ಪೂರಿಗೆ ಸರಿಯಾದ ಕಾಂಬೊ ಅಂದ್ರೆ ಅದು ಆಲೂಗಡ್ಡೆ ಮಸಾಲಾ. ಆದ್ರೆ ಹೋಟೆಲ್ಗಳಲ್ಲಿ ಸಿಗೋ ರೀತಿ ರುಚಿಯಾಗಿ ಮನೆಯಲ್ಲಿ ಮಾಡಿದ್ರೆ ಬರಲ್ಲ. ಇದಕ್ಕೆ ಕೆಲವು ರಹಸ್ಯ ವಿಧಾನಗಳನ್ನು ಅನುಸರಿಸಿದರೆ ಹೋಟೆಲ್ ರುಚಿಯನ್ನು ಮನೆಯಲ್ಲೇ ತರಬಹುದು.
ಬೆಳಗ್ಗಿನ ಸಮಯದಲ್ಲಿ ಎಲ್ಲರೂ ಕಚೇರಿಗೆ ಹೋಗುವ ಒತ್ತಡದಲ್ಲಿರುತ್ತಾರೆ. ಆದರೆ ಸಂಜೆಯ ಉಪಹಾರಕ್ಕೆ ನೀವು ಹೊಟೇಲ್ ತಿನ್ನೋದು ಬೇಡ ಮನೆಯಲ್ಲೇ ಏನಾದರು ರುಚಿ ರುಚಿಯಾದ ತಿನಿಸು ಮಾಡೋಣ ಅಂತ ಬಯಸಿದ್ರೆ ಸಾಗು ಹಾಗೂ ಪೂರಿ ಬೆಸ್ಟ್ . ನೀವು ಮನೆಯಲ್ಲೇ ಈ ಹೊಟೇಲ್ ಸ್ಟೈಲ್‌ನಲ್ಲಿ ಪೂರಿ ಮಸಾಲಾ ತಯಾರಿಸಬಹುದು. ಹೊಟೇಲ್ ಸ್ಟೈಲ್ ಪೂರಿ ಸಾಗು ಮಾಡುವ ಪಾಕ ವಿಧಾನದ ಬಗ್ಗೆ ಇಲ್ಲಿದೆ ಮಾಹಿತಿ..
ಪೂರಿಗೆ ಬೇಕಾಗುವ ಪದಾರ್ಥಗಳು:
ಗೋಧಿ ಹಿಟ್ಟು – 2 ಕಪ್
ರವೆ – 2 ಟೀಸ್ಪೂನ್
ಉಪ್ಪು – 1/2 ಟೀಸ್ಪೂನ್
ಎಣ್ಣೆ – 1 ಟೀಸ್ಪೂನ್
ನೀರು – ಬೇಕಾಗುವಷ್ಟು (ಮೆತ್ತನೆಯ ಪೂರಿಗಾಗಿ)
ಕರಿಯಲು ಎಣ್ಣೆ – ಬೇಕಾಗುವಷ್ಟು
ಸಾಗು ಮಸಾಲಾ ತಯಾರಿಸಲು:
ಆಲೂಗಡ್ಡೆ – 3 (ಚೆನ್ನಾಗಿ ಬೇಯಿಸಿ, ಮ್ಯಾಶ್ ಮಾಡಿದ್ದು)
ದೊಡ್ಡ ಈರುಳ್ಳಿ – 2 (ತೆಳುವಾಗಿ ಹೆಚ್ಚಿದ್ದು)
ಬೇಕಿದ್ದಲ್ಲಿ ನೀರಿನಲ್ಲಿ ನೆನಸಿದ ಬಟಾಣಿಯನ್ನು ಸೇರಿಸಿಕೊಳ್ಳಬಹುದು.
ಹಸಿರು ಮೆಣಸಿನಕಾಯಿ – 3 (ಉದ್ದವಾಗಿ ಹೆಚ್ಚಿದ್ದು)
ಶುಂಠಿ – 1 ಇಂಚು (ಹೆಚ್ಚಿದ್ದು)
ಸಾಸಿವೆ – 1 ಟೀಸ್ಪೂನ್
ಉದ್ದಿನ ಬೇಳೆ – 1 ಟೀಸ್ಪೂನ್
ಕಡಲೆ ಬೇಳೆ – 1 ಟೀಸ್ಪೂನ್
ಕರಿಬೇವು – ಒಂದು ಹಿಡಿ
ಅರಿಶಿನ ಪುಡಿ – 1/2 ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಬೆಣ್ಣೆ – 1 ಟೀಸ್ಪೂನ್ (ರುಚಿ ಹೆಚ್ಚಿಸಲು)
ನೀರು – ಬೇಕಾಗುವಷ್ಟು
ಕೊತ್ತಂಬರಿ – ಸ್ವಲ್ಪ (ಅಲಂಕರಿಸಲು)
ಪೂರಿ ಮಾಡುವ ವಿಧಾನ:
ಗೋಧಿ ಹಿಟ್ಟಿನಲ್ಲಿ ಉಪ್ಪು, ರವೆ, ಎಣ್ಣೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ, ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ನಾದಿಕೊಳ್ಳಿ.
ಕಲಸಿದ ಹಿಟ್ಟನ್ನು ಮುಚ್ಚಿಟ್ಟು 20 ನಿಮಿಷ ನೆನೆಯಲು ಬಿಡಿ.
ನಂತರ ಸಣ್ಣ ಉಂಡೆಗಳನ್ನು ಮಾಡಿ, ಸ್ವಲ್ಪ ದಪ್ಪವಾಗಿ ಲಟ್ಟಿಸಿ, ಬಿಸಿ ಎಣ್ಣೆಯಲ್ಲಿ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಕರಿಯಿರಿ.
ಆಲೂಗಡ್ಡೆ ಮಸಾಲಾ ಮಾಡುವ ವಿಧಾನ:
ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ, ಸಾಸಿವೆ, ಉದ್ದಿನ ಬೇಳೆ, ಕಡಲೆ ಬೇಳೆ ಸೇರಿಸಿ ಸಿಡಿಯುವವರೆಗೆ ಹುರಿಯಿರಿ.
ನಂತರ ಈರುಳ್ಳಿ, ಹಸಿರು ಮೆಣಸಿನಕಾಯಿ, ಶುಂಠಿ ಸೇರಿಸಿ ಮಧ್ಯಮ ಉರಿಯಲ್ಲಿ ಬಾಡಿಸಿ.
ಅರಿಶಿನ ಪುಡಿ, ಉಪ್ಪು ಸೇರಿಸಿ ಚೆನ್ನಾಗಿ ತಿರುಗಿಸಿ, ಮ್ಯಾಶ್ ಮಾಡಿದ ಆಲೂಗಡ್ಡೆಯನ್ನು ಸೇರಿಸಿ.
ಬೇಕಾದಷ್ಟು ನೀರು ಸೇರಿಸಿ, ಮಧ್ಯಮ ಉರಿಯಲ್ಲಿ 5-7 ನಿಮಿಷ ಕುದಿಸಿ.
ಕೊನೆಯಲ್ಲಿ, ಬೆಣ್ಣೆ ಮತ್ತು ಕೊತ್ತಂಬರಿ ಸೇರಿಸಿ ಮಿಕ್ಸ್ ಮಾಡಿ ಇಳಿಸಿ.
ತಿನ್ನಲೇಬೇಕಾದ 6 ಪೌಷ್ಟಿಕಾಂಶವಿರುವ ಉದ್ದಿನಕಾಳು ತಿಂಡಿಗಳು
ಅಡುಗೆ ಟಿಪ್ಸ್:
ಪೂರಿ ಗರಿಗರಿಯಾಗಿ, ಹೆಚ್ಚು ಹೊತ್ತು ಉಬ್ಬಿ ಬರಲು, ರವೆ ಸೇರಿಸುವುದು ಅಗತ್ಯ.
ಪೂರಿಯನ್ನು ಎಣ್ಣೆಯಲ್ಲಿ ಹಾಕುವಾಗ, ಎಣ್ಣೆ ಬಿಸಿಯಾಗಿರಬೇಕು. ಇಲ್ಲದಿದ್ದರೆ ಅದು ಎಣ್ಣೆಯನ್ನು ಹೆಚ್ಚಾಗಿ ಹೀರಿಕೊಳ್ಳುತ್ತದೆ.
ಮಸಾಲಾಗೆ ಹೆಚ್ಚು ರುಚಿ ಬರಲು, ಸ್ವಲ್ಪ ಬೆಣ್ಣೆ ಸೇರಿಸಬಹುದು.
ಮಸಾಲಾವನ್ನು ಸ್ವಲ್ಪ ಮ್ಯಾಶ್ ಮಾಡಿ, ಗಟ್ಟಿಯಾದ ಮಿಶ್ರಣವಾಗಿದ್ದರೆ ಹೋಟೆಲ್ ರುಚಿ ಸಿಗುತ್ತದೆ.
ಈ ರೀತಿ ಮಾಡಿ ನೋಡಿ, ನಿಮ್ಮ ಮನೆಯಲ್ಲೇ ಹೋಟೆಲ್ ದರ್ಜೆಯ ಪೂರಿ ಮಸಾಲಾ ರುಚಿಯನ್ನು ಅನುಭವಿಸಬಹುದು. ಹೀಗೆ ಮಾಡುವುದರಿಂದ ನಿಮಗೂ ಮೆಚ್ಚುಗೆಗಳು ಬರುತ್ತವೆ. ಆಮೇಲೆ ನೀವು ಪೂರಿ ಸ್ಪೆಷಲಿಸ್ಟ್ ಆಗಿಬಿಡ್ತೀರಿ.
ಕುಡುಕರ ನಂಬಿಕೆಗಳು: ಡ್ರಿಂಕ್ಸ್ ಮಾಡುವ ಮೊದಲು ಕುಡುಕರು ಕೆಲ ಹನಿ ಮದ್ಯ ನೆಲಕ್ಕೆ ಚೆಲ್ತಾರೆ ಏಕೆ ಗೊತ್ತಾ?