Ramanagara ವಾಸವಿ ಭೋಜನ ಸಂತೆ, ಶೆಟ್ಟರ ಮನೆಯ ವೈವಿಧ್ಯಮಯ ಮನೆತಿಂಡಿಗಳು ಬೊಂಬಾಟ್

By Suvarna NewsFirst Published Jul 17, 2022, 8:33 PM IST
Highlights

ವಾಸವಿ ವನಿತಾ ಸಂಘ ಮತ್ತು ವಾಸವಿ ಭೋಜನ ಸಂತೆಯಲ್ಲಿ ಜನವೋ ಜನ. ರುಚಿ ಸಂತೆಯಲ್ಲಿ ಶೆಟ್ಟರ ಮನೆಯ ವೈವಿಧ್ಯಮಯ ಮನೆತಿಂಡಿಗಳ ಜೊತೆಗೆ ಸ್ನ್ಯಾಕ್ಸ್‌ಗಳ ರುಚಿ ಸವಿದರು.

ವರದಿ- ಜಗದೀಶ್ ಏಷ್ಯಾನೆಟ್ ಸುವರ್ಣನ್ಯೂಸ್, ರಾಮನಗರ

ರಾಮನಗರ, (ಜುಲೈ.17):
ಅಲ್ಲಿ ವಿವಿಧ ಬಗೆಯ ತಿಂಡಿ ತಿನಿಸುಗಳಿದ್ದವು. ಕಂಡಲ್ಲೆಲ್ಲ ಘಮಘಮಿಸುವ ಬಣ್ಣಬಣ್ಣದ ತರಾವರಿ ಭಕ್ಷ್ಯ ಆಹಾರ ಪ್ರಿಯರನ್ನು ಕೈಬೀಸಿ ಕರೆಯುತ್ತಿದ್ದವು. ರಾಮನಗರದ ವಾಸವಿ ಯೂತ್ಸ್ ಪೋರಂನ ವಿಭಿನ್ನ ರುಚಿ ಪರಿಶುದ್ಧವಾದ ಮನೆಯ ತಿಂಡಿಗಳ ರುಚಿ ಸಂತೆ ತಿಂಡಿ ಪ್ರಿಯರ ಹಬ್ಬಕ್ಕೆ ಸಖತ್ ರೆಸ್ಪಾನ್ಸ್ ಸಿಕ್ಕಿದ್ದು, ನೂರಾರು ಜನರು ಮುಗಿಬಿದ್ದು ಖಾದ್ಯಗಳ ಸವಿಯನ್ನ ಸವಿದು ಸಂತಸ ವ್ಯಕ್ತಪಡಿಸಿದ್ದಾರೆ.

ವೈವಿಧ್ಯಮಯ ತಿಂಡಿ ತಿನಿಸು ಅಂದ್ರೆ ಯಾರಿಗೆ ತಾನೇ ಇಷ್ಟ ಇರಲ್ಲ ಹೇಳಿ. ಒಂದೇ ಸೂರಿನಡಿ ಎಲ್ಲಾದರೂ ಬೊಂಬಾಟ್ ತಿಂಡಿ ಸಿಗುತ್ತೆ ಅಂದ್ರೆ ಬಿಡೋದಕ್ಕಾಗುತ್ತಾ. ಅದರಲ್ಲೂ ಒಂದೇ ಸೂರಿನಡಿ ಎಲ್ಲಾದರೂ ಶೆಟ್ಟರ ಮನೆಯ ಬೊಂಬಾಟ್ ತಿಂಡಿ ಸಿಗುತ್ತೆ ಅಂದ್ರೆ ಇದ್ದಕ್ಕಿಂತ ತಿಂಡಿ ಪ್ರಿಯರಿಗೆ ಬೇರೇನು ಬೇಕು. ಇನ್ನು ಮನೆಯಲ್ಲಿ ತಯಾರಾದ ಒತ್ತು ಶಾವಿಗೆ, ಪಡ್ಡು, ತಟ್ಟೆ ಇಡ್ಲಿ, ಕೆಂಚ್ ಇಡ್ಲಿ, ವಿವಿಧ ಬಗೆಯ ಹಲ್ವಗಳು, ಬದನೆಕಾಯಿ ಬಜ್ಜಿ, ಬೇಬಿ ಕಾರ್ನ ಚಟ್ಪಟ್ ಚಿಲ್ಲಿ, ಬೇಬಿ ಆಲೂ, ಮಸಾಲಾ ಪುರಿ, ಚುರ್‌ಮುರಿ, ನಿಪ್ಪಟ್ಟು ಬರ್ಗರ್, ಕೇಕ್ ಐಸ್‌ಕ್ರೀಂ ಸೇರಿದಂತೆ ಆರ್ಯವೈಶ್ಯರ ವಿಶಿಷ್ಟ ಖಾದ್ಯಗಳು ಮತ್ತಿತರೆ ತಿನಿಸುಗಳು ತಿಂಡಿಪ್ರಿಯರನ್ನ ಕೈ ಬೀಸಿ ಕರೆಯುತ್ತಿದ್ದವು. ಐದು ವರ್ಷಗಳಿಂದ ವಾಸವಿ ಯೂತ್ಸ್ ಪೋರಂನ ಈ ಆಹಾರ ಮೇಳ ಕೋವಿಡ್ ಕಾರಣದಿಂದಾಗಿ ಸ್ಥಗಿತಗೊಂಡಿತ್ತು. ಆದ್ರೆ ಇದೀಗ ಮತ್ತೆ ಆರ್ಯವೈಶ್ಯ ಜನಾಂಗದ ಸಂಪ್ರದಾಯಿಕ ಅಡುಗೆ ಶೈಲಿಯನ್ನ ಸಾರ್ವಜನಿಕರಿಗೆ ಪರಿಚಯಿಸುವ ದೃಷ್ಟಿಯಿಂದ ಆಯೋಜಿಸಲಾಗಿದ್ದ ಒಂದು ದಿನದ ಈ ರುಚಿ ಸಂತೆಗೆ ಜನರಿಂದ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ ಅಂತಾರೆ ಆಯೋಜಕರು. 

ಇದೇ ರೀತಿ ಇನ್ನಿತರ ರಾಮನಗರ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇನ್ನು ಆರ್ಯವೈಶ್ಯರ ಸಂಸ್ಕೃತಿ, ಆಹಾರ ವಿಶಿಷ್ಟತೆಯನ್ನು ಜನರಿಗೆ ಪರಿಚಯಿಸುವ ಉದ್ದೇಶದಿಂದ ಈ ರುಚಿ ಸಂತೆ ಹಮ್ಮಿಕೊಳ್ಳಲಾಗಿತ್ತು. ಇಲ್ಲಿ ಶೆಟ್ಟರ ಮನೆಯ ಸಸ್ಯಾಹಾರಿ ಆಹಾರ ಸಂಸ್ಕೃತಿಯ ನಾನಾ ಮುಖಗಳ ಅನಾವರಣವಾಗಿತ್ತು. ಬಗೆಬಗೆಯ ನಿಪ್ಟಟ್ಟು, ಚಕ್ಕುಲಿ, ಕೋಡುಬಳೆ, ಪಡ್ಡು ಸೇರಿದಂತೆ ಬಾಯಲ್ಲಿ ನೀರೂರಿಸುವ ಆರ್ಯವೈಶ್ಯರ ಸ್ವಾದಿಷ್ಟಕರ ತಿನಿಸಿಗಳು ಇಲ್ಲಿತ್ತು. ಜನರಂತು ಬಹಳ ಉತ್ಸಾಹದಿಂದ ಆಹಾರ ಮೇಳದ ಕಡೆಗೆ ನುಗ್ಗುತ್ತಿದ್ರು, ಚಿಕ್ಕಮಕ್ಕಳಿಂದ ಹಿಡಿದು ವಯಸ್ಕರವರೆಗೂ ವಿವಿಧ ಜನಾಂಗದ ಜನರಿಂದ ರುಚಿ ಸಂತೆ ತುಂಬಿತ್ತು.

ಅಲ್ಲದೇ ಬಂದ ಗ್ರಾಹಕರಿಗೆ ಬಿಸಿಬಿಸಿ ತಿನಿಸುಗಳನ್ನು ಸ್ಥಳದಲ್ಲಿಯೇ ಆರ್ಯವೈಶ್ಯ ಬಾಣಸಿಗರು ಮಾಡಿಕೊಟ್ರೆ, ರುಚಿ ಸಂತೆಯಲ್ಲಿ ಮುಗಿಬಿದ್ದು ಜನ್ರು ವಿವಿಧ ಬಗೆಯ ತಿಂಡಿಗಳ ಟೇಸ್ಟ್ ಮಾಡಿದ್ರು. ಹೋಟೆಲ್‌ನ ತಿಂಡಿ ತಿನಿಸುಗಳಿಂದ ಬೇಸತ್ತಿದ್ದ ಜನ್ರು ಇಲ್ಲಿಗೆ ಭೇಟಿ ನೀಡಿ 11ಕ್ಕೂ ಹೆಚ್ಚು ಸ್ಟಾಲ್‌ಗಳಲ್ಲಿ ಆರ್ಯವೈಶ್ಯ ಜನಾಂಗದ ಸಂಪ್ರದಾಯಿಕ ಖಾದ್ಯಗಳ ರುಚಿ ನೋಡಿದ್ರು. ಅಲ್ಲದೇ ಆರ್ಯವೈಶ್ಯ ತಿನಿಸುಗಳನ್ನ ಪ್ರಚಾರ ಮಾಡೋ ದೃಷ್ಟಿಯಿಂದ ಹಮ್ಮಿಕೊಂಡಿದ್ದ ರುಚಿ ಸಂತೆಗೆ ನಿರೀಕ್ಷೆಗೂ ಮೀರಿ ಸ್ಪಂದಿಸಿದ ಸಾರ್ವಜನಿಕರು ರುಚಿ ಸಂತೆಯ ಶುಚಿ ರುಚಿಯ ಆಹಾರ ಸವಿಯಲು ಬಹಳ ಖುಷಿಯಾಗುತ್ತಿದೆ ಎಂದು ಮೇಳದ ಬಗ್ಗೆ ಸಂತಸ ವ್ಯಕ್ತಪಡಿಸಿದ್ರು.

ಒಟ್ನಲ್ಲಿ ಅರ್ಯವೈಶ್ಯರ ಸಂಪ್ರದಾಯಿಕ ಸೊಗಡಿನ ಆಹಾರದ ಸವಿರುಚಿಯನ್ನ ಜನರಿಗೆ ಪರಿಚಯಿಸುವ ದೃಷ್ಟಿಯಿಂದ ಆಯೋಜಿಸಲಾಗಿದ್ದ ರುಚಿ ಸಂತೆಯಲ್ಲಿ ಶೆಟ್ಟರ ಮನೆಯ ವೈವಿಧ್ಯಮಯ ಮನೆತಿಂಡಿಗಳ ಜೊತೆಗೆ ಸ್ನ್ಯಾಕ್ಸ್‌ಗಳ ರುಚಿ ಸವಿದ ಜನರು, ಮತ್ತಷ್ಟು ಇಂತಹ ಆಹಾರ ಸಂತೆಗಳು ನಡೆಯಬೇಕೆಂಬ ಅಭಿಲಾಷೆಯನ್ನ ವ್ಯಕ್ತಪಡಿಸಿದ್ದು ರುಚಿ ಸಂತೆಯ ರುಚಿಗೆ ಸಾಕ್ಷಿಯಾಗಿತ್ತು

click me!