Ramanavami 2023: ರಾಮನವಮಿಗೆ ಬೆಲ್ಲದ ಪಾನಕ, ಕೋಸಂಬರಿ ಮಾಡಿ, ರೆಸಿಪಿ ಇಲ್ಲಿದೆ

By Vinutha Perla  |  First Published Mar 28, 2023, 3:20 PM IST

ರಾಮನವಮಿ ಪ್ರಯುಕ್ತ ರಾಜ್ಯದ ಶ್ರೀ ರಾಮ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯುತ್ತವೆ. ಯುವ ಘಟಕಗಳಿಂದ ಎಲ್ಲೆಡೆ ಶೋಭಾಯಾತ್ರೆ ಕೈಗೊಳ್ಳಲಾಗುತ್ತೆ. ಭಕ್ತರು ಸಾರ್ವಜನಿಕರಿಗೆ ಪಾನಕ, ಕೋಸಂಬರಿ, ನೀರು ಮಜ್ಜಿಗೆಯನ್ನು ವಿತರಿಸುತ್ತಾರೆ. ಈ ರೆಸಿಪಿಗಳನ್ನು ಮಾಡೋದು ಹೇಗೆ? 


ಹಿಂದೂ ವರ್ಷದ ಮೊದಲ ತಿಂಗಳಾದ ಏಪ್ರಿಲ್‌ನಲ್ಲಿ ಬಹಳಷ್ಟು ಪ್ರಮುಖ ಹಬ್ಬ ಹರಿದಿನಗಳಿವೆ. ಈಗಾಗಲೇ ಯುಗಾದಿಯಿಂದ ಆರಂಭವಾಗಿರುವ ಹಬ್ಬದ ಸಂಭ್ರಮ ಸರಣಿಯಲ್ಲಿ ಮುಂದುವರಿಯಲಿವೆ. ಇನ್ನೆರಡೇ ದಿನದಲ್ಲಿ ರಾಮನವಮಿ ಬರಲಿದೆ. ರಾಮನವಮಿ ಪ್ರಯುಕ್ತ ರಾಜ್ಯದ ಶ್ರೀ ರಾಮ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯುತ್ತವೆ. ಯುವ ಘಟಕಗಳಿಂದ ಎಲ್ಲೆಡೆ ಶೋಭಾಯಾತ್ರೆ ಕೈಗೊಳ್ಳಲಾಗುತ್ತೆ. ಭಕ್ತರು ಸಾರ್ವಜನಿಕರಿಗೆ ಪಾನಕ, ಕೋಸಂಬರಿ, ನೀರು ಮಜ್ಜಿಗೆಯನ್ನು ವಿತರಿಸುತ್ತಾರೆ. ಈ ರೆಸಿಪಿಗಳನ್ನು ಮಾಡೋದು ಹೇಗೆ? ಇಲ್ಲಿದೆ ಮಾಹಿತಿ.

ನೀರು ಮಜ್ಜಿಗೆ

Tap to resize

Latest Videos

ಬೇಕಾಗುವ ಪದಾರ್ಥಗಳು:
ಮೊಸರು- ಕಾಲು ಲೀಟರ್
ಹಸಿಮೆಣಸಿನ ಕಾಯಿ- 2ರಿಂದ 3
ಸ್ವಲ್ಪ ಶುಂಠಿ
ಸ್ವಲ್ಪ ಕರಿಬೇವು
ಸ್ವಲ್ಪ ಕೊತ್ತಂಬರಿ ಸೊಪ್ಪು
ಇಂಗು- ಚಿಟಿಕೆಯಷ್ಟು

ಮಾಡುವ ವಿಧಾನ: ಮೊದಲಿಗೆ ಮಿಕ್ಸಿ ಜಾರ್‌ಗೆ ಮೊಸರು ಹಾಗೂ ನೀರು ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ. ಇದಕ್ಕೆ ಅಗತ್ಯವಿದ್ದಷ್ಟು ನೀರು ಹಾಕಿ ಮಿಶ್ರಣ ಮಾಡಿ. ನಂತರ ಹಸಿಮೆಣಸಿನಕಾಯಿ, ಶುಂಠಿ, ಕರಿಬೇವು ಹಾಗೂ ಇಂಗು ಹಾಕಿ ನುಣ್ಣಗೆ ಮಾಡಿಕೊಳ್ಳಿ. ನಂತರ ಮಿಶ್ರಣವನ್ನು ಮಜ್ಜಿಗೆಗೆ ಹಾಕಿ ಮಿಶ್ರಣ ಮಾಡಿ, ಅಗತ್ಯಕ್ಕನುಗುಣವಾಗಿ ಉಪ್ಪು ಹಾಕಿ ಮಿಶ್ರಣ ಮಾಡಿ. ನಂತರ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿ ಮಿಶ್ರಣ ಮಾಡಿದರೆ ನೀರು ಮಜ್ಜಿಗೆ ಸವಿಯಲು ಸಿದ್ಧವಾಗಿದೆ.

Happy Ram Navami 2022: ರಾಮನವಮಿ ಶುಭಾಶಯಗಳನ್ನು ಹೀಗೆ ಹೇಳಿ..

ಬೆಲ್ಲದ ಪಾನಕ

ಬೇಕಾಗುವ ಪದಾರ್ಥಗಳು:
ಬೆಲ್ಲ- 2 ಬಟ್ಟಲು
ಸಕ್ಕರೆ- ಒಂದು ಚಮಚ
ಏಲಕ್ಕಿ-3-4
ಕಾಳು ಮೆಣಸು-5-6
ಉಪ್ಪು- ಚಿಟಿಕೆಯಷ್ಟು
ಜೀರಿಗೆ ಪುಡಿ- ಅರ್ಧ ಚಮಚ
ನಿಂಬೆಹಣ್ಣು- ಒಂದು

ಮಾಡುವ ವಿಧಾನ: ನೀರಿನಲ್ಲಿ ಬೆಲ್ಲವನ್ನು ಸೇರಿಸಿ ಚೆನ್ನಾಗಿ ಕರಗಲು ಬಿಡಿ. ನಂತರ ಏಲಕ್ಕಿ, ಕಾಳು ಮೆಣಸು, ಸಕ್ಕರೆ ಹಾಕಿ ಚೆನ್ನಾಗಿ ಪುಡಿ ಮಾಡಿಕೊಳ್ಳಿ. ಈ ಪುಡಿಯನ್ನು ಬೆಲ್ಲದ ನೀರಿಗೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಉಪ್ಪು, ಜೀರಿಗೆ ಪುಡಿ ಹಾಗೂ ನಿಂಬೆಹಣ್ಣಿನ ರಸವನ್ನು ಹಾಕಿ ಮಿಶ್ರಣ ಮಾಡಿದರೆ ಬೆಲ್ಲದ ಪಾನಕ ಸವಿಯಲು ಸಿದ್ಧ.

Ramnavami 2022: ಯಾವಾಗ? ಆಚರಣೆಯ ವಿಧಿವಿಧಾನಗಳೇನು?

ಕೋಸಂಬರಿ

ಬೇಕಾಗುವ ಪದಾರ್ಥಗಳು:
ಹೆಸರುಬೇಳೆ 1/2 ಕಪ್
ಕ್ಯಾರೆಟ್ ತುರಿ 2ಚಮಚ
ಸೌತೆಕಾಯಿ 1
ಹಸಿಮೆಣಸಿನಕಾಯಿ
ಕೊತ್ತಂಬರಿ ಸೊಪ್ಪು ಸ್ವಲ್ಪ
ಕರಿಬೇವು ಸ್ವಲ್ಪ
ಕಾಯಿತುರಿ 1ಚಮಚ
ಉಪ್ಪು ರುಚಿಗೆ ತಕ್ಕಷ್ಟು

ಮಾಡುವ ವಿಧಾನ: ಹೆಸರುಬೇಳೆಯನ್ನು ತೊಳೆದು 1 ಗಂಟೆಗಳ ಕಾಲ ನೆನಸಿಡಿ. ಇದಕ್ಕೆ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು, ಹಸಿಮೆಣಸಿನಕಾಯಿ, ಸೌತೆಕಾಯಿ ಮತ್ತು ಕರಿಬೇವನ್ನು ಹಾಕಿಕೊಳ್ಳಿ. ನಂತರ ಇದಕ್ಕೆ ಒಂದು ಪಾತ್ರೆಯಲ್ಲಿ ನೆನಸಿದ ಹೆಸರುಬೇಳೆ ಹೆಚ್ಚಿದ ಕೊತ್ತಂಬರಿ ಸೊಪ್ಪು, ಕರಿಬೇವು, ಹಸಿಮೆಣಸಿನಕಾಯಿ, ಸೌತೆಕಾಯಿ, ಉಪ್ಪು, ಕ್ಯಾರೆಟ್ ತುರಿ, ತೆಂಗಿನ ತುರಿ ಎಲ್ಲಾ ಸೇರಿಸಿ ಮಿಕ್ಸ್ ಮಾಡಿದರೆ ಕೋಸಂಬರಿ ತಿನ್ನಲು ರೆಡಿ.

ಯುಗಾದಿಯಿಂದ ಹನುಮ ಜಯಂತಿವರೆಗೆ- Aprilನ ಹಬ್ಬ ಹರಿದಿನಗಳಿವು..

ಕರ್ಬೂಜ ಪಾನಕ

ಬೇಕಾಗುವ ಸಾಮಾಗ್ರಿಗಳು
ಅರ್ಧ ಕರ್ಬೂಜ
ಬೆಲ್ಲ- 2 ಕಪ್
ಏಲಕ್ಕಿ-3-4
ಕಾಳು ಮೆಣಸು-5-6
ಸಕ್ಕರೆ- ಒಂದು ಚಮಚ
ಉಪ್ಪು- ಚಿಟಿಕೆಯಷ್ಟು
ಜೀರಿಗೆ ಪುಡಿ- ಅರ್ಧ ಚಮಚ

ಮಾಡುವ ವಿಧಾನ: ಕರ್ಬೂಜ ಹಣ್ಣನ್ನು ತೆಗೆದುಕೊಡು ಸಿಪ್ಪೆ ತೆಗೆದು ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ನಂತರ ಒಂದು ಪಾತ್ರೆಯನ್ನು ತೆಗೆದುಕೊಳ್ಳಿ, ಅದಕ್ಕೆ ನೀರು ಹಾಕಿ, ಬೆಲ್ಲವನ್ನು ಸೇರಿಸಿ ಕರಗಿಸಿ. ಬೆಲ್ಲ ಕರಗಿದ ನಂತರ ಏಲಕ್ಕಿ, ಕಾಳು ಮೆಣಸು, ಸಕ್ಕರೆ ಹಾಕಿ ಚೆನ್ನಾಗಿ ಪುಡಿ ಮಾಡಿ, ಈ ಪುಡಿಯನ್ನು ನೀರಿಗೆ ಹಾಕಿ ಮಿಶ್ರಣ ಮಾಡಿ. ಈಗ ಅದಕ್ಕೆ ಕರ್ಬೂಜ ಹಣ್ಣಿನ ಪೇಸ್ಟ್​ ಹಾಕಿ ಮಿಶ್ರಣ ಮಾಡಿದರೆ, ರುಚಿಯಾದ ಕರ್ಬೂಜ ಪಾನಕ ರೆಡಿ.

click me!