ಮೈದಾ-ಸೋಡಾ ಬೇಡ್ವೇ ಬೇಡ, ದೀಪಾವಳಿಗೆ ಸಬ್ಬಕ್ಕಿಯಿಂದ ಮಾಡಿ ಗರಿಗರಿಯಾದ ಜ್ಯೂಸಿ ಜಿಲೇಬಿ.. 15 ನಿಮಿಷದಲ್ಲಿ ರೆಡಿಯಾಗುತ್ತೆ

Published : Oct 30, 2026, 11:25 AM IST
Sabudana jalebi recipe in Kannada

ಸಾರಾಂಶ

Sabudana jalebi recipe in Kannada: ಮೈದಾ ಮತ್ತು ಅಡುಗೆ ಸೋಡಾ ಬಳಸದೆ, ಕೇವಲ ಸಬ್ಬಕ್ಕಿ ಬಳಸಿ 15 ನಿಮಿಷದಲ್ಲಿ ಗರಿಗರಿಯಾದ ಮತ್ತು ಜ್ಯೂಸಿಯಾದ ಇನ್‌ಸ್ಟಂಟ್ ಜಿಲೇಬಿ ಮಾಡುವ ಸರಳ ವಿಧಾನ ಇಲ್ಲಿದೆ. ಹಬ್ಬ ಹಾಗೂ ಉಪವಾಸದ ದಿನಗಳಿಗೆ ಇದು ಬೆಸ್ಟ್ ಸ್ವೀಟ್.

ಸಾಮಾನ್ಯವಾಗಿ ಜಿಲೇಬಿ ಎಂದರೆ ಮೈದಾ ಹಿಟ್ಟು ಹಾಕಿ, ಹುದುಗು ಬರಿಸಿ ಮಾಡಬೇಕು. ಆದರೆ ಆರೋಗ್ಯಕ್ಕೆ ಹಾನಿಕಾರಕವಾದ ಮೈದಾ ಮತ್ತು ಅಡುಗೆ ಸೋಡಾ ಬಳಸದೆ, ಕೇವಲ ಮನೆಯಲ್ಲಿರುವ ಸಬ್ಬಕ್ಕಿ (ಸಾಬೂದಾನಿ) ಬಳಸಿ ಕ್ಷಣಾರ್ಧದಲ್ಲಿ ಅದ್ಭುತ ರುಚಿಯ, ಗರಿಗರಿಯಾದ ಹಾಗೂ ರಸಭರಿತವಾದ (ಜ್ಯೂಸಿ) ಜಿಲೇಬಿ ಮಾಡಬಹುದು. ಉಪವಾಸದ ದಿನಗಳಿಗೂ ಅಥವಾ ದಿಢೀರನೆ ಸಿಹಿ ತಿನ್ನಬೇಕು ಎನಿಸಿದಾಗ ಈ ರೆಸಿಪಿ ಹೇಳಿಮಾಡಿಸಿದ್ದು.

ಬೇಕಾಗುವ ಸಾಮಗ್ರಿಗಳು

ದಪ್ಪ ಸಬ್ಬಕ್ಕಿ (ಸಾಬೂದಾನಿ): 1 ಕಪ್
ಸಕ್ಕರೆ: 1 ಕಪ್
ನೀರು: 1 ಕಪ್ (ಪಾಕಕ್ಕೆ) + ಹಿಟ್ಟು ಕಲಸಲು ಅಗತ್ಯವಿರುವಷ್ಟು
ಏಲಕ್ಕಿ ಪುಡಿ: 1/2 ಚಮಚ
ತುಪ್ಪ: 1 ಚಮಚ
ಉಪ್ಪು: 1 ಚಿಟಿಕೆ
ಎಣ್ಣೆ: ಕರಿಯಲು
ಪಿಸ್ತಾ/ಬಾದಾಮಿ ಚೂರುಗಳು: ಗಾರ್ನಿಶ್ ಮಾಡಲು (ಆಪ್ಷನಲ್)

ಮಾಡುವ ವಿಧಾನ

ಸಕ್ಕರೆ ಪಾಕ ತಯಾರಿಸಿ
*ಒಂದು ಪಾತ್ರೆಗೆ 1 ಕಪ್ ಸಕ್ಕರೆ ಮತ್ತು 1 ಕಪ್ ನೀರು ಹಾಕಿ ಬಿಸಿ ಮಾಡಿ.
*ಸಕ್ಕರೆ ಸಂಪೂರ್ಣವಾಗಿ ಕರಗಿದ ನಂತರ ಏಲಕ್ಕಿ ಪುಡಿ ಸೇರಿಸಿ ಕುದಿಸಿ.
*ಜಾಮೂನು ಅಥವಾ ಜಿಲೇಬಿಗೆ ಮಾಡುವಂತೆ ಕೈಬೆರಳಿಗೆ ಅಂಟಂಟಾಗಿ (ಸ್ಟಿಕ್ಕಿ) ಬರುವ ಹದಕ್ಕೆ ಪಾಕ ತಯಾರಿಸಿ ಗ್ಯಾಸ್ ಆಫ್ ಮಾಡಿ ಪಕ್ಕಕ್ಕಿಡಿ (ಒಂದೆಳೆ ಪಾಕ ಬರುವುದು ಬೇಡ).

ಸಬ್ಬಕ್ಕಿ ಹಿಟ್ಟು ಸಿದ್ಧಪಡಿಸಿಕೊಳ್ಳಿ
*ಬಾಣಲೆಯಲ್ಲಿ 1 ಕಪ್ ಸಬ್ಬಕ್ಕಿಯನ್ನು ಹಾಕಿ, ಸಣ್ಣ ಉರಿಯಲ್ಲಿ (Low flame) 5 ನಿಮಿಷಗಳ ಕಾಲ ಚೆನ್ನಾಗಿ ಹುರಿಯಿರಿ.
*ಹುರಿದ ಸಬ್ಬಕ್ಕಿ ಸಂಪೂರ್ಣವಾಗಿ ತಣ್ಣಗಾದ ಮೇಲೆ ಮಿಕ್ಸಿ ಜಾರಿಗೆ ಹಾಕಿ ನುಣ್ಣಗೆ ಪುಡಿ ಮಾಡಿಕೊಳ್ಳಿ.
*ಈ ಪುಡಿಯನ್ನು ಜರಡಿಯಿಂದ (ಚಾಣಿಸಿ) ಸೋಸಿಕೊಳ್ಳಿ. ತರಿತರಿ ಭಾಗ ಉಳಿದರೆ ಮತ್ತೊಮ್ಮೆ ಮಿಕ್ಸಿಗೆ ಹಾಕಿ ಪುಡಿ ಮಾಡಿ.
*ಈಗ ಈ ನುಣ್ಣನೆಯ ಹಿಟ್ಟಿಗೆ ಒಂದು ಚಿಟಿಕೆ ಉಪ್ಪು ಮತ್ತು 1 ಚಮಚ ತುಪ್ಪ ಹಾಕಿ ಚೆನ್ನಾಗಿ ಬೆರೆಸಿ.

ಹಿಟ್ಟು ಕಲಸಿ (ಮುಖ್ಯ ಹಂತ)
*ಸಬ್ಬಕ್ಕಿ ಪುಡಿಗೆ ಒಮ್ಮೆಲೆ ಹೆಚ್ಚು ನೀರು ಹಾಕದೆ, ಸ್ವಲ್ಪ ಸ್ವಲ್ಪವೇ ನೀರು ಸೇರಿಸುತ್ತಾ ಗಂಟಿಲ್ಲದಂತೆ ನಯವಾಗಿ ಕಲಸಿಕೊಳ್ಳಿ. (ಸಬ್ಬಕ್ಕಿ ನೀರನ್ನು ಹೆಚ್ಚು ಹೀರಿಕೊಳ್ಳುವುದರಿಂದ ಹಿಟ್ಟು ಮೆತ್ತಗೆ, ಜಿಲೇಬಿ ಬಿಡುವ ಹದಕ್ಕೆ ಇರಬೇಕು).
*ಕಲಸಿದ ಹಿಟ್ಟನ್ನು ಹಾಲಿನ ಖಾಲಿ ಪ್ಯಾಕೆಟ್ ಅಥವಾ ಪೈಪಿಂಗ್ ಬ್ಯಾಗ್‌ನಲ್ಲಿ ತುಂಬಿ, ತುದಿಯಲ್ಲಿ ಸಣ್ಣದಾಗಿ ಕತ್ತರಿಸಿಕೊಳ್ಳಿ.

ಜಿಲೇಬಿ ಕರಿಯಿರಿ
*ಅಗಲವಾದ ಬಾಣಲೆಯಲ್ಲಿ ಎಣ್ಣೆ ಕಾಯಲು ಇಡಿ. ಉರಿಯನ್ನು ಹೈ ಫ್ಲೇಮ್‌ನಲ್ಲಿ (High flame) ಇಟ್ಟು, ಕಾದ ಎಣ್ಣೆಯಲ್ಲಿ ವೃತ್ತಾಕಾರವಾಗಿ ಜಿಲೇಬಿಗಳನ್ನು ಸುತ್ತಿ.
*ಜಿಲೇಬಿಗಳು ಎರಡೂ ಬದಿ ಗರಿಗರಿಯಾಗಿ ಬೆಂದ ನಂತರ (ಬಣ್ಣ ಬದಲಾಗದೆ ಬಿಳಿಯಾಗಿಯೇ ಕ್ರಿಸ್ಪಿ ಆಗುತ್ತವೆ) ಎಣ್ಣೆಯಿಂದ ತೆಗೆಯಿರಿ.
*ತಕ್ಷಣವೇ ಈ ಬಿಸಿ ಜಿಲೇಬಿಗಳನ್ನು ಉಗುರುಬೆಚ್ಚಗಿನ ಸಕ್ಕರೆ ಪಾಕದಲ್ಲಿ ಹಾಕಿ, 1-2 ನಿಮಿಷಗಳ ಕಾಲ ಬಿಟ್ಟು ತೆಗೆಯಿರಿ.
*ಮೇಲಿಂದ ಸಣ್ಣಗೆ ಹೆಚ್ಚಿದ ಪಿಸ್ತಾ ಚೂರುಗಳಿಂದ ಅಲಂಕರಿಸಿದರೆ, ಹೊರಗೆ ಗರಿಗರಿಯಾಗಿ ಒಳಗಡೆ ಜ್ಯೂಸಿಯಾಗಿರುವ ಇನ್‌ಸ್ಟಂಟ್ ಸಬ್ಬಕ್ಕಿ ಜಿಲೇಬಿ ಸವಿಯಲು ಸಿದ್ಧ!

ಪರ್ಫೆಕ್ಟ್ ಜಿಲೇಬಿಗಾಗಿ ಸೀಕ್ರೆಟ್ ಟಿಪ್ಸ್

ಕರಿಯುವಾಗ ಹೈ ಫ್ಲೇಮ್ ಇರಲಿ: ಸಬ್ಬಕ್ಕಿ ಜಿಲೇಬಿಯನ್ನು ಕಡಿಮೆ ಉರಿಯಲ್ಲಿ ಕರಿದರೆ ಅದು ಎಣ್ಣೆ ಹೀರಿಕೊಳ್ಳುತ್ತದೆ ಮತ್ತು ಮೆತ್ತಗಾಗುತ್ತದೆ. ಆದ್ದರಿಂದ ಎಣ್ಣೆ ಚೆನ್ನಾಗಿ ಕಾದಿರಬೇಕು ಹಾಗೂ ಹೈ ಫ್ಲೇಮ್‌ನಲ್ಲೇ ಕರಿಯಬೇಕು.

ಪಾಕದ ಹದ: ಸಕ್ಕರೆ ಪಾಕ ತುಂಬಾ ಗಟ್ಟಿಯಾದರೆ ಜಿಲೇಬಿ ಒಳಗೆ ಇಳಿಯುವುದಿಲ್ಲ, ತೀರಾ ನೀರಾದರೆ ಜಿಲೇಬಿ ಮೆತ್ತಗಾಗಿಬಿಡುತ್ತದೆ. ಜಾಮೂನ್ ಪಾಕದಂತೆ ಅಂಟಂಟಾಗಿದ್ದರೆ ಸಾಕು.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕೇಳ್ರಪ್ಪಾ… ಈ ಸ್ಟ್ರೀಟ್ ಫುಡ್ ಆರೋಗ್ಯಕ್ಕೆ ತುಂಬಾನೆ ಒಳ್ಳೆದಂತೆ! ವೈದ್ಯರೇ ಹೇಳಿದ್ದಾರೆ
'ನನಗೆ ಊಟಕ್ಕೂ ಹಣವಿರಲಿಲ್ಲ' ಎಂದ ಮಹಿಳೆ… ಗ್ರಾಹಕರು ತಿನ್ನದೇ ಬಿಟ್ಟಿದ್ದ ಆಹಾರ ಮನೆಗೆ ಒಯ್ದಿದ್ದಕ್ಕೆ ಕೆಲಸವೇ ಹೋಯ್ತು