
ಒಂದ್ಕಡೆ ಜಿಲೇಬಿ, ಇನ್ನೊಂದು ಕಡೆ ಸಮೋಸಾ. ಒಂದು ಸಿಹಿ ತಿಂಡಿ, ಇನ್ನೊಂದು ಖಾರದ ತಿಂಡಿ. ಒಂದಾದ್ಮೇಲೆ ಒಂದನ್ನು ತಿಂತಾ ಹೋದ್ರೆ ಪ್ಲೇಟ್ ಖಾಲಿಯಾಗಿದ್ದೇ ತಿಳಿಯೋದಿಲ್ಲ. ಅನೇಕರ ಫೆವರೆಟ್ ಆಹಾರದಲ್ಲಿ ಜಿಲೇಬಿ ಹಾಗೂ ಸಮೋಸಾ ಸೇರಿದೆ. ಆದ್ರೆ ಇನ್ಮುಂದೆ ಈ ಜಿಲೇಬಿ ಹಾಗೂ ಸಮೋಸಾ ಪ್ಯಾಕ್ ಮೇಲೂ ಸಿಗರೇಟ್ ಮೇಲೆ ನೋಡುವಂತ ಆರೋಗ್ಯಕ್ಕೆ ಹಾನಿಕರ ಸ್ಟಿಕ್ಕರ್ ನಿಮಗೆ ಕಾಣ್ಬಹುದು. ನಾವು ತಮಾಷೆ ಮಾಡ್ತಿಲ್ಲ. ಕೇಂದ್ರ ಸರ್ಕಾರ, ಜಂಕ್ ಫುಡ್ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಮುಂದಾಗಿದೆ. ಹಾಗಾಗಿಯೇ ಜಿಲೇಬಿ, ಸಮೋಸಾ, ವಡಾ ಪಾವ್ ನಂತಹ ಆಹಾರದ ಮೇಲೆ ಎಚ್ಚರಿಕೆ ಸಂದೇಶ ನೀಡಲು ಮುಂದಾಗಿದೆ. ಭಾರತ ಸರ್ಕಾರದ ಆರೋಗ್ಯ ಸಚಿವಾಲಯ ದೇಶಾದ್ಯಂತ ಕೇಂದ್ರ ಸಂಸ್ಥೆಗಳಿಗೆ ಎಣ್ಣೆ ಮತ್ತು ಸಕ್ಕರೆ ಮಂಡಳಿಗ ಸ್ಥಾಪಿಸಲು ಆದೇಶಿಸಿದೆ.
ಇನ್ಮುಂದೆ ಬೀದಿ ಬದಿ ಇರಲಿ ಅಥವಾ ಅಂಗಡಿ, ಹೊಟೇಲ್ ಇರಲಿ, ಅಲ್ಲಿ ಇಂಥ ಆಹಾರ ಮಾರಾಟ ಮಾಡುವ ವ್ಯಾಪಾರಸ್ಥರು, ಈ ತಿಂಡಿಗಳು ಆರೋಗ್ಯದ ಮೇಲೆ ಎಷ್ಟು ಕೆಟ್ಟ ಪರಿಣಾಮ ಬೀರುತ್ತವೆ ಅಥವಾ ಅದರಲ್ಲಿ ಎಷ್ಟು ಸಕ್ಕರೆ ಅಥವಾ ಯಾವುದೇ ಇತರ ವಸ್ತುವಿದೆ ಎಂಬುದನ್ನು ಹೇಳಬೇಕಾಗುತ್ತದೆ. ಜಂಕ್ ಫುಡ್ ಅನ್ನು ಸಿಗರೇಟಿನಂತೆಯೇ ಅಪಾಯಕಾರಿ ಎಂದು ಘೋಷಿಸಲು ಸರ್ಕಾರ ಮುಂದಾಗಿದೆ. ಶೀಘ್ರದಲ್ಲೇ, ಲಡ್ಡು, ವಡಾ ಪಾವ್ ಮತ್ತು ಪಕೋಡಾಗಳಂತಹ ರುಚಿಕರವಾದ ತಿಂಡಿಗಳ ಜೊತೆ ಎಚ್ಚರಿಕೆ ಫಲಕಗಳು ಕಾಣಿಸಿಕೊಳ್ಳಲಿವೆ.
AIIMS ನಾಗ್ಪುರ ಈ ಆದೇಶವನ್ನು ದೃಢಪಡಿಸಿದೆ. ಶೀಘ್ರದಲ್ಲೇ ಈ ಎಚ್ಚರಿಕೆ ಫಲಕಗಳನ್ನು ಅಲ್ಲಿನ ಕ್ಯಾಂಟೀನ್ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಸ್ಥಾಪಿಸಲಾಗುವುದು ಎಂಬ ಮಾಹಿತಿ ನೀಡಿದೆ. ಆಹಾರದ ಲೇಬಲಿಂಗ್ ಸಿಗರೇಟಿನ ಎಚ್ಚರಿಕೆಯಷ್ಟೇ ಗಂಭೀರವಾಗಿಸಲು ಇದು ಮೊದಲ ಹೆಜ್ಜೆಯಾಗಿದೆ. ಸಕ್ಕರೆ ಮತ್ತು ಟ್ರಾನ್ಸ್ ಕೊಬ್ಬು ಈಗ ಹೊಸ ತಂಬಾಕು ಎನ್ನಲಾಗಿದೆ. AIIMS ನಾಗ್ಪುರ ಅಧಿಕಾರಿಗಳು ಈ ಆದೇಶವನ್ನು ಸ್ವೀಕರಿಸಿದ್ದಾರೆ. ಫಾಸ್ಟ್ ಫುಡ್ ನಿಷೇಧಿಸುವ ಬದಲು, ಎಚ್ಚರಿಕೆ ಫಲಕಗಳ ಮೂಲಕ ಜನರಿಗೆ ಜಾಗೃತಿ ನೀಡಲಾಗ್ತಿದೆ. ಪ್ರತಿ ರುಚಿಕರವಾದ ಆಹಾರದ ಮೇಲೆ ಯೋಚಿಸಿ, ಎಚ್ಚರಿಕೆಯಿಂದ ತಿನ್ನಿರಿ ಎಂಬ ಫಲಕವಿರುತ್ತದೆ. ಜಾಮೂನು ಆರೋಗ್ಯಕ್ಕೆ ಹಾನಿಕರ ಎನ್ನುವ ಬದಲು ಜಾಮೂನಿನಲ್ಲಿ ಐದು ಟೀ ಚಮಚ ಸಕ್ಕರೆ ಇದೆ ಎಂದಾಗ ಜನರು ತಿನ್ನಲು ಹಿಂದೆ ಮುಂದೆ ನೋಡ್ತಾರೆ. ಇದು ಪ್ರಧಾನಿ ನರೇಂದ್ರ ಮೋದಿಯವರ ಫಿಟ್ ಇಂಡಿಯಾ ಅಭಿಯಾನದ ಮುಂದಿನ ಹೆಜ್ಜೆ ಎನ್ನಬಹುದು. ಅವರು ಎಣ್ಣೆ ಬಳಕೆಯನ್ನು ಶೇಕಡಾ 10 ರಷ್ಟು ಕಡಿಮೆ ಮಾಡುವಂತೆ ಹೇಳಿದ್ದರು.
ಭಾರತದಲ್ಲಿ ಬೊಜ್ಜಿನ ಕಾಯಿಲೆ ವೇಗವಾಗಿ ಹೆಚ್ಚಾಗ್ತಿದೆ. ಒಂದು ಅಂದಾಜಿನ ಪ್ರಕಾರ, 2050 ರ ವೇಳೆಗೆ, 44.9 ಕೋಟಿ ಭಾರತೀಯರು ಬೊಜ್ಜಿನ ಸಮಸ್ಯೆಯಿಂದ ಬಳಲಲಿದ್ದಾರೆ. ನಗರ ಪ್ರದೇಶಗಳಲ್ಲಿ ಪ್ರತಿ ಐದರಲ್ಲಿ ಒಬ್ಬ ವಯಸ್ಕರು ಬೊಜ್ಜಿನಿಂದ ಬಳಲುತ್ತಿದ್ದಾರೆ. ಕಳಪೆ ಆಹಾರ ಪದ್ಧತಿ ಮತ್ತು ಕಡಿಮೆ ದೈಹಿಕ ಚಟುವಟಿಕೆಯಿಂದಾಗಿ ಮಕ್ಕಳಲ್ಲಿ ಬೊಜ್ಜು ಹೆಚ್ಚುತ್ತಿದೆ. ಆರೋಗ್ಯ ಸಚಿವಾಲಯದ ಈ ಕ್ರಮವು ತಿನ್ನುವ ಮತ್ತು ಕುಡಿಯುವ ಅಭ್ಯಾಸಗಳ ಮೇಲೆ ನಿಗಾ ಇಡುವ ಪ್ರಯತ್ನವಾಗಿದೆ. ಈ ಫಲಕಗಳು ಎಚ್ಚರಿಕೆಗಳನ್ನು ನೀಡುವುದಲ್ಲದೆ, ಜನರು ತಮ್ಮ ಆರೋಗ್ಯದ ಬಗ್ಗೆ ಯೋಚಿಸಲು ಅವಕಾಶವನ್ನು ನೀಡುತ್ತವೆ. ಸರ್ಕಾರದ ಈ ಉಪಕ್ರಮವು ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಹೃದಯ ಕಾಯಿಲೆಯಂತಹ ಸಾಂಕ್ರಾಮಿಕವಲ್ಲದ ಕಾಯಿಲೆಗಳ ವಿರುದ್ಧದ ಹೋರಾಟದ ಒಂದು ಭಾಗವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.