ಅನ್ನ-ದಾಲ್ ಎಂಬ ಅನನ್ಯ ಡಯಟ್ ಫುಡ್!

By Suvarna News  |  First Published Feb 18, 2020, 3:49 PM IST

ಆರೋಗ್ಯದ ವಿಷಯದಲ್ಲಿ ಕುರುಡಾಗಿ ಪಾಶ್ಚಾತ್ಯರನ್ನು ಫಾಲೋ ಮಾಡುವ ಬದಲು ನಮ್ಮ ಆಹಾರ ಶ್ರೀಮಂತಿಕೆ ಹಾಗೂ ಸದ್ಗುಣಗಳ ಅರಿಯಬೇಕಿದೆ. ನಮ್ಮ ಬಹುತೇಕ ಸಾಂಪ್ರದಾಯಿಕ ಆಹಾರ ಅಡುಗೆಗಳೆಲ್ಲವೂ ಪೋಷಕಸತ್ವಗಳು, ಡಯಟ್ ಹಾಗೂ ಆರೋಗ್ಯದ ದೃಷ್ಟಿಯಿಂದ ಒಂದು ಕೈ ಮೇಲೆೇ ಇವೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಿದೆ. 


ವೀಕೆಂಡ್ ಸ್ಪೆಶಲ್ ಎಂದ್ರೆ ಪಿಜ್ಜಾ ಬರ್ಗರ್ ಎಂದುಕೊಂಡು, ಫೋಟೋ ತೆಗೆದು, ಹೊಟ್ಟೆ ಬಿರಿಯೇ ತಿಂದು ಇವುಗಳ ಫೋಟೋವನ್ನು ಸ್ಟೇಟಸ್‌ಗೆ ಹಾಕಿ ಲೆವೆಲ್ ತೋರಿಸುತ್ತಿದ್ದೇವೆಂದು ನಾವು ಭಾರತೀಯರು ಎಂದುಕೊಳ್ಳುತ್ತೇವೆ. ಆದರೆ, ಉಳಿದ ಜಗತ್ತು ಮಾತ್ರ ನಮ್ಮ ದಾಲ್ ಹಾಗೂ ಅನ್ನದಲ್ಲಿ ವಂಡರ್ ಡಯಟ್ ಕಾಣುತ್ತಿರುವುದು ವಿಪರ್ಯಾಸ. ಆಶ್ಚರ್ಯವಾಯಿತಾ? 
ಹೌದು, ಜಾಗತಿಕ ಆಹಾರ ಸಮಸ್ಯೆಗೆ ಬೇಳೆ ಹಾಗೂ ಅನ್ನ ಉತ್ತರವಾಗಬಲ್ಲವು ಎಂದು ಇತ್ತೀಚೆಗೆ ನ್ಯೂಸ್ ಏಜೆನ್ಸಿಯೊಂದು ವರದಿ ಪ್ರಕಟಿಸಿದೆ. 

ಏನಿದು ವರದಿ?

Tap to resize

Latest Videos

ವರದಿಯಂತೆ, ಭೂಮಿಯ ಮೇಲಿರುವ 3 ಶತಕೋಟಿ ಜನರ ಹೊಟ್ಟೆ ತುಂಬಿಸುವ ಬೃಹತ್ ಕಾರ್ಯವು ಯಾವುದೇ ಅಡೆತಡೆಯಿಲ್ಲದೆ ಸಾಗಬೇಕೆಂದರೆ 2050ರ ಹೊತ್ತಿಗೆ ನಿಮ್ಮ ಡೈನಿಂಗ್ ಟೇಬಲ್ ಮೇಲೆ ಈ ಆಹಾರಗಳಿರಬೇಕು- ಬೆಳಗ್ಗೆ ಗಂಜಿ ಅಥವಾ ಅಂಬಲಿ, ಮಧ್ಯಾಹ್ನ ಊಟಕ್ಕೆ ಅನ್ನ, ರಾತ್ರಿಗೆ ದಾಲ್ ಹಾಗೂ ಸ್ವಲ್ಪ ತರಕಾರಿಗಳು, ತಿಂಗಳಿಗೊಮ್ಮೆ ಸಿಂಗಲ್ ಹ್ಯಾಂಬರ್ಗರನ್ನು ಟ್ರೀಟ್‌ನಂತೆ ಸೇವಿಸಬಹುದು. 

ಅನ್ನ- ದಾಲ್ ಕೋಂಬೋ

ಆರೋಗ್ಯ ತಜ್ಞರ ಪ್ರಕಾರ, ದಾಲ್-ಚಾವಲ್ ಕೋಂಬೋ ತೂಕ ಇಳಿಸುವವರಿಗೆ ಪರಿಣಾಮಕಾರಿ ಆಹಾರ. ವಾರದಲ್ಲಿ ಕನಿಷ್ಠ 4 ದಿನಗಳ ಕಾಲ ರಾತ್ರಿ ಹೊತ್ತು ಆನ್ನ ಹಾಗೂ ದಾಲ್ ಸೇವನೆ ಮಾಡಿದರೆ ಯುವಕರ ಸರಾಸರಿ ತೂಕ ಬ್ಯಾಲೆನ್ಸ್ ಮಾಡಬಹುದು ಎನ್ನುವುದು ಅವರ ಸಲಹೆ. ಏಕೆಂದರೆ, ತೂಕ ಇಳಿಸುವುದೆಂದು ಕೇವಲ ಹಣ್ಣು ತರಕಾರಿ ತಿಂದರೆ ಚಟುವಟಿಕೆಗಳಿಗೆ ಬೇಕಾದ ಎನರ್ಜಿ ಸಿಗಲಾರದು. ದಿನವಿಡೀ ಎನರ್ಜಿ ಇಲ್ಲದೆ, ಮಲಬದ್ಧತೆಯ ಸಮಸ್ಯೆಯಿಂದ ಬಳಲುವ ಕಷ್ಟವನ್ನು ದೇಹಕ್ಕೆ ನೀಡುವುದು ಯಾರಿಗೂ ಇಷ್ಟವಿರುವುದಿಲ್ಲ. ಆದರೆ, ದಾಲ್ ಹಾಗೂ ಅನ್ನದ ಸೇವನೆ ಈ ಸಮಸ್ಯೆಗಳು ಬಾರದಂತೆ ನೋಡಿಕೊಳ್ಳುತ್ತವೆ. ಹಾಗಂಥ ಇದನ್ನು ಬೇಕಾಬಿಟ್ಟಿ ತಿನ್ನಕೂಡದು. ಸಣ್ಣ ತಟ್ಟೆ ಬಳಸಿ ಮಿತಾಹಾರ ಸೇವನೆ ಹಿತವಾದದ್ದು. 

ಬೇಸಿಗೆ ಹತ್ರ ಬಂತು, ಈ ಸ್ಮೂಧಿಗಳನ್ನು ಟ್ರೈ ಮಾಡಿ...

ನ್ಯೂಟ್ರಿಶನ್

ಕೇವಲ ಜಾಗತಿಕ ಆಹಾರ ಸಮಸ್ಯೆಗೆ ಪರಿಹಾರವಾಗಿ ಅಲ್ಲ, ಆರೋಗ್ಯ ಹಾಗೂ ಫಿಟ್ನೆಸ್ ದೃಷ್ಟಿಯಿಂದಲೂ ದಾಲ್ ಹಾಗೂ ಅನ್ನ ಅತ್ಯುತ್ತಮ ಆಯ್ಕೆ ಎನ್ನುತ್ತಾರೆ ಆಹಾರ ತಜ್ಞರು. ಏಕೆಂದರೆ ದಾಲ್‌ನಲ್ಲಿ ದೇಹಕ್ಕೆ ಬೇಕಾದ ಫೈಬರ್, ಪ್ರೋಟೀನ್ಸ್, ವಿಟಮಿನ್ಸ್, ಕ್ಯಾಲ್ಶಿಯಂ, ಕಾರ್ಬೋಹೈಡ್ರೇಟ್ಸ್ ಇರುತ್ತದೆ. ಜೊತೆಗೆ, ಒಂದು ಬಗೆಯ ಬೇಳೆ ಬೋರಾದರೆ ಮತ್ತೊಂದು ಬೇಳೆಯಿಂದ ದಾಲ್ ತಯಾರಿಸಿ ರುಚಿ ಹೆಚ್ಚಿಸಬಹುದು. 
ಇನ್ನು ಅನ್ನವು ನಮ್ಮ ಜೀರ್ಣಾಂಗ ವ್ಯವಸ್ಥೆಯ ಸ್ನೇಹಿಯಾಗಿದ್ದು ಕಡಿಮೆ ಕಾರ್ಬ್ ಹೊಂದಿರುವ ಆಹಾರ. ಆದರೂ ಕೂಡಾ ಹೊಟ್ಟೆ ತುಂಬಿದ ಫೀಲಿಂಗ್ ನೀಡುತ್ತದೆ. ರೊಟ್ಟಿಗಿಂತಲೂ ಕಡಿಮೆ ಕಾರ್ಬ್ ಹೊಂದಿರುತ್ತದೆ ಅನ್ನ. 

ಕಂಪ್ಲೀಟ್ ಮೀಲ್

ಹಸಿರು ತರಕಾರಿಗಳೊಂದಿಗೆ ತಯಾರಿಸಿದ ದಾಲ್ ಹಾಗೂ ಪಾಲಿಶ್‌ರಹಿತ ಅಕ್ಕಿಯಿಂದ ತಯಾರಿಸಿದ ಅನ್ನವು ಒಂದು ಸಂಪೂರ್ಣ ಆಹಾರ. ಇದು ವಿಟಮಿನ್ಸ್, ಕಾರ್ಬ್ಸ್, ಪ್ರೋಟೀನ್ಸ್, ಮಿನರಲ್ಸ್‌ಗಳನ್ನು ಸರಿಯಾಗಿ ಬ್ಯಾಲೆನ್ಸ್ ಮಾಡುತ್ತದೆ. ಹಾಗಾಗಿ, ಈ ಆಹಾರ ನಿಮ್ಮ ದೈನಂದಿನ ಡಯಟ್‌ನ ಅಂಗವಾಗಿರುವುದು ಅಗತ್ಯ. 

ವರ್ಷದ ಕೂಸಿಗೆ ಹರ್ಷ ನೀಡುವ ಫುಡ್ ಪಟ್ಟಿ, ನಿಮ್ಮ ಮಗುವಿಗೆ ಏನ್‌ಕೊಡ್ತಿದ್ದೀರಾ?...

ಭಾರತೀಯ ಆಹಾರ 

ಎಲ್ಲದರಲ್ಲೂ ಪಾಶ್ಚಾತ್ಯರನ್ನು ಕಾಪಿ ಮಾಡಿ ನಮ್ಮತನವನ್ನು ಬಿಟ್ಟುಕೊಡುವ ಭಾರತೀಯರ ದುರಭ್ಯಾಸಕ್ಕೆ ಬ್ರೇಕ್ ಬೀಳುವ ಅಗತ್ಯವಿದೆ. ಆರೋಗ್ಯದ ವಿಷಯದಲ್ಲಿ ಹಾಗೆ ಕುರುಡಾಗಿ ಪಾಶ್ಚಾತ್ಯರನ್ನು ಫಾಲೋ ಮಾಡುವ ಬದಲು ನಮ್ಮ ಆಹಾರ ಶ್ರೀಮಂತಿಕೆ ಹಾಗೂ ಸದ್ಗುಣಗಳ ಅರಿಯಬೇಕಿದೆ. ನಮ್ಮ ಬಹುತೇಕ ಸಾಂಪ್ರದಾಯಿಕ ಆಹಾರ ಅಡುಗೆಗಳೆಲ್ಲವೂ ಪೋಷಕಸತ್ವಗಳು, ಡಯಟ್ ಹಾಗೂ ಆರೋಗ್ಯದ ದೃಷ್ಟಿಯಿಂದ ಒಂದು ಕೈ ಮೇಲೆೇ ಇವೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಿದೆ. ಜೊತೆಗೆ, ಜಾಗತಿಕ ಆಹಾರ ಸಮಸ್ಯೆಗೆ ದಾಲ್ ಹಾಗೂ ಅನ್ನ ಪರಿಹಾರವಾಗಬಹುದಾದಲ್ಲಿ ನಾವೇಕೆ ಅದಕ್ಕೆ ನಮ್ಮದೊಂದು ಚಿಕ್ಕ ಕಾಣಿಕೆ ಸಲ್ಲಿಸಬಾರದು?

click me!