
ಜನರು ಈಗ ತಮ್ಮ ಆರೋಗ್ಯ (health)ದ ಬಗ್ಗೆ ಅತೀಯಾದ ಕಾಳಜಿ ತೋರಿಸ್ತಿದ್ದಾರೆ. ಅರಿಶಿನ (turmeric), ಗ್ರೀನ್ ಟೀ (green tea) ಸೇರಿದಂತೆ ಅನೇಕ ಆಹಾರ ಪದಾರ್ಥವನ್ನು ಸಪ್ಲಿಮೆಂಟರಿ ರೂಪದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸೇವನೆ ಮಾಡ್ತಿದ್ದಾರೆ. ಯಾವುದೇ ಆಹಾರ ಆಗ್ಲಿ ಅದು ಮಿತವಾಗಿರಬೇಕು. ಒಳ್ಳೆಯದು ಅನ್ನೋ ಕಾರಣಕ್ಕೆ ನೀವು ಅತಿಯಾಗಿ ಯಾವುದನ್ನು ಸೇವನೆ ಮಾಡಿದ್ರೂ ಅಪಾಯ ಕಟ್ಟಿಟ್ಟಬುತ್ತಿ. ತಜ್ಞರ ಪ್ರಕಾರ, ಕೆಲವೊಂದು ಆಹಾರ, ಮಸಾಲೆ ಪದಾರ್ಥಗಳನ್ನು ನಾವು ಮಿತವಾಗಿ ಸೇವನೆ ಮಾಡ್ಬೇಕು. ನಿತ್ಯ ಬಳಸುವ ಆಹಾರ ಎಷ್ಟೇ ಒಳ್ಳೆಯದಿದ್ರೂ ಅದೂ ಹಾನಿಯುಂಟು ಮಾಡುತ್ತದೆ.
ಅರಿಶಿನ : ಆರೋಗ್ಯಕರವೆಂದು ಪರಿಗಣಿಸಲಾದ ಅರಿಶಿನ ಅತಿಯಾದ್ರೆ ಅಪಾಯಕಾರಿ. ಇತ್ತೀಚಿನ ವರದಿಗಳ ಪ್ರಕಾರ, ಅರಿಶಿನದ ಅತಿಯಾದ ಸೇವನೆಯಿಂದ ಲಿವರ್ ಗೆ ಹಾನಿಯಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಲಿವರ್ವೈಫಲ್ಯದ ಪ್ರಕರಣ ಹೆಚ್ಚುತ್ತಿವೆ. ಬರೀ ಅರಿಶಿನದಿಂದ ಲಿವರ್ ಹಾಳಾಗ್ತಿದೆ ಎಂದಲ್ಲ. ಲಿವರ್ಗೆ ಹಾನಿ ಮಾಡುವ ಅನೇಕ ಆಹಾರ ಪದಾರ್ಥವಿದೆ. ಆದ್ರೆ ಅದರಲ್ಲಿ ಅರಿಶಿನದ ಪಾತ್ರವನ್ನೂ ಅಲ್ಲಗಳೆಯುವಂತಿಲ್ಲ. ಕೆಲ ದಿನಗಳ ಹಿಂದೆ ಸೋಶಿಯಲ್ ಮೀಡಿಯಾ ತಜ್ಞರ ಸಲಹೆ ಮೇರೆಗೆ ಮಹಿಳೆಯೊಬ್ಬಳು ಪ್ರತಿ ದಿನ 2,250 ಮಿಗ್ರಾಂ ಅರಿಶಿನ ಸೇವನೆ ಶುರು ಮಾಡಿದ್ದಳು. ಈ ರೂಟಿನ್ ಶುರು ಮಾಡಿದ ಕೆಲವೇ ದಿನಗಳಲ್ಲಿ ಆಕೆ ಆರೋಗ್ಯ ಹದಗೆಟ್ಟಿತ್ತು. ಆಕೆ ಗಂಭೀರ ಯಕೃತ್ತಿನ ಗಾಯದಿಂದ ಬಳಲುತ್ತಿದ್ದಳು. ಆಕೆಯ ಯಕೃತ್ತಿನ ಕಿಣ್ವಗಳು ಸಾಮಾನ್ಯಕ್ಕಿಂತ 60 ಪಟ್ಟು ಹೆಚ್ಚಾಗಿದ್ದವು. ಸ್ವಲ್ಪ ತಡವಾಗಿದ್ರೂ ಯಕೃತ್ತಿನ ಕಸಿ ಮಾಡುವ ಅನಿವಾರ್ಯತೆ ಎದುರಾಗ್ತಾ ಇತ್ತು. ನಿತ್ಯ ಅರಿಶಿನದ ಬಳಕೆ ಸುರಕ್ಷಿತ ನಿಜ. ಆದ್ರೆ ಹೆಚ್ಚಿನ ಪ್ರಮಾಣದಲ್ಲಿ ಅದನ್ನು ಪೂರಕವಾಗಿ ಸೇವಿಸಿದಾಗ ಅದು ಯಕೃತ್ತಿಗೆ ಅಪಾಯಕಾರಿ.
ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ, 150 ಪೌಂಡ್ ತೂಕದ ವ್ಯಕ್ತಿಗೆ ಪ್ರತಿದಿನ 200 ಮಿಲಿಗ್ರಾಂ ಅರಿಶಿನ ಸುರಕ್ಷಿತವಾಗಿದೆ. ಆದ್ರೆ ಅನೇಕ ಪೂರಕಗಳು ಇದಕ್ಕಿಂತ 10 ಪಟ್ಟು ಹೆಚ್ಚಿನ ಪ್ರಮಾಣವನ್ನು ಹೊಂದಿರುತ್ತವೆ. ಅತಿಯಾದ ಅರಿಶಿನ ಸೇವನೆ ರಕ್ತ ತೆಳುಗೊಳಿಸುವ ಔಷಧಿಗಳೊಂದಿಗೆ ಸಂಯೋಜಿಸಿದಾಗ ರಕ್ತಸ್ರಾವ ಅಥವಾ ಪಾರ್ಶ್ವವಾಯು ಅಪಾಯವನ್ನು ಹೆಚ್ಚಿಸುತ್ತದೆ.
ಗ್ರೀನ್ ಟೀ : ಜನರು ತೂಕ ಇಳಿಕೆಗೆ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಗ್ರೀನ್ ಟೀ ಸೇವನೆ ಮಾಡ್ತಿದ್ದಾರೆ. ಇದೂ ಕೂಡ ಅತಿಯಾದ್ರೆ ಯಕೃತ್ತಿನ ಹಾನಿ ಅಪಾಯವಿದೆ. ಅಲ್ಲದೆ ಹೆಪಟೈಟಿಸ್ ಮತ್ತು ಕೆಲವೊಮ್ಮೆ ಯಕೃತ್ತಿನ ಕಸಿಗೆ ಕಾರಣವಾಗಬಹುದು. 800 ಮಿಲಿಗ್ರಾಂಗಳಿಗಿಂತ ಹೆಚ್ಚು ಇಜಿಸಿಜಿ (EGCG) ತೆಗೆದುಕೊಳ್ಳುವುದು ಹಾನಿಕಾರಕ. ಇದರಲ್ಲಿರುವ ಕೆಫೀನ್ ರಕ್ತದೊತ್ತಡ ಮತ್ತು ಹೃದಯ ಬಡಿತವನ್ನು ಹೆಚ್ಚಿಸುತ್ತದೆ.
ನಿಯಾಸಿನ್ : ಕೊಲೆಸ್ಟ್ರಾಲ್ ಕಡಿಮೆ ಮಾಡಲು ಬಳಸುವ ಹೆಚ್ಚಿನ ಪ್ರಮಾಣದ ನಿಯಾಸಿನ್ ಲಿವರ್ ಗೆ ಹಾನಿ ಮಾಡುತ್ತದೆ. ಇದು ಯಕೃತ್ತಿನ ಕಿಣ್ವಗಳನ್ನು ಹೆಚ್ಚಿಸುವ ಸಾಧ್ಯತೆ ಇದೆ. ಕೆಲವೊಮ್ಮೆ ಯಕೃತ್ತಿನ ವೈಫಲ್ಯಕ್ಕೆ ಕಾರಣವಾಗುತ್ತದೆ.
ಕೆಂಪು ಯೀಸ್ಟ್ ಅಕ್ಕಿ : ಇದನ್ನು ಕೊಲೆಸ್ಟ್ರಾಲ್ ಕಡಿಮೆ ಮಾಡಲು ಬಳಸಲಾಗುತ್ತದೆ. ಅದರಲ್ಲಿರುವ ಮೊನಾಕೋಲಿನ್ಗಳು ಮತ್ತು ಸಿಟ್ರಿನಿನ್ನಂತಹ ಕೆಲವು ಅಂಶಗಳು ಲಿವರ್ ಮತ್ತು ಮೂತ್ರಪಿಂಡಗಳಿಗೆ ಹಾನಿ ಮಾಡಬಹುದು. ಈ ಕಾರಣದಿಂದಾಗಿ, ಸ್ನಾಯು ನೋವು, ಯಕೃತ್ತಿನ ಕಿಣ್ವಗಳ ಹೆಚ್ಚಳ ಮತ್ತು ಕೆಲವೊಮ್ಮೆ ಯಕೃತ್ತಿನ ವೈಫಲ್ಯದಂತಹ ಗಂಭೀರ ಸಮಸ್ಯೆಗಳು ಸಹ ಕಾಡುತ್ತವೆ.
ಇಷ್ಟೇ ಅಲ್ಲ ತೂಕ ಇಳಿಸಿಕೊಳ್ಳಲು ಯೋಹಿಂಬೈನ್ ತೊಗಟೆಯನ್ನೂ ಜನರು ಬಳಸ್ತಾರೆ. ಇದು ಕೂಡ ನರಮಂಡಲ ಮತ್ತು ಹೃದಯದ ಮೇಲೆ ಗಂಭೀರ ಪರಿಣಾಮಗಳನ್ನು ಬೀರುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.