ಬಾಯಲ್ಲಿ ನೀರೂರಿಸುವ ಅಪ್ಪಟ ಬಿಡದಿ ಶೈಲಿಯ ತಟ್ಟೆ ಇಡ್ಲಿ, ಸ್ಪೆಷಲ್ ಚಟ್ನಿ ಪುಡಿ ಮಾಡುವ ವಿಧಾನ

Published : Oct 27, 2026, 03:21 PM IST
Bidadi thatte idli recipe

ಸಾರಾಂಶ

Bidadi thatte idli recipe: ಬೆಂಗಳೂರು-ಮೈಸೂರು ಹೈವೇಯಲ್ಲಿ ಸಿಗುವ ಬಿಡದಿಯ ಹೂವಿನಂತಹ ಮೃದು ತಟ್ಟೆ ಇಡ್ಲಿ, ಅದರ ಮೇಲೆ ಘಮಘಮಿಸುವ ತುಪ್ಪ ಮತ್ತು ಗರಿಗರಿಯಾದ ಚಟ್ನಿಪುಡಿ ಸವಿಯಲು ಜನ ಮುಗಿಬೀಳ್ತಾರೆ. ಆದರೆ, ಯಾವುದೇ ಸೋಡಾ ಬಳಸದೆ ಅಪ್ಪಟ ಹೋಟೆಲ್ ಶೈಲಿಯಲ್ಲಿ ಬಾಯಲ್ಲಿಟ್ಟರೆ ಕರಗುವಂತಹ ತಟ್ಟೆ ಇಡ್ಲಿ ಹಾಗೂ ಸ್ಪೆಷಲ್ ಚಟ್ನಿಪುಡಿ ಮನೆಯಲ್ಲೇ ಸುಲಭವಾಗಿ ಮಾಡುವುದು ಹೇಗೆ? ಇಲ್ಲಿದೆ ನೋಡಿ ಸೀಕ್ರೆಟ್ ರೆಸಿಪಿ.

ಬೆಂಗಳೂರು ಸಮೀಪದ ಬಿಡದಿಯ ಹೂವಿನಂತಹ, ಮೃದುವಾದ ಬಿಸಿಬಿಸಿ ತಟ್ಟೆ ಇಡ್ಲಿ, ಅದರ ಮೇಲೆ ತುಪ್ಪ ಹಾಗೂ ಚಟ್ನಿ ಪುಡಿ ಉದುರಿಸಿ ತಿಂದರೆ ಆ ರುಚಿಯೇ ಸ್ವರ್ಗ! ಹೋಟೆಲ್‌ಗೆ ಹೋಗದೇ ಮನೆಯಲ್ಲೇ ಅಷ್ಟೇ ಸಾಫ್ಟ್ ಆಗಿ ತಟ್ಟೆ ಇಡ್ಲಿ ಹಾಗೂ ಸ್ಪೆಷಲ್ ಚಟ್ನಿ ಪುಡಿ ಮಾಡುವುದು ಹೇಗೆ? ಇಲ್ಲಿದೆ ನೋಡಿ ಕಂಪ್ಲೀಟ್ ರೆಸಿಪಿ..."

ಬೇಕಾಗುವ ಸಾಮಗ್ರಿಗಳು

ಇಡ್ಲಿ ಹಿಟ್ಟಿಗೆ
ಕುಚುಲಕ್ಕಿ (Parboiled Rice / ಇಡ್ಲಿ ಅಕ್ಕಿ) – 3 ಕಪ್
ಉದ್ದಿನಬೇಳೆ (ಗೋಟಾ ಉದ್ದು) – 1 ಕಪ್
ಸಬ್ಬಕ್ಕಿ (Sabudana) – 2 ದೊಡ್ಡ ಚಮಚ (ಇಡ್ಲಿ ಮುರಿದುಹೋಗದಂತೆ ಹಿಡಿದಿಡಲು)
ಅವಲಕ್ಕಿ (Poha) – 1/3 ಕಪ್ (ಇಡ್ಲಿ ಮೃದುವಾಗಲು)
ಮೆಂತ್ಯ ಕಾಳು – 2 ಚಮಚ (ಹುದುಗು ಬರಲು)
ಉಪ್ಪು – ರುಚಿಗೆ ತಕ್ಕಷ್ಟು
ನೀರು – ರುಬ್ಬಲು ಅಗತ್ಯವಿರುವಷ್ಟು

ಸ್ಪೆಷಲ್ ಚಟ್ನಿ ಪುಡಿ ಮಾಡಲು
ಕಡಲೆಬೇಳೆ – 1/4 ಕಪ್
ಉದ್ದಿನಬೇಳೆ – 1/2 ಕಪ್
ಬಿಳಿ ಎಳ್ಳು – 1/4 ಕಪ್
ಬ್ಯಾಡಗಿ ಒಣಮೆಣಸಿನಕಾಯಿ – 10 ರಿಂದ 12 (ಉತ್ತಮ ಬಣ್ಣಕ್ಕಾಗಿ)
ಖಾರದ ಒಣಮೆಣಸಿನಕಾಯಿ – 3 (ಖಾರಕ್ಕೆ ಬೇಕಿದ್ದರೆ ಮಾತ್ರ)
ಇಂಗು (Hing) – 1 ಚಮಚ
ಉಪ್ಪು – ರುಚಿಗೆ ತಕ್ಕಷ್ಟು

ತಟ್ಟೆ ಇಡ್ಲಿ ಮಾಡುವ ಹಂತ-ಹಂತದ ವಿಧಾನ

ನೆನೆಸಿ, ರುಬ್ಬಿ
ಅಕ್ಕಿ ಮತ್ತು ಉದ್ದಿನಬೇಳೆಯನ್ನು ಪ್ರತ್ಯೇಕ ಪಾತ್ರೆಗಳಲ್ಲಿ ಹಾಕಿ, ನೀರು ಸ್ವಚ್ಛವಾಗುವವರೆಗೆ ಚೆನ್ನಾಗಿ ತೊಳೆಯಿರಿ.
ಉದ್ದಿನಬೇಳೆ ಇರುವ ಪಾತ್ರೆಗೆ ಸಬ್ಬಕ್ಕಿ, ಅವಲಕ್ಕಿ ಮತ್ತು ಮೆಂತ್ಯ ಕಾಳುಗಳನ್ನು ಸೇರಿಸಿ.
ಎರಡೂ ಪಾತ್ರೆಗಳಿಗೆ ಸಾಕಷ್ಟು ನೀರು ಹಾಕಿ 7 ರಿಂದ 8 ಗಂಟೆಗಳ ಕಾಲ ಪ್ರತ್ಯೇಕವಾಗಿ ನೆನೆಯಲು ಬಿಡಿ.
ನೆನೆದ ನಂತರ, ನೀರನ್ನು ಬಸಿದು ಮೊದಲು ಅಕ್ಕಿಯನ್ನು ಮಿಕ್ಸಿಗೆ ಹಾಕಿ, ಸುಮಾರು 3 ಕಪ್ ನೀರನ್ನು ಸ್ವಲ್ಪ ಸ್ವಲ್ಪವೇ ಸೇರಿಸುತ್ತಾ ರವೆ ರವೆಯಾಗಿ (ತರಿತರಿಯಾಗಿ) ರುಬ್ಬಿ ದೊಡ್ಡ ಪಾತ್ರೆಗೆ ಹಾಕಿ.
ನಂತರ ಉದ್ದಿನಬೇಳೆ ಮತ್ತು ಸಬ್ಬಕ್ಕಿ ಮಿಶ್ರಣಕ್ಕೆ 1 ಕಪ್ ನೀರು ಸೇರಿಸಿ ಬಹಳ ನುಣ್ಣಗೆ (Soft & Fine) ರುಬ್ಬಿಕೊಂಡು, ಅಕ್ಕಿ ಹಿಟ್ಟಿರುವ ಪಾತ್ರೆಗೆ ಸೇರಿಸಿ.
ವಿಸ್ಕರ್ ಅಥವಾ ಕೈಯಿಂದ ಎರಡೂ ಹಿಟ್ಟನ್ನು ಚೆನ್ನಾಗಿ ಒಂದಕ್ಕೊಂದು ಬೆರೆಸಿ, ಮುಚ್ಚಳ ಮುಚ್ಚಿ ಹುದುಗು ಬರಲು (Fermentation) 8 ರಿಂದ 10 ಗಂಟೆ ಬೆಚ್ಚಗಿನ ಜಾಗದಲ್ಲಿ ಇಡಿ (ಚಳಿಗಾಲದಲ್ಲಾದರೆ ದಪ್ಪ ಬಟ್ಟೆ ಸುತ್ತಿಡಬೇಕು).

ಈಗ ಇಡ್ಲಿ ಬೇಯಿಸಿ
ಚೆನ್ನಾಗಿ ಉಬ್ಬಿ ಬಂದ ಹಿಟ್ಟಿಗೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ, ನಿಧಾನವಾಗಿ ಕದಡಿ (ವೇಗವಾಗಿ ತಿರುಗಿಸಿದರೆ ಒಳಗಿರುವ ಏರ್ ಬಬಲ್ಸ್ ಹೋಗಿಬಿಡುತ್ತವೆ).
ತಟ್ಟೆ ಇಡ್ಲಿ ಮೌಲ್ಡ್, ಸಣ್ಣ ತಟ್ಟೆ ಅಥವಾ ಸ್ಟೀಲ್ ಡಬ್ಬದ ಮುಚ್ಚಳಕ್ಕೆ ಬಾಳೆಎಲೆ ಅಥವಾ ಬಟರ್ ಪೇಪರ್ ಇಟ್ಟು, ಎಣ್ಣೆ ಸವರಿ.
ಈ ತಟ್ಟೆಗಳಿಗೆ ಅರ್ಧದಷ್ಟು ಮಾತ್ರ ಹಿಟ್ಟು ಹಾಕಿ (ಇಡ್ಲಿ ಬೆಂದ ಮೇಲೆ ಉಬ್ಬುವುದರಿಂದ ಪೂರ್ತಿ ತುಂಬಿಸಬೇಡಿ).
ಮುಂಚಿತವಾಗಿ ಕಾಯಿಸಿದ ಸ್ಟೀಮರ್‌ನಲ್ಲಿಟ್ಟು 15 ರಿಂದ 20 ನಿಮಿಷಗಳ ಕಾಲ ಹಬೆಯಲ್ಲಿ ಬೇಯಿಸಿ.
ಬೆಂದ ನಂತರ ಹೊರತೆಗೆದು 2-3 ನಿಮಿಷ ತಣ್ಣಗಾಗಲು ಬಿಟ್ಟು, ಚಮಚದ ಹಿಂಭಾಗದಿಂದ ಅಂಚುಗಳನ್ನು ಸಡಿಲಗೊಳಿಸಿ ಇಡ್ಲಿಯನ್ನು ತೆಗೆಯಿರಿ.

ಚಟ್ನಿ ಪುಡಿ ಮಾಡುವ ವಿಧಾನ

ಬಾಣಲೆಯನ್ನು ಬಿಸಿ ಮಾಡಿ, ಸಣ್ಣ ಉರಿಯಲ್ಲಿ ಕಡಲೆಬೇಳೆ ಮತ್ತು ಉದ್ದಿನಬೇಳೆಯನ್ನು ಕೆಂಪಾಗುವವರೆಗೆ ಹಾಗೂ ಪರಿಮಳ ಬರುವವರೆಗೆ ತಾಳ್ಮೆಯಿಂದ ಹುರಿದು ತೆಗೆದಿಡಿ.
ಅದೇ ಬಾಣಲೆಯಲ್ಲಿ ಬಿಳಿ ಎಳ್ಳನ್ನು ಚಿಟಪಟ ಎನ್ನುವವರೆಗೆ ಲಘುವಾಗಿ ಹುರಿದುಕೊಳ್ಳಿ.
ನಂತರ ಒಣಮೆಣಸಿನಕಾಯಿಗಳನ್ನು ಗರಿಗರಿಯಾಗುವಂತೆ ಹುರಿದು ತಣ್ಣಗಾಗಲು ಬಿಡಿ.
ಮೊದಲು ಒಣಮೆಣಸಿನಕಾಯಿಯನ್ನು ಮಾತ್ರ ಮಿಕ್ಸಿಗೆ ಹಾಕಿ ನುಣ್ಣಗೆ ಪುಡಿ ಮಾಡಿ.
ನಂತರ ಅದಕ್ಕೆ ಹುರಿದ ಬೇಳೆಗಳು, ಎಳ್ಳು, ಇಂಗು ಮತ್ತು ಉಪ್ಪು ಸೇರಿಸಿ ತರಿತರಿಯಾಗಿ (Coarse) ರುಬ್ಬಿಕೊಳ್ಳಿ (ಬೇಳೆಯ ಕ್ರಂಚ್ ಬಾಯಿಗೆ ಸಿಗುವಂತಿರಬೇಕು).
ಈ ಪುಡಿಯನ್ನು ಗಾಜಿನ ಬಾಟಲಿಯಲ್ಲಿ 1 ರಿಂದ 2 ತಿಂಗಳು ಸಂಗ್ರಹಿಸಿಡಬಹುದು.

ಬಡಿಸುವ ವಿಧಾನ

ಬಿಸಿಬಿಸಿ ತಟ್ಟೆ ಇಡ್ಲಿ ಮೇಲೆ ತುಪ್ಪವನ್ನು ಧಾರಾಳವಾಗಿ ಸವರಿ, ಅದರ ಮೇಲೆ ತಯಾರಿಸಿದ ಚಟ್ನಿ ಪುಡಿ ಉದುರಿಸಿ, ಕಾಯಿ ಚಟ್ನಿಯೊಂದಿಗೆ ಬಡಿಸಿದರೆ ಬಾಯಲ್ಲಿ ನೀರೂರಿಸುವ ಅಪ್ಪಟ ಬಿದದಿ ಶೈಲಿಯ ತಟ್ಟೆ ಇಡ್ಲಿ ಸವಿಯಲು ರೆಡಿ!

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಚಿಪ್ಸ್, ನೂಡಲ್ಸ್, ಉಪ್ಮಾ, ರೋಲ್! ಉಳಿದ ಚಪಾತಿಯಿಂದ ಎಷ್ಟೊಂದು ತಿಂಡಿ ಮಾಡಬಹುದು, ಇವತ್ತೇ ಟ್ರೈ ಮಾಡಿ
ಅರ್ಧ ರೇಟಿಗೆ ಸಿಗ್ತಿದೆ ಅಂತ ಅಪ್ಪಿತಪ್ಪಿಯೂ ತಿನ್ಬೇಡಿ.. ಇವ್ರು ದೇವಸ್ಥಾನದ ಹೊರಗೆ ಮಾರೋದು ನಾಟಿ ಬಾದಾಮಿಯಲ್ಲ!