ಮುದ್ದೆ, ಕಾಲ್‌ಸೂಪ್‌, ನಾಟಿ ಕೋಳಿ ಸಾರು ಮತ್ತೆ ಕನ್ನಡಕ್ಕಾಗಿ ಅಮೆರಿಕದ ಡಲ್ಲಾಸ್‌ನಲ್ಲಿ ಒಟ್ಟಾದ್ರು ಕನ್ನಡಿಗರು!

By Santosh NaikFirst Published Oct 8, 2024, 7:04 PM IST
Highlights

ಅಮೆರಿಕದಲ್ಲಿ ನೆಲೆಸಿರುವ ಕನ್ನಡಿಗರು ತಮ್ಮ ಊರಿನ ಆಹಾರ ಮತ್ತು ಭಾಷೆಯ ಸೊಬಗನ್ನು ಮೆರೆದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬೆಂಗಳೂರು ಮೂಲದ ಕ್ರಿಶ್ ಗೌಡ ಅವರು ಹಂಚಿಕೊಂಡಿರುವ ಈ ವಿಡಿಯೋದಲ್ಲಿ ಕನ್ನಡಿಗರು ತಮ್ಮೂರಿನ ವಿವಿಧ ಖಾದ್ಯಗಳನ್ನು ತಯಾರಿಸಿ ಆನಂದಿಸುತ್ತಿರುವುದನ್ನು ಕಾಣಬಹುದು.

ಬೆಂಗಳೂರು (ಅ.8): ಕರ್ನಾಟಕ-ಕನ್ನಡಿಗರ ಅಸ್ಮಿತೆಯ ಬಗ್ಗೆ ಚರ್ಚೆ ನಡೆಯುತ್ತಿರುವ ಹೊತ್ತಿನಲ್ಲಿ ದೂರದ ಅಮೆರಿಕದಲ್ಲಿ ಕನ್ನಡದ ಕಂಪು ನೋಡೋಕೆ ಸಿಕ್ಕಿದೆ. ಹಾಗಂತ ಇದು ಯಾವುದೇ ಸಮ್ಮೇಳನವಲ್ಲ. ಕನ್ನಡಿಗರೇ ಕಲೆತು ತಮ್ಮೂರಿನ ಆಹಾರವನ್ನು ಆನಂದಿಸಿರುವ ವಿಡಿಯೋ ಸಖತ್‌ ವೈರಲ್‌ ಆಗಿದೆ. ನಾಲ್ಕು ದಿನಗಳ ಹಿಂದೆ ಬೆಂಗಳೂರು ಮೂಲದ ಕ್ರಿಶ್‌ ಗೌಡ ಎನ್ನುವ ಯುವತಿ ಇನ್ಸ್‌ಟಾಗ್ರಾಮ್‌ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಇದರಲ್ಲಿ ಬೆರೆತಿರುವ ಕನ್ನಡತನದ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ. ಅಮೆರಿಕದ ಟೆಕ್ಸಾಸ್‌ನ ಡಲ್ಲಾಸ್‌ನಲ್ಲಿ ವಾಸವಿರುವ ಕ್ರಿಶ್‌ ಗೌಡ ಅವರು ಹಂಚಿಕೊಂಡಿರುವ ಈ ವಿಡಿಯೋವನ್ನು ಇಲ್ಲಿಯವರೆಗೂ, 77 ಸಾವಿರ ಮಂದಿ ಲೈಕ್‌ ಮಾಡಿದ್ದು, ಒಂದೂವರೆ ಸಾವಿರಕ್ಕೂ ಅಧಿಕ ಕಾಮೆಂಟ್ಸ್‌ಗಳು ಬಂದಿವೆ. 'ನಾವು ಎಲ್ಲೇ ಇದ್ರು ನಮ್ಮ ಭಾಷೆ ! ನಮ್ಮ ಊಟ ಬಿಡಲ್ಲ !don’t miss last part' ಎಂದು ವಿಡಿಯೋವನ್ನು ಅವರು ಹಂಚಿಕೊಂಡಿದ್ದು, ಅಂದಾಜು 70 ಸಾವಿರಕ್ಕೂ ಅಧಿಕ ಮಂದಿ ಈ ವಿಡಿಯೋದಲ್ಲಿದ್ದಾರೆ. ಇದರಲ್ಲಿ ಮುಖ್ಯವಾಗಿ ಬೆಂಗಳೂರು ಹಾಗೂ ಬೆಂಗಳೂರು ಸುತ್ತಮುತ್ತಲಿನ ಜಿಲ್ಲೆಯ ಆಹಾರ ಹಾಗೂ ಭಾಷೆಯ ಸೊಬಗನ್ನು ನೋಡಬಹುದಾಗಿದೆ.

ಕಾಡು ಅಥವಾ ಪಾರ್ಕ್‌ನ ನಡುವೆ ಈ ವಿಡಿಯೋ ಮಾಡಲಾಗಿದೆ. 'ನಾವ್‌ ಅಮೆರಿಕದಲ್ಲಿದ್ರೂನೂ ನಮ್ಮ ಹಳ್ಳಿ ಭಾಷೆನಾ ಮರಿಯಾಕ್ಕಿಲ್ಲ..' ಎಂದು ವ್ಯಕ್ತಿಯೊಬ್ಬರು ಹೇಳುವ ವಿಡಿಯೋದೊಂದಿಗೆ ಇದು ಆರಂಭವಾಗಿದೆ. ಇದರ ಬೆನ್ನಲ್ಲೇ, 'ಮಹೇಶಾ ವಿಷ್ಯಾ ಗೊತ್ತಾಯ್ತೆನಲ..ಬಾಡ್‌ ಬೇಯಿಸ್ತಾವ್ರಂತೆ ಬಿರನೆ ಬರ್ಲಾ..' ಎನ್ನುವ ಮಂಡ್ಯ ಸೊಗಡಿನ ಭಾಷೆಯೊಂದಿಗೆ ಇದು ಮುಂದುವರಿದಿದೆ.

ಆ ಬಳಿಕ, ಕೆಲವು ಕನ್ನಡಿಗರು, 'ನಾವ್‌ ಮದ್ದೂರ್‌ನವರು, ಅಮೆರಿಕದಲ್ಲಿದ್ರೂ ನಮಗೆ ಕಾಲ್‌ಸೂಪ್‌ ಬೇಕೇ ಬೇಕು..' ಎಂದು ಕಾಲ್‌ಸೂಪ್‌ ಮಾಡಿರುವುದನ್ನು ತೋರಿಸಿದ್ದಾರೆ. ನಾವು ಹಾಸನದವರು ಅಮೆರಿಕದಲ್ಲಿದ್ರೂ ಕೋಳಿ ಸಾರ್‌ ಮಾಡೇ ಮಾಡ್ತೀವಿ.. ಎಂದು ಹಾಸನದ ಕನ್ನಡಿಗರು ಹೇಳಿದ್ದಾರೆ. ನಾವು ಕುಣಿಗಲ್‌ ಅವರು ಅಮೆರಿಕದಲ್ಲಿದ್ರೂ ಕೋಳಿ ಸಾರ್‌ಗೆ ನಮಗೆ ಮುದ್ದೇ ಬೇಕೇ ಬೇಕು ಎಂದು ಅಮೆರಿಕದ ನೆಲದಲ್ಲಿ ಮುದ್ದೆ ಬೇಯಿಸುತ್ತಿರುವ ಹಾಗೂ ಮುದ್ದೆ ಮಾಡುತ್ತಿರುವ ದೃಶ್ಯ ಇದರಲ್ಲಿದೆ.

ನಾವು ಬೆಂಗಳೂರಿನವರು ಅಮೆರಿಕದಲ್ಲಿದ್ರೂ ನಮಗೆ ದೊನ್ನೆ ಬಿರಿಯಾನಿ ಬೇಕೇ ಬೇಕು ಎಂದು ದೊಡ್ಡ ಪಾತ್ರೆಯಲ್ಲಿ ದೊನ್ನೆ ಬಿರಿಯಾನಿ ಮಾಡಿದ್ದನ್ನು ತೋರಿಸಿದ್ದಾರೆ. ನಾವು ಮಂಡ್ಯದವರು ಅಮೆರಿಕದಲ್ಲಿದ್ರೂ ಬಾಡೂಟ ತಿಂದೇ ತಿಂತೀವಿ ಎಂದು ಸಹಭೋಜನದ ಬಾಡೂಟ ಮಾಡುತ್ತಿರುವುದನ್ನು ವಿಡಿಯೋದಲ್ಲಿ ತೋರಿಸಲಾಗಿದೆ. ನಾವು ತುಮಕೂರವರು ಅಮೆರಿಕದಲ್ಲಿದ್ರೂ ಬೆಳಗ್ಗೆನೇ ನಮಗೆ ತಿಂಡಿಗೆ ಉಪ್ಪಿಟ್ಟು, ಕೇಸರಿಬಾತ್‌ ಬೇಕೇ ಬೇಕು ಎಂದಿದ್ದಾರೆ. ನಾವೆಲ್ಲಾ ಕರ್ನಾಟಕದವರು, ಕನ್ನಡಿಗರು, ನಾವೆಲ್ಲಾ ಒಂದೇ ಎಂದು ವಿಡಿಯೋ ಮುಗಿಸಿದ್ದಾರೆ.

Bengaluru: ಕಬ್ಬನ್‌ ಪಾರ್ಕ್‌ ರೀತಿಯಲ್ಲಿ ಬೆಂಗಳೂರಿನ ಈ ಏರಿಯಾದಲ್ಲಿ ತಲೆ ಎತ್ತಲಿದೆ 153 ಎಕರೆಯ ಪಾರ್ಕ್‌!

Latest Videos

ಈ ವಿಡಿಯೋಗೆ ಸಾಕಷ್ಟು ಕಾಮೆಂಟ್‌ಗಳು ಬಂದಿದ್ದು, 'ಅಭಿನಂದನೆಗಳು ನಮ್ಮ ಎಲ್ಲಾ ಕನ್ನಡಿಗರಿಗೂ, ಖುಷಿಯಾಯಿತು ನಿಮ್ಮೆಲ್ಲರ ಕನ್ನಡ ಪ್ರೇಮ ಕಂಡು... ನಾವು ಕನ್ನಡಿಗರು..' ಎಂದು ಬಿಗ್‌ ಬಾಸ್‌ ಸ್ಪರ್ಧಿ ಹಾಗೂ ಕನ್ನಡ ಪರ ಹೋರಾಟಗಾರ ರೂಪೇಶ್‌ ರಾಜಣ್ಣ ಕಾಮೆಂಟ್‌ ಮಾಡಿದ್ದಾರೆ. 'ಒಂದು ಸಂಪೂರ್ಣ ಕರ್ನಾಟಕ ಅಮೇರಿಕಾದಲ್ಲಿದೆ ಅನ್ನೋ ಭಾವನೆ ಬಂತು ಎಲ್ಲರಿಗೂ ಧನ್ಯವಾದಗಳು..' ಎಂದು ಮತ್ತೊಬ್ಬರು ಬರೆದಿದ್ದಾರೆ.
'ನೀವು ಅಮೆರಿಕದಲ್ಲಿದ್ದರೂ ನಮ್ಮ ಗ್ರಾಮೀಣದ ಸೊಡಗನ್ನು ಬಿಟ್ಟು ಕೊಡಲಿಲ್ಲವಲ್ಲ ಇದನ್ನು ನೋಡಿ ತುಂಬಾ ಸಂತೋಷವಾಯಿತು..' ಎಂದು ಮಧುಸೂಧನ್‌ ಎನ್ನುವವರು ವಿಡಿಯೋವನ್ನು ಮೆಚ್ಚಿದ್ದಾರೆ. 'ನಮ್ಮ ಭಾರತ ದೇಶದಲ್ಲಿ ಒಳ್ಳೆಯ ಗಾಳಿ ಇಲ್ವಾ ಒಳ್ಳೆಯ ಊಟ ಇಲ್ವಾ ಒಳ್ಳೆ ಜನ ಇಲ್ವಾ ಒಳ್ಳೆ ಕೆಲಸ ಇಲ್ವಾ, ಎಲ್ಲರೂ ಒಂದೇ ಒಂದು ಕಾರಣ ಹೇಳಿ ಯಾಕೆ ನಮ್ಮ ದೇಶವನ್ನು ಬಿಟ್ಟು ಬೇರೆ ದೇಶಕ್ಕೆ ಹೋಗುತ್ತೀರಾ ಇಲ್ಲಿ ಇದ್ದು ನೀವೇ ಕೆಲಸ ಮಾಡಿ ನೀವೇ ಕೆಲಸಗಾರರಿಗೆ ಕೆಲಸ ಕೊಡಬಹುದಲ್ಲವೇ ನನ್ನ ಒಂದು ಪ್ರಶ್ನೆ..' ಎಂದು ಈ ವಿಡಿಯೋಗೆ ಪ್ರಶ್ನೆ ಮಾಡಿದ್ದಾರೆ.

Ramanagara: ಪಾಲನಹಳ್ಳಿ ಮಠಕ್ಕೆ 3 ಸಾವಿರ ಎಕರೆ ಭೂಮಿ ದಾನ ಮಾಡಿ ಸನ್ಯಾಸತ್ವ ಸ್ವೀಕರಿಸಿದ ಗಣಿ ಉದ್ಯಮಿ!

 

click me!