ಹೆಸರು ಕೇಳಿದ್ರೆ ಬಾಯಲ್ಲಿ ನೀರು ತರಿಸುವ ಗೊಲ್ಗಪ್ಪಾ ಆರೋಗ್ಯಕ್ಕೂ ಒಳ್ಳೆಯದು. ಇದ್ರ ಸೇವನೆಯಿಂದ ಅನೇಕ ಲಾಭವಿದೆ. ಹಾಗಂತ ಮಿತಿಮೀರಿ ತಿಂದು ಹಾಸಿಗೆ ಹಿಡಿದ್ಮೇಲೆ ನಮ್ಮನ್ನು ಬೈಗೊಳ್ಬೇಡಿ. ಮಿತವಾಗಿ ತಿಂದು ಆರೋಗ್ಯ ಕಾಪಾಡಿಕೊಳ್ಳಿ.
ಗೋಲ್ಗಪ್ಪಾ ಎಂದಾಕ್ಷಣ ಎಲ್ಲರ ಬಾಯಲ್ಲೂ ನೀರು ಬರುತ್ತೆ. ಎಲ್ಲ ವಯೋಮಾನದವರೂ ಇಷ್ಟಪಡುವ ಸ್ಟ್ರೀಟ್ ಫುಡ್ ಇದು. ಸಂಜೆಯಾದ ತಕ್ಷಣ ರಸ್ತೆಯ ಬದಿಯ ತಳ್ಳುಗಾಡಿಗಳಲ್ಲಿ ಸಿಗುವ ಗೋಲ್ಗಪ್ಪಾವನ್ನು ತಿನ್ನುವುದರಲ್ಲಿರುವ ಆನಂದ ಬೇರೆ ಯಾವ ಫುಡ್ ಗಳಲ್ಲೂ ಸಿಗೊಲ್ಲ.
ಗರಿಗರಿಯಾದ ಪುರಿ, ಪುದೀನ, ಆಲೂಗಡ್ಡೆ (Potato) ಹಾಗೂ ಈರುಳ್ಳಿ, ಹುಣಸೇಹಣ್ಣು ಮುಂತಾದ ಎಲ್ಲ ಪದಾರ್ಥಗಳು ಗೋಲ್ಗಪ್ಪಾ (Golgappa) ದ ರುಚಿಯನ್ನು ಇಮ್ಮಡಿಗೊಳಿಸುತ್ತವೆ. ಮನೆಯಲ್ಲೇ ಕುಳಿತು ಬೇಸರವೆನಿಸದಾಗ ಅಥವಾ ಏನಾದರೂ ಖಾರ ಖಾರದ ತಿಂಡಿಯನ್ನು ತಿನ್ನಬೇಕೆಂದುಕೊಳ್ಳುವವರಿಗೆ ಪಾನಿ ಪುರಿ (Pani puri) ಮೊದಲು ನೆನಪಾಗುತ್ತೆ. ಮಳೆಗಾಲ, ಚಳಿಗಾಲದಲ್ಲಂತೂ ಇದರ ಬೇಡಿಕೆ ಇನ್ನಷ್ಟು ಹೆಚ್ಚುತ್ತದೆ. ಜಿಟಿ ಜಿಟಿ ಮಳೆಯಲ್ಲಿ ಹಾಗೂ ಚುಮು ಚುಮು ಚಳಿ ಗೋಲ್ಗಪ್ಪಾ ತಿನ್ನುವ ಬಯಕೆಯನ್ನು ಹೆಚ್ಚಿಸುತ್ತದೆ.
ನಿಂಬೆ, ಮಾವಿನ ಚಿತ್ರಾನ್ನ ತಿಂದು ಬೇಜಾರಾಗಿದ್ಯಾ, ಈ ಸ್ಪೆಷಲ್ ವೀಳ್ಯದೆಲೆ ಚಿತ್ರಾನ್ನ ಟ್ರೈ ಮಾಡಿ
ಕೆಲವರು ಸ್ಟ್ರೀಟ್ ಫುಡ್ ಎಂದಾಕ್ಷಣ ಅದು ಆರೋಗ್ಯಕ್ಕೆ ಒಳ್ಳೆಯದಲ್ಲ. ಅದರಿಂದ ನಮ್ಮ ಶರೀರಕ್ಕೆ ಹಾನಿಯಾಗುತ್ತೆ ಎಂದು ಮೂಗು ಮುರೀತಾರೆ. ಆರೋಗ್ಯ ಹಾಳಾಗುತ್ತೆ ಎನ್ನುವ ಕಾರಣಕ್ಕೆ ಅನೇಕ ಮಂದಿ ಗೋಲ್ಗಪ್ಪಾ ತಿನ್ನುವ ಮನಸ್ಸಿದ್ದರೂ ಅದನ್ನು ತಿನ್ನಲು ಹಿಂದೇಟು ಹಾಕುತ್ತಾರೆ. ಅಂತವರು ಇನ್ಮುಂದೆ ಯಾವ ಭಯವೂ ಇಲ್ಲದೇ ಗೋಲ್ಗಪ್ಪಾ ಸವಿಯಬಹುದು. ಏಕೆಂದರೆ ನಾಲಿಗೆಗೆ ರುಚಿ ಎನಿಸುವ ಗೋಲ್ಗಪ್ಪಾ ಆರೋಗ್ಯಕ್ಕೂ ಬಹಳ ಒಳ್ಳೆಯದು ಎಂಬುದು ಸಾಬೀತಾಗಿದೆ. ಇದರಿಂದ ನಮ್ಮ ಶರೀರಕ್ಕೆ ಅನೇಕ ಲಾಭಗಳಿವೆ.
ಗೋಲ್ಗಪ್ಪಾ ನಿಮ್ಮ ತೂಕ ಇಳಿಕೆಗೆ ಸಹಕಾರಿ : ಗೋಲ್ಗಪ್ಪಾ ತಿಂದರೆ ತೂಕ ಹೆಚ್ಚಾಗಬಹುದು ಎನ್ನುವ ಕಾರಣಕ್ಕೆ ನೀವು ಅದರ ಸೇವನೆಯನ್ನು ನಿಲ್ಲಿಸಿದ್ದರೆ ಇನ್ನು ಯಾವುದೇ ಚಿಂತೆಯಿಲ್ಲದೇ ಗೋಲ್ಗಪ್ಪಾ ತಿನ್ನಬಹುದು. ಏಕೆಂದರೆ ಇದರಲ್ಲಿರುವ ಕೊತ್ತುಂಬರಿ ಸೊಪ್ಪು, ಪುದೀನ, ಮಾವಿನ ಕಾಯಿ, ಇಂಗು ಮುಂತಾದವು ಶರೀರದಲ್ಲಿ ಬೊಜ್ಜು ಬೆಳೆಯುವುದನ್ನು ತಡೆಯುತ್ತದೆ. ಇದರಲ್ಲಿರುವ ಇಂಗು ಮತ್ತು ಹುಣಸೇಹಣ್ಣು ಜೀರ್ಣಕ್ರಿಯೆಯು ಸರಾಗವಾಗಿ ನಡೆಯುವಂತೆ ಮಾಡುತ್ತದೆ. ಇದರಿಂದ ಹೊಟ್ಟೆಯ ಸಂಬಂಧಿಸಿರುವ ಅನೇಕ ಸಮಸ್ಯೆಗಳು ದೂರವಾಗುತ್ತವೆ.
ಜೀರ್ಣಕ್ರಿಯೆಗೆ ಸಹಾಯಕಾರಿ : ಗೋಲ್ಗಪ್ಪಾ ಸೇವನೆ ಜೀರ್ಣಕ್ರಿಯೆಯನ್ನು ಚುರುಕುಗೊಳಿಸುತ್ತದೆ. ಇದರಲ್ಲಿ ಬಳಕೆಯಾಗುವ ಪುದೀನ, ಜೀರಿಗೆ, ಇಂಗು ಎಲ್ಲವೂ ಜೀರ್ಣಕ್ರಿಯೆಗೆ ಬಹಳ ಒಳ್ಳೆಯದು. ಜೀರಿಗೆ, ಇಂಗು ದೇಹದಲ್ಲಿ ಗ್ಯಾಸ್ ಉಂಟಾಗುವುದನ್ನು ತಡೆಯುತ್ತದೆ.
Health tips: ಯಾವಾಗಲೂ ಬಾಯಿ ಹುಣ್ಣಾಗುತ್ತಾ? ಮನೆಯಲ್ಲೇ ಕಂಡು ಕೊಳ್ಳಿ ಪರಿಹಾರ
ಬಾಯಿಯಲ್ಲಿ ಏಳುವ ಗುಳ್ಳೆಗಳಿಗೆ ಮದ್ದು : ಕೆಲವರಿಗೆ ಮತ್ತೆ ಮತ್ತೆ ಬಾಯಿಯಲ್ಲಿ ಹುಣ್ಣು ಅಥವಾ ಗುಳ್ಳೆಗಳು ಏಳುತ್ತವೆ. ಶರೀರ ಹೆಚ್ಚು ಉಷ್ಣವಾದಾಗ ಬಾಯಿಯಲ್ಲಿ ಈ ರೀತಿಯ ಗುಳ್ಳೆಗಳು ಕಾಣಿಸಿಕೊಳ್ಳುತ್ತದೆ. ಗೋಲ್ಗಪ್ಪಾ ತಿನ್ನುವುದರಿಂದ ಈ ಗುಳ್ಳೆಗಳು ಗುಣಮುಖವಾಗುತ್ತದೆ. ಗೋಲ್ಗಪ್ಪಾ ಸೇವನೆ ನಂತ್ರ ಪಾನಿಯನ್ನು ಕುಡಿದಾಗ ಬಾಯಿಯಿಂದ ಹೆಚ್ಚು ಲಾಲಾರಸ ಹೊರಬರುತ್ತೆ. ಅದರಿಂದ ಬಾಯಿಯಲ್ಲಿನ ಗುಳ್ಳೆಗಳು ಕಡಿಮೆಯಾಗುತ್ತದೆ.
ಗೋಲ್ಗಪ್ಪಾದಿಂದ ಶೀತ ಮತ್ತು ಕೆಮ್ಮು ಕಡಿಮೆ : ಗೋಲ್ಗಪ್ಪಾದಲ್ಲಿ ಬಳಸಲಾಗುವ ಪುದೀನ ಮತ್ತು ಇಂಗಿನಿಂದ ಕೆಮ್ಮು ಮತ್ತು ಶೀತದಂತಹ ಖಾಯಿಲೆಗಳು ವಾಸಿಯಾಗುತ್ತದೆ. ಪುದೀನ ಕೂದಲು, ಚರ್ಮ ಹಾಗೂ ಅಸ್ತಮಾ ತೊಂದರೆಯನ್ನು ಕೂಡ ನಿವಾರಿಸುತ್ತದೆ. ವಾಕರಿಕೆ ಸಮಸ್ಯೆ ಹೊಂದಿರುವವರಿಗೂ ಪುದೀನ ಬಹಳ ಒಳ್ಳೆಯದು. ಗೋಲ್ಗಪ್ಪಾದಲ್ಲಿ ಹೇರಳವಾಗಿ ಬಳಕೆಯಾಗುವ ಪುದೀನ ಎಲೆಗಳು ನೆನಪಿನ ಶಕ್ತಿಯನ್ನು ಕೂಡ ಸುಧಾರಿಸುತ್ತದೆ.
ಮೂಡ್ ಫ್ರೆಶ್ (Mood Fresh): ಬೇಸಿಗೆಯಲ್ಲಿ ವಿಪರೀತ ಸೆಕೆ ಇರುವಾಗ ಗೋಲ್ಗಪ್ಪಾ ತಿಂದರೆ ಮೂಡ್ ಚೆನ್ನಾಗಿರುತ್ತದೆ. ಪಾನಿ ಸೇವನೆ ಮಾಡೋದ್ರಿಂದ ಬಾಯಾರಿಕೆಯೂ ಕಡಿಮೆಯಾಗುತ್ತದೆ.
ಮಲಬದ್ಧತೆ ದೂರ (Best Medicine for Constipation): ಆರೋಗ್ಯದಲ್ಲಿ ಏರುಪೇರಾದಾಗ ಕೆಲವೊಮ್ಮೆ ಯಾವ ಆಹಾರವೂ ರುಚಿಸುವುದೇ ಇಲ್ಲ. ಹೀಗೆ ಆಹಾರಗಳು ರುಚಿಸದೇ ಇದ್ದಾಗ ಅಥವಾ ನಾಲಿಗೆ ಕೆಟ್ಟಾಗ ಗೋಲ್ಗಪ್ಪಾ ತಿಂದರೆ ಅದು ಬಾಯಿಯ ರುಚಿಯನ್ನು ಹೆಚ್ಚಿಸುತ್ತದೆ. ಇದರಿಂದ ಎಸಿಡಿಟಿ ಸಮಸ್ಯೆಯೂ ಶಮನವಾಗುತ್ತದೆ. ಕೆಲವು ಸ್ಟ್ರೀಟ್ ಫುಡ್ ಗಳಿಂದ ಅನೇಕರಿಗೆ ಮಲಬದ್ಧತೆಯ ಸಮಸ್ಯೆ ಎದುರಾಗುತ್ತದೆ. ಆದರೆ ಗೋಲ್ಗಪ್ಪಾ ತಿನ್ನೋದ್ರಿಂದ ಮಲಬದ್ಧತೆಯ ತೊಂದರೆ ದೂರವಾಗುತ್ತದೆ.