ಲಂಚ್ ಇರಲಿ ಅಥವಾ ರಾತ್ರಿಯ ಡಿನ್ನರ್ ಇರಲಿ, ಹೆಚ್ಚಿನ ಮನೆಗಳಲ್ಲಿ ರೊಟ್ಟಿ/ಚಪಾತಿಯೇ ಪ್ರಮುಖ ಆಹಾರ. ಸಾಮಾನ್ಯವಾಗಿ ಮಕ್ಕಳು ಟಿಫಿನ್‌ಗೆ ಚಪಾತಿಯನ್ನೇ ಒಯ್ಯುತ್ತಾರೆ ಮತ್ತು ಆಫೀಸಿಗೂ ಚಪಾತಿ-ಪಲ್ಯ ತೆಗೆದುಕೊಂಡು ಹೋಗುವುದು ಸೂಕ್ತ. ಆದರೆ ಚಪಾತಿ ಮಾಡಿದಾಗ ಸಾಮಾನ್ಯವಾಗಿ ಒಂದು ಸಮಸ್ಯೆ ಎದುರಾಗುತ್ತದೆ. ಅದೇನೆಂದರೆ ಅವು ಗಟ್ಟಿಯಾಗುವುದು (ಹಾರ್ಡ್ ಆಗುವುದು). ತಕ್ಷಣವೇ ತಯಾರಿಸಿದ ಬಿಸಿಬಿಸಿ ಚಪಾತಿ ತಿನ್ನಲು ರುಚಿಯಾಗಿರುತ್ತದೆ, ಆದರೆ ತಣ್ಣಗಾದ ಮೇಲೆ ರಟ್ಟಾಗುತ್ತದೆ. ಹೀಗಾಗಿ ಲಂಚ್ ಬಾಕ್ಸ್‌ನಲ್ಲಿರುವ ಚಪಾತಿ ಚೆನ್ನಾಗಿಲ್ಲ ಎಂದು ಮಕ್ಕಳು ದೂರುತ್ತಾರೆ. ಅಲ್ಲದೆ ಅದರ ರುಚಿಯೂ ಅವರಿಗೆ ಹಿಡಿಸುವುದಿಲ್ಲ. ಇಂತಹ ಸಮಯದಲ್ಲಿ ನೀವು ಚಪಾತಿ ಕಲಸುವ ಹಿಟ್ಟಿಗೆ ಈ ಪದಾರ್ಥ ಬೆರೆಸಿದರೆ ಚಪಾತಿ ಸಂಪೂರ್ಣ ಮೆತ್ತಗೆ ಮತ್ತು ರುಚಿಯಾಗಿರುತ್ತವೆ.
ಬಿಸಿಬಿಸಿ ಚಪಾತಿ ಅತ್ಯಂತ ಮೃದುವಾಗಿರುತ್ತವೆ, ಆದರೆ ತಣ್ಣಗಾದ ನಂತರ ಗಟ್ಟಿಯಾಗುತ್ತವೆ. ವಿಶೇಷವಾಗಿ ಲಂಚ್ ಬಾಕ್ಸ್‌ನಲ್ಲಿಟ್ಟ ಚಪಾತಿ ತಣ್ಣಗಾಗಿ ವಿಚಿತ್ರವಾಗುತ್ತವೆ ಮತ್ತು ತಿನ್ನಲು ಅಷ್ಟಾಗಿ ರುಚಿಸುವುದಿಲ್ಲ. ಇಂತಹ ಸಂದರ್ಭದಲ್ಲಿ ನೀವು ಹಿಟ್ಟು ಕಲಸುವಾಗ ಅದಕ್ಕೆ ಸ್ವಲ್ಪ ಹುರಿದ ಕಡಲೆ ಹಿಟ್ಟು ಮತ್ತು ಮೊಸರನ್ನು ಬೆರೆಸಬಹುದು. ಹೌದು. ಕಡಲೆಹಿಟ್ಟು ಹಿಟ್ಟಿನ ವಿನ್ಯಾಸ ಅಥವಾ ಹದ (texture) ಮೃದುತ್ವಗೊಳಿಸಲು ನೆರವಾದರೆ, ಮೊಸರು ಹಿಟ್ಟಿನಲ್ಲಿ ತೇವಾಂಶವನ್ನು ಕಾಪಾಡುತ್ತದೆ. ಇದರಿಂದ ಚಪಾತಿ ಗಂಟೆಗಟ್ಟಲೇ ಕಾಲ ಮೆತ್ತಗಿರುತ್ತವೆ.
ಸಾಮಾನ್ಯವಾಗಿ ನೀವು ಒಂದು ಕಪ್ ಗೋಧಿ ಹಿಟ್ಟನ್ನು ತೆಗೆದುಕೊಳ್ಳುತ್ತಿದ್ದರೆ, ಅದಕ್ಕೆ 2-3 ಚಮಚ ಕಡಲೆಹಿಟ್ಟು ಹಾಕಿದರೆ ಸಾಕು. ಇದರ ಜೊತೆಗೆ 2 ಚಮಚ ಗಟ್ಟಿ ಮೊಸರು ಸೇರಿಸಿ. ಮೊಸರು ಅತಿಯಾಗಿ ಹುಳಿಯಾಗಿರಬಾರದು. ತಾಜಾ ಮೊಸರು ಬಳಸಿದರೆ ಚಪಾತಿ ರುಚಿ ಚೆನ್ನಾಗಿರುತ್ತದೆ. ಅತಿಯಾದ ಹುಳಿ ಮೊಸರು ಚಪಾತಿಯ ರುಚಿಯನ್ನು ಬದಲಿಸಬಹುದು. ಹಾಗೆಯೇ ಸ್ವಲ್ಪ ಉಪ್ಪು ಮತ್ತು ಒಂದು ಚಮಚ ದೇಸಿ ತುಪ್ಪವನ್ನು ಸಹ ಬೆರೆಸಬಹುದು. ತುಪ್ಪವು ಚಪಾತಿಯನ್ನು ದೀರ್ಘಕಾಲದವರೆಗೆ ಮೃದುವಾಗಿಡಲು ಸಹಾಯ ಮಾಡುತ್ತದೆ (ತುಪ್ಪ ಹಾಕುವುದು ಬಿಡುವುದು ನಿಮ್ಮಿಷ್ಟ, ಹಾಕಲೇಬೇಕಂತಿಲ್ಲ). ಈಗ ಸ್ವಲ್ಪ ಸ್ವಲ್ಪವೇ ನೀರು ಹಾಕಿ ಚಪಾತಿ ಹಿಟ್ಟನ್ನು ಕಲಸಿಕೊಳ್ಳಬಹುದು.
ಹಿಟ್ಟು ಕಲಸಿದ ತಕ್ಷಣ ಚಪಾತಿ ಮಾಡಬಾರದು, ಏಕೆಂದರೆ ಹಿಟ್ಟು ಸರಿಯಾಗಿ ಹದಕ್ಕೆ ಬಂದಿರುವುದಿಲ್ಲ. ಹಿಟ್ಟಿಗೆ ಕನಿಷ್ಠ 15-20 ನಿಮಿಷಗಳ ಕಾಲ ವಿಶ್ರಾಂತಿ ನೀಡಿ, ಆನಂತರವೇ ಚಪಾತಿ ಮಾಡಲು ಪ್ರಾರಂಭಿಸಿ. ಮಕ್ಕಳಿಗಾಗಿ ಚಪಾತಿ ಮಾಡುತ್ತಿದ್ದರೆ, ಅವುಗಳನ್ನು ಕಾಯಿಸುವಾಗ ಸ್ವಲ್ಪ ತುಪ್ಪ ಹಚ್ಚಬಹುದು. ಇದರಿಂದ ಚಪಾತಿ ರುಚಿ ಹೆಚ್ಚುತ್ತದೆ ಮತ್ತು ಮಕ್ಕಳು ಇಷ್ಟಪಟ್ಟು ತಿನ್ನುತ್ತಾರೆ.
*ಚಪಾತಿ ಮಾಡಿದ ತಕ್ಷಣವೇ ಅದನ್ನು ಟಿಫಿನ್ ಬಾಕ್ಸ್‌ನಲ್ಲಿ ಇಡಬೇಡಿ. ಇಲ್ಲದಿದ್ದರೆ ಆವಿಯ ಕಾರಣದಿಂದ ಅವು ನೀರು ನೀರಾಗಬಹುದು. ಪ್ಯಾಕ್ ಮಾಡುವ ಮೊದಲು 1 ನಿಮಿಷದ ಕಾಲ ಪ್ಲೇಟ್ ಅಥವಾ ಬಟ್ಟೆಯ ಮೇಲಿಡಿ, ಇದರಿಂದ ಹೆಚ್ಚುವರಿ ಆವಿ ಹೊರಟುಹೋಗುತ್ತದೆ.
*ಚಪಾತಿಯನ್ನು ಬಟ್ಟೆಯಲ್ಲಿ ಸುತ್ತಿ ಟಿಫಿನ್‌ನಲ್ಲಿ ಪ್ಯಾಕ್ ಮಾಡಿ. ಬಟ್ಟೆಯು ಹೆಚ್ಚುವರಿ ತೇವಾಂಶವನ್ನು ಹೀರಿಕೊಳ್ಳುತ್ತದೆ, ಇದರಿಂದ ಚಪಾತಿ ದೀರ್ಘಕಾಲ ಮೃದುವಾಗಿರುತ್ತದೆ.
*ಪಲ್ಯ ಮತ್ತು ಚಪಾತಿ ಎರಡನ್ನೂ ಪ್ರತ್ಯೇಕವಾಗಿ ಇಡಿ. ಏಕೆಂದರೆ ಕೆಲವೊಮ್ಮೆ ಪಲ್ಯದ ಆವಿ ಮತ್ತು ಗ್ರೇವಿಯಿಂದಲೂ ಚಪಾತಿ ಮೆತ್ತಗೆ/ನೀರು ನೀರಾಗುವ ಸಾಧ್ಯತೆ ಇರುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.