
ಸಮೋಸಾ ಹೆಸ್ರು ಕೇಳಿದ್ರೆ ಸಾಕು, ಹಲವರ ಬಾಯಲ್ಲಿ ನೀರೂರುವುದು ಸಹಜವೇ. ಬಿಸಿಬಿಸಿ ಸಮೋಸಾ ಎಲ್ಲಿಂದಾಗಲೂ ಘಮ್ ಎಂದರೆ ತಿಂದೇ ಬಿಡೋಣ ಎನ್ನಿಸುತ್ತದೆ. ಅಷ್ಟಕ್ಕೂ ಇದರ ಇತಿಹಾಸವೇ ಬಹಳ ದೊಡ್ಡದಿದೆ. ಮಧ್ಯಪ್ರಾಚ್ಯ ಮತ್ತು ಮಧ್ಯ ಏಷ್ಯಾದಲ್ಲಿ ಸುಮಾರು 10 ನೇ ಶತಮಾನದಲ್ಲಿ ಹುಟ್ಟಿಕೊಂಡಿದೆ, ಬಳಿಕ ಭಾರತಕ್ಕೆ ಬಂದಿದೆ ಎನ್ನಲಾಗುತ್ತದೆ. ಪರ್ಷಿಯನ್ ಪದ "ಸನ್ಬುಸಾಗ್" ನಿಂದ ಇದರ ಹೆಸರು ಬಂದಿದೆ. 13 ನೇ ಶತಮಾನದಲ್ಲಿ ದೆಹಲಿ ಸುಲ್ತಾನರ ಆಳ್ವಿಕೆಯಲ್ಲಿ ಪರ್ಷಿಯನ್ ವ್ಯಾಪಾರಿಗಳು ಭಾರತೀಯ ಉಪಖಂಡಕ್ಕೆ ಪರಿಚಯಿಸಿದರು, ಅಲ್ಲಿ ಅದು ಜನಪ್ರಿಯ ತಿಂಡಿಯಾಯಿತು ಎನ್ನಲಾಗಿದೆ. ಎಲ್ಲಿಂದ ಬಂದ್ರೆ ಏನಂತೆ? ಅದ್ಯಾರಿಗೆ ಬೇಕು, ನಮಗೆ ಬಾಯಿ ಚಪ್ಪರಿಸಿದ್ರೆ ಸಾಕು ಎನ್ನೋರೇ ಹೆಚ್ಚು.
ಆದರೆ ಈ ಸಮೋಸ ದಿಢೀರ್ ಈಗ ಮತ್ತೆ ಬೆಳಕಿಗೆ ಬರಲು ಕಾರಣ ನಿನ್ನೆ ಲೋಕಸಭೆಯಲ್ಲಿ ನಡೆದ ಚರ್ಚೆ. ಭಾರತದ ವಿವಿಧ ತಿನಿಸು ಮಳಿಗೆಗಳಲ್ಲಿ ಬಡಿಸುವ ಆಹಾರ ಪದಾರ್ಥಗಳ ಬೆಲೆ ಮತ್ತು ಭಾಗಗಳ ಗಾತ್ರದ ಅಸಮಂಜಸತೆಯ ಬಗ್ಗೆ ಬಿಜೆಪಿ ಸಂಸದ ಮತ್ತು ನಟ ರವಿ ಕಿಶನ್ ನಿನ್ನೆ ಸಂಸತ್ತಿನಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ. ಆ ಸಮಯದಲ್ಲಿ ಸಮೋಸಾ ಚರ್ಚೆ ಆಗಿದೆ. ಲೋಕಸಭೆಯಲ್ಲಿ ಶೂನ್ಯ ವೇಳೆಯಲ್ಲಿ ಕೆಲವು ಸಂಸದರು, ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಮತ್ತು ರಸ್ತೆಬದಿಯ ಧಾಬಾಗಳಲ್ಲಿ ಮಾರಾಟವಾಗುವ ಆಹಾರ ಮತ್ತು ಪಾನೀಯಗಳ ಬೆಲೆಗಳನ್ನು ನಿಯಂತ್ರಿಸಲು ಕಾನೂನನ್ನು ಪರಿಚಯಿಸುವಂತೆ ಕೇಂದ್ರ ಸರ್ಕಾರವನ್ನು ವಿನಂತಿಸಿದಾಗ ರವಿ ಕಿಶನ್ ಅವರು, ವಿವಿಧ ಸ್ಥಳಗಳಲ್ಲಿ ಒಂದೇ ವಸ್ತುವಿನ ಗಾತ್ರ ಮತ್ತು ಬೆಲೆ ಎರಡರಲ್ಲೂ ಗಮನಾರ್ಹ ವ್ಯತ್ಯಾಸಗಳಿವೆ ಎಂದು ಗಮನ ಸೆಳದರು.
ಒಂದು ಸ್ಥಳದಲ್ಲಿ, ಸಮೋಸಾ ಚಿಕ್ಕದಾಗಿದೆ; ಇನ್ನೊಂದು ಸ್ಥಳದಲ್ಲಿ, ಅದು ದೊಡ್ಡದಾಗಿದೆ. ಬೆಲೆಗಳು ಸಹ ವ್ಯಾಪಕವಾಗಿ ಬದಲಾಗುತ್ತವೆ ಎಂದರು. ರಸ್ತೆಬದಿಯ ತಿನಿಸು ಮಳಿಗೆಯಲ್ಲಿ ಸಮೋಸಾ ಹೋಟೆಲ್‌ನಲ್ಲಿರುವ ಒಂದಕ್ಕಿಂತ ವಿಭಿನ್ನ ಬೆಲೆಯನ್ನು ಹೊಂದಿದೆ -ಮತ್ತು ಗಾತ್ರವೂ ಸಹ ಭಿನ್ನವಾಗಿರುತ್ತದೆ. ಅದೇ ರೀತಿ, ದಾಲ್ ತಡ್ಕಾ ಒಂದು ಸ್ಥಳದಲ್ಲಿ 100 ರೂ.ಗೆ, ಇನ್ನೊಂದು ಸ್ಥಳದಲ್ಲಿ 120 ರೂ.ಗೆ ಮತ್ತು ಕೆಲವು ಹೋಟೆಲ್‌ಗಳಲ್ಲಿ 1,000 ರೂ.ವರೆಗೆ ಲಭ್ಯವಿದೆ ಎಂಬ ಮಾಹಿತಿ ಕೊಟ್ಟರು. ಜೊತೆಗೆ ಇದಕ್ಕೆ ಬಳಸಲಾಗುತ್ತಿರುವ ಎಣ್ಣೆಗಳ ಬಗ್ಗೆಯೂ ಅವರು ಕಳವಳ ವ್ಯಕ್ತಪಡಿಸಿದರು.
ಯಾರೇ ಏನೇ ಹೇಳಿದ್ರೂ, ಬಾಯಿ, ಹೊಟ್ಟೆ ಮಾತ್ರ ಕೇಳಲ್ಲ ಬಿಡಿ... ಇದು ಜನಸಾಮಾನ್ಯರಿಗೆ ತಟ್ಟಲ್ಲ. ಆದರೂ ಅಂಗಡಿಗಳಲ್ಲಿ ಬಳಸುವ ಎಣ್ಣೆಯ ಬಗ್ಗೆ ಹಾಗೂ ಅಲ್ಲಿನ ಶುದ್ಧತೆಯ ಬಗ್ಗೆ ಸ್ವಲ್ಪನಾದ್ರೂ ತಲೆ ಬಿಸಿ ಮಾಡಿಕೊಳ್ಳಲೇಬೇಕಾಗಿದೆ. ಹಾಗಿದ್ರೆ, ಮನೆಯಲ್ಲಿಯೇ ಅದನ್ನು ಸುಲಭದಲ್ಲಿ ಹೇಗೆ ತಯಾರಿಸಬಹುದು ಎನ್ನೋದನ್ನು ಇಲ್ಲಿ ವಿವರಿಸಲಾಗಿದೆ ನೋಡಿ...
ಮೊದಲು ಏನೇನು ಬೇಕು ನೋಡೋಣ...
* ಎರಡು ಕಪ್ ಮೈದಾ
* ಕಾಲು ಕಪ್ ಎಣ್ಣೆ
* ಬೇಯಿಸಿ, ಸಿಪ್ಪೆ ಸುಲಿದು, ಕಿವುಚಿಟ್ಟುಕೊಂಡ ಮೂರ್ನಾಕಲ್ಕು ಆಲೂಗಡ್ಡೆಗಳು
* ಅರ್ಧ ಕಪ್ ಬೇಯಿಸಿಟ್ಟುಕೊಂಡ ಹಸಿರು ಬಟಾಣಿ (ಬೇಯಿಸಿದ)
* ಒಂದು ಚಿಕ್ಕದಾಗಿ ಕತ್ತರಿಸಿಕೊಂಡ ಈರುಳ್ಳಿ
* ಖಾರಕ್ಕೆ ತಕ್ಕಂತೆ ಚಿಕ್ಕದಾಗಿ ಕತ್ತರಿಸಿದ ಹಸಿ ಮೆಣಸಿನ ಕಾಯಿ
* ರುಚಿಗೆ ಉಪ್ಪು
ಇವಿಷ್ಟೂ ಬೇಸಿಕ್ ಮತ್ತು ಮಿಶ್ರಣಕ್ಕೆ ಅಂದ್ರೆ ಫಿಲ್ಲಿಂಗ್ ಮಾಡಲು ಆಯ್ತು. ಇದನ್ನು ಕೆಲವು ಮಸಾಲೆ ಸಾಮಗ್ರಿಗಳೂ ಬೇಕಾಗುತ್ತವೆ. ಅದರ ಬಗ್ಗೆ ಇಲ್ಲಿ ವಿವರಣೆ ನೀಡಲಾಗಿದೆ ನೋಡಿ...
ಇದಕ್ಕೆ ಒಂದು ಚಮಚದಷ್ಟು ಶುಂಠಿ, ಜೀರಿಗೆ, ಕೊತ್ತಂಬರಿ ಬೀಜದ ಪುಡಿ (ಧನಿಯಾ ಪೌಡರ್), ಅರಿಶಿನ ಪುಡಿ, ಗರಂ ಮಸಾಲಾ, ಅಮ್ಚೂರ್ ಪುಡಿ (ಇಲ್ಲದಿದ್ದರೆ ಚಾಟ್ ಮಸಾಲಾ ಓಕೆ) ಬೇಕು. ಸ್ವಲ್ಪ ಕೊತ್ತಂಬರಿ ಸೊಪ್ಪುನೂ ಇರಲಿ.
ಇವಿಷ್ಟೂ ರೆಡಿ ಮಾಡಿಕೊಂಡು ಇಟ್ಟುಕೊಳ್ಳಿ. ಈಗ ಮಾಡಲು ಶುರು ಮಾಡಿ.
ಮೊದಲಿಗೆ ಮೈದಾ ಹಿಟ್ಟಿಗೆ ಉಪ್ಪು ಸೇರಿಸಿ ಸ್ವಲ್ಪ ನೀರು ಹಾಕಿ ಚಪಾತಿ ಹಿಟ್ಟಿನ ರೀತಿಯಲ್ಲಿಯೇ ನಾದಿಕೊಳ್ಳಿ. ಇದು ಸಾಫ್ಟ್ ಆಗಿ ಬರಲು ಸ್ವಲ್ಪ ಎಣ್ಣೆ ಬೇಕಿದ್ರೂ ಹಾಕಬಹುದು. ಚಪಾತಿ ಹಿಟ್ಟಿನ ರೀತಿಯಲ್ಲಿ ರೆಡಿಯಾದ ಮೇಲೆ ಒಂದು ಒದ್ದೆಯಾದ ಬಟ್ಟೆಯಿಂದ ಕವರ್ ಮಾಡಿ ಒಂದರ್ಧ ಗಂಟೆ ಸೈಡ್ಗೆ ಇಡಿ.
ಅಷ್ಟರಲ್ಲಿ ಫಿಲ್ಲಿಂಗ್ ತಯಾರಿಸಿ: ಅದಕ್ಕಾಗಿ ಎಣ್ಣೆ ಕಾಯಿಸಿ, ಜೀರಿಗೆ, ಈರುಳ್ಳಿ, ಹಸಿ ಮೆಣಸಿನಕಾಯಿ, ಶುಂಠಿ, ಕತ್ತರಿಸಿಕೊಂಡ ಈರುಳ್ಳಿ ಒಂದೊಂದಾಗಿ ಸೇರಿಸಿ ಚಿಕ್ಕ ಉರಿಯಲ್ಲಿ ಫ್ರೈ ಮಾಡಿ. ಇದಾದ ಬಳಿಕ ಅದಕ್ಕೆ ಅರಿಶಿನ ಪುಡಿ, ಧನಿಯಾ ಪೌಡರ್ ಸೇರಿಸಿ ಸ್ವಲ್ಪ ಹುರಿಯಿರಿ. ಇದಕ್ಕೆ ಇದಾಗಲೇ ಹಿಸುಕಿಟ್ಟುಕೊಂಡ ಆಲೂಗಡ್ಡೆ, ಬೇಯಿಸಿಟ್ಟುಕೊಂಡಿದ್ದ ಬಟಾಣಿ, ಗರಂ ಮಸಾಲಾ, ಆಮ್ಚೂರ್ ಅಥವಾ ಚಾಟ್ ಮಸಾಲಾ ಸೇರಿಸಿ. ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಆಗ ಘಮ್ ಎಂಬ ಪರಿಮಳ ಬರುತ್ತದೆ. 2-3 ನಿಮಿಷದಲ್ಲಿಯೇ ನಿಮಗೆ ಪರಿಮಳ ಬರಲು ಶುರುವಾಗುತ್ತದೆ. ಅಲ್ಲಿಯವರೆಗೂ ಬೇಯಿಸಿ. ಅದಕ್ಕೆ ಕತ್ತರಿಸಿದ ಕೊತ್ತಂಬರಿ ಸೊಪ್ಪನ್ನು ಸೇರಿಸಿ ಸ್ಟವ್ ಆಫ್ ಮಾಡಿ.
ಇಷ್ಟು ಮಾಡಿದರೆ ಬಹುತೇಕ ಮುಗಿದಂತೆ.ಮುಂದಿನದ್ದು ಸಮೋಸಾಗೆ ತುಂಬುವಲ್ಲಿ ಇರುವ ಜಾಣ್ಮೆ. ನಾದಿಕೊಂಡು ಪಕ್ಕಕ್ಕೆ ಇಟ್ಟಿರೋ ಹಿಟ್ಟನ್ನು ಚಪಾತಿ ಉಂಡೆಗಳಂತೆ ಮಾಡಿ ಲಟ್ಟಿಸಿ. ಅರ್ಧವೃತ್ತಗಳನ್ನು ರೂಪಿಸಲು ಪ್ರತಿ ವೃತ್ತವನ್ನು ಅರ್ಧದಷ್ಟು ಕತ್ತರಿಸಿ. ಒಂದು ಅರ್ಧವೃತ್ತವನ್ನು ತೆಗೆದುಕೊಂಡು ಅದನ್ನು ಕೋನ್ ಆಕಾರದಲ್ಲಿ ಮಡಚಿ, ಸ್ವಲ್ಪ ನೀರಿನಿಂದ ಅಂಚುಗಳನ್ನು ಮುಚ್ಚಿ. ತಯಾರಾದ ಆಲೂಗೆಡ್ಡೆ ಫಿಲ್ಲಿಂಗ್‌ನ್ನು ತುಂಬಿಸಿ. ಸಮೋಸಾದ ಅಂಚನ್ನು ಮುಚ್ಚಿ. ಎಲ್ಲಿಯೂ ಫಿಲ್ಲಿಂಗ್ ಹೊರಗೆ ಬರದಂತೆ ನೋಡಿಕೊಳ್ಳಿ. ಬಳಿಕ, ಎಣ್ಣೆಯನ್ನು ಕಾಯಿಸಿ ಅದರಲ್ಲಿ ಇದನ್ನು ಸೇರಿಸಿ. ತೀರಾ ಕಮ್ಮಿ ಉರಿ ಅಥವಾ ಜಾಸ್ತಿ ಉರಿ ಬೇಡ. ಉರಿ ಮಧ್ಯಮ ಆಗಿರಲಿ. ಗೋಲ್ಡನ್ ಬ್ರೌನ್ ಆಗುವವರೆಗೆ ಮತ್ತು ಎಲ್ಲಾ ಕಡೆಗಳಲ್ಲಿ ಗರಿಗರಿಯಾಗುವ ತನಕ ಫ್ರೈ ಮಾಡಿ. ಬಿಸಿಬಿಸಿ ಸೇವಿಸಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.