
ಸಿರಿಧಾನ್ಯಗಳಲ್ಲಿ ರಾಗಿ ಕೂಡ ಒಂದು. ರಾಗಿಯನ್ನು ನಿತ್ಯದ ಆಹಾರ ಕ್ರಮದಲ್ಲಿ ಬಳಕೆ ಮಾಡಿದರೆ ಅದ್ಭುತ ಆರೋಗ್ಯ ಲಾಭ ಸಿಗುತ್ತವೆ. ರಾಗಿ (millet) ಹೆಚ್ಚಾಗಿ ದಕ್ಷಿಣ ಭಾರತ ಜನರು ಹೆಚ್ಚಾಗಿ ಸೇವಿಸುವ ಏಕದಳ ಆಹಾರವಾಗಿದೆ. ಇದು ಹೆಚ್ಚಿನ ಫೈಬರ್ ಅಂಶವನ್ನು ಹೊಂದಿದ್ದು ತೂಕವನ್ನು ಕಡಿಮೆ ಮಾಡಿಕೊಳ್ಳಲು ಸಹಾಯಕವಾಗಿದೆ. ಅದಲ್ಲದೆ ಮಧುಮೇಹದಿಂದ ಬಳಲುತ್ತಿರುವ ಜನರಿಗೆ ಇದು ಅತ್ಯುತ್ತಮ ಆಹಾರ. ರಾಗಿಯು ಪುರಾತನ ಧಾನ್ಯವಾಗಿದ್ದು, ಅದ್ಭುತ ಆರೋಗ್ಯ ಪ್ರಯೋಜನಗಳಿಂದ ಹೆಸರುವಾಸಿಯಾಗಿದೆ. ಇದು ಉತ್ತಮ ಕಾರ್ಬೋಹೈಡ್ರೇಟ್ ಗಳ ಶಕ್ತಿ ಕೇಂದ್ರವಾಗಿದ್ದು, ಅದಲ್ಲದೆ ಮಲಬದ್ಧತೆಯನ್ನು ತಡೆಯಲು ಸಹಾಯ ಮಾಡುತ್ತದೆ. ಹಾಲುಣಿಸುವ ತಾಯಂದಿರು ತಮ್ಮ ಶಿಶುಗಳಿಗೆ (baby) ಸಾಕಷ್ಟು ಹಾಲು ಉತ್ಪಾದಿಸಲು ಸಾಧ್ಯವಾಗದಿದ್ದಲ್ಲಿ ರಾಗಿಯನ್ನು ಸೇವಿಸಬಹುದು. ರಾಗಿಯಿಂದ ನಮ್ಮ ದೇಹಕ್ಕೆ ಆಗುವ ಲಾಭಗಳ ವಿವರ ಇಲ್ಲಿದೆ.
ಮಧುಮೇಹ ನಿಯಂತ್ರಣಕ್ಕೆ ರಾಗಿ ಸಹಾಯಕಾರಿ:
ರಾಗಿಯಲ್ಲಿ ಮೆಗ್ನೀಸಿಯಮ್ ಅಂಶ ಹೇರಳವಾಗಿದ್ದು, ಇದು ದೇಹದ ಇನ್ಸುಲಿನ್ ಪ್ರಮಾಣವನ್ನು ಕಡಿಮೆ ಮಾಡುವ ಗುಣವನ್ನು ಹೊಂದಿದೆ. ರಾಗಿಯಲ್ಲಿ ಹೆಚ್ಚಿನ ಮಟ್ಟದ ಫೈಬರ್ ಒಳಗೊಂಡಿರುವುದರ ಜೊತೆಗೆ ಕಾರ್ಬೋಹೈಡ್ರೇಟ್ ಸಮೃದ್ಧವಾಗಿದೆ, ಇದು ಮಧುಮೇಹಿಗಳಿಗೆ ಉತ್ತಮ ಆಯ್ಕೆಯಾಗಿದೆ. ಇದು ರಕ್ತದಲ್ಲಿನ ಸಕ್ಕರೆ (Sugar) ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುವ ಅಕ್ಕಿ, ಗೋಧಿ (Wheet) ಮತ್ತು ಜೋಳದಂತಹ ಸಾಮಾನ್ಯವಾಗಿ ಬಳಸುವ ಧಾನ್ಯಗಳಿಗಿಂತ ಹೆಚ್ಚಿನ ಅಂಶಗಳನ್ನು ಹೊಂದಿದೆ . ಅದಲ್ಲದೆ ರಾಗಿಯಲ್ಲಿರುವ ಪಾಲಿಫಿನಾಲ್ ಅಂಶಗಳು ಮಧುಮೇಹದ ಚಿಕಿತ್ಸೆಯಲ್ಲಿ ಮತ್ತು ಅದರ ಕೆಲವು ತೊಡಕುಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ.
ಸಮೃದ್ಧ ಖನಿಜಗಳ ಆಗರ:
ರಾಗಿಯಲ್ಲಿ ಕ್ಯಾಲ್ಸಿಯಂ ಅತ್ಯಂತ ಹೇರಳವಾಗಿ ಲಭ್ಯವಾಗುತ್ತದೆ. 100 ಗ್ರಾಂ ರಾಗಿಯಲ್ಲಿ 344 ಮಿ.ಗ್ರಾಂ ಕ್ಯಾಲ್ಸಿಯಂ ಇದ್ದು, ಮೂಳೆಗಳು (Bones) ಮತ್ತು ಹಲ್ಲುಗಳ ಆರೋಗ್ಯಕ್ಕೆ ಸಹಾಯಕವಾಗಿದೆ. ಇದು ರಂಜಕ, ಪೊಟ್ಯಾಸಿಯಮ್ ಮತ್ತು ಕಬ್ಬಿಣದಿಂದಲೂ ಸಮೃದ್ಧವಾಗಿದೆ. ರಾಗಿಯಲ್ಲಿ ರಂಜಕವೂ ಕ್ಯಾಲ್ಸಿಯಂನೊಂದಿಗೆ ಸೇರಿ ನಮ್ಮ ಮೂಳೆಗಳು ಮತ್ತು ಹಲ್ಲುಗಳನ್ನು ಬಲಪಡಿಸುವ ಕೆಲಸ ಮಾಡುತ್ತದೆ. ರಾಗಿಯು ಮಕ್ಕಳು ಮತ್ತು ವಯಸ್ಸಾದವರಿಗೆ ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ (Vitamin D) ನೀಡುವ ಅತ್ಯುತ್ತಮ ಮೂಲ. ಇದು ಮಕ್ಕಳಲ್ಲಿ ಮೂಳೆ ಬೆಳವಣಿಗೆಗೆ ಮತ್ತು ವಯಸ್ಕರಲ್ಲಿ ಮೂಳೆಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಹಾಗೇ ಬೆಳೆಯುವ ಮಕ್ಕಳಿಗೆ ಇದು ಅತ್ಯಂತ ಪ್ರಯೋಜನಕಾರಿಯಾಗಿರುವುದರಿಂದ ರಾಗಿಯನ್ನು ಗಂಜಿ ರೂಪದಲ್ಲಿ ನೀಡಬಹುದು.
ವೇಟ್ ಲಾಸ್ ಮಾಡಲು ಉತ್ತಮ ಆಹಾರ:
ರಾಗಿಯಲ್ಲಿನ ಹೆಚ್ಚಿನ ಪ್ರಮಾಣದ ನಾರಿನಂಶವು ತೂಕವನ್ನು ಕಡಿಮೆ ಮಾಡಿಕೊಳ್ಳಲು ಸಹಾಯಕವಾಗಿದೆ. ರಾಗಿಯು (millet) ನಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುವುದರ ಜೊತೆಗೆ, ನಮ್ಮ ತೂಕವನ್ನು ಕಳೆದುಕೊಳ್ಳಲು ಸಹ ಸಹಾಯ ಮಾಡುತ್ತದೆ. ಏಕೆಂದರೆ ಇದು ಕಡಿಮೆ ಕ್ಯಾಲೊರಿಗಳನ್ನು ಹೊಂದಿದೆ. ರಾಗಿಯಲ್ಲಿನ ಹೆಚ್ಚಿನ ಪ್ರಮಾಣದ ಫೈಬರ್ ಅಂಶವು ಹೊಟ್ಟೆಯನ್ನು ದೀರ್ಘಕಾಲದವರೆಗೆ ತುಂಬಿರುವಂತೆ ಮಾಡುತ್ತದೆ
ಇದನ್ನೂ ಓದಿ: ನೀವು ತಿನ್ನೋದು ನಕಲಿ ಡ್ರೈ ಫ್ರುಟ್ಸ್ ಅಲ್ಲಾ ತಾನೆ…? ಪತ್ತೆ ಹಚ್ಚೋದು ಹೇಗೆ?
ತ್ವಚೆ ಕಾಪಾಡಿಕೊಳ್ಳಲು ರಾಗಿ ಉತ್ತಮ:
ತ್ವಚೆಯನ್ನು ಕಾಪಾಡಿಕೊಳ್ಳಲು ರಾಗಿ ಅದ್ಭುತ ಮೂಲವಾಗಿದೆ. ರಾಗಿಯಲ್ಲಿರುವ ವಿಟಮಿನ್ ಇ (Vitamin E) ಮತ್ತು ಕ್ಯಾಲ್ಸಿಯಂ ಹೊಸ ಮತ್ತು ಆರೋಗ್ಯಕರ ಚರ್ಮವನ್ನು ರೂಪಿಸಲು ಮತ್ತು ಚರ್ಮದ ಹಾನಿಯನ್ನು ತಡೆಯಲು ಸಹಾಯ ಮಾಡುತ್ತದೆ. ಹಾಗೆ ಇದರಲ್ಲಿರುವ ಮೆಥಿಯೋನಿನ್ ಮತ್ತು ಲೈಸಿನ್ ನಂತಹ ಪ್ರಮುಖ ಆಮ್ಲಗಳು ಚರ್ಮದ (Skin) ಅಂಗಾಂಶಗಳನ್ನು ಸುಕ್ಕುಗಳು ಮತ್ತು ಕುಗ್ಗುವಿಕೆಯಿಂದ ತಡೆಯುತ್ತದೆ. ರಾಗಿಯು ನಿಮ್ಮ ಚರ್ಮದ ಮೇಲಿನ ಕಲೆಗಳನ್ನು ಸರಿಪಡಿಸಲು ಸಹಾಯ ಮಾಡುತ್ತದೆ. ರಾಗಿ ಹಿಟ್ಟಿನ ಸಾಮಾನ್ಯ ಪ್ರಯೋಜನವೆಂದರೆ ಚರ್ಮವನ್ನು ಪುನರುಜ್ಜೀವನಗೊಳಿಸುವುದು. ಅದಲ್ಲದೆ ಕೂದಲಿಗೆ ರಾಗಿ ಹೇರ್ ಮಾಸ್ಕ್ ಉಪಯೋಗಿಸಿದರೆ ಕೂದಲು ಉದುರುವಿಕೆಯನ್ನು ನಿಯಂತ್ರಿಸಬಹುದು.
ಇದನ್ನೂ ಓದಿ: ಕಿರಿಕಿರಿ ಇಲ್ಲದೆ ಅಡುಗೆ ಮುಗಿಸಬೇಕಾ? ಇಲ್ಲಿವೆ ಸಿಂಪಲ್ ಟಿಪ್ಸ್
ರಕ್ತಹೀನತೆಯ ವಿರುದ್ಧ ಹೋರಾಡುತ್ತದೆ:
ರಾಗಿಯು ಕಬ್ಬಿಣದ ಅಂಶಗಳನ್ನು ಹೊಂದಿದ ಪ್ರಬಲ ಮೂಲವಾಗಿದೆ. ಹೀಗಾಗಿ ರಕ್ತಹೀನತೆ ಸಮಸ್ಯೆಗೆ ರಾಗಿ ಪರಿಹಾರ ನೀಡುತ್ತದೆ. ರಾಗಿಯಲ್ಲಿರುವ ಕಬ್ಬಿಣದ ಅಂಶವು ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸುತ್ತದೆ. ಹಾಗೆ ಇದರಲ್ಲಿ ವಿಟಮಿನ್ ಸಿ ಮಟ್ಟವು ಹೆಚ್ಚಾಗಿದ್ದು ಕಬ್ಬಿಣವನ್ನು ಸುಲಭವಾಗಿ ಹೀರಿಕೊಂಡು ರಕ್ತದ ಹರಿವನ್ನು ಸರಾಗವಾಗಿ ನಡೆಸುತ್ತದೆ. ಹೆಚ್ಚು ಕಬ್ಬಿಣ ಅಂಶವು ದೇಹಕ್ಕೆ ಬೇಕಾದಲ್ಲಿ ರಾಗಿ ದೋಸೆ ಅಥವಾ ರಾಗಿ ಮುದ್ದೆಗಳನ್ನು ಸೇವಿಸಬಹುದು..
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.