ಬೆಳಗ್ಗೆ ಬ್ರೇಕ್‌ಫಾಸ್ಟ್ (Breakfast)ಗೆ ಮಾಡಿರೋ ತಿಂಡಿ ಮಿಕ್ಕಿದ್ಯಾ, ಮಧ್ಯಾಹ್ನ ಅನ್ನ ಇಟ್ಟಿದ್ದು ಜಾಸ್ತಿಯಾಯ್ತಾ. ರಾತ್ರಿ ಪಿಜ್ಜಾ ಆರ್ಡರ್ ಮಾಡ್ಬಿಟ್ರು, ಮಾಡಿಟ್ಟ ರೋಟಿ-ಪಲ್ಯ ಯಾರೂ ತಿನ್ಲೇ ಇಲ್ಲ ಅಂತೀರಾ. ಇದು ಒಬ್ಬರ ಮನೆಯ ಕಥೆಯಲ್ಲ. ಎಲ್ಲರ ಮನೆಯ ವ್ಯಥೆ. ಎಷ್ಟೊಂದು ಆಹಾರ (Food) ಉಳಿದು ಬಿಡ್ತು ಅಂತ ಬೇಜಾರಾಗ್ಬೇಕಾಗಿಲ್ಲ. ಅದಕ್ಕೆ ಜಸ್ಟ್ ಸ್ಪಲ್ಪ ಟಚಪ್ ಕೊಡಿ ಸಾಕು. ಯಮ್ಮೀ ಅಂತ ಮನೆ ಮಂದಿ ಕಿರುಚೋ ಹಾಗೆ ಸೂಪರ್ ಫುಡ್ ರೆಡಿಯಾಗಿ ಬಿಡುತ್ತೆ
ಬೆಳಗ್ಗಿನ ತಿಂಡಿ, ಮಧ್ಯಾಹ್ನಕ್ಕೆ ಮಾಡಿರೋ ಅನ್ನ (Rice), ರಾತ್ರಿ ಮಾಡಿದ ಚಪಾತಿ, ರೋಟಿ (Roti) ಯಾವ್ದೂ ಮಿಕ್ಕಿದ್ರೂ ತಲೆನೋವು ತಪ್ಪಲ್ಲ. ಫ್ರಿಡ್ಜ್‌ಲ್ಲಿ ಏನೋ ಇಡ್ಬೋದು. ಆದ್ರೆ ಅದನ್ನು ಆಮೇಲೆ ತಿನ್ನೋರಾದ್ರೂ ಇರ್ಬೇಕಲ್ಲ. ಮಾಡಿರೋ ಅಡುಗೇನೆ ಮುಗಿಯದೆ ಹೊಸ ಅಡುಗೆ ಮಾಡೋಕು ಬೇಜಾರು. ಹೀಗಿದ್ದಾಗ ಫುಡ್ ವೇಸ್ಟ್ ಆಗುತ್ತಲ್ಲಾ ಏನ್ ಮಾಡೋದಪ್ಪಾ ಅಂತ ತಲೆಕೆಡಿಸಿಕೊಳ್ಬೇಕಾಗಿಲ್ಲ. ಕೆಳಗೆ ನೀಡಲಾದ ಪಾಕವಿಧಾನಗಳೊಂದಿಗೆ, ನೀವು ಉಳಿದ ಆಹಾರ (Food)ದಿಂದ ರುಚಿಕರವಾದ ಹೊಸ ರೆಸಿಪಿಯನ್ನೇ ಮಾಡಬಹುದು. ಮಾತ್ರವಲ್ಲ ಆಹಾರವನ್ನು ವಿನಾಕಾರಣ ವೇಸ್ಟ್ ಮಾಡುವುದನ್ನೂ ನಿಲ್ಲಿಸಬಹುದು.
ದಾಲ್ ತಡ್ಕಾ
ದಾಲ್ (Dal) ಕರಿ, ಚಪಾತಿ, ಅನ್ನದ ಜೊತೆ ತಿನ್ನಲು ಚೆನ್ನಾಗಿರುತ್ತದೆ. ಹೀಗಾಗಿ ದಾಲ್ ಕರಿ ಉಳಿದಾಗ ಅದನ್ನು ಎಸೆಯೋದು ಅಂದ್ರೆ ಬೇಜಾರು. ಬೆಳಗ್ಗೆ ಮಾಡಿದ ದಾಲ್ ಕರಿ ಹೆಚ್ಚಾಗಿದ್ರೆ ನೀವು ಹೀಗೆ ಮಾಡಿ ಅದರ ರುಚಿಯನ್ನು ಹೆಚ್ಚಿಸಿ ಮತ್ತೆ ತಿನ್ಬೋದು. ಉಳಿದ ದಾಲ್‌ನಲ್ಲಿ ರುಚಿಕರವಾದ ದಾಲ್ ತಡ್ಕಾ ಮಾಡಬಹುದು. ಇದಕ್ಕಾಗಿ ಮೊದಲು, ಬಾಣಲೆಯಲ್ಲಿ 1 ಚಮಚ ತುಪ್ಪವನ್ನು ಬಿಸಿ ಮಾಡಿ, ಇದಕ್ಕೆ ಒಂದು ಚಿಟಿಕೆ ಇಂಗು, ¼ ಟೀ ಸ್ಪೂನ್ ಜೀರಿಗೆ, ½ ಹಸಿರು ಮೆಣಸಿನಕಾಯಿ ಮತ್ತು ¼ ಟೀ ಸ್ಪೂನ್ ಕೆಂಪು ಮೆಣಸಿನ ಪುಡಿ ಸೇರಿಸಿಕೊಳ್ಳಿ. ಇದು ಒಂದು ನಿಮಿಷ ಅಥವಾ ಅದಕ್ಕಿಂತ ಹೆಚ್ಚು ಕಾಲ ಸಿಡಿಯಲು ಬಿಡಿ. ಉಳಿದ ಬೇಳೆಗೆ ಈ ತಡ್ಕಾವನ್ನು ಸೇರಿಸಿ ಮತ್ತು ದಾಲ್ ಪರಿಮಳವನ್ನು ಹೀರಿಕೊಳ್ಳಲು ತ್ವರಿತವಾಗಿ ಮುಚ್ಚಳವನ್ನು ಮುಚ್ಚಿ. ದಾಲ್‌ನ್ನು ಮಧ್ಯಮ ಉರಿಯಲ್ಲಿ ಇರಿಸಿ ಮತ್ತು ಕುದಿಸಿ. ನಿಮ್ಮ ದಾಲ್ ಈಗ ಬಡಿಸಲು ಸಿದ್ಧವಾಗಿದೆ. ಅನ್ನ ಅಥವಾ ಚಪಾತಿಯೊಂದಿಗೆ ಇದನ್ನು ಮತ್ತೆ ಸವಿಯಬಹುದು.
Food Tips: ಮಜ್ಜಿಗೆ ಊಟಾನೋ, ಮೊಸರನ್ನವೋ ಆರೋಗ್ಯಕ್ಕೆ ಯಾವುದು ಬೆಸ್ಟ್?
ಉಳಿದಿರುವ ಅನ್ನದಿಂದ ಮೊಸರನ್ನ
ಮಧ್ಯಾಹ್ನ ಅಥವಾ ರಾತ್ರಿ ಉಳಿದ ಅನ್ನದಲ್ಲಿ ಸುಲಭವಾಗಿ ಹೊಸ ರೆಸಿಪಿಯನ್ನು ಟ್ರೈ ಮಾಡಬಹುದು. ಚಿತ್ರಾನ್ನ, ಪುಳಿಯೋಗರೆ ಮೊದಲಾದವುಗಳನ್ನು ಮಾಡಿ ಸವಿಯಬಹುದು. ಅದರಲ್ಲೂ ಬೇಸಗೆಯಲ್ಲಿ ಮೊಸರನ್ನ (Curd Rice) ಮಾಡಿ ತಿನ್ನುವುದು ಉತ್ತಮ. ಕರ್ಡ್ ರೈಸ್ ಮಾಡಲು ನೀವು ಬೇಯಿಸಿದ ಅನ್ನವನ್ನು ಮತ್ತೆ ಬಳಸಬಹುದು.
ಮೊಸರನ್ನವನ್ನು ತಯಾರಿಸಲು ಮೊದಲಿಗೆ 1 ಕಪ್ ಉಳಿದ ಅನ್ನವನ್ನು ತೆಗೆದುಕೊಳ್ಳಿ. ಮೊದಲಿಗೆ ಬಾಣಲೆಯಲ್ಲಿ 2 ಚಮಚ ತೆಂಗಿನ ಎಣ್ಣೆಯನ್ನು ಬಿಸಿ ಮಾಡಿ. ಇದಕ್ಕೆ ½ ಟೀಸ್ಪೂನ್ ಸಾಸಿವೆ, ಸ್ಪಲ್ಪ ಕರಿಬೇವಿನ ಸೊಪ್ಪು, 1 ಒಣ ಮೆಣಸಿನಕಾಯಿ, ½ ಟೀ ಸ್ಪೂನ್ ಚನ್ನಾ ದಾಲ್, ½ ಟೀ ಸ್ಪೂನ್ ಉದ್ದಿನ ಬೇಳೆ ಸೇರಿಸಿ ಮತ್ತು ಅವುಗಳನ್ನು ಎರಡು ನಿಮಿಷಗಳ ಕಾಲ ಸಿಡಿಯಲು ಬಿಡಿ. ಈಗ ಉಳಿದ ಅನ್ನವನ್ನು ಬಾಣಲೆಗೆ ಹಾಕಿ ಮಿಕ್ಸ್ ಮಾಡಿ. ಉರಿಯನ್ನು ಆಫ್ ಮಾಡಿ ಮತ್ತು ಅದಕ್ಕೆ ಸುಮಾರು ½ ಕಪ್ ಮೊಸರು ಸೇರಿಸಿ. ದಾಳಿಂಬೆ ಬೀಜಗಳಿಂದ ಅಲಂಕರಿಸಿ, ಚೆನ್ನಾಗಿ ಮಿಶ್ರಣ ಮಾಡಿ ಮತ್ತು ಬೆಚ್ಚಗೆ ಬಡಿಸಿ.
ಬಾಕಿ ಉಳಿದಿರುವ ಇಡ್ಲಿಯಿಂದ ಮಸಾಲ ಇಡ್ಲಿ
ಬೆಳಗಿನ ಉಪಾಹಾರದಲ್ಲಿ ಉಳಿದಿರುವ ಇಡ್ಲಿಗಳಿವೆಯೇ ? ಹಾಗಿದ್ರೆ ರುಚಿಕರವಾದ ಫ್ರೈಡ್ ಇಡ್ಲಿ ಅಥವಾ ಮಸಾಲ ಇಡ್ಲಿ (Masala Idli) ಯನ್ನು ತಯಾರಿಸಬಹುದು. ಇದನ್ನು ತಯಾರಿಸಲು ಮೊದಲಿಗೆ, ಇಡ್ಲಿಗಳನ್ನು 4-5 ಭಾಗಗಳಾಗಿ ಕತ್ತರಿಸಿ ಇಟ್ಟುಕೊಳ್ಳಿ. ನಂತರ ಬಾಣಲೆಯಲ್ಲಿ 2 ಚಮಚ ಎಣ್ಣೆಯನ್ನು ಬಿಸಿ ಮಾಡಿ, 4 ನುಣ್ಣಗೆ ಕತ್ತರಿಸಿದ ಬೆಳ್ಳುಳ್ಳಿ ಎಸಳು, ಹೆಚ್ಚಿದ ಒಂದು ಈರುಳ್ಳಿ ಸೇರಿಸಿ ಎರಡು ನಿಮಿಷಗಳ ಕಾಲ ಫ್ರೈ ಮಾಡಿಕೊಳ್ಳಿ.
ಇದಕ್ಕೆ ½ ಟೀ ಸ್ಪೂನ್ ಅರಿಶಿನ, 1 ಸ್ಪೂನ್ ಮೆಣಸಿನಕಾಯಿ ಹುಡಿ, 1 ಸ್ಪೂನ್ ಗರಂ ಮಸಾಲ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ 1 ಟೀ ಸ್ಪೂನ್ ಸೋಯಾ ಸಾಸ್ ಮತ್ತು 1 ಟೀ ಸ್ಪೂನ್ ರೆಡ್ ಚಿಲ್ಲಿ ಸಾಸ್ ಸೇರಿಸಿ ಮಿಕ್ಸ್ ಮಾಡಿ. ನಂತರ ¼ ಕಪ್ ನೀರಿನಲ್ಲಿ ½ ಚಮಚ ಕಾರ್ನ್‌ಫ್ಲೋರ್ ಮಿಶ್ರಣ ಮಾಡಿ ಮತ್ತು ಇದನ್ನು ಬಾಣಲೆಗೆ ಸೇರಿಸಿ. ಚೆನ್ನಾಗಿ ಮಿಶ್ರಣ ಮಾಡಿ ಮತ್ತು ಅದಕ್ಕೆ ಕತ್ತರಿಸಿದ ಇಡ್ಲಿಗಳನ್ನು ಹಾಕಿ. ರುಚಿಗೆ ತಕ್ಕಂತೆ ಉಪ್ಪು ಸೇರಿಸಿ. ಸ್ಪ್ರಿಂಗ್ ಆನಿಯನ್‌ನಿಂದ ಅಲಂಕರಿಸಿ ಮತ್ತು ಬಡಿಸಿ.
Celebrity Food: ಬಾಲಿವುಡ್ ಟಾಪ್ ನಟಿಯರು ಬ್ರೇಕ್ ಫಾಸ್ಟ್‌ಗೆ ಏನು ತಿನ್ತಾರೆ ?
ರೋಟಿ ಮತ್ತು ಪಲ್ಯ
ರಾತ್ರಿಯೂಟಕ್ಕೆ ರೋಟಿ-ಪಲ್ಯ ಮಾಡಿರ್ತೀರಾ. ಬೆಳಗ್ಗೆ ಮತ್ತದೇ ತಿನ್ನೋಕೆ ಬೇಜಾರಲ್ವಾ ಹಾಗಿದ್ದಾಗ ಹೀಗೆ ಮಾಡಿ. ರೊಟ್ಟಿಗೆ ಸ್ಪಲ್ಪ ಬೆಣ್ಣೆ ಸೇರಿಸಿ ತವಾ ಮೇಲೆ ಇರಿಸಿ. ಸ್ವಲ್ಪ ಗರಿಗರಿಯಾಗುವ ವರೆಗೆ ಎರಡೂ ಬದಿಗಳಿಂದ ಬೇಯಿಸಿ. ಈಗ ಅದನ್ನು ತಟ್ಟೆಯಲ್ಲಿ ಇರಿಸಿ. ಪುದೀನ ಚಟ್ನಿ, ಕೆಚಪ್‌ನ್ನು ಮಿಕ್ಸ್ ಮಾಡಿಕೊಂಡು ಇದಕ್ಕೆ ಉಳಿದ ಪಲ್ಯವನ್ನು ಸೇರಿಸಿ. ಈ ಮಿಶ್ರಣವನ್ನು ರೊಟ್ಟಿಯ ಮೇಲೆ ಹರಡಿಕೊಳ್ಳಿ. ಮೇಲಿನಿಂದ ಕತ್ತರಿಸಿದ ಈರುಳ್ಳಿಯನ್ನಿಟ್ಟು ಅಲಂಕರಿಸಿ ರೌಂಡ್ ಆಗಿ ರೋಲ್ ಮಾಡಿಕೊಳ್ಳಿ. ಮನೆಯಲ್ಲೇ ತಯಾರಿಸಿದ ರೊಟ್ಟಿಯ ರೋಲ್ ತಿನ್ನಲು ಸಹ ರುಚಿಕರವಾಗಿರುತ್ತದೆ.