ಒಂದಾ ಎರಡಾ, ಪನೀರ್ ನಲ್ಲಿ ನೂರಾರು ವೆರೈಟಿ ಆಹಾರ ತಯಾರಿಸ್ಬಹುದು. ಆದ್ರೆ ಅಡುಗೆ ಮಾಡುವಾಗ ವಿಧಾನ ತಪ್ಪಾದ್ರೆ ಆಹಾರ ಕೆಟ್ಟಂತೆ. ಅದ್ರಲ್ಲೂ ಪನೀರ್ ಗಟ್ಟಿಯಾದ್ರೆ ತಿನ್ನೋದು ಕಷ್ಟ. ಪನೀರ್ ಸಾಪ್ಟ್ ಆಗಿರ್ಬೇಕೆಂದ್ರೆ ಒಂದು ಉಪಾಯ ಮಾಡ್ಬೇಕು.
ಪನೀರ್ ಇಷ್ಟಪಡುವ ಜನರ ಸಂಖ್ಯೆ ಹೆಚ್ಚಿದೆ. ಸಸ್ಯಹಾರಿಗಳ ಮೊದಲ ಆಯ್ಕೆ ಪನೀರ್ ಅಂದ್ರೆ ತಪ್ಪಾಗಲಾರದು. ಪನೀರ್ ಹೆಸರು ಕೇಳ್ತಿದ್ದಂತೆ ಬಾಯಲ್ಲಿ ನೀರು ಬರುತ್ತದೆ. ಪನೀರ್ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರಿಗೂ ಇಷ್ಟವಾಗುವ ವಸ್ತು. ಪನೀರ್ ಸಬ್ಜಿ, ಫಿಜಾ, ಪನೀರ್ ಪ್ರೈ ಸೇರಿದಂತೆ ಪನೀರ್ ನಲ್ಲಿ ಎರಡು ನೂರಕ್ಕೂ ಹೆಚ್ಚು ವೆರೈಟಿ ಫುಡ್ ತಯಾರಿಸಬಹುದು. ಹಾಗೆಯೇ ಪನೀರ್ ರುಚಿ ಹೆಚ್ಚು. ಪನೀರ್ ಆರೋಗ್ಯಕ್ಕೂ ಒಳ್ಳೆಯದು. ಇದೇ ಕಾರಣಕ್ಕೆ ಅದಕ್ಕೆ ಬೇಡಿಕೆ ಹೆಚ್ಚಿದೆ. ಪನೀರ್ ಮನೆಯಲ್ಲಿ ಕೂಡ ತಯಾರಿಸಬಹುದು. ಪನೀರ್ ಆಹಾರ ತಿನ್ನಲು ರುಚಿ ಹೌದು ಆದ್ರೆ ಮಾಡೋದು ಸ್ವಲ್ಪ ಕಷ್ಟ ಎನ್ನುವವರಿದ್ದಾರೆ. ಪನ್ನೀರ್ ತುಂಬಾ ಮೃದುವಾಗಿರುತ್ತದೆ. ಅದನ್ನು ಅಡುಗೆಗೆ ಬಳಸಿದಾಗ ಪನೀರ್ ಬದಲಾಗುತ್ತದೆ. ಅದು ಗಟ್ಟಿಯಾಗುತ್ತದೆ ಇಲ್ಲವೆ ರಬ್ಬರ್ ನಂತಾಗುತ್ತದೆ ಎಂದು ಕೆಲ ಮಹಿಳೆಯರು ಹೇಳೋದನ್ನು ನೀವು ಕೇಳಿರಬಹುದು. ನೀವೂ ಇಂಥ ಸಮಸ್ಯೆ ಎದುರಿಸಿರಬಹುದು. ಪನೀರ್ ಗಟ್ಟಿಯಾದ್ರೆ ರುಚಿ ಹಾಳಾಗುತ್ತದೆ. ನಾವಿಂದು ಹುರಿದಾಗ್ಲೂ ಪನೀರ್ ಮೃದುವಾಗಿರಲು ಏನು ಮಾಡ್ಬೇಕು ಎಂಬುದನ್ನು ಹೇಳ್ತೆವೆ.
ಪನೀರ್ (Paneer) ಮೃದುವಾಗಿರಲು ಇಲ್ಲಿದೆ ಐಡಿಯಾ :
ಪನೀರ್ ಹುರಿದ ಮೇಲೂ ಮೃದು (Soft) ವಾಗಿರಬೇಕು ಎಂದಾದ್ರೆ ಮೊದಲು ಬಾಣಲೆಗೆ ಎಣ್ಣೆ ಹಾಕಿ. ಕುದಿಯಲು ಬರುವಷ್ಟು ಎಣ್ಣೆ (Oil) ಯನ್ನು ಬಿಸಿ ಮಾಡಿ. ನಂತ್ರ ಗ್ಯಾಸ್ (Gas) ಉರಿಯನ್ನು ಕಡಿಮೆ ಮಾಡಿ. ಮೊದಲೇ ಕತ್ತರಿಸಿ ಇಟ್ಟುಕೊಂಡ ಪನೀರನ್ನು ಎಣ್ಣೆಗೆ ಹಾಕಿ. ಪನೀರ್ ಎಣ್ಣೆಗೆ ಹಾಕ್ತಿದ್ದಂತೆ ಕೈ ಆಡಿಸಿ. ಯಾಕೆಂದ್ರೆ ಪನೀರ್ ಬಾಣೆಲೆ ತಳಕ್ಕೆ ಅಂಟಿಕೊಳ್ಳುವ ಸಾಧ್ಯತೆಯಿರುತ್ತದೆ. ಇದ್ರಿಂದ ಅದು ಸರಿಯಾಗಿ ಫ್ರೈ (Fry) ಆಗುವುದಿಲ್ಲ. ಹಾಗಾಗಿ ತಳ ಹಿಡಿಯದಂತೆ ಕೈ ಆಡಿಸ್ತಿರಿ.
ಪನೀರ್ ಬಂಗಾರದ ಬಣ್ಣಕ್ಕೆ ಬರ್ತಿದ್ದಂತೆ ಗ್ಯಾಸ್ ಆಫ್ ಮಾಡಿ. ಎಣ್ಣೆಯಿಂದ ಪನೀರ್ ತೆಗೆಯಿರಿ. ಹುರಿದ ಪನೀರನ್ನು ತಣ್ಣೀರಿನಿಂದ ತುಂಬಿದ ಪಾತ್ರೆಗೆ ಹಾಕಿ. ತಣ್ಣೀರಿಗೆ ಸ್ವಲ್ಪ ಉಪ್ಪನ್ನು ಹಾಕ್ಬೇಕು. ಎಣ್ಣೆಯಲ್ಲಿ ಕರಿದ ಪನೀರನ್ನು ತಕ್ಷಣ ತಣ್ಣೀರಿಗೆ ಹಾಕಬೇಕಾಗುತ್ತದೆ. ಫ್ರೈ ಪನೀರ್ ಅನ್ನು ಹತ್ತು ನಿಮಿಷಗಳ ಕಾಲ ನೀರಿನಲ್ಲಿ ಬಿಡಬೇಕು. ಹತ್ತು ನಿಮಿಷಗಳ ನಂತರ ಪನೀರ್ ಅನ್ನು ನೀರಿನಿಂದ ತೆಗೆಯಿರಿ. ಪನ್ನೀರ್ ನಲ್ಲಿರುವ ನೀರು ಹೊರಗೆ ಹೋಗುವಂತೆ ಅದನ್ನು ಪ್ರೆಸ್ ಮಾಡ್ಬೇಕು. ನೀರು ಹೊರಬಂದ ತಕ್ಷಣ, ಪನೀರ್ ಸಂಪೂರ್ಣವಾಗಿ ಮೃದುವಾಗಿರುವುದನ್ನು ನೀವು ಗಮನಿಸಬಹುದು. ಈಗ ನೀವು ಈ ಮೃದುವಾದ ಪನೀರ್ ಅನ್ನು ನಿಮಗೆ ಬೇಕಾದ ರೀತಿಯಲ್ಲಿ ಬಳಸಬಹುದು.
ಇದನ್ನೂ ಓದಿ: ಕೇರಳ ಶೈಲಿಯ ಪೆಪ್ಪರ್ ಚಿಕನ್ ಮಾಡೋದು ತುಂಬಾ ಈಝಿ
ಪನೀರ್ ಫ್ರೈ ಮಾಡ್ದೆ ಅದನ್ನು ಮೃದುವಾಗಿ ಬಳಸಬೇಕು ಎನ್ನುವವರು ಇನ್ನೊಂದು ವಿಧಾನವನ್ನು ಅನುಸರಿಸಬಹುದು. ಮೊದಲು ಪನೀರನ್ನು ನಿಮಗೆ ಬೇಕಾದ ಆಕಾರಕ್ಕೆ ಕತ್ತರಿಸಿಕೊಳ್ಳಬೇಕು. ನಂತ್ರ ಉಗುರು ಬೆಚ್ಚಗಿನ ನೀರಿಗೆ ಸ್ವಲ್ಪ ಉಪ್ಪನ್ನು ಹಾಕಿ, ಅದಕ್ಕೆ ಪನೀರ್ ಹೋಳುಗಳನ್ನು ಹಾಕ್ಬೇಕು. 10 ನಿಮಿಷ ಬಿಟ್ಟು, ಅದ್ರಲ್ಲಿರುವ ನೀರನ್ನು ತೆಗೆದು ಅದನ್ನು ಅಡುಗೆಗೆ ಬಳಸಬೇಕು.
ಇದನ್ನೂ ಓದಿ: ದೃಷ್ಟಿ ತಗೆಯಲು ಮಾತ್ರವಲ್ಲ ಆರೋಗ್ಯಕ್ಕೂ ಬೂದು ಕುಂಬಳಕಾಯಿ
ಪನೀರ್ ರುಚಿಯಲ್ಲಿ ಮಾತ್ರವಲ್ಲದೆ ಪ್ರೋಟೀನ್‌ನಲ್ಲಿಯೂ ಸಮೃದ್ಧವಾಗಿದೆ. ಪನೀರ್ ವಿಟಮಿನ್ ಬಿ 12, ಸೆಲೆನಿಯಮ್, ವಿಟಮಿನ್ ಡಿ ಮತ್ತು ರೈಬೋಫ್ಲಾವಿನ್ ನಂತಹ ಪೋಷಕಾಂಶಗಳಿಂದ ಸಮೃದ್ಧವಾಗಿದೆ. 40 ಗ್ರಾಂ ಪನೀರ್ 7.54 ಗ್ರಾಂ ಪ್ರೋಟೀನ್ ಮತ್ತು ಸುಮಾರು 5 ಗ್ರಾಂ ಕೊಬ್ಬನ್ನು ಹೊಂದಿರುತ್ತದೆ. ಪ್ರೋಟೀನ್ ಗಾಗಿ ಪನೀರ್ ತಿನ್ನುತ್ತಿದ್ದರೆ, ಅದನ್ನು ಆಲಿವ್ ಎಣ್ಣೆಯಲ್ಲಿ ಹುರಿಯುವುದು ಉತ್ತಮ ಆಯ್ಕೆಯಾಗಿದೆ. ಮುಂದಿನ ಬಾರಿ ನೀವು ಫ್ರೈಡ್ ಪನೀರ್ ರೆಸಿಪಿ ಮಾಡಲು ಬಯಸಿದರೆ, ಪನೀರ್ ಗಟ್ಟಿಯಾಗದಂತೆ ಮಾಡಲು ಮೇಲಿನ ವಿಧಾನವನ್ನು ಅನುಸರಿಸಬಹುದು.