ದೇಹಕ್ಕೆ ಶಕ್ತಿ ಬೇಕು. ಕೆಲಸ ಮಾಡುವ ಉತ್ಸಾಹ ಬೇಕು, ಹೊಟ್ಟೆ ತುಂಬಿದ ಅನುಭವವಾಗಬೇಕು ಎನ್ನುವವರು ಮನೆಯಲ್ಲೇ ಈ ಉಂಡೆ ಮಾಡ್ಕೊಳ್ಳಿ. ಇದನ್ನು ಮಾಡೋದು ಸುಲಭ. ರುಚಿಯಲ್ಲೂ ಎತ್ತಿದ ಕೈ.
ಮೂರು ಹೊತ್ತಿನ ಊಟದ ಹೊರತು, ಮಧ್ಯೆ ಮಧ್ಯೆ ನಮಗೆ ಹಸಿವಾಗೋದಿದೆ. ಬೆಳಿಗ್ಗೆ ಬೇಗ ಆಹಾರ ಸೇವನೆ ಮಾಡಿದ್ದಲ್ಲಿ ಗಂಟೆ 11 ಆಗ್ತಿದ್ದಂತೆ ಹೊಟ್ಟೆಯಲ್ಲಿ ಗಂಟೆ ಬಾರಿಸಲು ಶುರುವಾಗಿರುತ್ತೆ. ಮಧ್ಯಾಹ್ನ ಹಾಗೂ ಸಂಜೆ ಊಟದ ಮಧ್ಯೆ ಕೂಡ ಅನೇಕರಿಗೆ ಆಹಾರ ಬೇಕು. ಎಲ್ಲ ಸಮಯದಲ್ಲಿ ತಿಂಡಿ ತಯಾರಿಸಿ ಸೇವನೆ ಮಾಡಲು ಸಾಧ್ಯವಿಲ್ಲ. ಹಸಿವಾದಾಗ ಅದು ಬೇಕು, ಇದು ಬೇಕು ಎನ್ನಿಸೋದು ಸಹಜ. ಆ ಸಂದರ್ಭದಲ್ಲಿ ನಾವು ಹಣ್ಣು, ಜ್ಯೂಸ್, ಸಲಾಡ್ ತಿನ್ನೋ ಬದಲು ಚಿಪ್ಸ್, ಫಾಸ್ಟ್ ಫುಡ್ ತಿನ್ನೋಕೆ ಇಷ್ಟಪಡ್ತೇವೆ. ಮಾರುಕಟ್ಟೆಯಲ್ಲಿ ಅದು ಸುಲಭವಾಗಿ ಸಿಗೋ ಕಾರಣ ನಮಗೆ ಅದನ್ನು ತಯಾರಿಸುವ ಸಮಯ ಉಳಿಯುತ್ತೆ. ಆದ್ರೆ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡುವ ಈ ಚಿಪ್ಸ್, ರೆಡಿ ಟು ಈಟ್ ಫುಡ್ ಗಳು ಆರೋಗ್ಯವನ್ನು ಹಾಳು ಮಾಡುತ್ತವೆ. ಅದ್ರ ಬದಲು ನೀವು ಸ್ವಲ್ಪ ಸಮಯ ಹೊಂದಿಸಿಕೊಂಡು ಒಂದು ಬಾರಿ ಮಾಡಿಟ್ಟು ಅನೇಕ ದಿನ ತಿನ್ನಬಹುದಾದ ಲಡ್ಡು ಒಂದರ ಬಗ್ಗೆ ನಾವು ನಿಮಗೆ ಹೇಳ್ತೇವೆ. ಈ ಲಡ್ಡು ಆರೋಗ್ಯಕ್ಕೂ ಒಳ್ಳೆಯದು, ಮಾಡೋದು ಕೂಡ ಸುಲಭ.
ನಾವು ಇವತ್ತು ನಿಮಗೆ ಹೇಳ ಹೊರಟಿರುವ ಲಡ್ಡು ಡ್ರೈ ಫ್ರೂಟ್ಸ್ (Dry Fruits) ನಿಂದ ತಯಾರಿಸಿದ ಲಡ್ಡು. ಇದು ರುಚಿಕರವಾಗಿರುವುದು ಮಾತ್ರವಲ್ಲದೆ ಆರೋಗ್ಯ (Health) ಕ್ಕೂ ತುಂಬಾ ಪ್ರಯೋಜನಕಾರಿ. ವಾಲ್‌ನಟ್ಸ್, ಒಣದ್ರಾಕ್ಷಿ, ಗೋಡಂಬಿ, ಪಿಸ್ತಾ ಇತ್ಯಾದಿಗಳು ಅನೇಕ ಪೌಷ್ಟಿಕಾಂಶವನ್ನು ಹೊಂದಿರುತ್ತವೆ. ವಿಟಮಿನ್, ಖನಿಜ, ಆಂಟಿಆಕ್ಸಿಡೆಂಟ್ ಮತ್ತು ಫೈಬರ್ ನಿಂದ ಸಮೃದ್ಧವಾಗಿರುತ್ತವೆ.
ಪೋಷಕಾಂಶ ಸಿಗುತ್ತೆ ಅಂತ ಬೇಕಾಬಿಟ್ಟಿ ಬೇಳೆ, ಕಾಳು ತಿನ್ನೋರೇ ಇಲ್ ಓದಿ!
ಡ್ರೈ ಫ್ರೂಟ್ಸ್ ಲಡ್ಡು (Laddu) ಸೇವನೆ ಮಾಡೋದ್ರಿಂದ ಈ ಎಲ್ಲಾ ಪೋಷಕಾಂಶಗಳು ನಮ್ಮ ದೇಹಕ್ಕೆ ಸೇರಿ, ದೇಹಕ್ಕೆ ಶಕ್ತಿ ನೀಡುತ್ತವೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಡ್ರೈ ಫ್ರೂಟ್ಸ್ ನಿಂದ ತಯಾರಿಸಿದ ಲಡ್ಡು ತಯಾರಿಸೋದು ತುಂಬಾ ಸುಲಭ. ಹಾಗೆ ಇದು ಟೇಸ್ಟಿ ಕೂಡ. ಅದನ್ನು ನೀವು ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರಿಗೂ ನೀಡಬಹುದು.
ಡ್ರೈ ಫ್ರೂಟ್ಸ್ ಲಡ್ಡು ಮಾಡಲು ಬೇಕಾಗುವ ಸಾಮಾನು :
ಕರ್ಜೂರ (Dates) : 1 ಕಪ್
ಬಾದಾಮಿ (Almond) : ½ ಕಪ್
ಒಣದ್ರಾಕ್ಷಿ (Raisins) : ¼ ಕಪ್
ವಾಲ್ನಟ್ಸ್ (Wallnuts) : ½ ಕಪ್
ಅಂಜೂರ, ಪಿಸ್ತಾ (Pista) ಸೇರಿದಂತೆ ಮನೆಯಲ್ಲಿರುವ ಒಣ ಹಣ್ಣುಗಳು : ಅಗತ್ಯವಿರುವಷ್ಟು.
ತುಪ್ಪ (Ghee) : 1 ಚಮಚ
ಸಣ್ಣ ಏಲಕ್ಕಿ ಪುಡಿ : ½ ಚಮಚ
ಕತ್ತೆ ಹಾಲು ದುಬಾರಿ ಅಂತ ಗೊತ್ತು, ಆದರೆ ಇಲಿ ಹಾಲಿನ ಬೆಲೆ ಕೇಳಿದ್ರಾ?
ಡ್ರೈ ಫ್ರೂಟ್ಸ್ ಲಡ್ಡು ಮಾಡುವ ವಿಧಾನ : ಖರ್ಜೂರದ ಬೀಜ ತೆಗೆದು ಬೇರೆ ಮಾಡಿಕೊಳ್ಳಿ. ನಂತರ ಎಲ್ಲ ಡ್ರೈ ಫ್ರೂಟ್ಸ್ ಗಳನ್ನು ಸೇರಿಸಿ ಅದನ್ನು ರುಬ್ಬಿಕೊಳ್ಳಿ. ಡ್ರೈ ಫ್ರೂಟ್ಸ್ ಬಾಯಿಗೆ ಸಿಗಬೇಕೆಂದ್ರೆ ನೀವು ಅದನ್ನು ಕುಟ್ಟಿ ಕೂಡ ಪುಡಿ ಮಾಡಬಹುದು. ನುಣ್ಣಗೆ ಬೇಕೆಂದ್ರೆ ಮಿಕ್ಸಿ ಮಾಡಿ. ನಂತ್ರ ಒಂದು ಬಾಣೆಲೆಗೆ ತುಪ್ಪ ಹಾಕಿ. ತುಪ್ಪ ಬಿಸಿಯಾದ ನಂತ್ರ ಈ ಮಿಶ್ರಣವನ್ನು ಹಾಕಿ ಚೆನ್ನಾಗಿ ಹುರಿಯಿರಿ. ಅದ್ರ ಮೇಲೆ ಏಲಕ್ಕಿ ಪುಡಿ ಉದುರಿಸಿ, ಚೆನ್ನಾಗಿ ಮಿಕ್ಸ್ ಮಾಡಿ ಉಂಡೆ ತಯಾರಿಸಿ. ಈ ಲಡ್ಡುವನ್ನು ನೀವು ಬಿಗಿ ಮುಚ್ಚಳವಿರುವ ಡಬ್ಬದಲ್ಲಿ ಹಾಕಿಟ್ಟುಕೊಂಡು ತಿಂಗಳವರೆಗೆ ಬಳಸಬಹುದು.
ಡ್ರೈ ಫ್ರೂಟ್ಸ್ ಉಂಡೆಯಲ್ಲಿ ಪೌಷ್ಟಿಕಾಂಶ ಹೇರಳವಾಗಿದೆ. ನಿಮಗೆ ಹಸಿವಾಗಿದೆ, ಬಾಯಾಡಬೇಕೆನ್ನಿಸಿದಾಗ ಇದನ್ನು ಬಾಯಿಗೆ ಹಾಕಿಕೊಳ್ಳಿ. ಬಾದಾಮಿಯಂತಹ ಕೆಲವು ಡ್ರೈ ಫ್ರೂಟ್ಸ್ ನಲ್ಲಿ ಕ್ಯಾಲ್ಸಿಯಂ ಸಮೃದ್ಧವಾಗಿದೆ. ಇದು ಮೂಳೆಗಳಿಗೆ ಒಳ್ಳೆಯದು. ವಾಲ್‌ನಟ್ಸ್, ಬಾದಾಮಿಯಲ್ಲಿ ಆಂಟಿ-ಆಕ್ಸಿಡೆಂಟ್ ಇದ್ದು. ಜೀವಕೋಶಗಳ ಹಾನಿಯನ್ನು ತಡೆಯುತ್ತದೆ.