ಮಾಲ್ಪುವಾ (Malpua) ಅಥವಾ ಮಾಲ್ಪುರಿ ಕರ್ನಾಟಕದ ಕರಾವಳಿಯ ಒಂದು ಸಾಂಪ್ರದಾಯಿಕ ಸಿಹಿ ತಿಂಡಿಗಳಲ್ಲಿ ಒಂದು. ಈ ಯುಗಾದಿಗೆ ನೀವು ಇದನ್ನು ಸುಲಭವಾಗಿ ಬ್ರೆಡ್ ಹಾಗೂ ಹಾಲಿನಿಂದ ಮನೆಯಲ್ಲೇ ತಯಾರಿಸಿ.
ಮಾಲ್ಪುವಾ (Malpua) ಅಥವಾ ಮಾಲ್ಪುರಿ ಕರ್ನಾಟಕದ ಕರಾವಳಿಯ ಒಂದು ಸಾಂಪ್ರದಾಯಿಕ ಸಿಹಿ ತಿಂಡಿಗಳಲ್ಲಿ ಒಂದು. ಸಾಮಾನ್ಯವಾಗಿ ಇದನ್ನು ಹಿಟ್ಟು, ಹಾಲು, ಮತ್ತು ತುಪ್ಪದಿಂದ ತಯಾರಿಸುತ್ತಾರೆ. ಹೀಗೆ ತಯಾರಿಸುವಾಗ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಆದರೆ, ಬ್ರೆಡ್ ಮತ್ತು ಹಾಲಿನಿಂದ 'ಇನ್ಸ್ಟಂಟ್ ಆಗಿ ಮಾಲ್ಪುರ'" ಮಾಡುವುದು ಇನ್ನೂ ಸುಲಭ ಮತ್ತು ರುಚಿಕರವಾಗಿರುತ್ತದೆ. ಬೇಗನೆ ಸಿಹಿ ತಯಾರಿಸಲು ಇಷ್ಟಪಡುವವರು ಇದನ್ನು ಮಾಡಬಹುದು. ಈ ಯುಗಾದಿಗೆ ನೀವು ಏನಾದರೂ ಸಿಹಿ ತಿನಿಸು ಮಾಡಬೇಕು ಎಂದು ಬಯಸಿದರೆ ಇದನ್ನು ಸುಲಭವಾಗಿ ತಯಾರಿಸಬಹುದು.
ಮಾಲ್ಪುರಿಯ ವಿಶೇಷತೆಗಳು :
ಕೇವಲ 10-15 ನಿಮಿಷಗಳಲ್ಲಿ ಮಾಡಬಹುದು.
ಸಾಂಪ್ರದಾಯಿಕ ಮಾಲ್ಪುರಿಯಂತೆಯೇ ಮೃದುವಾಗಿಯೂ, ಸಿಹಿಯಾಗಿಯೂ ಇರುತ್ತದೆ.
ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಎಲ್ಲರಿಗೂ ಇಷ್ಟವಾಗುತ್ತದೆ.
ಬೇಕಾಗುವ ಸಾಮಗ್ರಿಗಳು ಬಹಳ ಕಡಿಮೆ ಇರುತ್ತದೆ.
ಮಾಲ್ಪುರಿ ತಯಾರಿಸಲು ಬೇಕಾಗುವ ಪದಾರ್ಥಗಳು : (3-4 ಜನರಿಗೆ ಆಗುವಷ್ಟು ತಯಾರಿಸುವುದಾದರೆ)
ಬ್ರೆಡ್ – 4 ತುಂಡುಗಳು (ಬಿಳಿ ಅಥವಾ ಕಂದು)
ಹಾಲು – 1 ಕಪ್ (ದಪ್ಪನೆಯ ಹಾಲು ಉತ್ತಮ)
ಹಿಟ್ಟು (ಮೈದಾ) – 2 ಟೀಸ್ಪೂನ್
ಸಕ್ಕರೆ – 2 ಟೀಸ್ಪೂನ್
ಏಲಕ್ಕಿ ಪುಡಿ – 1/4 ಟೀಸ್ಪೂನ್
ತುಪ್ಪ – ಬೇಕಾಗುವಷ್ಟು (ಕರಿಯಲು)
ಸಿರಪ್ (ಪಾಕ) ತಯಾರಿಸಲು
ಸಕ್ಕರೆ – 1/2 ಕಪ್
ನೀರು – 1/2 ಕಪ್
ಕುಂಕುಮ ಕೇಸರಿ (ಬೇಕೆಂದರೆ) – ಕೆಲವು ಎಳೆಗಳು
ಏಲಕ್ಕಿ ಪುಡಿ – ಸ್ವಲ್ಪ
ಇನ್ನಷ್ಟು ಓದಿ: ಯಗಾದಿಗೆ ಮಾಡಿ ಸಿಂಧಿ ಶೈಲಿಯ ಘೀಯರ್ ಜಿಲೇಬಿ: ರೆಸಿಪಿ ಇಲ್ಲಿದೆ
ಮಾಡುವ ವಿಧಾನ :
ಪಾಕ (ಸಕ್ಕರೆ ಸಿರಪ್) ತಯಾರಿಸಲು ಒಂದು ಪಾತ್ರೆಯಲ್ಲಿ 1/2 ಕಪ್ ಸಕ್ಕರೆ ಮತ್ತು 1/2 ಕಪ್ ನೀರು ಸೇರಿಸಿ ಮಧ್ಯಮ ಉರಿಯಲ್ಲಿ ಕುದಿಸಿ. ಸಕ್ಕರೆ ಸಂಪೂರ್ಣವಾಗಿ ಕರಗಿ, ಸಣ್ಣ ಪಾಕದ ಹದಕ್ಕೆ ಬಂದ ನಂತರ ಏಲಕ್ಕಿ ಪುಡಿ ಮತ್ತು ಕುಂಕುಮ ಕೇಸರಿ ಸೇರಿಸಿ. ಇದನ್ನು ಗಟ್ಟಿಯಾಗಿಸುವ ಅವಶ್ಯಕತೆ ಇಲ್ಲ, ಸ್ವಲ್ಪ ಪಾಕ ಸಿಕ್ಕರೆ ಸಾಕು. ಪಾಕ ತಯಾರಾದ ನಂತರ, ಒಲೆ ಆರಿಸಿ, ಪಕ್ಕಕ್ಕೆ ಇಡಿ.
ಮಾಲ್ಪುರಿ ಹಿಟ್ಟು ತಯಾರಿಸಲು ಬ್ರೆಡ್ ತುಂಡುಗಳನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಮಿಕ್ಸಿಗೆ ಹಾಕಿ. ಅದರಲ್ಲಿ ಹಾಲು, ಮೈದಾ, ಸಕ್ಕರೆ, ಮತ್ತು ಏಲಕ್ಕಿ ಪುಡಿ ಸೇರಿಸಿ ಒಂದು ನುಣ್ಣಗಿನ ಹಿಟ್ಟಾಗಿ ರುಬ್ಬಿಕೊಳ್ಳಿ.
ಹಿಟ್ಟು ತುಂಬಾ ತೆಳುವಾಗಿರಬಾರದು. ದೋಸೆ ಹಿಟ್ಟಿನ ತರಹ ದಪ್ಪ ಇರಬೇಕು. ಬೇಕೆಂದರೆ ಸ್ವಲ್ಪ ಹಾಲು ಸೇರಿಸಿ ಗಟ್ಟಿಯಾದ ಹದಕ್ಕೆ ಬದಲಾಯಿಸಿ.
ನಂತರ ಮಾಲ್ಪುವಾ ಕರಿಯಲು ಒಂದು ದಪ್ಪ ತಳದ ಪಾತ್ರೆಯಲ್ಲಿ ತುಪ್ಪ ಅಥವಾ ಎಣ್ಣೆ ಬಿಸಿ ಮಾಡಿ. ಎಣ್ಣೆ ಬಿಸಿಯಾದ ನಂತರ, ಒಂದು ಸೌಟು ಹಿಟ್ಟನ್ನು ಹಾಕಿ, ಒಂದು ಸುತ್ತಾಗಿ ಹರಡಲು ಬಿಡಿ (ಮೊಟ್ಟೆ ದೋಸೆ ತರಹ ದುಂಡಗೆ ಬರುತ್ತದೆ). ಮಧ್ಯಮ ಉರಿಯಲ್ಲಿ ಮಾಲ್ಪುವಾ ಚಿನ್ನದ ಬಣ್ಣ ಬರುವವರೆಗೆ ಫ್ರೈ ಮಾಡಿ. ಎರಡೂ ಕಡೆ ಚೆನ್ನಾಗಿ ಬೇಯಿಸಿ, ನಂತರ ಮೇಲೆತ್ತಿ ಎಣ್ಣೆಯನ್ನು ಬಸಿದು ತೆಗೆದು ಇಡಿ.
ಈ ಬಿಸಿ ಮಾಲ್ಪುವಾವನ್ನು ಉಗುರು ಬೆಚ್ಚಗಿನ ಸಕ್ಕರೆ ಪಾಕದಲ್ಲಿ 1-2 ನಿಮಿಷ ನೆನೆಸಿಡಿ. - ಹೆಚ್ಚು ಹೊತ್ತು ಇಟ್ಟರೆ, ಮಾಲ್ಪುವಾ ಹೆಚ್ಚಾಗಿ ಪಾಕವನ್ನು ಹೀರಿಕೊಳ್ಳುತ್ತದೆ. ಆದ್ದರಿಂದ, 1-2 ನಿಮಿಷಗಳು ಮಾತ್ರ ಸಾಕು.
ಪಾಕದಿಂದ ತೆಗೆದು ಒಂದು ತಟ್ಟೆಯಲ್ಲಿ ಇಡಿ. ಮೇಲೆ ಪುಡಿ ಮಾಡಿದ ಗೋಡಂಬಿ, ಬಾದಾಮಿ, ಮತ್ತು ತೆಂಗಿನ ತುರಿ ಹಾಕಿದರೆ ಇನ್ನೂ ರುಚಿಯಾಗಿರುತ್ತದೆ.
ಬಿಸಿಯಾಗಿ ಬಡಿಸಿದರೆ ಇನ್ನೂ ಚೆನ್ನಾಗಿರುತ್ತದೆ.
ಇನ್ನಷ್ಟು ಓದಿ: ಮನೆಯಲ್ಲಿಯೇ ಸುಲಭವಾಗಿ ತಯಾರಿಸಿ ರೆಸ್ಟೋರೆಂಟ್ ಶೈಲಿಯ ಆಲೂ-65; ಇಲ್ಲಿದೆ ಸರಳ ಪಾಕ ವಿಧಾನ!
ವಿಶೇಷ ಸೂಚನೆಗಳು :
- ಬಿಳಿ ಬ್ರೆಡ್ ಬಳಸಿದರೆ, ಮೃದುವಾದ ಮಾಲ್ಪುರಿ ಸಿಗುತ್ತದೆ. ಕಂದು ಬ್ರೆಡ್ ಬಳಸಿದರೆ, ಆರೋಗ್ಯಕರವಾಗಿರುತ್ತದೆ.
- ಗೋಡಂಬಿ ಮತ್ತು ಬಾದಾಮಿ ಪುಡಿ ಸೇರಿಸಿದರೆ, ಹೆಚ್ಚಿನ ರುಚಿ ಪಡೆಯಬಹುದು.
- ಹಾಲು ತುಂಬಾ ಗಟ್ಟಿಯಾಗಿದ್ದರೆ, ಮಾಲ್ಪುರಿ ಇನ್ನೂ ರುಚಿಯಾಗಿರುತ್ತದೆ.
- ಮಧ್ಯಮ ಉರಿಯಲ್ಲಿ ಕರಿಯಬೇಕು, ಹೆಚ್ಚು ಉರಿಯಲ್ಲಿ ಬೇಯಿಸಿದರೆ ಹೊರಗೆ ಮಾತ್ರ ಬೆಂದಂತೆ ಕಂಡು, ಒಳಗೆ ಮೃದುವಾಗಿ ಇರುವುದಿಲ್ಲ.
- ಸಕ್ಕರೆ ಸಿರಪ್‌ನಲ್ಲಿ ಹೆಚ್ಚು ಹೊತ್ತು ನೆನೆಸಲು ಬಿಡಬೇಡಿ, ಇಲ್ಲದಿದ್ದರೆ ಮಾಲ್ಪುವಾ ಸರಿಯಾದ ಹದಕ್ಕೆ ಬರುವುದಿಲ್ಲ.