ಪ್ರತಿದಿನ ಶೇಂಗಾ ಚಟ್ನಿ ಅಥವಾ ತೆಂಗಿನಕಾಯಿ ಚಟ್ನಿ ತಿಂದು ಬೋರ್ ಆಗಿದೆಯೇ? ಇಡ್ಲಿ-ದೋಸೆಗೆ ಸೈಡ್ ಡಿಶ್ ಏನು ಮಾಡಬೇಕೆಂದು ತಿಳಿಯುತ್ತಿಲ್ಲವೇ? ಹಾಗಾದರೆ ಇನ್ಮುಂದೆ ಚಿಂತಿಸಬೇಡಿ. ಮನೆಯಲ್ಲಿ ಟೊಮೆಟೊಗಳು ಹೆಚ್ಚಿದ್ದರೆ ಅವುಗಳಿಂದ ನಾಲಿಗೆಯಲ್ಲಿ ನೀರೂರಿಸುವ 'ಟೊಮೆಟೊ ತೊಕ್ಕು' ತಯಾರಿಸಿಕೊಳ್ಳಿ. ಈ ತೊಕ್ಕು ಕೇವಲ ಇಡ್ಲಿ, ದೋಸೆಗೆ ಮಾತ್ರವಲ್ಲದೆ, ಬಿಸಿ ಬಿಸಿ ಅನ್ನಕ್ಕೆ ತುಪ್ಪ ಹಾಕಿಕೊಂಡು ತಿಂದರೆ ಅಮೃತದಂತಿರುತ್ತದೆ. ಇದನ್ನು ಒಂದು ಬಾರಿ ಮಾಡಿಟ್ಟರೆ, ಒಂದು ವಾರದವರೆಗೆ ಫ್ರಿಡ್ಜ್‌ನಲ್ಲಿಟ್ಟು ಬಳಸಬಹುದು. ಬೆಳಗಿನ ವೇಳೆ ಅವಸರದಲ್ಲಿ ಇರುವವರಿಗೆ ಸಮಯ ಉಳಿಸಲು ಇದು ಬೆಸ್ಟ್ ರೆಸಿಪಿ.
ಎಳ್ಳೆಣ್ಣೆ (ಅಥವಾ ಆಲಿವ್ ಆಯಿಲ್): 3 ಟೇಬಲ್ ಚಮಚ (ಎಳ್ಳೆಣ್ಣೆ ಬಳಸಿದರೆ ರುಚಿ ಮತ್ತು ಬಾಳಿಕೆ ಹೆಚ್ಚು)
ಸಾಸಿವೆ: 1/2 ಟೀಸ್ಪೂನ್
ಉದ್ದಿನ ಬೇಳೆ: 1 ಟೀಸ್ಪೂನ್
ಈರುಳ್ಳಿ: 250 ಗ್ರಾಂ (ಸಣ್ಣಗೆ ಹೆಚ್ಚಿದ್ದು)
ಕರಿಬೇವು: 1 ಕಟ್ಟು
ಬೆಳ್ಳುಳ್ಳಿ: 25 ಎಸಳು (ಸಣ್ಣಗೆ ಹೆಚ್ಚಿದ್ದು)
ಟೊಮೆಟೊ: ಅರ್ಧ ಕೆಜಿ (ಸಣ್ಣಗೆ ಹೆಚ್ಚಿದ್ದು)
ಖಾರದ ಪುಡಿ: 3 ರಿಂದ 4 ಟೇಬಲ್ ಚಮಚ (ನಿಮ್ಮ ಖಾರಕ್ಕೆ ತಕ್ಕಂತೆ)
ಗರಂ ಮಸಾಲಾ: 1/2 ಟೀಸ್ಪೂನ್
ಉಪ್ಪು: ರುಚಿಗೆ ತಕ್ಕಷ್ಟು
ಕೊನೆಯಲ್ಲಿ ಒಗ್ಗರಣೆಗೆ: 1 ಟೇಬಲ್ ಚಮಚ ಎಣ್ಣೆ ಮತ್ತು 2 ಕಟ್ಟು ಕರಿಬೇವು
*ಮೊದಲು ಸ್ಟೌವ್ ಹಚ್ಚಿ ದಪ್ಪ ತಳದ ಬಾಂಡ್ಲಿ ಅಥವಾ ಕಡಾಯಿ ಇಟ್ಟುಕೊಳ್ಳಿ. ಅದಕ್ಕೆ ಎಳ್ಳೆಣ್ಣೆ ಹಾಕಿ ಕಾಯಿಸಿ. ಎಣ್ಣೆ ಕಾದ ನಂತರ ಸಾಸಿವೆ, ಉದ್ದಿನ ಬೇಳೆ ಹಾಕಿ ಕೆಂಪಾಗುವವರೆಗೆ ಹುರಿಯಿರಿ.
*ನಂತರ ಸಣ್ಣಗೆ ಹೆಚ್ಚಿದ ಈರುಳ್ಳಿ ಮತ್ತು ಕರಿಬೇವು ಸೇರಿಸಿ. ಉರಿಯನ್ನು ಮೀಡಿಯಂ ಫ್ಲೇಮ್‌ನಲ್ಲಿಟ್ಟು, ಈರುಳ್ಳಿ ಹಸಿ ವಾಸನೆ ಹೋಗಿ ಮೆತ್ತಗಾಗುವವರೆಗೆ ಹುರಿಯಿರಿ. ಈಗ ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿ ಎಸಳುಗಳನ್ನು ಸೇರಿಸಿ. ನಂತರ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
*ಈರುಳ್ಳಿ ಮತ್ತು ಬೆಳ್ಳುಳ್ಳಿ ಚೆನ್ನಾಗಿ ಬೆಂದ ನಂತರ, ಕತ್ತರಿಸಿದ ಟೊಮೆಟೊ ಪೀಸ್ ಸೇರಿಸಿ ಚೆನ್ನಾಗಿ ಕೈಯಾಡಿಸಿ. ಸ್ವಲ್ಪ ಸಮಯದ ನಂತರ ಟೊಮೆಟೊದಿಂದ ನೈಸರ್ಗಿಕವಾಗಿ ನೀರು ಹೊರಬರುತ್ತದೆ. ಆ ಸಮಯದಲ್ಲಿ ಖಾರದ ಪುಡಿ ಸೇರಿಸಿ ಮಿಕ್ಸ್ ಮಾಡಿ, ಮುಚ್ಚಳ ಮುಚ್ಚಿ ಸುಮಾರು 5 ನಿಮಿಷ ಬೇಯಿಸಿ.
*ನಂತರ ಮುಚ್ಚಳ ತೆಗೆದು ಅಡಿ ಹಿಡಿಯದಂತೆ ಒಮ್ಮೆ ಕಲಕಿ. ಮತ್ತೆ ಮುಚ್ಚಳ ಮುಚ್ಚಿ ಉರಿಯನ್ನು ಪೂರ್ತಿ ಕಡಿಮೆ ಮಾಡಿ (Low Flame) 10 ನಿಮಿಷ ಬೇಯಿಸಿ. ಮಧ್ಯಮಧ್ಯದಲ್ಲಿ ಕಲಕುತ್ತಿರಿ.
*ಹತ್ತು ನಿಮಿಷದ ನಂತರ ಟೊಮೆಟೊ ಪೂರ್ತಿ ಮೆತ್ತಗಾಗಿ, ಗೊಜ್ಜಿನಿಂದ ಎಣ್ಣೆ ಸೈಡ್‌ಗಳಲ್ಲಿ ಬಿಟ್ಟುಕೊಳ್ಳಲು ಶುರುವಾಗುತ್ತದೆ. ಇದು ತೊಕ್ಕು ಸರಿಯಾಗಿ ಬೆಂದಿದೆ ಎಂಬುದಕ್ಕೆ ಸಂಕೇತ.
*ಈಗ ಅರ್ಧ ಟೀಸ್ಪೂನ್ ಗರಂ ಮಸಾಲಾ ಸಿಂಪಡಿಸಿ ಚೆನ್ನಾಗಿ ಕಲಕಿ, ಮತ್ತೆ 2-3 ನಿಮಿಷ ಸಣ್ಣ ಉರಿಯಲ್ಲಿ ಬೇಯಿಸಿ ಸ್ಟೌವ್ ಆಫ್ ಮಾಡಿ.
*ಇದಕ್ಕೆ ಮತ್ತಷ್ಟು ರುಚಿ ನೀಡಲು, ಒಂದು ಸಣ್ಣ ಪ್ಯಾನ್‌ನಲ್ಲಿ ಒಂದು ಚಮಚ ಎಣ್ಣೆ ಕಾಯಿಸಿ, ಅದಕ್ಕೆ ಕರಿಬೇವು ಹಾಕಿ ಗರಿಗರಿಯಾಗುವಂತೆ ಹುರಿದು, ಆ ಒಗ್ಗರಣೆಯನ್ನು ಸಿದ್ಧವಾದ ಟೊಮೆಟೊ ತೊಕ್ಕಿಗೆ ಸೇರಿಸಿ.
ಅಷ್ಟೇ! ಘಮಘಮಿಸುವ ರುಚಿಕರವಾದ ಟೊಮೆಟೊ ತೊಕ್ಕು ರೆಡಿ. ಇದು ಪೂರ್ತಿ ತಣ್ಣಗಾದ ನಂತರ ಗಾಳಿಯಾಡದ ಗಾಜಿನ ಸೀಸೆಯಲ್ಲಿ (Airtight glass jar) ತುಂಬಿಟ್ಟರೆ ವಾರವಿಡೀ ಬಳಸಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.