
ಒಂದೊಂದು ಹಣ್ಣು ಒಂದೊಂದು ರೀತಿಯ ಪೋಷಕಾಂಶಗಳನ್ನು ಹೊಂದಿರುತ್ತದೆ. ಆಯಾ ಸೀಸನ್ ಗೆ ತಕ್ಕಂತೆ ಕಾಡುಗಳಲ್ಲಿ ಬಿಡುವ ಹಣ್ಣುಗಳಂತೂ ತಿನ್ನಲು ಎಷ್ಟು ರುಚಿಯೋ ಅಷ್ಟೇ ಆರೋಗ್ಯಕ್ಕೂ ಒಳ್ಳೆಯದು. ಕಾಡಿನಲ್ಲಿ ಬೆಳೆಯುವ ಹಣ್ಣುಗಳಲ್ಲಿ ಯಾವುದೇ ರೀತಿಯ ರಾಸಾಯನಿಕಗಳು ಇರುವುದಿಲ್ಲ. ಅದೇ ಈಗ ಮಾರುಕಟ್ಟೆಯಲ್ಲಿ ಸಿಗುವ ಹಣ್ಣುಗಳಲ್ಲಿ ಅರ್ಧಕ್ಕಿಂತ ಹೆಚ್ಚು ಹಣ್ಣುಗಳಿಗೆ ಔಷಧಿ ಸಿಂಪಡಿಸಿ ಬೆಳೆದಿರುತ್ತಾರೆ. ಕಾಡಿನಲ್ಲಿ ಬೆಳೆಯುವ ಹಣ್ಣು (Fruit) ಗಳ ಪೈಕಿ ಪುನರ್ಪುಳಿ ಹಣ್ಣು ಕೂಡ ಒಂದು. ಇದನ್ನು ಕೋಕಂ (Kokum) ಹಣ್ಣು, ಮುರುಗಲು ಎಂದು ಕೂಡ ಕರೆಯುತ್ತಾರೆ. ಇದು ಮಲೆನಾಡು ಹಾಗೂ ಕರಾವಳಿ ಪ್ರದೇಶದಲ್ಲಿ ಹೆಚ್ಚು ಕಾಣಸಿಗುತ್ತದೆ. ಆಹಾರ, ಔಷಧಿ (medicine) ಗಳಲ್ಲಿ ಬಳಸುವ ಈ ಹಣ್ಣು ಪೋಷಕಾಂಶಗಳ ಆಗರವಾಗಿದೆ. ಇದರ ಎಲೆ, ಹಣ್ಣು, ಬೀಜ, ಸಿಪ್ಪೆ ಎಲ್ಲದರಲ್ಲೂ ಔಷಧೀಯ ಗುಣಗಳಿವೆ.
ಪುನರ್ಪುಳಿ ಹಣ್ಣಿನಲ್ಲಿ ವಿಟಮಿನ್ ಎ, ವಿಟಮಿನ್ ಬಿ3, ವಿಟಮಿನ್ ಸಿ ಮತ್ತು ಕ್ಯಾಲ್ಸಿಯಂ, ಐರನ್, ಮ್ಯಾಂಗನೀಸ್, ಪೊಟಾಶಿಯಮ್ ಮತ್ತು ಜಿಂಕ್ ಮುಂತಾದ ಖನಿಜಾಂಶಗಳನ್ನು ಹೊಂದಿದೆ. ಇದರಲ್ಲಿ ಉತ್ತಮ ಪ್ರಮಾಣದ ಫೋಲಿಕ್ ಆಮ್ಲ, ಆಸ್ಕೋರ್ಬಿಕ್ ಆಮ್ಲ, ಎಸಿಟಿಕ್ ಆಮ್ಲ ಮತ್ತು ಫೈಬರ್ ಅನ್ನು ಹೊಂದಿದೆ. ಈ ಹಣ್ಣು ವರ್ಷಕ್ಕೊಮ್ಮೆ ಬೆಳೆಯುತ್ತದೆಯಾದರೂ ಬೇರೆ ಬೇರೆ ವಿಧಗಳ ಮೂಲಕ ಇದನ್ನು ಶೇಖರಿಸಿ ವರ್ಷಪೂರ್ತಿ ಬಳಸಬಹುದಾಗಿದೆ. ಪ್ರತಿನಿತ್ಯ ಇದನ್ನು ಸೇವಿಸುವುದರಿಂದ ಜೀರ್ಣಕ್ರಿಯೆ (Digestion), ಗ್ಯಾಸ್ ತೊಂದರೆ, ಪಿತ್ತ, ಹೊಟ್ಟೆ ನೋವು ಮತ್ತು ಹಾರ್ಟ್ ಗೆ ಸಂಬಂಧಿಸಿದ ಅನೇಕ ಸಮಸ್ಯೆಗಳಿಂದ ದೂರ ಇರಬಹುದು.
ಜೀರ್ಣಕ್ರಿಯೆಗೆ ಸಹಕಾರಿ: ಪುನರ್ಪುಳಿಯ ಸಿಪ್ಪೆಯನ್ನು ಒಣಗಿಸಿ ವರ್ಷಗಟ್ಟಲೆ ಇಡಬಹುದು. ಒಣಗಿಸಿದ ಸಿಪ್ಪೆಯನ್ನು ಸೇವಿಸುವುದರಿಂದ ಎಸಿಡ್ ರಿಫ್ಲೆಕ್ಸ್, ಎದೆಯುರಿ ಸಮಸ್ಯೆಗಳು ನಿವಾರಣೆಯಾಗಿ ಜೀರ್ಣಕ್ರಿಯೆ ಸುಧಾರಿಸುತ್ತದೆ. ಪ್ರಾಚೀನ ಕಾಲದಿಂದಲೂ ಇದನ್ನು ಬಳಸುತ್ತಿದ್ದಾರೆ. ಎಸಿಡಿಟಿ ತಡೆಗಟ್ಟಲು ಊಟದ ನಂತರ ಒಣಗಿದ ಹಣ್ಣಿನ ರಸ ತೆಗೆದುಕೊಳ್ಳುವುದು ಒಳ್ಳೆಯದು.
ತೂಕ ಇಳಿಸಲು ಬಳಸಲಾಗುತ್ತೆ: ಕೋಕಂನಲ್ಲಿ ಹೈಡ್ರಾಕ್ಸಿಸಿಟ್ರಿಕ್ ಆಮ್ಲ ಇರುತ್ತದೆ. ಈ ಆಮ್ಲವು ಹಸಿವನ್ನು ಕಡಿಮೆ ಮಾಡುವ ಕೆಲಸ ಮಾಡುತ್ತದೆ. ಇದರಿಂದ ತೂಕ ಇಳಿಕೆಗೆ ಅನುಕೂಲವಾಗುತ್ತದೆ. ಇದು ಕಾರ್ಬೊಹೈಡ್ರೇಟ್ ಗಳು ಕೊಬ್ಬಾಗಿ ಪರಿವರ್ತನೆಗೊಳ್ಳುವುದನ್ನು ತಪ್ಪಿಸುತ್ತದೆ. ಪುನರ್ಪುಳಿ ದೇಹದಲ್ಲಿ ಕೊಬ್ಬಿನ ಪ್ರಮಾಣವನ್ನು ಕಡಿಮೆಮಾಡುತ್ತದೆ.
ಹೃದಯ ರೋಗಗಳು ದೂರ: ಕಡಿಮೆ ಕ್ಯಾಲೊರಿ ಮತ್ತು ಹೆಚ್ಚು ಫೈಬರ್ ನಿಂದ ಕೂಡಿದ ಹಣ್ಣು ಇದಾದ್ದರಿಂದ ಇದು ಹೃದಯಕ್ಕೆ ಬಹಳ ಒಳ್ಳೆಯದು. ಇದರಲ್ಲಿರುವ ಮ್ಯಾಗ್ನೀಷಿಯಂ, ಪೊಟಾಶಿಯಂ, ಮ್ಯಾಂಗನೀಸ್ ಮತ್ತು ಖನಿಜಗಳು ಹೃದಯದ ರೋಗಕ್ಕೆ ಕಾರಣವಾದ ಬ್ಲಡ್ ಪ್ರೆಶರ್ ಮತ್ತು ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುತ್ತದೆ. ಇದು ಉತ್ತಮ ಎಂಟಿ ಆಕ್ಸಿಡೆಂಟ್ ಕೂಡ ಹೌದು.
ಕ್ಯಾನ್ಸರ್ ಖಾಯಿಲೆಗೂ ಒಳ್ಳೆಯದು: ಮುರುಗಲು ಹಣ್ಣಿನಲ್ಲಿರುವ ಎಂಟಿ ಆಕ್ಸಿಡೆಂಟ್ ಮತ್ತು ಕಾರ್ಸಿನೋಜೆನಿಕ್ ಗುಣಗಳು ಕ್ಯಾನ್ಸರ್ ಅನ್ನು ತಡೆಗಟ್ಟುತ್ತದೆ. ಇದು ಫ್ರೀ ರೆಡಿಕಲ್ಸ್ ಗಳನ್ನು ಸ್ವಚ್ಛಗೊಳಿಸುವ ಮೂಲಕ ದೇಹದಲ್ಲಿನ ಜೀವಕೋಶಗಳ ಅಸಹಜ ಬೆಳವಣಿಗೆಯನ್ನು ತಡೆಯುತ್ತವೆ.
ಪೇಪರ್ ಕಪ್‌ನಲ್ಲಿ ಟೀ ಕುಡೀತೀರಾ? ಕ್ಯಾನ್ಸರ್ ಕಾಡ್ಬೋದು ಹುಷಾರ್!
ಡಯಾಬಿಟೀಸ್ ನಿಯಂತ್ರಿಸುತ್ತೆ: ಕೋಕಂನಲ್ಲಿ ಎಂಟಿ ಡಯಾಬಿಟಿಕ್ ಗುಣಗಳಿವೆ. ಇದು ದೇಹದಲ್ಲಿ ಇನ್ಸುಲಿನ್ ಪ್ರಮಾಣವನ್ನು ಹೆಚ್ಚಿಸುವ ಮೂಲಕ ರಕ್ತದಲ್ಲಿನ ಹೆಚ್ಚುವರಿ ಸಕ್ಕರೆಯನ್ನು ಕಡಿಮೆ ಮಾಡುತ್ತದೆ. ಇದರಿಂದ ಡಯಾಬಿಟೀಸ್ ನಿಯಂತ್ರಣದಲ್ಲಿರುತ್ತೆ.
ಚಿಕನ್ ತುಂಬಾ ಇಷ್ಟಾಂತ ಮತ್ತೆ ಮತ್ತೆ ಬಿಸಿ ಮಾಡಿ ತಿನ್ನೋ ತಪ್ಪು ಮಾಡ್ಬೇಡಿ
ಖಿನ್ನತೆ ಮತ್ತು ಒತ್ತಡವನ್ನು ಕಡಿಮೆ ಮಾಡುತ್ತೆ: ಪುನರ್ಪುಳಿಯಲ್ಲಿ ಪ್ಲೆವೋನೈಡ್ಸ್, ಹೈಡ್ರಾಕ್ಸಿಸಿಟ್ರಿಕ್ ಎಸಿಡ್, ಗಾರ್ಸಿನೋಲ ಮತ್ತು ಎಂಥೋಸೈನಿನ್ ಇದೆ. ಇವುಗಳು ಮೆದುಳಿನಲ್ಲಿ ಸೆರೊಟೊನಿನ್ ಮಟ್ಟವನ್ನು ಹೆಚ್ಚು ಮಾಡುವಲ್ಲಿ ಸಹಕಾರಿಯಾಗಿದೆ. ಇದರಿಂದ ಮಾನಸಿಕ ಒತ್ತಡ, ಖಿನ್ನತೆಯಂತಹ ಮೆದುಳಿಗೆ ಸಂಬಂಧಪಟ್ಟ ಖಾಯಿಲೆಗಳು ದೂರವಾಗುತ್ತೆ. ಪುನರ್ಪುಳಿಯಿಂದ ಸಾರು, ಕೋಕಂ, ತಂಬುಳಿ ಮುಂತಾದವುಗಳನ್ನು ಮಾಡಿ ತಿನ್ನಬಹುದು. ಇದರಿಂದ ನಮ್ಮ ಶರೀರದ ಅನೇಕ ಸಮಸ್ಯೆಗಳು ದೂರವಾಗುತ್ತೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.