ಬೆಳಗಿನ ತಿಂಡಿಗೆ ಅಥವಾ ಮಕ್ಕಳ ಲಂಚ್ ಬಾಕ್ಸ್‌ಗೆ ಪ್ರತಿದಿನ ಏನು ಮಾಡುವುದು ಎಂಬ ಚಿಂತೆ ನಿಮಗಿದೆಯೇ? ಮಕ್ಕಳು ತರಕಾರಿ ತಿನ್ನಲು ಹಠ ಮಾಡುತ್ತಿದ್ದರೆ, ಕೇವಲ 1 ಹೀರೆಕಾಯಿ ಮತ್ತು ರವೆ ಬಳಸಿ 10 ನಿಮಿಷದಲ್ಲಿ ಹತ್ತಿಯಂತೆ ಮೃದುವಾದ ರೊಟ್ಟಿ ಮಾಡಬಹುದು! ಉತ್ತರ ಕರ್ನಾಟಕ ಶೈಲಿಯ ಈ ರುಚಿಕರ ಹೀರೆಕಾಯಿ ರವೆ ರೊಟ್ಟಿ ಮಾಡುವ ಸುಲಭ ವಿಧಾನ ಇಲ್ಲಿದೆ ನೋಡಿ...
ರವೆ (ಮೀಡಿಯಂ ಅಥವಾ ಚಿರೋಟಿ ರವೆ): 3 ಕಪ್
ಹೀರೆಕಾಯಿ: 1 (ಸಿಪ್ಪೆ ತೆಗೆಯದೆ ನುಣ್ಣಗೆ ತುರಿದದ್ದು)
ಈರುಳ್ಳಿ (ಉಳ್ಳಾಗಡ್ಡಿ): 2 (ಸಣ್ಣಗೆ ಹೆಚ್ಚಿದ್ದು)
ಹಸಿಮೆಣಸಿನಕಾಯಿ ಪೇಸ್ಟ್: 1 ರಿಂದ 2 ಚಮಚ (ಖಾರಕ್ಕೆ ತಕ್ಕಂತೆ)
ಜೀರಿಗೆ: 1 ಚಮಚ
ಓಂ ಕಾಳು(ಅಜ್ವೈನ್): ಅರ್ಧ ಚಮಚ
ಕರಿಬೇವು ಮತ್ತು ಕೊತ್ತಂಬರಿ ಸೊಪ್ಪು: ಸಣ್ಣಗೆ ಹೆಚ್ಚಿದ್ದು ಸ್ವಲ್ಪ
ರುಚಿಗೆ ತಕ್ಕಷ್ಟು ಉಪ್ಪು
ಎಣ್ಣೆ ಅಥವಾ ತುಪ್ಪ: ರೊಟ್ಟಿ ಬೇಯಿಸಲು
*ಹೀರೆಕಾಯಿಯನ್ನು ಚೆನ್ನಾಗಿ ತೊಳೆದು, ಸಿಪ್ಪೆ ಸಮೇತವೇ ತುರಿಮಣೆಯಲ್ಲಿ ತುರಿದುಕೊಳ್ಳಿ. (ಹೀರೆಕಾಯಿಯಲ್ಲೇ ನೈಸರ್ಗಿಕ ನೀರಿನಂಶ ಹೆಚ್ಚಿರುತ್ತದೆ).
*ಒಂದು ಅಗಲವಾದ ಪಾತ್ರೆಗೆ ರವೆ, ರುಚಿಗೆ ತಕ್ಕಷ್ಟು ಉಪ್ಪು, ಸಣ್ಣಗೆ ಹೆಚ್ಚಿದ ಕರಿಬೇವು, ಕೊತ್ತಂಬರಿ ಸೊಪ್ಪು, ಜೀರಿಗೆ, ಅಜ್ವೈನ್ ಮತ್ತು ಹಸಿಮೆಣಸಿನಕಾಯಿ ಪೇಸ್ಟ್ ಹಾಕಿ ಬೆರೆಸಿ. ನಂತರ ಇದಕ್ಕೆ ತುರಿದ ಹೀರೆಕಾಯಿ ಮತ್ತು ಸಣ್ಣಗೆ ಹೆಚ್ಚಿದ ಈರುಳ್ಳಿ ಸೇರಿಸಿ ಚೆನ್ನಾಗಿ ಕಲಸಿಕೊಳ್ಳಿ.
(ಹೀರೆಕಾಯಿ ಮತ್ತು ಈರುಳ್ಳಿಯಲ್ಲಿರುವ ನೈಸರ್ಗಿಕ ತೇವಾಂಶದಲ್ಲೇ ರವೆ ಚೆನ್ನಾಗಿ ನೆನೆಯುತ್ತದೆ, ಹೆಚ್ಚುವರಿ ನೀರು ಹಾಕುವ ಅಗತ್ಯವಿಲ್ಲ).
*ಹಿಟ್ಟನ್ನು 5 ನಿಮಿಷ ಮುಚ್ಚಿಡಿ. ರವೆ ತೇವಾಂಶವನ್ನು ಹೀರಿಕೊಂಡು ಮೃದುವಾದ ಹದಕ್ಕೆ ಬರುತ್ತದೆ.
*ಬಟರ್ ಪೇಪರ್, ಬಾಳೆ ಎಲೆ ಅಥವಾ ಪ್ಲಾಸ್ಟಿಕ್ ಶೀಟ್‌ಗೆ ಸ್ವಲ್ಪ ಎಣ್ಣೆ ಸವರಿ. ಒಂದು ಉಂಡೆ ಹಿಟ್ಟನ್ನಿಟ್ಟು ಕೈಯಿಂದ ನುಣುಪಾಗಿ ತಟ್ಟಿಕೊಳ್ಳಿ (ತುಂಬಾ ದಪ್ಪನೂ ಅಲ್ಲದೆ, ತುಂಬಾ ತೆಳುವೂ ಅಲ್ಲದೆ ಮೀಡಿಯಂ ಆಗಿರಲಿ).
ಕಾದ ಕಬ್ಬಿಣದ ತವಾ ಅಥವಾ ಕಾವಲಿಗೆ ಸ್ವಲ್ಪ ಎಣ್ಣೆ ಸವರಿ, ತಟ್ಟಿದ ರೊಟ್ಟಿಯನ್ನು ಹಾಕಿ. ಎರಡೂ ಬದಿಗೂ ಸ್ವಲ್ಪ ಎಣ್ಣೆ/ತುಪ್ಪ ಹಾಕಿ, ಸಣ್ಣ ಕಂದು ಕಲೆಗಳು (ಕಣ್ಣು ಬೀಳುವವರೆಗೆ) ಬರುವಂತೆ ಹದವಾಗಿ ಬೇಯಿಸಿ ತೆಗೆಯಿರಿ.
ಬಿಸಿಬಿಸಿಯಾದ ಮೃದುವಾದ ಹೀರೆಕಾಯಿ ರವೆ ರೊಟ್ಟಿಯನ್ನು ತಾಜಾ ತೆಂಗಿನಕಾಯಿ ಚಟ್ನಿ ಜೊತೆ ಸವಿಯಲು ನೀಡಿದರೆ ಮಕ್ಕಳು-ದೊಡ್ಡವರೆನ್ನದೆ ಎಲ್ಲರೂ ಇಷ್ಟಪಟ್ಟು ತಿನ್ನುತ್ತಾರೆ!
ತುರಿದ ಹೀರೆಕಾಯಿ ಮತ್ತು ಹೆಚ್ಚಿದ ಈರುಳ್ಳಿಯಲ್ಲಿ ನೈಸರ್ಗಿಕ ನೀರಿನಂಶ ಹೆಚ್ಚಿರುತ್ತದೆ. ಮೊದಲು ರವೆಯೊಂದಿಗೆ ಇವೆರಡನ್ನೂ ಚೆನ್ನಾಗಿ ಕಿವುಚಿ ಕಲಸಿ. ಹಿಟ್ಟು ತುಂಬಾ ಗಟ್ಟಿ ಎನಿಸಿದರೆ ಮಾತ್ರ 1-2 ಚಮಚ ನೀರು ಚುಮುಕಿಸಿಕೊಳ್ಳಿ.
ಹೀರೆಕಾಯಿಯ ಮೇಲಿನ ಸಿಪ್ಪೆಯಲ್ಲೇ ನಾರಿನಂಶ (Fiber) ಮತ್ತು ಪೋಷಕಾಂಶಗಳು ಹೆಚ್ಚಿರುತ್ತವೆ. ಹಾಗಾಗಿ ಸಿಪ್ಪೆ ಸಮೇತವೇ ತುರಿದುಕೊಂಡರೆ ರೊಟ್ಟಿ ಹೆಚ್ಚು ಆರೋಗ್ಯಕರ ಹಾಗೂ ರುಚಿಯಾಗಿರುತ್ತದೆ.
ಹಿಟ್ಟು ಕಲಸಿದ ತಕ್ಷಣ ರೊಟ್ಟಿ ತಟ್ಟಬೇಡಿ. ಕನಿಷ್ಠ 5 ರಿಂದ 7 ನಿಮಿಷ ಮುಚ್ಚಿಟ್ಟರೆ, ರವೆ ತರಕಾರಿಯ ನೀರಿನಂಶವನ್ನು ಹೀರಿಕೊಂಡು ಮೃದುವಾಗುತ್ತದೆ. ಇದರಿಂದ ರೊಟ್ಟಿ ತಟ್ಟುವಾಗ ಬಿರುಕು ಬಿಡುವುದಿಲ್ಲ.
ಹಸಿಮೆಣಸಿನಕಾಯಿಯನ್ನು ಹೆಚ್ಚಿ ಹಾಕುವ ಬದಲು, ಮಿಕ್ಸಿಯಲ್ಲಿ ಪೇಸ್ಟ್ ಮಾಡಿ ಹಾಕಿದರೆ ಮಕ್ಕಳಿಗೆ ಊಟ ಮಾಡುವಾಗ ಬಾಯಿಗೆ ಮೆಣಸಿನಕಾಯಿ ಸಿಗುವುದಿಲ್ಲ ಮತ್ತು ಖಾರ ಸಮನಾಗಿ ಹರಡುತ್ತದೆ.
ಮೀಡಿಯಂ ಉಪ್ಪಿಟ್ಟು ರವೆ ಅಥವಾ ಚಿರೋಟಿ ರವೆ ಎರಡನ್ನೂ ಬಳಸಬಹುದು. ಒಂದು ವೇಳೆ ರವೆ ಬೇಡವೆಂದರೆ ಅದೇ ಅಳತೆಯಲ್ಲಿ ಅಕ್ಕಿ ಹಿಟ್ಟು ಬಳಸಿಯೂ ಹೀರೆಕಾಯಿ ಅಕ್ಕಿ ರೊಟ್ಟಿ ಮಾಡಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.