಲದಂತೆ ಕಲಸಿ ಇಡಿ (ಇದನ್ನು 'ಕೊಟ್ರೆ' ಅಥವಾ 'ಹೆಸರು ಇಡುವುದು' ಎನ್ನಲಾಗುತ್ತದೆ).
ನೀರು ಕುದಿಸಿ
ಪಾತ್ರೆಯಲ್ಲಿರುವ ನೀರು ಕುದಿಬರಲು ಪ್ರಾರಂಭಿಸಿದಾಗ, ತಯಾರಿಸಿಟ್ಟ ಕೊಟ್ರೆಯನ್ನು ಸೇರಿಸಿ. ಉರಿಯನ್ನು ಸಣ್ಣಗೆ ಮಾಡಿ ಸರಿಯಾಗಿ 3 ನಿಮಿಷಗಳ ಕಾಲ ಚೆನ್ನಾಗಿ ಕುದಿಯಲು ಬಿಡಿ.
ಹಿಟ್ಟು ಸೇರಿಸಿ
3 ನಿಮಿಷಗಳ ನಂತರ, ಉಳಿದ 1 ಲೋಟ ರಾಗಿ ಹಿಟ್ಟನ್ನು ಕುದಿಯುತ್ತಿರುವ ಕೊಟ್ರೆ ಮೇಲೆ ಹಾಕಿ, ಹಿಟ್ಟು ಮುಳುಗುವಂತೆ ಮಾಡಿ. ಮುಚ್ಚಳ ಮುಚ್ಚದೆ ಸಣ್ಣ ಉರಿಯಲ್ಲಿ ಮತ್ತೆ 3 ನಿಮಿಷ ಬೇಯಿಸಿ.
ತಿರುಗಿಸಿ (ಕೂಡಿಸಿ)
ನಂತರ ಗಟ್ಟಿಯಾದ ಮರದ ಸೌಟಿನಿಂದ ಹಿಟ್ಟನ್ನು ಚೆನ್ನಾಗಿ ಗಂಟಿಲ್ಲದಂತೆ ತಿರುಗಿಸಿ. ಹಿಟ್ಟು ಗಟ್ಟಿಯೆನಿಸಿದರೆ ಪುನಃ ಕೊಟ್ರೆಯನ್ನು ಸೇರಿಸಿ ಹದ ಮಾಡಿಕೊಳ್ಳಿ.
ಆವಿಯಲ್ಲಿ ಮಾಗಿಸಿ (ಪ್ರಮುಖ ಹಂತ)
ಹಿಟ್ಟು ಚೆನ್ನಾಗಿ ಬೆರೆತ ನಂತರ ಮುಚ್ಚಳ ಮುಚ್ಚಿ ಸಣ್ಣ ಉರಿಯಲ್ಲಿ 1 ನಿಮಿಷ ಆವಿಯಲ್ಲಿ ಬೇಯಿಸಿ. ನಂತರ ಸೌಟಿಗೆ ಕೊಂಚ ನೀರು ಚಿಮಕಿಸಿ ಮತ್ತೊಮ್ಮೆ ಚೆನ್ನಾಗಿ ತಿರುಗಿಸಿ, ಪುನಃ 1 ನಿಮಿಷ ಮುಚ್ಚಳ ಮುಚ್ಚಿ ಮಾಗಿಸಿ. ಈ ಹಂತವೇ ಮುದ್ದೆಯನ್ನು ಬೆಣ್ಣೆಯಂತೆ ಮೆತ್ತಗೆ ಮಾಡುತ್ತದೆ.
ಮುದ್ದೆ ಕಟ್ಟಿ
ಸ್ಟವ್ ಆಫ್ ಮಾಡಿ, ಚಪಾತಿ ಮಣೆ ಅಥವಾ ತಟ್ಟೆಗೆ ನೀರು ಸವರಿ, ಬಿಸಿ ಬಿಸಿ ಹಿಟ್ಟನ್ನು ಹಾಕಿ ಕೈಗೆ ನೀರು ಹಚ್ಚಿಕೊಂಡು ದುಂಡಗೆ ಮುದ್ದೆ ಕಟ್ಟಿ.
ಹೊಸಬರು ಅಗಲವಾದ ಬಾಂಡ್ಲಿಯನ್ನು ಬಳಸಿದರೆ ತಿರುಗಿಸಲು ಅನುಕೂಲ.
ಮುದ್ದೆ ಕೂಡಿಸಲು ಬಳಸುವ ಸೌಟು ಗಟ್ಟಿಯಾಗಿರಬೇಕು.
ಮುದ್ದೆ ಬೆಂದಿದೆಯೇ ಎಂದು ತಿಳಿಯಲು ಕೈಗೆ ಸ್ವಲ್ಪ ನೀರು ಹಚ್ಚಿ ಮುಟ್ಟಿದರೆ ಹಿಟ್ಟು ಕೈಗೆ ಅಂಟುವುದಿಲ್ಲ.
ಕೊಟ್ರೆ ಎತ್ತಿಡುವುದು ಅತ್ಯಗತ್ಯ: ಹಿಟ್ಟು ಸೇರಿಸುವ ಮುನ್ನ 2-3 ಚಮಚ ಬೇಯುತ್ತಿರುವ ಕೊಟ್ರೆಯನ್ನು ಪಕ್ಕಕ್ಕೆ ತೆಗೆದಿರಿಸಿ. ಮುದ್ದೆ ಜಾಸ್ತಿ ಗಟ್ಟಿಯಾದಾಗ ಇದನ್ನು ಬಳಸಬಹುದು (ಸಾಧಾರಣ ನೀರಿಗಿಂತ ಕೊಟ್ರೆ ಸೇರಿಸಿದರೆ ಮುದ್ದೆಯ ಹದ ಹಾಳಾಗುವುದಿಲ್ಲ).
ಹಸಿಯಾದ ಹಿಟ್ಟು ಬೇಡ: ರಾಗಿ ಹಿಟ್ಟು ತೇವಾಂಶವಿಲ್ಲದೆ ಒಣಗಿರಬೇಕು. ಹಳೆಯದಾಗಿದ್ದರೆ ಅಥವಾ ತೇವವಿದ್ದರೆ ಮುದ್ದೆಯಲ್ಲಿ ಸಣ್ಣ ಸಣ್ಣ ಗಂಟುಗಳು ಉಳಿದುಕೊಳ್ಳುತ್ತವೆ.
ಸಣ್ಣ ಬಟ್ಟಲಿನಿಂದ ಶೇಪ್ ಮಾಡಿ: ಬಿಸಿ ಹಿಟ್ಟು ಮುಟ್ಟಲು ಭಯವಾದರೆ, ನೀರು ಸವರಿದ ಒಂದು ಸಣ್ಣ ಬಟ್ಟಲಿಗೆ ಹಿಟ್ಟು ಹಾಕಿ ರೌಂಡಾಗಿ ತಿರುಗಿಸಿದರೆ ಅತ್ಯಂತ ದುಂಡಗಿನ ಶೇಪ್ ಬರುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.