ಶ್ರೀಕೃಷ್ಣನಿಗೆ ಅವಲಕ್ಕಿ ಎಂದರೆ ಪಂಚಪ್ರಾಣ. ಈ ಬಾರಿಯ ಜನ್ಮಾಷ್ಟಮಿಗೆ ಕೇವಲ 5 ರಿಂದ 10 ನಿಮಿಷದಲ್ಲಿ, ಸಕ್ಕರೆ ಬಳಸದೆ, ಮನೆಯಲ್ಲಿರುವ ಪದಾರ್ಥಗಳಿಂದಲೇ ಅತ್ಯಂತ ರುಚಿಯಾದ ಮತ್ತು ಆರೋಗ್ಯಕರವಾದ ಅವಲಕ್ಕಿ ಲಡ್ಡುವನ್ನು ಹೇಗೆ ಮಾಡುವುದು ಎಂದು ನೋಡೋಣ.
ಗಟ್ಟಿ ಅವಲಕ್ಕಿ - 1 ಕಪ್
ಬೆಲ್ಲ - 1 ಕಪ್
ನೀರು - 1 ಕಪ್
ಕಡ್ಲೆಬೀಜ - ಅರ್ಧ ಕಪ್
ಹುರಿಗಡಲೆ (ಪುಟಾಣಿ) - ಅರ್ಧ ಕಪ್
ಒಣ ಕೊಬ್ಬರಿ ತುರಿ - ಅರ್ಧ ಕಪ್
ತುಪ್ಪ - 1 ರಿಂದ 2 ಚಮಚ
ಕಡಲೆ ಬೀಜ, ಅವಲಕ್ಕಿ, ಹುರಿಗಡಲೆ ಹುರಿದುಕೊಳ್ಳಿ
ಮೊದಲಿಗೆ ಒಂದು ಪ್ಯಾನ್‌ನಲ್ಲಿ ಅರ್ಧ ಕಪ್ ಕಡಲೆ ಬೀಜ ಹಾಕಿ ಸಣ್ಣ ಉರಿಯಲ್ಲಿ ಚೆನ್ನಾಗಿ ಹುರಿಯಿರಿ. ಕಡಲೆ ಬೀಜ ಎಷ್ಟು ಚೆನ್ನಾಗಿ ಹುರಿಯುತ್ತದೆಯೋ, ಲಡ್ಡು ಅಷ್ಟು ರುಚಿಯಾಗಿರುತ್ತದೆ. ನಂತರ ಅದರ ಸಿಪ್ಪೆ ತೆಗೆದು ಇಟ್ಟುಕೊಳ್ಳಿ. ಅದೇ ಪ್ಯಾನ್‌ಗೆ ಅರ್ಧ ಕಪ್ ಹುರಿಗಡಲೆ ಮತ್ತು ಒಂದು ಕಪ್ ಗಟ್ಟಿ ಅವಲಕ್ಕಿಯನ್ನು ಹಾಕಿ ರೋಸ್ಟ್ ಮಾಡಿ. ಅವಲಕ್ಕಿ ಅತಿ ಕೆಂಪಾಗಬಾರದು, ಆದರೆ ಕುರುಕಲಾಗುವಂತೆ ಹುರಿದು ತಣ್ಣಗಾಗಲು ಬಿಡಿ.
ಪುಡಿ ಮಾಡಿಕೊಳ್ಳಿ
ತಣ್ಣಗಾದ ಅವಲಕ್ಕಿ ಮತ್ತು ಹುರಿಗಡಲೆಯನ್ನು ಮಿಕ್ಸಿ ಜಾರಿಗೆ ಹಾಕಿ ನುಣ್ಣಗೆ ಪುಡಿ ಮಾಡಿ. ನಂತರ ಅದಕ್ಕೆ ಸಿಪ್ಪೆ ತೆಗೆದ ಕಡಲೆ ಬೀಜವನ್ನು ಸೇರಿಸಿ ಕೇವಲ ಒಂದು ಸುತ್ತು (Pulse) ಮಿಕ್ಸಿ ಮಾಡಿ. ಕಡಲೆ ಬೀಜ ತೀರಾ ಪುಡಿಯಾಗಬಾರದು, ಕಚ್ಚಿದಾಗ ಸಿಗುವಂತಿರಬೇಕು.
ಬೆಲ್ಲದ ಪಾಕ ತಯಾರಿಸಿ
ಇನ್ನೊಂದು ಪಾತ್ರೆಯಲ್ಲಿ ಒಂದು ಕಪ್ ಬೆಲ್ಲಕ್ಕೆ ಒಂದು ಕಪ್ ನೀರು ಹಾಕಿ ಕರಗಿಸಿಕೊಳ್ಳಿ. ಬೆಲ್ಲ ಕರಗಿದ ನಂತರ ಅದನ್ನು ಸೋಸಿಕೊಂಡು ಮತ್ತೆ ಕುದಿಯಲು ಇಡಿ. ಇದಕ್ಕೆ ಅರ್ಧ ಕಪ್ ಒಣ ಕೊಬ್ಬರಿ ತುರಿ ಸೇರಿಸಿ ಒಂದು ಕುದಿ ಬರಿಸಿ.
ಮಿಶ್ರಣ ಮಾಡಿ
ಕುದಿಯುತ್ತಿರುವ ಬೆಲ್ಲದ ನೀರಿಗೆ ಈ ಅವಲಕ್ಕಿ ಪುಡಿಯನ್ನು ಸೇರಿಸಿ ಸಣ್ಣ ಉರಿಯಲ್ಲಿ ಗಂಟಿಲ್ಲದಂತೆ ಮಿಕ್ಸ್ ಮಾಡಿ. ನಂತರ ಸ್ಟೌ ಆಫ್ ಮಾಡಿ ಒಂದು ಅಥವಾ ಎರಡು ಚಮಚ ತುಪ್ಪ ಸೇರಿಸಿ ಚೆನ್ನಾಗಿ ಕಲಸಿ.
ಲಡ್ಡು ಕಟ್ಟಿ
ಮಿಶ್ರಣವು ಸ್ವಲ್ಪ ಉಗುರುಬೆಚ್ಚಗಿರುವಾಗಲೇ ಸಣ್ಣ ಸಣ್ಣ ಉಂಡೆಗಳಾಗಿ (ಲಡ್ಡು) ಕಟ್ಟಿ. ಹೆಚ್ಚು ಶ್ರಮವಿಲ್ಲದೆ ಸುಲಭವಾಗಿ ಉಂಡೆಗಳನ್ನು ಕಟ್ಟಬಹುದು.
*ನೀವು ಪೇಪರ್ ಅವಲಕ್ಕಿ ಕೂಡ ಬಳಸಬಹುದು, ಆದರೆ ಗಟ್ಟಿ ಅವಲಕ್ಕಿ ಹೆಚ್ಚು ರುಚಿ ನೀಡುತ್ತದೆ.
*ಕಡಲೆಬೀಜವನ್ನು ಅತಿ ನುಣ್ಣಗೆ ಪುಡಿ ಮಾಡಬೇಡಿ, ಅದು ಲಡ್ಡುವಿನ ಪ್ರತಿ ತುತ್ತಿನಲ್ಲೂ ಸಿಕ್ಕರೆ ತಿನ್ನಲು ಮಜವಾಗಿರುತ್ತದೆ.
*ಸಕ್ಕರೆ ಬಳಸದ ಕಾರಣ ಇದು ಆರೋಗ್ಯಕ್ಕೂ ತುಂಬಾನೇ ಒಳ್ಳೆಯದು.
ಉಂಡೆ ಒಡೆಯದಂತೆ ತಡೆಯಲು: ಒಂದು ವೇಳೆ ಉಂಡೆ ಕಟ್ಟುವಾಗ ಮಿಶ್ರಣ ತೀರಾ ಒಣಗಿ ಪುಡಿಯಾಗುತ್ತಿದ್ದರೆ, ಒಂದು ಚಮಚ ಬಿಸಿ ಹಾಲನ್ನು ಚಿಮುಕಿಸಿ ತಕ್ಷಣ ಉಂಡೆ ಕಟ್ಟಿ. (ನೆನಪಿಡಿ: ಹಾಲು ಸೇರಿಸಿದ ಲಡ್ಡುಗಳನ್ನು ಎರಡೇ ದಿನದಲ್ಲಿ ಖಾಲಿ ಮಾಡಬೇಕು).
ತುಪ್ಪದ ಅರೋಮಾ: ಉಂಡೆಗಳನ್ನು ಕಟ್ಟುವ ಮೊದಲು ನಿಮ್ಮ ಅಂಗೈಗೆ ಸ್ವಲ್ಪ ತುಪ್ಪ ಸವರಿಕೊಂಡು ಉಂಡೆ ಕಟ್ಟಿ. ಇದರಿಂದ ಲಡ್ಡುವಿನ ಮೇಲ್ಭಾಗ ಹೊಳೆಯುತ್ತದೆ (Shiny look) ಮತ್ತು ಹಿಡಿದಾಗ ತುಪ್ಪದ ಘಮ ಮೂಗಿಗೆ ಬಡಿಯುತ್ತದೆ.
ಸಮತೋಲಿತ ಸಿಹಿ: ಸಿಹಿಯನ್ನು ಎತ್ತಿ ತೋರಿಸಲು ಬೆಲ್ಲದ ಪಾಕಕ್ಕೆ ಒಂದು ಚಿಟಿಕೆ ಉಪ್ಪು ಸೇರಿಸಿ. ಇದು ಸಿಹಿಯ ರುಚಿಯನ್ನು ಇನ್ನೂ ಹೆಚ್ಚು ಪ್ರಭಾವಶಾಲಿಯಾಗಿಸುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.