ವೀಕೆಂಡ್ ಬಂತೆಂದರೆ ಸಾಕು ನಾನ್‌ವೆಜ್ ಪ್ರಿಯರಿಗೆ ನೆನಪಾಗುವುದೇ ಘಮಘಮಿಸುವ ಚಿಕನ್ ಬಿರಿಯಾನಿ! ಆದರೆ ಮನೆಯಲ್ಲಿ ಮಾಡುವಾಗ ಅನ್ನ ಮುದ್ದೆಯಾಗುವುದು ಅಥವಾ ಚಿಕನ್ ಜ್ಯೂಸಿಯಾಗಿ ಬಾರದೆ ಗಟ್ಟಿಯಾಗುವುದು ಸಾಮಾನ್ಯ ಸಮಸ್ಯೆ. ಬೆಂಗಳೂರಿನ ಪ್ರಸಿದ್ಧ ಹೋಟೆಲ್ ಶೈಲಿಯಲ್ಲಿ, ಅತ್ಯಂತ ಸರಳ ಮಸಾಲೆಗಳನ್ನು ಬಳಸಿ ಮನೆಯಲ್ಲೇ ಉದುರು-ಉದುರಾದ, ರಸಭರಿತ ಚಿಕನ್ ದಮ್ ಬಿರಿಯಾನಿ ಮಾಡುವ ಸುಲಭ ವಿಧಾನ ಇಲ್ಲಿದೆ ನೋಡಿ...
ಚಿಕನ್: ಮುಕ್ಕಾಲು ಕೆಜಿಯಿಂದ 1 ಕೆಜಿ (ಚೆನ್ನಾಗಿ ತೊಳೆದದ್ದು).
ಅಕ್ಕಿ (ಜೀರಾ ಸಾಂಬಾ ಅಥವಾ ಬಾಸ್ಮತಿ): ಅಳತೆಗೆ ತಕ್ಕಂತೆ.
ರುಬ್ಬಿಕೊಳ್ಳಲು ಮಸಾಲೆ: ಶುಂಠಿ, ಬೆಳ್ಳುಳ್ಳಿ, ಹಸಿಮೆಣಸಿನಕಾಯಿ, ತಾಜಾ ಪುದೀನಾ ಹಾಗೂ ಕೊತ್ತಂಬರಿ ಸೊಪ್ಪು.
ಒಗ್ಗರಣೆಗೆ ಹೋಲ್ ಸ್ಪೈಸಸ್: ಚಕ್ಕೆ, ಲವಂಗ, ಏಲಕ್ಕಿ, ಪಲಾವ್ ಎಲೆ, ಸೋಂಪು, ಮರಾಠಿ ಮೊಗ್ಗು, ಕಲ್ಲುಹೂವು.
ತರಕಾರಿಗಳು: ಉದ್ದಕ್ಕೆ ಹೆಚ್ಚಿದ ಈರುಳ್ಳಿ (ಮೀಡಿಯಂ ಸೈಜ್ 2), ಟೊಮೆಟೊ.
ಪುಡಿ ಮಸಾಲೆಗಳು: ಧನಿಯಾ ಪುಡಿ, ಅರಿಶಿನ, ಖಾರದ ಪುಡಿ, ಬಿರಿಯಾನಿ ಮಸಾಲಾ ಪುಡಿ.
ಇತರ: ಎಣ್ಣೆ, ತುಪ್ಪ, ರುಚಿಗೆ ತಕ್ಕಷ್ಟು ಉಪ್ಪು ಹಾಗೂ ನಿಂಬೆಹಣ್ಣಿನ ರಸ.
ಮಿಕ್ಸಿ ಜಾರಿಗೆ ಶುಂಠಿ, ಬೆಳ್ಳುಳ್ಳಿ, ಹಸಿಮೆಣಸಿನಕಾಯಿ, ತಾಜಾ ಪುದೀನಾ ಮತ್ತು ಕೊತ್ತಂಬರಿ ಸೊಪ್ಪು ಹಾಕಿ ಸ್ವಲ್ಪವೇ ನೀರು ಸೇರಿಸಿ ನುಣ್ಣಗೆ ಪೇಸ್ಟ್ ಮಾಡಿಕೊಳ್ಳಿ.
ಈಗ ಬಿರಿಯಾನಿ ಪಾತ್ರೆಗೆ ಎಣ್ಣೆ ಮತ್ತು 2 ಚಮಚ ತುಪ್ಪ ಹಾಕಿ ಕಾಯಿಸಿ. ಚಕ್ಕೆ, ಲವಂಗ, ಏಲಕ್ಕಿ, ಮರಾಠಿ ಮೊಗ್ಗು, ಪಲಾವ್ ಎಲೆ ಸಿಡಿಸಿ. ನಂತರ ಹೆಚ್ಚಿದ ಈರುಳ್ಳಿ ಹಾಕಿ, ಅದು ತಿಳಿ ಗುಲಾಬಿ (Pinkish/Transparent) ಬಣ್ಣ ಬರುವವರೆಗೆ ಚೆನ್ನಾಗಿ ಬಾಡಿಸಿ.
ರುಬ್ಬಿದ ಹಸಿರು ಮಸಾಲೆಯನ್ನು ಸೇರಿಸಿ ಹಸಿವಾಸನೆ ಹೋಗುವವರೆಗೆ ಹುರಿಯಿರಿ. ನಂತರ ಬಿರಿಯಾನಿ ಮಸಾಲಾ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ಇದಕ್ಕೆ ತೊಳೆದ ಚಿಕನ್ ತುಂಡುಗಳನ್ನು ಹಾಕಿ ಮಸಾಲೆಯೊಂದಿಗೆ 5-6 ನಿಮಿಷ ಹುರಿಯಿರಿ. ಇದರಿಂದ ಚಿಕನ್ ತುಂಡುಗಳು ಒಳಗಿನಿಂದ ಮೃದುವಾಗಿ ಹಾಗೂ ಜ್ಯೂಸಿಯಾಗಿ ಬೇಯುತ್ತವೆ.
ಅಕ್ಕಿಯ ಪ್ರಮಾಣಕ್ಕೆ ಸರಿಯಾಗಿ ನೀರನ್ನು ಸೇರಿಸಿ (ಉದಾಹರಣೆಗೆ 1 ಗ್ಲಾಸ್ ಅಕ್ಕಿಗೆ 2 ಗ್ಲಾಸ್ ನೀರು) ಚೆನ್ನಾಗಿ ಕುದಿಯಲು ಬಿಡಿ. ನೀರು ಕುದಿಯುವಾಗ ನಿಂಬೆರಸ ಹಿಂಡಿ, ನಂತರ ತೊಳೆದ ಅಕ್ಕಿಯನ್ನು ಸೇರಿಸಿ ಚೆನ್ನಾಗಿ ಬೆರೆಸಿ.
ನೀರು ಮತ್ತು ಅಕ್ಕಿ ಸಮಮಟ್ಟಕ್ಕೆ ಬಂದಾಗ (ನೀರು ಇಂಗಿದ ಮೇಲೆ), ಉರಿಯನ್ನು ಪೂರ್ತಿ ಕಡಿಮೆ (ಸಿಮ್) ಮಾಡಿ. ಪಾತ್ರೆಗೆ ಗಾಳಿಯಾಡದಂತೆ ಸರಿಯಾದ ಮುಚ್ಚಳ ಮುಚ್ಚಿ 10 ರಿಂದ 12 ನಿಮಿಷಗಳ ಕಾಲ ಕಡಿಮೆ ಉರಿಯಲ್ಲಿ ದಮ್ ಕಟ್ಟಿ. ನಂತರ ಗ್ಯಾಸ್ ಆಫ್ ಮಾಡಿ 10 ನಿಮಿಷ ಹಾಗೆಯೇ ಬಿಡಿ. ತೆರೆದು ನಿಧಾನವಾಗಿ ಕೆಳಗಿನಿಂದ ಮಗುಚಿದರೆ ಪರಿಮಳಯುಕ್ತ, ಹೋಟೆಲ್ ಸ್ಟೈಲ್ ಚಿಕನ್ ಬಿರಿಯಾನಿ ಸವಿಯಲು ಸಿದ್ಧ!
ತಳ ಹಿಡಿಯದಂತೆ ದಮ್ ಕಟ್ಟುವ ದೇಸಿ ಟ್ರಿಕ್ (Tawa Trick)
ಮನೆಯಲ್ಲಿ ಗ್ಯಾಸ್ ಸ್ಟವ್ ಮೇಲೆ ನೇರವಾಗಿ ಪಾತ್ರೆ ಇಟ್ಟರೆ ತಳಭಾಗ ಸೀದುಹೋಗುವ ಸಾಧ್ಯತೆ ಇರುತ್ತದೆ.
ಆದ್ದರಿಂದ ನೀರು ಇಂಗಿದ ನಂತರ, ಗ್ಯಾಸ್ ಮೇಲೆ ಒಂದು ಹಳೆಯ ದೋಸೆ ಹಂಚು (Tawa) ಇಟ್ಟು, ಅದರ ಮೇಲೆ ಬಿರಿಯಾನಿ ಪಾತ್ರೆ ಇಟ್ಟು ದಮ್ ಕಟ್ಟಿದರೆ ಒಂದು ಕಾಳು ಅನ್ನವೂ ತಳ ಹಿಡಿಯುವುದಿಲ್ಲ.
ಅಕ್ಕಿ ನೆನೆಸುವ ಸಮಯ
ಅಕ್ಕಿಯನ್ನು ತೊಳೆಯುವಾಗ ಹೆಚ್ಚು ಉಜ್ಜಬಾರದು. ಕೇವಲ 20 ರಿಂದ 30 ನಿಮಿಷ ಮಾತ್ರ ನೀರಿನಲ್ಲಿ ನೆನೆಸಿಡಬೇಕು. ಹೆಚ್ಚು ಹೊತ್ತು ನೆನೆಸಿದರೆ ದಮ್ ಕಟ್ಟುವಾಗ ಅಕ್ಕಿ ತುಂಡಾಗಿ ಮುದ್ದೆಯಾಗುವ ಸಾಧ್ಯತೆ ಇರುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.