
ಜೂನ್ 3, ರಾಷ್ಟ್ರೀಯ ಮೊಟ್ಟೆ ದಿನ (National Egg Day). ಮೊಟ್ಟೆಗಳು ಆಹಾರದ ಪ್ರಮುಖ ಭಾಗವಾಗಿದೆ. ಮೊಟ್ಟೆ ಸೇವನೆಯಿಂದ ಆರೋಗ್ಯಕ್ಕೆ (Health) ಹಲವು ಪ್ರಯೋಜನಗಳು ಲಭಿಸುತ್ತವೆ. ಯುನೈಟೆಡ್ ಸ್ಟೇಟ್ಸ್ ಪ್ರತಿ ವರ್ಷ ಜೂನ್ 3ರಂದು ರಾಷ್ಟ್ರೀಯ ಮೊಟ್ಟೆ ದಿನವನ್ನು ಆಚರಿಸುತ್ತದೆ. ಈ ದಿನವು ಮೊಟ್ಟೆಗಳ ಪ್ರಾಮುಖ್ಯತೆಯನ್ನು ಸೂಚಿಸುತ್ತದೆ. ಉತ್ತಮ ಆರೋಗ್ಯಕ್ಕಾಗಿ ಪ್ರತಿ ದಿನ ಮೊಟ್ಟೆಗಳನ್ನು ಸೇವಿಸಿ ಅಂತಾರೆ. ಮೊಟ್ಟೆಗಳಲ್ಲಿ ಪ್ರೋಟೀನ್ (Protein) ಬಹಳ ಉತ್ತಮ ಪ್ರಮಾಣದಲ್ಲಿ ಕಂಡುಬರುತ್ತದೆ. ಇದು ಆರೋಗ್ಯಕ್ಕೆ ಅಗತ್ಯವಾದಂತಹ ಅನೇಕ ಜೀವಸತ್ವಗಳು ಮತ್ತು ಖನಿಜಗಳನ್ನು ಹೊಂದಿದೆ ಎಂದು ಹೇಳುತ್ತಾರೆ. ಇವತ್ತು ರಾಷ್ಟ್ರೀಯ ಮೊಟ್ಟೆ ದಿನ ಈ ಸಂದರ್ಭದಲ್ಲಿ ಮೊಟ್ಟೆ ದಿನದ ಇತಿಹಾಸ, ಮಹತ್ವದ ಬಗ್ಗೆ ಒಂದಿಷ್ಟು ಮಾಹಿತಿ ತಿಳಿದುಕೊಳ್ಳೋಣ.
ರಾಷ್ಟ್ರೀಯ ಮೊಟ್ಟೆ ದಿನದ ಇತಿಹಾಸ
ಒಂದು ಸಿದ್ಧಾಂತದ ಪ್ರಕಾರ, ಕೋಳಿ ಉದ್ಯಮದ ಉದ್ಯಮಿಗಳ ಗುಂಪು, ಈ ಆರೋಗ್ಯಕರ ಮತ್ತು ಆರ್ಥಿಕ ಆಹಾರದ ಪ್ರಯೋಜನಗಳನ್ನು ಜಾಹೀರಾತು ಮಾಡಲು, ಮೊಟ್ಟೆಗಳಿಗೆ ಒಂದು ದಿನವನ್ನು ಮೀಸಲಿಡಲು ನಿರ್ಧರಿಸಿತು. ನವಶಿಲಾಯುಗದ ಪುರಾತತ್ತ್ವ ಶಾಸ್ತ್ರದ ಪುರಾವೆಗಳಲ್ಲಿ ಮೊಟ್ಟೆಗಳ ಸೇವನೆಯು ಒಂದು ಸ್ಥಾನವನ್ನು ಕಂಡುಕೊಂಡಿದೆ. ಕಾಲಾನಂತರದಲ್ಲಿ, ಜನರು ತಮ್ಮ ಮನೆಯಲ್ಲೇ ಕೋಳಿಗಳನ್ನು ಸಾಕಲು ಆರಂಭಿಸಿದ ನಂತರ ಮೊಟ್ಟೆಗಳ ಬಳಕೆ ಹೆಚ್ಚಾಯಿತು. ಕ್ರಮೇಣ, ಇದು ಪೂರ್ಣ ಪ್ರಮಾಣದ ಉದ್ಯಮವಾಗಿ ಬೆಳೆಯಿತು.
ಮೊಟ್ಟೆ ಮಾತ್ರವಲ್ಲ, ಅದರ ಸಿಪ್ಪೆಗಳಲ್ಲಡಗಿದೆ ಆರೋಗ್ಯ…. ಕೂದಲಿಗೆ ಬೆಸ್ಟ್
ರಾಷ್ಟ್ರೀಯ ಮೊಟ್ಟೆ ದಿನದ ಮಹತ್ವ
ಮೊಟ್ಟೆಯನ್ನು ಸಾಮಾನ್ಯವಾಗಿ ಅಂಡರ್‌ರೇಟ್ ಮಾಡಲಾದ ಆಹಾರವೆಂದು ಹೇಳಲಾಗುತ್ತದೆ. ಏಕೆಂದರೆ ಅನೇಕ ಜನರು ಅದರೊಂದಿಗೆ ಅಂಟಿಕೊಂಡಿರುವ ಅಸಂಖ್ಯಾತ ಪ್ರಯೋಜನಗಳನ್ನು ಅರ್ಥಮಾಡಿಕೊಳ್ಳುವುದಿಲ್ಲ. ಒಂದು ಮೊಟ್ಟೆಯು ಸರಿಸುಮಾರು 7 ಗ್ರಾಂ ಉತ್ತಮ ಗುಣಮಟ್ಟದ ಪ್ರೋಟೀನ್, 5 ಗ್ರಾಂ ಉತ್ತಮ ಕೊಬ್ಬುಗಳು ಮತ್ತು ವಿಟಮಿನ್‌ಗಳು, ಖನಿಜಗಳು ಮತ್ತು ಕಬ್ಬಿಣದಂತಹ ಅನೇಕ ಇತರ ಸೂಕ್ಷ್ಮ ಪೋಷಕಾಂಶಗಳನ್ನು ಹೊಂದಿದೆ ಎಂದು ನಂಬಲಾಗಿದೆ.
ಇದು ಮೊಟ್ಟೆಗಳನ್ನು ಶಕ್ತಿ ಮತ್ತು ಪೋಷಕಾಂಶಗಳ ಸಂಗ್ರಹವನ್ನಾಗಿ ಮಾಡುತ್ತದೆ. ಹಾಗಾದ್ರೆ ಮೊಟ್ಟೆ ಸೇವನೆಯಿಂದ ಆರೋಗ್ಯಕ್ಕೆ ಸಿಗೋ ಪ್ರಯೋಜನಗಳೇನು ಎಂಬುದನ್ನು ತಿಳಿದುಕೊಳ್ಳೋಣ.
ಮೊಟ್ಟೆಯಿಂದ ಆರೋಗ್ಯಕ್ಕೆ ಸಿಗೋ ಪ್ರಯೋಜನಗಳು
ಹೃದಯದ ಆರೋಗ್ಯಕ್ಕೆ ಉತ್ತಮವಾಗಿದೆ: ಮೊಟ್ಟೆಗಳು ಹೃದಯದ (Heart) ಆರೋಗ್ಯವನ್ನು ಉತ್ತೇಜಿಸುವ ಹಲವಾರು ಪೋಷಕಾಂಶಗಳನ್ನು ಹೊಂದಿರುತ್ತವೆ, ಉದಾಹರಣೆಗೆ ಬೀಟೈನ್ ಮತ್ತು ಕೋಲೀನ್. ಇತ್ತೀಚಿನ ಅಧ್ಯಯನದ ಪ್ರಕಾರ ದಿನಕ್ಕೆ ಒಂದು ಮೊಟ್ಟೆಯನ್ನು ತಿನ್ನುವುದು ಹೃದಯ ಕಾಯಿಲೆ ಮತ್ತು ಪಾರ್ಶ್ವವಾಯು ಅಪಾಯವನ್ನು ಕಡಿಮೆ ಮಾಡುತ್ತದೆ.
ಮೆದುಳಿನ ಕಾರ್ಯಕ್ಕೆ ಅತ್ಯುತ್ತಮ : ಮೊಟ್ಟೆಗಳು ಕೋಲೀನ್‌ಗೆ ಉತ್ತಮ ಆಹಾರ ಮೂಲವಾಗಿದೆ. ಈ ಪೋಷಕಾಂಶವು ಜೀವಕೋಶ ಪೊರೆಗಳ ರಚನೆಗೆ ಮತ್ತು ಮೆಮೊರಿ ಸೇರಿದಂತೆ ಮೆದುಳಿನ (Brain) ಕಾರ್ಯಕ್ಕೆ ಅವಶ್ಯಕವಾಗಿದೆ. ಗರ್ಭಾವಸ್ಥೆಯಲ್ಲಿ ಮತ್ತು ಹಾಲುಣಿಸುವ ಸಮಯದಲ್ಲಿ ಇದು ವಿಶೇಷವಾಗಿ ಮುಖ್ಯವಾಗಿದೆ.
ಬ್ರೇಕ್‌ಫಾಸ್ಟ್‌ಗೆ ಯಾವಾಗ್ಲೂ ಮೊಟ್ಟೆ ತಿನ್ನೋದು ಆರೋಗ್ಯಕ್ಕೆ ಒಳ್ಳೇದಾ ?
ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು: ಉತ್ತಮ ಕಣ್ಣಿನ (Eyes) ಆರೋಗ್ಯಕ್ಕಾಗಿ ಮೊಟ್ಟೆಗಳು ನಮ್ಮ ಆಹಾರದ ಪ್ರಮುಖ ಭಾಗವಾಗಿದೆ. ಹಳದಿ ಲೋಳೆಯು ದೊಡ್ಡ ಪ್ರಮಾಣದ ಕ್ಯಾರೋಟಿನ್ ಅನ್ನು ಹೊಂದಿರುತ್ತದೆ, ವಿಶೇಷವಾಗಿ ಲುಟೀನ್ ಮತ್ತು ಜಿಯಾಕ್ಸಾಂಥಿನ್, ಇದು ಮ್ಯಾಕ್ಯುಲರ್ ಡಿಜೆನರೇಶನ್ ಮತ್ತು ಕಣ್ಣಿನ ಪೊರೆಗಳನ್ನು ತಡೆಗಟ್ಟುವಲ್ಲಿ ಮುಖ್ಯವಾಗಿದೆ. ಉತ್ತಮ ದೃಷ್ಟಿಗೆ ಮೊಟ್ಟೆಗಳು ವಿಟಮಿನ್ ಎ ಯ ಪ್ರಮುಖ ಮೂಲವಾಗಿದೆ. ಮೊಟ್ಟೆಗಳಲ್ಲಿನ ಆಂಟಿಆಕ್ಸಿಡೆಂಟ್‌ಗಳ ಹೆಚ್ಚಿನ ಅಂಶವು ಕಣ್ಣಿನ ರಕ್ಷಣೆಯನ್ನು ಉತ್ತೇಜಿಸುತ್ತದೆ
ತೂಕವನ್ನು ಕಡಿಮೆ ಮಾಡಲು ನೆರವಾಗುತ್ತದೆ: ಮೊಟ್ಟೆಗಳು ಹೆಚ್ಚಿನ ಪ್ರೋಟೀನ್‌ನ ಅಪರೂಪದ ಮತ್ತು ಅತ್ಯುತ್ತಮ ಮೂಲವಾಗಿದೆ. ಪ್ರೋಟೀನ್ ಜೀರ್ಣಿಸಿಕೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಆದ್ದರಿಂದ ನಿಮಗೆ ಹಸಿವಾಗುವುದಿಲ್ಲ. ಕೊಬ್ಬು-ತಡೆಗಟ್ಟುವ ಜೀವಸತ್ವಗಳು ಮತ್ತು ಪ್ರೋಟೀನ್ಗಳ ಉಪಸ್ಥಿತಿಯು ತೂಕ (Weight)ವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ವಿಟಮಿನ್ ಡಿ ಸಮೃದ್ಧವಾಗಿದೆ: ಮೊಟ್ಟೆಯಲ್ಲಿ ವಿಟಮಿನ್ (Vitamin) ಡಿ ಸಮೃದ್ಧವಾಗಿದೆ. ಇದರ ಜೊತೆಗೆ ರಂಜಕದ ಉಪಸ್ಥಿತಿಯು ಬಲವಾದ ಮೂಳೆಗಳು ಮತ್ತು ಹಲ್ಲುಗಳ ರಚನೆಗೆ ಸಹಾಯ ಮಾಡುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.