ಭಾನುವಾರದ ಬಾಯಿರುಚಿಗೆ ಬಸಂತಿ ಪುಲಾವ್, ಬ್ರಿಂಜಿ ರೈಸ್!

By Web Desk  |  First Published Oct 13, 2019, 1:39 PM IST

ಟೊಮ್ಯೋಟೋ ರೈಸ್, ರೈಸ್ ಬಾತ್, ಪಲಾವ್, ಬಿಸಿಬೇಳೆಬಾತ್... ಅವೇ ನಾಲ್ಕೈದು ರೈಸ್ ಐಟಂಗಳನ್ನು ತಿಂದೂ ತಿಂದೂ ನಾಲಿಗೆ ರುಚಿ ಕೆಟ್ಟಿದೆಯೇ? ಹಾಗಿದ್ದರೆ ಈ ವಾರ ಬಂಗಾಳಿ ಬಸಂತಿ ಪುಲಾವ್ ಇಲ್ಲವೇ ತಮಿಳರ ಬ್ರಿಂಜಿ ರೈಸ್ ಟ್ರೈ ಮಾಡಿ.
 


ವೆಜ್ ಪಲಾವ್, ಕಾಶ್ಮೀರಿ ಪಲಾವ್ ಎಲ್ಲ ಆಗಾಗ ಟ್ರೈ ಮಾಡಿಯೇ ಇರುತ್ತೀರಿ. ಈ ಬಾರಿ ಬಂಗಾಳದ ಸ್ಪೆಶಲ್ ಬಸಂತಿ ಪುಲಾವ್ ಮಾಡಿ ನೋಡಿ. ಬಾಸುಮತಿ ಅಕ್ಕಿಯು ಮಸಾಲೆಗಳ ಘಮದಲ್ಲಿ ಮಿಂದೆದ್ದು ನಾಲಿಗೆಯಲ್ಲಿ ನೀರೂರಿಸುವ ಮಜ ಅನುಭವಿಸಿ.

ನವರಾತ್ರಿ ಹಬ್ಬದಲ್ಲಿ ರುಚಿ ನೋಡಲೇಬೇಕಾದ ತಿಂಡಿಗಳ ರೆಸಿಪಿ

Tap to resize

Latest Videos

ಮಿಶ್ಟಿ ಪುಲಾವ್ ಎಂದೂ ಕರೆಸಿಕೊಳ್ಳುವ ಬಸಂತಿ ಪುಲಾವ್‌ನ್ನು ಸಾಂಪ್ರದಾಯಿಕವಾಗಿ ಗೋಬಿಂದೋಭೋಗ್ ಅಕ್ಕಿ ಹಾಗೂ ಕೇಸರಿಯ ಮಿಶ್ರಣದೊಂದಿಗೆ ತಯಾರಿಸಲಾಗುತ್ತದೆ. ಬೆಂಗಾಲಿಗಳ ಹಬ್ಬದ ಮೆರುಗನ್ನು ಹೆಚ್ಚಿಸುವ ಬಸಂತಿ ಪುಲಾವ್ ತನ್ನ ಫ್ಲೇವರ್‌ ಹಾಗೂ ಪರಿಮಳದಿಂದಲೇ ಮೂಡನ್ನು ಸಂಭ್ರಮಕ್ಕೆ ತಿರುಗಿಸುತ್ತದೆ. ಕೇಸರಿಯ ಕಾರಣದಿಂದ ಸ್ವಲ್ಪ ಹಳದಿ ಬಣ್ಣಕ್ಕೆ ತಿರುಗುವ ಅಕ್ಕಿಯ ಬಣ್ಣದಿಂದಾಗಿ ಕಲರ್‌ಫುಲ್ ಆಗಿಯೂ ಕಾಣಿಸುತ್ತದೆ. 

ಸರ್ವಿಂಗ್ಸ್: 5

ಬೇಕಾಗುವ ಸಾಮಗ್ರಿಗಳು: 

1.5 ಕಪ್ ಬಾಸುಮತಿ ಅಕ್ಕಿ

3 ಚಮಚ ತುಪ್ಪ

10-15 ದ್ರಾಕ್ಷಿ

10-15 ಗೋಡಂಬಿ

2 ಹಸಿರು ಏಲಕ್ಕಿ

2 ಲವಂಗ

ಚಕ್ಕೆ 2 ತುಂಡು

1 ದಾಲ್ಚೀನಿ ಎಲೆ

3 ಕಪ್ ನೀರು

2.5 ಚಮಚ ಸಕ್ಕರೆ

ಕೇಸರಿ 15-20 ಎಸಳು

ಮಾಡುವ ವಿಧಾನ :

ಅಕ್ಕಿಯನ್ನು ಚೆನ್ನಾಗಿ ತೊಳೆದು ಅರ್ಧ ಗಂಟೆಗಳ ಕಾಲ ದೊಡ್ಡ ಪಾತ್ರೆಯಲ್ಲಿ ನೀರಿನಲ್ಲಿ ನೆನೆಸಿಡಿ. (ನಿಮ್ಮ ಮನೆ ಹತ್ತಿರದಲ್ಲಿ ಗೋಬಿಂದೋಭೋಗ್ ಅಕ್ಕಿ ಸಿಕ್ಕರೆ ಅದನ್ನೇ ಬಳಸಿ. ಅದಿಲ್ಲವಾದರೆ ಬಾಸುಮತಿ ಬಳಸಿ) 

ಬಾಣಲೆಯೊಂದರಲ್ಲಿ ತುಪ್ಪವನ್ನು ಬಿಸಿ ಮಾಡಿ ದ್ರಾಕ್ಷಿ ಹಾಗೂ ಗೋಡಂಬಿಗಳನ್ನು ಸೇರಿಸಿ. ಮೀಡಿಯಂ ಫ್ಲೇಮ್‌ನಲ್ಲಿ ಹುರಿದು ಅವು ಗೋಲ್ಡನ್ ಬ್ರೌನ್ ಬಣ್ಣಕ್ಕೆ ತಿರುಗಿದಾಗ ಚಕ್ಕೆ, ಲವಂಗ, ಏಲಕ್ಕಿ, ದಾಲ್ಚೀನ್ ಎಲೆ ಸೇರಿಸಿ ಸ್ವಲ್ಪ ಹೊತ್ತು ಹುರಿಯಿರಿ. 

ಆರೋಗ್ಯಕರ ಶ್ವಾಸಕೋಶ, ಉತ್ತಮ ಉಸಿರಾಟಕ್ಕಾಗಿ ಈ ಆಹಾರ ಸೇವಿಸಿ!

ಈಗ ಅಕ್ಕಿಯಿಂದ ನೀರನ್ನು ಬಸಿದು ಬಾಣಲೆಗೆ ಸೇರಿಸಿ ಮಸಾಲೆಯೊಂದಿಗೆ ಮಿಕ್ಸ್ ಮಾಡಿ. ಇದಕ್ಕೆ ನೀರು, ಕೇಸರಿ ಹಾಗೂ ಸ್ವಲ್ಪ ಸಕ್ಕರೆ ಸೇರಿಸಿ, ಮುಚ್ಚಳ ಮುಚ್ಚಿ ಉರಿಯನ್ನು ಸಣ್ಣದಾಗಿರಿಸಿ ಬೇಯಲು ಬಿಡಿ. ಅಕ್ಕಿ ಬೆಂದು ಅನ್ನವಾದ ಬಳಿಕ ಸ್ಟೌ ಆಫ್ ಮಾಡಿ. ಇದಕ್ಕೆ ಬೇಕಿದ್ದರೆ ಪಿಸ್ತಾ, ಬಾದಾಮಿ, ಕೇಸರಿ ಎಸಳುಗಳಿಂದ ಡೆಕೋರೇಟ್ ಮಾಡಿ ಸವಿಯಬಹುದು. 
-------

ಬ್ರಿಂಜಿ ರೈಸ್

ತಮಿಳುನಾಡಿನ ಸ್ಪೆಶಲ್ ಬ್ರಿಂಜಿ ರೈಸ್ ಜೀರಿಗೆ ಸಾಂಬಾ ರೈಸ್, ಕಾಯಿಹಾಲಿನ ಕಾಂಬಿನೇಶನ್. ಬಾಸುಮತಿ ಅಕ್ಕಿಯಿಂದಲೂ ಟ್ರೈ ಮಾಡಬಹುದು.

ಸರ್ವಿಂಗ್ಸ್: 3

ಬೇಕಾಗುವ ಸಾಮಗ್ರಿಗಳು: 

ಮಸಾಲಾ ಪೇಸ್ಟ್‌ಗೆ: ಒಂದು ಮುಷ್ಟಿ ಕೊತ್ತಂಬರಿ ಸೊಪ್ಪು, ಒಂದು ಮುಷ್ಟಿ ಪುದೀನಾ, 2 ಏಲಕ್ಕಿ, 4 ಲವಂಗ, ಅರ್ಧ ಇಂಚಿನ ಚಕ್ಕೆ, 1 ಚಮಚ ಜೀರಿಗೆ, 2 ಚಮಚ ನೀರು.
ಇತರೆ ಸಾಮಗ್ರಿಗಳು: 2 ಚಮಚ ತುಪ್ಪ, 1 ಚಮಚ ಎಣ್ಣೆ,  4 ದಾಲ್ಚೀನಿ ಎಲೆ, 1 ಸ್ಟಾರ್, 2 ಇಡಿ ಏಲಕ್ಕಿ, 1 ಈರುಳ್ಳಿ(ಸಣ್ಣಗೆ ಹೆಚ್ಚಿದ್ದು), 1 ಚಮಚ ಶುಂಠಿ ಬೆಳ್ಳುಳ್ಳಿ ಪೇಸ್ಟ್, 3 ಹಸಿಮೆಣಸು ಸೀಳಿದ್ದು, ಸಣ್ಣಗೆ ಹೆಚ್ಚಿಕೊಂಡ ಟೊಮ್ಯಾಟೋ 1, ತುರಿದುಕೊಂಡ ಕ್ಯಾರೆಟ್ ಅರ್ಧ, 2 ಚಮಚ ಬಟಾಣಿ, ಅರ್ಧ ಆಲೂಗಡ್ಡೆಯ ಹೋಳುಗಳು,  ಗೋಬಿ ಆರೇಳು ಸಣ್ಣ ಪೀಸ್, 5 ಬೀನ್ಸ್, 1 ಚಮಚ ಉಪ್ಪು, ಸ್ವಲ್ಪ ಕರಿಬೇವು, 1 ಕಪ್ ನೀರು, 1 ಕಪ್ ಕಾಯಿಹಾಲು, 1 ಕಪ್ ಅರ್ಧ ಗಂಟೆ ನೀರಿನಲ್ಲಿ ನೆನೆಸಿಟ್ಟ ಬಾಸುಮತಿ ಅಕ್ಕಿ, 2 ಚಮಚ ಹೆಚ್ಚಿದ ಕೊತ್ತಂಬರಿ ಸೊಪ್ಪು, 2 ಚಮಚ ಪುದೀನಾ.

ಮಾಡುವ ವಿಧಾನ :

ಮಸಾಲಾ ಪೇಸ್ಟ್‌ಗೆ ಬೇಕಾದುದನ್ನೆಲ್ಲವನ್ನೂ ಮಿಕ್ಸಿ ಮಾಡಿ ಪೇಸ್ಟ್ ಮಾಡಿಟ್ಟುಕೊಳ್ಳಿ. 

ದಸರಾ ಆಹಾರ ಮೇಳದಲ್ಲಿ ಏಡಿ ಸಾರು, ಬಿದಿರು ಕಳ್ಳೆ ಪಲ್ಯ..!

ಈಗ ಕುಕ್ಕರ್‌ನಲ್ಲಿ 2 ಚಮಚ ತುಪ್ಪ ಹಾಗೂ 1 ಚಚಮ ಎಣ್ಣೆ ಹಾಕಿ ಬಿಸಿ ಮಾಡಿ. ಇದಕ್ಕೆ ಸ್ಟಾರ್, ಚಕ್ಕೆ, ಲವಂಗ, ಏಲಕ್ಕಿ ಎಲ್ಲವನ್ನೂ ಹಾಕಿ ಸುಗಂಧ ಹೊಮ್ಮುವವರೆಗೆ ಹುರಿಯಿರಿ. ನಂತರ ಹೆಚ್ಚಿಟ್ಟುಕೊಂಡ ಈರುಳ್ಳಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಗೂ ಹಸಿಮೆಣಸು ಹಾಕಿ ಹುರಿಯಿರಿ. ಈರುಳ್ಳಿ ಕಂದು ಬಣ್ಣಕ್ಕೆ ತಿರುಗಿದ ಬಳಿಕ ಟೊಮ್ಯಾಟೋ ಸೇರಿಸಿ ಮೆತ್ತಗಾಗುವರೆಗೆ ಹುರಿಯಿರಿ.
ಈಗ ಕ್ಯಾರೆಟ್, ಬಟಾಣಿ, ಬೀನ್ಸ್, ಆಲೂಗಡ್ಡೆ, ಹೂಕೋಸು ಹಾಗೂ ಉಪ್ಪು ಸೇರಿಸಿ ಚೆನ್ನಾಗಿ ಕಲೆಸಿ ಹುರಿಯುತ್ತಿರಿ. ತರಕಾರಿ ಪರಿಮಳ ಬಂದ ಬಳಿಕ ಇದಕ್ಕೆ ಮುಂಚೆಯೇ ತಯಾರಿಸಿಟ್ಟುಕೊಂಡ ಮಸಾಲಾ ಪೇಸ್ಟ್ ಹಾಗೂ ಕರಿಬೇವಿನ ಎಲೆಗಳನ್ನು ಹಾಕಿ. ಒಂದು ನಿಮಿಷದ ಕಾಲ ಹುರಿಯಿರಿ. 

1 ಕಪ್ ನೀರು ಹಾಗೂ 1 ಕಪ್ ಕಾಯಿಹಾಲನ್ನು ಸೇರಿಸಿ ಕುದಿ ಬರುವವರೆಗೆ ಸೌಟಾಡಿಸುತ್ತಿರಿ. ನಂತರ ಬಾಸುಮತಿ ಅಕ್ಕಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಇದಕ್ಕೆ ಕೊತ್ತಂಬರಿ ಸೊಪ್ಪು ಹಾಗೂ ಪುದೀನಾ ಸೇರಿಸಿ. ಕುಕ್ಕರ್ ಮುಚ್ಚಳ ಹಾಕಿ ಮೀಡಿಯಂ ಉರಿಯಲ್ಲಿ 2 ವಿಶಲ್ ಬರಿಸಿ. ಸ್ವಲ್ಪ ತಣ್ಣಗಾದ ಬಳಿಕ ರಾಯ್ತಾದೊಂದಿಗೆ ಬ್ರಿಂಜಿ ರೈಸ್ ಸವಿಯಿರಿ. 

click me!