
ಬೆಂಗಳೂರಿನಲ್ಲಿ ಬಾಯಿ ನೀರೂರಿಸುವಂಥ ತಿನಿಸು ಎಲ್ಲಿ ಸಿಗುತ್ತದೆ ಎಂದು ಯಾರಾದರೂ ಹೊರಗಿನವರು ಬಂದು ಕೇಳಿದಾಗ, ಬೆಂಗಳೂರಿಗರು ಮೊದಲು ಹೇಳುವ ಹೆಸರೇ- ವಿದ್ಯಾರ್ಥಿ ಭವನ (vidyrthi Bhavan). ರಾಜದಾನಿಯ ಐಕಾನಿಕ್ ಫುಡ್ ಜಾಯಿಂಟ್‌ಗಳಲ್ಲಿ ಒಂದಾದ ಈ ಜಾಗ ಇನ್ನೂ ಅದೇ ಹಳೆಯ ಬಿಲ್ಡಿಂಗ್‌ನಲ್ಲಿಯೇ, ಅದೇ ಆಂಬಿಯನ್ಸ್‌ನಲ್ಲಿಯೇ ಇದೆ. ಆದರೆ ಇನ್ಫಿ ನಾರಾಯಣಮೂರ್ತಿ ಕೂಡ ಬಂದಾಗ ಇಲ್ಲಿಯೇ ಹೋಗುತ್ತಾರೆ; ಬ್ರಿಟನ್ ಮಾಜಿ ಪ್ರಧಾನಿ ರಿಷಿ ಸುನಕ್ ಬಂದರೂ ಇಲ್ಲಿಯೇ ಹೋಗುತ್ತಾನೆ. ಇನ್ಯಾರೋ ಇಂಟರ್‌ನ್ಯಾಷನಲ್ ಉದ್ಯಮ ಜೈಂಟ್ ಕೂಡ ಇಲ್ಲಿಗೇ ಹೋಗುತ್ತಾರೆ. ಇಲ್ಲಿನ ರುಚಿರುಚಿಯಾದ ಮಸಾಲೆ ದೋಸೆ ಸವಿದು ಸೂಪರ್ ಎಂಬ ಮುದ್ರೆ ತೋರಿಸಿ ಹೋಗುತ್ತಾರೆ. ಎಷ್ಟೋ ದಶಕಗಳಿಂದ ಇಲ್ಲಿಗೆ ಬರುವವರು ಇದ್ದಾರೆ. ಹಲವು ತಲೆಮಾರುಗಳು ಇಲ್ಲಿನ ಸ್ವಾದ ಸವಿದಿವೆ. ಸರಿಯಾಗಿ ಹೇಳಬೇಕಾದರೆ ಎಂಟು ತಲೆಮಾರು. ಯಾಕೆಂದರೆ ಈ ಈಟರಿಗೆ 81 ವರ್ಷಗಳು ತುಂಬಿವೆ. ಮಾಸ್ತಿಯವರಿಂದ ಹಿಡಿದು ವೈಎನ್ಕೆವರೆಗೆ ಕನ್ನಡ ಸಾಹಿತ್ಯದ ಹಲವಾರು ಗಣ್ಯರು, ಸಾಂಸ್ಕೃತಿಕ- ರಾಜಕೀಯ ವಲಯದ ವಿಐಪಿಗಳು ಕೂಡ ಇಲ್ಲಿಗೆ ಭೇಟಿ ಕೊಟ್ಟಿದ್ದಾರೆ.
81 ವರ್ಷಗಳಿಂದ ಒಂದೇ ರುಚಿ ಕಾಪಾಡಿಕೊಂಡು ಬಂದ ವಿದ್ಯಾರ್ಥಿ ಭವನದ ಹಿಂದಿನ ಕಥೆ ಹೀಗಿದೆ. 1943ರಲ್ಲಿ, ಉಡುಪಿ ಕುಂದಾಪುರ ಮೂಲದ ವೆಂಕಟ್ರಮಣ ಉರಾಳ್ ಎಂಬವರಿಂದ ಇದು ಪ್ರಾರಂಭವಾಯಿತು. ನಂತರ ಅವರ ಸಹೋದರ ಪರಮೇಶ್ವರ ಉರಾಲ್ ಇದನ್ನು ಮುನ್ನಡೆಸಿದರು. ಆಗ ಇದು ಇಲ್ಲಿ ಸುತ್ತಮುತ್ತ ಇದ್ದ ನ್ಯಾಷನಲ್ ಹೈಸ್ಕೂಲ್ ಮತ್ತು ಆಚಾರ್ಯ ಪಾಠಶಾಲೆ ಮುಂತಾದ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳ ಬೇಡಿಕೆಗಳನ್ನು ಪೂರೈಸಲು ಸ್ಥಾಪಿಸಲಾಯಿತು. ವಿದ್ಯಾರ್ಥಿಗಳೇ ಹೆಚ್ಚು ಬರುತ್ತಿದ್ದುದರಿಂದ ವಿದ್ಯಾರ್ಥಿ ಭವನ ಎಂದಾಯಿತು. 1954ರಲ್ಲಿ ವಿದ್ಯಾರ್ಥಿ ಭವನವನ್ನು ರಾಮಕೃಷ್ಣ ಅಡಿಗ ವಹಿಸಿಕೊಂಡರು. ಕಳೆದ 68 ವರ್ಷಗಳಿಂದ, ಅಡಿಗ ಕುಟುಂಬವು ಈ ಐಕಾನಿಕ್ ರೆಸ್ಟೋರೆಂಟ್‌ನ ಪರಂಪರೆಯನ್ನು ಮುಂದುವರೆಸಿಕೊಂಡು ಬಂದಿದೆ. ಇದರ ಪಾಕವಿಧಾನಗಳು ಮತ್ತು ಆಹಾರದ ರುಚಿಯನ್ನು ಹಾಗೇ ಉಳಿಸಿಕೊಂಡಿದೆ. ಅವರ ಹೆಚ್ಚಿನ ಸಿಬ್ಬಂದಿ ತಮ್ಮ ಜೀವಮಾನದ ಅವಧಿಯನ್ನು ಇಲ್ಲೇ ಕಳೆದಿದ್ದಾರೆ.
ವಿಶೇಷ ಅಂದರೆ ರೆಸ್ಟೋರೆಂಟ್ ದಕ್ಷಿಣ ಭಾರತದ ಉಪಹಾರ ಪದಾರ್ಥಗಳ ಸೀಮಿತ ಮೆನುವನ್ನು ಹೊಂದಿದೆ. ಅದರ ಒಳಗಿನ ಆವರಣ ಮತ್ತು ಆಹಾರದ ರುಚಿಯನ್ನು ಅದರ ಮೂಲ ಸ್ಥಿತಿಗೆ ಸಾಧ್ಯವಾದಷ್ಟು ಹತ್ತಿರ ಇರಿಸಿಕೊಂಡಿದೆ. ವಿಶೇಷವಾಗಿ ಅದರ ಗರಿಗರಿಯಾದ ಮತ್ತು ಬೆಣ್ಣೆಯಂತಹ ಮಸಾಲಾ ದೋಸೆ. ಇದನ್ನು ಭವನದ ಸಿಗ್ನೇಚರ್ ಖಾದ್ಯವೆಂದು ಪರಿಗಣಿಸಲಾಗಿದೆ. ರಾಮಕೃಷ್ಣ ಅಡಿಗ ಅವರ ಮಗ ಅರುಣ್ ಅಡಿಗ ಇದೀಗ ಹೋಟೆಲನ್ನು ಮುನ್ನಡೆಸುತ್ತಿದ್ದಾರೆ. ಅವರು ಹೇಳುವ ಪ್ರಕಾರ ಮಸಾಲೆ ದೋಸೆಯ ರೆಸಿಪಿಯಲ್ಲಿ ಕೆಂಪು ಅಕ್ಕಿ, ಮೆಂತ್ಯ ಮತ್ತು ಉದ್ದಿನ ಬೇಳೆಯನ್ನು ವಿವಿಧ ಪ್ರಮಾಣದಲ್ಲಿ ಬಳಸುವುದು ಇದರ ರುಚಿಗೆ ಕಾರಣವಾಗಿದೆ.
ವಿದ್ಯಾರ್ಥಿ ಭವನದ ಶಕ್ತಿ ಎಂದರೆ ಇದರದೇ ನಿಷ್ಟಾವಂತ ಗ್ರಾಹಕರು. ನಿರ್ದಿಷ್ಟವಾಗಿ ಸಾಹಿತಿಗಳು, ಬರಹಗಾರರು. ಇದನ್ನೊಂದು ಕ್ರಿಯೇಟಿವ್ ಮೀಟಿಂಗ್ ಸ್ಥಳ ಎನ್ನುವವರೂ ಇದ್ದಾರೆ. ವೀಕೆಂಡ್‌ಗಳಲ್ಲಿ ಇಲ್ಲಿ ಕಾಲಿಡಲೂ ಜಾಗ ಇರುವುದಿಲ್ಲ. ಶನಿವಾರ ಭಾನುವಾರ ಇಲ್ಲಿ ಸುಮಾರು 3000 ಜನ ಕಾದು ಕ್ಯೂ ನಿಂತು ಮಸಾಲೆ ದೋಸೆ ತಿಂದು ಹೋಗುತ್ತಾರೆ.
ಇದರ 75ನೇ ವರ್ಷದ ಸಂದರ್ಭದಲ್ಲಿ ವಿಶೇಷ ಅಂಚೆ ಕವರ್ ಅನ್ನು ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಚಾರ್ಲ್ಸ್ ಲೋಬೊ ಬಿಡುಗಡೆ ಮಾಡಿದರು. ಈ ಕವರ್‌ಗಳನ್ನು ಕೇವಲ ಒಂದು ಲಕ್ಷ ಮಾತ್ರ ಉತ್ಪಾದಿಸಲಾಗಿದೆ. ರೆಸ್ಟೋರೆಂಟ್‌ನ ನಡೆದುಬಂದ ದಾರಿಯನ್ನು ವಿವರಿಸುವ ಕಾಫಿ ಟೇಬಲ್ ಪುಸ್ತಕವನ್ನು ಸಹ ಬಿಡುಗಡೆ ಮಾಡಲಾಗಿದೆ.
ಮುಸ್ಲಿಂ ರಾಷ್ಟ್ರದಲ್ಲಿ ನಿಮಗೆ ಸಿಗ್ತಾಳೆ ತಾತ್ಕಾಲಿಕ ಹೆಂಡತಿ! ಏನಿದು ಪ್ಲೆಸರ್ ಮ್ಯಾರೇಜ್?
ಸೋಮವಾರದಿಂದ ಗುರುವಾರದವರೆಗೆ, ವಿದ್ಯಾರ್ಥಿ ಭವನವು ಬೆಳಿಗ್ಗೆ 6.30ಕ್ಕೆ ತೆರೆದಿರುತ್ತದೆ ಮತ್ತು 11.30 ಕ್ಕೆ ಮುಚ್ಚುತ್ತದೆ. ನಂತರ ಮತ್ತೆ ಮಧ್ಯಾಹ್ನ 2 ರಿಂದ ರಾತ್ರಿ 8 ರವರೆಗೆ ತೆರೆದಿರುತ್ತದೆ. ಶುಕ್ರವಾರ ರಜಾದಿನ. ವೀಕೆಂಡ್‌ನಲ್ಲಿ ಬೆಳಿಗ್ಗೆ 6.30 ರಿಂದ ಮಧ್ಯಾಹ್ನ 12 ಮತ್ತು ಮಧ್ಯಾಹ್ನ 2.30 ರಿಂದ ರಾತ್ರಿ 8 ರವರೆಗೆ ಇರುತ್ತದೆ. "ನಮ್ಮಲ್ಲಿ ವಿವಿಧ ರೀತಿಯ ಮೆನುಗಳಿವೆ -- ಇಡ್ಲಿ, ವಡಾ, ಖಾರಾ ಬಾತ್, ಪೂರಿ, ಕೇಸ್ರಿ ಬಾತ್, ರವಾ ವಡೆ ಇತ್ಯಾದಿ. ಆದರೆ ಮಸಾಲೆ ದೋಸೆ ನಮ್ಮ ಎಟಿಎಂ (ಎನಿ ಟೈಮ್ ಮಸಾಲೆ ದೋಸೆ). ವಾರದ ದಿನಗಳಲ್ಲಿ ನಾವು ಸುಮಾರು 1,250 ಮಸಾಲೆ ದೋಸೆಗಳನ್ನು ತಯಾರಿಸುತ್ತೇವೆ, ವಾರಾಂತ್ಯದಲ್ಲಿ ಇದು 2,000 ಕ್ಕೆ ಏರುತ್ತದೆ. ಪ್ರತಿದಿನ ಕನಿಷ್ಠ 4 ಕೆ.ಜಿ ಬೆಣ್ಣೆ ಬಳಸುತ್ತೇವೆ" ಎಂದು ಅರುಣ್ ಹೇಳುತ್ತಾರೆ.
ಸ್ಟಾರ್ ನಟ ರಜನಿಕಾಂತ್ ಇಲ್ಲಿಗೆ ಆಗಾಗ ವೇಷ ಮರೆಸಿಕೊಂಡು ಭೇಟಿ ನೀಡುತ್ತಿರುತ್ತಾರಂತೆ. ವರನಟ ರಾಜಕುಮಾರ್ ಕೂಡ ಇಲ್ಲಿನ ದೋಸೆಯನ್ನು ಇಷ್ಟಪಟ್ಟಿದ್ದಾರೆ. “ರಾಜ್‌ಕುಮಾರ್ ಅವರಿಗೆ ರಜನಿಕಾಂತ್ ಅವರೇ ಇಲ್ಲಿಗೆ ಭೇಟಿ ನೀಡಲು ಸಲಹೆ ನೀಡಿದ್ದರಂತೆ. ರಾಜಕುಮಾರ್ ಅವರು ಇಲ್ಲಿಂದ ಪಾರ್ಸೆಲ್ ಪಡೆಯುತ್ತಿದ್ದರು. 2005ರಲ್ಲಿ ದರೋಡೆಕೋರ ವೀರಪ್ಪನ್‌ನಿಂದ ಬಿಡುಗಡೆಯಾದ ನಂತರ ರಾಜ್‌ಕುಮಾರ್ ನಮ್ಮ ರೆಸ್ಟೋರೆಂಟ್‌ಗೆ ಭೇಟಿ ನೀಡಿದ್ದರು" ಎಂದು ಅರುಣ್ ನೆನಪಿಸಿಕೊಳ್ಳುತ್ತಾರೆ.
ಇನ್ನು 6 ವರ್ಷದಲ್ಲಿ ಮುಳುಗಲಿದೆ ಭಾರತದ ಈ ನಗರ, 2030ಕ್ಕೆ ಸಮುದ್ರ ಮಟ್ಟ ಹೆಚ್ಚಳ!
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.