ಮನೆ ಆಹಾರ ಆರೋಗ್ಯಕ್ಕೆ ಒಳ್ಳೆಯದು ಅಂತಾ ಎಲ್ಲರಿಗೂ ಗೊತ್ತು. ಕೆಲವೊಂದು ಆಹಾರ ತಯಾರಿಸೋದು ಹೇಗೆ ಎಂಬುದು ತಿಳಿದಿರೋದಿಲ್ಲ. ಅದ್ರಲ್ಲಿ ಹಾರ್ಲೆಕ್ಸ್, ಬೋಸ್ಟ್, ಬೋರ್ನ್ ವಿಟಾ ಕೂಡ ಸೇರಿದೆ. ನಾವಿಂದು ಮನೆಯಲ್ಲೇ ಕೆಲವೇ ಕೆಲವು ಪದಾರ್ಥ ಬಳಸಿ ಬೋರ್ನ್ ವಿಟಾ ತಯಾರಿಸೋ ಗುಟ್ಟು ಹೇಳ್ತೇವೆ.
ಮಕ್ಕಳು ಆರೋಗ್ಯವಾಗಿರಲು ಏನು ನೀಡ್ಬೇಕು? ಸದಾ ಪಾಲಕರು ಕೇಳುವ ಪ್ರಶ್ನೆ ಇದು. ತರಕಾರಿ ತಿನ್ನಲ್ಲ, ಡ್ರೈ ಫ್ರೂಟ್ಸ್ ಸೇರಲ್ಲ.. ಹಾಲು ಅಂದ್ರೆ ಮಕ್ಕಳು ಮಾರುದೂರ ಓಡ್ತಾರೆ. ಹೀಗಿರುವಾಗ ಅವರಿಗೆ ಏನು ತಿನ್ನೋಕೆ ನೀಡೋದು? ಇದೇ ದೊಡ್ಡ ತಲೆನೋವು ಎನ್ನುವ ಪಾಲಕರ ಸಂಖ್ಯೆ ಬಹಳಷ್ಟಿದೆ.
ಮಾರುಕಟ್ಟೆ (Market) ಯಲ್ಲಿ ಮಕ್ಕಳ ಬೆಳವಣಿಗೆಗೆ ಪೂರಕವಾಗಿರುವ ಅನೇಕ ಆಹಾರ ಪದಾರ್ಥಗಳು ಸಿಗುತ್ವೆ. ಬರೀ ಹಾಲು (Milk) ಕುಡಿಸೋದು ಮಕ್ಕಳಿಗೆ ಕಷ್ಟ. ಹಾಗಾಗಿಯೇ ಹಾಲಿನ ರುಚಿ ಬದಲಿಸಲು ಪಾಲಕರು, ಕೋಂಪ್ಲಾನ್, ಬೋರ್ನ್ ವಿಟಾ, ಹಾರ್ಲಿಕ್ಸ್, ಬೂಸ್ಟ್ ನಂತಹ ಅನೇಕ ಪೌಡರ್ ಬೆರೆಸಿ ನೀಡ್ತಾರೆ. ಈಗಾಗಲೇ ಬಹಳ ವರ್ಷದಿಂದ ಇಂತಹ ಪೇಯಗಳನ್ನು ಮಕ್ಕಳು ಹಾಲಿನಲ್ಲಿ ಬೆರೆಸಿ ಕುಡಿಯುತ್ತಿದ್ದಾರೆ. ಹಾಲಿಗೆ ಬೆರೆಸಿಕೊಂಡು ಕುಡಿಯುವ ಇಂತಹ ಪುಡಿಗಳಲ್ಲಿ ಹೆಚ್ಚಿನ ಪ್ರಮಾಣದ ಸಕ್ಕರೆ ಮತ್ತು ಕೋಕೋ ಪೌಡರ್ ಗಳಿರುತ್ತವೆ. ಹೆಚ್ಚಿನ ಪ್ರಮಾಣದ ಚಾಕಲೇಟ್ ಇದು ಹೊಂದಿರುತ್ತದೆ. ಇದ್ರಿಂದ ಮಕ್ಕಳ ಹಲ್ಲು ಹುಳಾಗುವ ಅಪಾಯವಿರುತ್ತದೆ. ಅಷ್ಟೇ ಅಲ್ಲದೇ ಇಂತಹ ಸಿದ್ಧ ಆಹಾರಗಳನ್ನು ತಯಾರಿಸುವಾಗ ಪ್ರಿಸರ್ವೇಟಿವ್ಸ್ ಅನ್ನು ಮತ್ತು ಕೃತಕ ಬಣ್ಣವನ್ನು ಬಳಸಬೇಕಾಗುತ್ತದೆ. ಪ್ರತಿ ದಿನ ಇದ್ರ ಸೇವನೆಯಿಂದ ಮಕ್ಕಳ ಆರೋಗ್ಯ ದಿನೇ ದಿನೇ ಕೆಡುತ್ತದೆ. ಹಾಗಾಗಿ ಮಾರುಕಟ್ಟೆಯಲ್ಲಿ ಸಿಗುವ ಇಂತಹ ರೆಡಿಮೇಡ್ ಪೇಯಗಳ ಬದಲು ಗೃಹಿಣಿಯರು ಮನೆಯಲ್ಲೇ ಸುಲಭವಾಗಿ ಪೂರಕ ಪುಡಿಗಳನ್ನು ತಯಾರಿಸಿಕೊಳ್ಳಬಹುದು. ಮನೆಯಲ್ಲೇ ಮಾಡಿದ ಆಹಾರ ಆರೋಗ್ಯಕ್ಕೆ ಬಹಳ ಒಳ್ಳೆಯದು. ರುಚಿಯೂ ಚೆನ್ನಾಗಿರುವ ಕಾರಣ ಮಕ್ಕಳು ಪ್ರೀತಿಯಿಂದ ಸೇವನೆ ಮಾಡ್ತಾರೆ. ಅನೇಕ ತಾಯಂದಿರುವ ಮನೆಯಲ್ಲಿಯೇ ಮಲ್ಟಿ ಗ್ರೇನ್ ಪುಡಿ ತಯಾರಿಸ್ತಾರೆ. ಅದ್ರ ಜೊತೆ ನೀವು ಮನೆಯಲ್ಲೇ ಬೋರ್ನ್ ವಿಟಾ (Bourne Vita
) ತಯಾರಿಸಬಹುದು. ನಾವಿಂದು ಮನೆಯಲ್ಲೇ ಬೋರ್ನ್ ವಿಟಾ ತಯಾರಿಸೋದು ಹೇಗೆ ಅಂತಾ ನಿಮಗೆ ತಿಳಿಸ್ತೇವೆ.
ಜಿಟಿ ಜಿಟಿ ಮಳೆಗೆ ಮಂಗಳೂರಿನ ಈ ತಿನಿಸು ಬೆಸ್ಟ್ ಕಾಂಬಿನೇಶನ್
ಬೋರ್ನ್ ವಿಟಾ ತಯಾರಿಸಲು ಬೇಕಾಗಿರುವ ಸಾಮಗ್ರಿ :
ಒಂದು ಕಪ್ ಬಾದಾಮಿ (ಬಾದಾಮಿಯನ್ನು ನೆನೆಸಿ ಸಿಪ್ಪೆ ತೆಗೆದು ಬಿಸಿಲಿನಲ್ಲಿ ಒಣಗಿಸಬೇಕು)
ಒಂದು ಕಪ್ ಮಖಾನಾ (ಫಾಕ್ಸ್ ನಟ್ಸ್)
½ ಕಪ್ ಓಟ್ಸ್
2/3 ಕಪ್ ಬೆಲ್ಲದ ಪುಡಿ
¼ ಕಪ್ ಕೋಕೋ ಪೌಡರ್
ಬೋರ್ನ್ ವಿಟಾ ತಯಾರಿಸುವ ವಿಧಾನ : ಬೋರ್ನ್ ವಿಟಾ ತಯಾರಿಸಲು ಮೊದಲು ನೀವು ಒಂದು ಬಾಣಲೆಗೆ ನೆನೆಸಿ ಸಿಪ್ಪೆ ತೆಗೆದು ಒಣಗಿಸಿದ ಬಾದಾಮಿಯನ್ನು ಹಾಕಿ. ಅದನ್ನು ಸಣ್ಣ ಉರಿಯಲ್ಲಿ ಮೂರರಿಂದ ನಾಲ್ಕು ನಿಮಿಷಗಳ ಕಾಲ ಹುರಿಯಬೇಕು. ನಂತ್ರ ಅದನ್ನು ತೆಗೆದಿಟ್ಟು, ಮಖಾನಾ ಮತ್ತು ಓಟ್ಸ್ ಅನ್ನು ಕೂಡ ಪ್ರತ್ಯೇಕವಾಗಿ ಹುರಿದುಕೊಳ್ಳಬೇಕು. ಹುರಿದ ನಂತರ ಎಲ್ಲವನ್ನೂ ತಣ್ಣಗಾಗಲು ಬಿಡಿ. ಬಾದಾಮಿ, ಮಖಾನಾ, ಓಟ್ಸ್ ಎಲ್ಲವೂ ತಣ್ಣಗಾದ ನಂತರ ಅದನ್ನು ಮಿಕ್ಸಿ ಮಾಡಿ ನುಣ್ಣನೆಯ ಪುಡಿಯನ್ನಾಗಿ ಮಾಡಬೇಕು. ಈ ಪೌಡರ್ ಗೆ ಸ್ವಲ್ಪ ಬೆಲ್ಲದ ಪುಡಿ ಮತ್ತು ಕೋಕೋ ಪೌಡರ್ ಅನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಅದನ್ನು ಜರಡಿ ಹಿಡಿದು, ಗಾಳಿಯಾಡದ ಡಬ್ಬದಲ್ಲಿ ಇಡಬೇಕು.
Health Tips: ದೇಹಕ್ಕೆ ಸ್ವಲ್ಪ ಸಕ್ಕರೆ ಹೆಚ್ಚಾದರೂ ಖಿನ್ನತೆ, ಕ್ಯಾನ್ಸರ್ ಕಾಡಬಹುದು!
ಇದನ್ನು ಅಗತ್ಯವಿದ್ದಾಗ ಹಾಲಿಗೆ ಹಾಕಿ ಬೆರೆಸಿ ಕುಡಿಯಬೇಕು. ಮಕ್ಕಳಿಗೆ ಇದನ್ನು ನೀವು ಆರಾಮವಾಗಿ ನೀಡಬಹುದು. ಮನೆಯಲ್ಲೇ ತಯಾರಿಸಿದ ಈ ಬೋರ್ನ್ ವಿಟಾದಲ್ಲಿ ಯಾವುದೇ ಕೃತಕ ಬಣ್ಣವಾಗಲೀ, ಪ್ರಿಸರ್ವೇಟಿವ್ಸ್ ಗಳಾಗಲೀ ಬಳಕೆ ಮಾಡುವುದಿಲ್ಲ. ಆದ್ದರಿಂದ ಇದು ಮಕ್ಕಳಿಗೆ ಒಳ್ಳೆಯ ಶಕ್ತಿವರ್ಧಕವಾಗಿದೆ. ಇದರಲ್ಲಿರುವ ಬಾದಾಮಿ ಮಕ್ಕಳ ಬುದ್ಧಿಶಕ್ತಿ ಹೆಚ್ಚುವಂತೆ ಮಾಡುತ್ತದೆ ಹಾಗೂ ಮಖಾನಾ ದೇಹದಲ್ಲಿ ಪೋಷಕಾಂಶಗಳ ಕೊರತೆಯನ್ನು ನೀಗಿಸುತ್ತದೆ.