ಸಾಧಿಸುವ ಧೃಡ ಸಂಕಲ್ಪವೊಂದಿದ್ದಾರೆ ಯಾವುದು ಅಸಾಧ್ಯವಲ್ಲ. ಈ ಮಾತಿಗೆ ಈಗಾಗಲೇ ನಾವು ಹಲವು ನಿದರ್ಶನಗಳನ್ನು ನೋಡಿದ್ದೇವೆ. ಹಾಗೆಯೇ ಪ್ರತಿಯೊಬ್ಬರಿಗೂ ಸ್ಪೂರ್ತಿ ತುಂಬುವ ದಿವ್ಯಾಂಗ ಯುವಕನೋರ್ವನ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿದೆ. ಸಾಧಿಸುವ ಮನಸ್ಸಿದ್ದರೆ ಯಾವುದು ಅಸಾಧ್ಯವಲ್ಲ ಎಂಬುದನ್ನು ಈ ಯುವಕ ತೋರಿಸಿ ಕೊಟ್ಟಿದ್ದಾನೆ. ತಮ್ಮ ಅಂಗವೈಕಲ್ಯವನ್ನು ಮೀರಿ ನಿಂತ ಈ ಯುವಕ ಬೀದಿ ಬದಿಯಲ್ಲಿ ಫಾಸ್ಟ್‌ಪುಡ್ ಆಹಾರವನ್ನು ತಯಾರಿಸುವ ಗಾಡಿಯೊಂದನ್ನು ನಡೆಸುತ್ತಿದ್ದಾನೆ.
ಕೈಕಾಲು ಸರಿ ಇರುವವರೇ ಅದಿಲ್ಲ ಇದಿಲ್ಲ ಎಂದು ನೂರೊಂದು ಕೊರತೆಗಳನ್ನು ಹೇಳುತ್ತಾ ಸೋಮಾರಿಗಳಂತೆ ಇನ್ನೊಬ್ಬರನ್ನು ಅವಲಂಬಿಸಿಕೊಂಡು ಬದುಕುವುದನ್ನು ನಮ್ಮ ಸಮಾಜದಲ್ಲಿ ನಾವು ನೋಡಿದ್ದೇವೆ. ಅಂತಹದರಲ್ಲಿ ಒಂದು ಕೈ ಇಲ್ಲದ ದಿವ್ಯಾಂಗ ವ್ಯಕ್ತಿಯೊಬ್ಬರು ತಮ್ಮ ಒಂದು ಕೈಯಲ್ಲಿ ಪಾವ್‌ಬಾಜಿ ಮಾಡುತ್ತ ಬದುಕಿನ ಬಂಡಿ ಸಾಗಿಸುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ. ಮುಂಬೈನ ಬೀದಿಯಲ್ಲಿ ಸಣ್ಣ ತಳ್ಳುಗಾಡಿಯನ್ನು ಇಟ್ಟುಕೊಂಡು ಪಾವ್‌ಬಾಜಿ ಮಾರಾಟ ಮಾಡುತ್ತಿರುವ ದಿವ್ಯಾಂಗ ವ್ಯಕ್ತಿಯ ಸ್ಪೂರ್ತಿದಾಯಕ ಕತೆ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಅಂಗವೈಕಲ್ಯತೆಗೆ ಒಳಗಾದವರು ಸಾಮಾನ್ಯರಂತೆ ಬದುಕುವುದು ಕಷ್ಟದ ಕೆಲಸ ಆದಾಗ್ಯೂ ತಮ್ಮೆಲ್ಲಾ ದೌರ್ಬಲ್ಯಗಳನ್ನು ಮೀರಿ ಇವರು ಸ್ವಾಭಿಮಾನದ ಬದುಕನ್ನು ಬದುಕುತ್ತಿದ್ದಾರೆ. ಮಿತೇಶ್ ಗುಪ್ತಾ ಎಂಬುವವರೇ ಹೀಗೆ ಇತರರಿಗೆ ಮಾದರಿಯಾಗಿರುವ ವ್ಯಕ್ತಿ. ಇವರು ಪಾವ್‌ಬಾಜಿಗೆ ಬೇಕಾದ ವಸ್ತುಗಳನ್ನು ಕೇವಲ ಒಂದು ಕೈಯಲ್ಲಿ ಬಹಳ ಜಾಣತನದಿಂದ ಕತ್ತರಿಸುತ್ತಾರೆ. ಹಾಗಂತ ಮಿತೇಶ್ ಗುಪ್ತಾ ಹುಟ್ಟು ವಿಕಲಚೇತನ ಅಲ್ಲ, ಬಾಲ್ಯದಲ್ಲಿ ಅಪಘಾತಕ್ಕೀಡಾಗಿ ಅವರು ತಮ್ಮ ಒಂದು ಕೈಯನ್ನು ಕಳೆದುಕೊಂಡಿದ್ದರು.
ಇವರ ವಿಡಿಯೋವನ್ನು ಸಾಮಾಜಿಕ ಜಾಲತಾಣವಾದ ಟ್ವಿಟ್ಟರ್‌ನಲ್ಲಿ ಜುಲೈ 16 ರಂದು ಗುರುಮಿತ್ ಚಡ್ಡಾ ಎಂಬುವವರು ಪೋಸ್ಟ್ ಮಾಡಿದ್ದಾರೆ. ಮಿತೇಶ್ ಗುಪ್ತಾ ಮುಂಬೈನ ಮಲಾಡ್‌ನಲ್ಲಿ ಪಾವ್ ಭಾಜಿ ಸ್ಟಾಲ್ ನಡೆಸುತ್ತಿದ್ದಾರೆ. ನಮ್ಮ ಕೈಲಾದದ್ದನ್ನು ಮಾಡೋಣ ಎಂದು ಬರೆದು ಈ ವಿಡಿಯೋವನ್ನು ಗುರುಮಿತ್ ಪೋಸ್ಟ್ ಮಾಡಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮಿತೇಶ್ ಗುಪ್ತಾ ಅವರ ಸ್ವಾಭಿಮಾನದ ಜೀವನಕ್ಕೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅನೇಕರು ತಾವು ಶೀಘ್ರದಲ್ಲೇ ಅವರನ್ನು ಭೇಟಿಯಾಗಬೇಕು ಎಂದು ಕಾಮೆಂಟ್ ಮಾಡಿದ್ದಾರೆ. ಮನುಷ್ಯರಿಗೆ ಯಾವುದೂ ಅಸಾಧ್ಯವಲ್ಲ ಯಾವುದನ್ನು ಮಾಡುವುದಕ್ಕೂ ಧೈರ್ಯವಿರಬೇಕು. ಇದೊಂದು ಸ್ಪೂರ್ತಿದಾಯಕ ವಿಚಾರ ಎಂದು ಕಾಮೆಂಟ್ ಮಾಡಿದ್ದಾರೆ. ಅಲ್ಲದೇ ಆತನ ಕಾರ್ಯ ಶ್ಲಾಘನಿಯವಾದುದು ಎಂದಿದ್ದಾರೆ. ಅವರ ಸಮರ್ಪಣೆ ಮತ್ತು ಸ್ಪೂರ್ತಿದಾಯಕ ಶಕ್ತಿಗೆ ಹ್ಯಾಟ್ಸ್ ಆಫ್! ಈ ವ್ಯಕ್ತಿ ಪಾವ್ ಭಾಜಿ ಮಾಡುವುದರಲ್ಲಿ ಕಷ್ಟಪಟ್ಟು ಕೆಲಸ ಮಾಡುತ್ತಿದ್ದಾಗ, ಇನ್ನೊಬ್ಬ ವ್ಯಕ್ತಿಯು ಕುರ್ಚಿಯ ಮೇಲೆ ಆರಾಮವಾಗಿ ಕುಳಿತು ತನ್ನ ಮೊಬೈಲ್ ಅನ್ನು ಸ್ಕ್ರಾಲ್ ಮಾಡುವುದನ್ನು ನಾನು ಗಮನಿಸಿದೆ. ಎರಡು ವಿರುದ್ಧ ಕ್ಷಣಗಳನ್ನು ಸುಂದರವಾಗಿ ಸೆರೆಹಿಡಿಯಲಾಗಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಮನಸ್ಸಿದ್ದರೆ ಮಾರ್ಗ : ಎರಡು ಕೈಗಳಿಲ್ಲದಿದ್ದರು ಸ್ಟ್ರೀಟ್ ಫುಡ್ ತಯಾರಿಸುವ ದಿವ್ಯಾಂಗ
ಮನಸ್ಸಿದ್ದರೆ ಮಾರ್ಗ ಎಂಬ ಗಾದೆ ಮಾತಿದೆ ಅದರಂತೆ ಸಾಧಿಸುವ ಛಲವಿದ್ದರೆ ಯಾವುದು ಅಸಾಧ್ಯವಲ್ಲ ಎಂಬುದನ್ನು ಈ ವ್ಯಕ್ತಿ ಸಾಧಿಸಿ ತೋರಿಸಿದ್ದಾರೆ. ಕೆಲ ದಿನಗಳ ಹಿಂದೆ ಎರಡೂ ಕೈಗಳಿಲ್ಲದ ಯುವಕನೋರ್ವ ಫಾಸ್ಟ್‌ಫುಡ್ ತಯಾರಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. @DigitalRahulM ಎಂಬ ಟ್ವಿಟ್ಟರ್ ಖಾತೆಯಿಂದ ಟ್ವಿಟ್ಟರ್ ಬಳಕೆದಾರ ರಾಹುಲ್ ಮಿಶ್ರಾ ಅವರು ಪೋಸ್ಟ್ ಮಾಡಿರುವ ಈ ವಿಡಿಯೋದಲ್ಲಿ ಎರಡು ಕೈಗಳಿಲ್ಲದ ದಿವ್ಯಾಂಗ ಯುವಕ ಬೀದಿ ಬದಿಯ ತಳ್ಳುಗಾಡಿಯೊಂದರಲ್ಲಿ ನೂಡಲ್ಸ್ ಅನ್ನು ಮಾಡುತ್ತಿರುವುದನ್ನು ಕಾಣಬಹುದು. 30 ಸೆಕೆಂಡುಗಳ ವೀಡಿಯೊವನ್ನು ಒಂದು ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದರು. ಜೊತೆ ಈ ವಿಡಿಯೋಗೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಅನೇಕರು ಈ ವಿಡಿಯೋವನ್ನು ರಿಟ್ವಿಟ್ ಮಾಡಿದ್ದರು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.