
ಆದಿಯಲ್ಲಿ ಮೊದಲು ಪೂಜಿಸಲ್ಪಡುವ ಗಣೇಶನ ಹಬ್ಬ ಹತ್ತಿರ ಬರ್ತಿದೆ. ಇದೇ ಆಗಸ್ಟ್ 31ರಂದು ಮನೆ ಮನೆಗೆ ಗಣೇಶನ ಆಗಮನವಾಗ್ತಿದೆ. ಗಣಪತಿ ಭಕ್ತರು, ಭಕ್ತಿಯಿಂದ ಮೋದಕ ಪ್ರಿಯನ ಪೂಜೆಗೆ ತಯಾರಿ ಶುರು ಮಾಡಿದ್ದಾರೆ. ಮಾರುಕಟ್ಟೆಯಲ್ಲಿ ಗಣೇಶನ ಮೂರ್ತಿಗಳು ರಾರಾಶಿಸುತ್ತಿವೆ. ಗೌರಿ – ಗಣೇಶ ಹಬ್ಬಕ್ಕೆ ಬಗೆ ಬಗೆಯ ತಿಂಡಿಗಳನ್ನು ಮಾಡುವುದು ವಿಶೇಷ. ಮೊದಕ ಪ್ರಿಯನಿಗೆ ಮೋದಕ ಅರ್ಪಿಸುವುದು ಸಂಪ್ರದಾಯ. ಇದ್ರ ಜೊತೆ ಲಡ್ಡುಗಳನ್ನು ಮಾಡಿ ಗಣಪತಿಗೆ ಅರ್ಪಿಸಲಾಗುತ್ತದೆ. ಈ ಬಾರಿ ಗಣೇಶ ಚೌತಿಗೆ ನೀವು ಅವಲಕ್ಕಿ ಲಡ್ಡನ್ನು ನೀವು ಮಾಡಬಹುದು. ಇಂದು ನಾವು ಅವಲಕ್ಕಿ ಲಡ್ಡು ಮಾಡೋದು ಹೇಗೆ ಅನ್ನೋದನ್ನು ನಿಮಗೆ ಹೇಳ್ತೇವೆ.
ಬೆಳಗ್ಗಿ (Morning ) ನ ಉಪಹಾರ (Breakfast) ಕ್ಕೆ ಬಹುತೇಕ ಎಲ್ಲಾ ಮನೆಗಳಲ್ಲಿ ಅವಲಕ್ಕಿ (Poha) ತಯಾರಿಸಲಾಗುವುದು. ಮಾರುಕಟ್ಟೆಯಲ್ಲಿ ಎರಡು ರೀತಿಯ ಅವಲಕ್ಕಿ ಸಿಗುತ್ತದೆ. ಒಂದು ತೆಳುವಾದ ಅವಲಕ್ಕಿ. ಮತ್ತೊಂದು ದಪ್ಪ ಅವಲಕ್ಕಿ. ಲಡ್ಡು (Laddu ) ಮಾಡಲು ತೆಳ್ಳಗಿನ ಅವಲಕ್ಕಿ ಒಳ್ಳೆಯದು. ಏಕೆಂದರೆ ಅವು ಸುಲಭವಾಗಿ ಹುರಿಯುತ್ತವೆ ಮತ್ತು ಸುಲಭವಾಗಿ ಮಿಕ್ಸ್ ಆಗುತ್ತವೆ.
ಅವಲಕ್ಕಿ ಲಡ್ಡು ತಯಾರಿಸಲು ಬೇಕಾಗುವ ಸಾಮಾಗ್ರಿಗಳು : ಎರಡು ಕಪ್ ಅವಲಕ್ಕಿ. ಅರ್ಧ ಕಪ್ ತೆಂಗಿನಕಾಯಿ. ಕಾಲು ಚಮಚ ಏಲಕ್ಕಿ ಪುಡಿ. ರುಚಿಗೆ ತಕ್ಕಷ್ಟು ಬೆಲ್ಲ. ಎರಡು ಚಮಚ ದೇಸಿ ತುಪ್ಪ. ಅರ್ಧ ಕಪ್ ಹಾಲು. ಸ್ವಲ್ಪ ಗೋಡಂಬಿ ಮತ್ತು ಸ್ವಲ್ಪ ಪಿಸ್ತಾ ಸಣ್ಣದಾಗಿ ಕತ್ತರಿಸಿರಬೇಕು. ಕೊಬ್ಬರಿ ತುರಿ ಸ್ವಲ್ಪ.
ಹೀಗೆ ಮಾಡಿದ್ರೆ ತೆಂಗಿನಕಾಯಿ ಚಟ್ನಿ ಒಂದು ತಿಂಗಳು ಸ್ಟೋರ್ ಮಾಡ್ಬೋದು
ಅವಲಕ್ಕಿ ಲಡ್ಡು ಮಾಡುವ ವಿಧಾನ : ಒಂದು ಬಾಣೆಲೆಯನ್ನು ತೆಗೆದುಕೊಳ್ಳಿ, ಅದಕ್ಕೆ ತೆಂಗಿನಕಾಯಿಯನ್ನು ಮತ್ತು ದೇಸಿ ತುಪ್ಪ (Ghee) ವನ್ನು ಸೇರಿಸಿ ಚೆನ್ನಾಗಿ ಹುರಿದುಕೊಳ್ಳಬೇಕು. ತೆಂಗಿನಕಾಯಿ ತುರಿಯ ಹಸಿ ವಾಸನೆ ಹೋಗುವವರೆಗೆ ಹುರಿದುಕೊಳ್ಳಿ. ಇದಕ್ಕೆ ನೀವು ನಾನ್ ಸ್ಟಿಕ್ ಪ್ಯಾನ್ (Non Stick Pan) ಬಳಸಬಹುದು. ನಂತರ ಹುರಿದ ತೆಂಗಿನ ಕಾಯಿಯನ್ನು ತೆಗೆದು ಬೇರೆ ಪಾತ್ರೆಗೆ ಹಾಕಿ. ಅದೇ ಬಾಣಲೆಗೆ ಅವಲಕ್ಕಿಯನ್ನು ಹಾಕಿ ಹುರಿಯಿರಿ. ಅವಲಕ್ಕಿ ಹುರಿಯಲು ದೇಸಿ ತುಪ್ಪವನ್ನು ಸೇರಿಸಿ ಮತ್ತು ಕಡಿಮೆ ಉರಿಯಲ್ಲಿ ಹುರಿಯಿರಿ. ಏಕೆಂದರೆ ತೆಳುವಾದ ಅವಲಕ್ಕಿ ಬೇಗ ಕೆಂಪಗಾಗುತ್ತದೆ.
ಅವಲಕ್ಕಿ ಹುರಿದ ನಂತ್ರ ಅದನ್ನು ತಣ್ಣಗಾಗಲು ಬಿಡಿ. ತಣ್ಣಗಾದ ಮೇಲೆ ಅದನ್ನು ಮಿಕ್ಸಿ ಜಾರಿಗೆ ಹಾಕಿ ಹುಡಿ ಮಾಡಿಕೊಳ್ಳಿ. ಇದಕ್ಕೆ ಕೊಬ್ಬರಿ ಪುಡಿ, ಏಲಕ್ಕಿ ಪುಡಿ, ಬೆಲ್ಲ ಸೇರಿಸಿ ಒಟ್ಟಿಗೆ ಮಿಕ್ಸ್ ಮಾಡಿ. ಈಗ ಬಾಣಲೆಗೆ ದೇಸಿ ತುಪ್ಪ ಹಾಕಿ ಗ್ಯಾಸ್ ಮೇಲೆ ಬಿಸಿ ಮಾಡಿ. ಈ ತುಪ್ಪ ಬಿಸಿ ಆಗ್ತಿದ್ದಂತೆ ಗ್ಯಾಸ್ ಆಫ್ ಮಾಡಿ ಮತ್ತು ಪ್ಯಾನ್ ಅನ್ನು ಗ್ಯಾಸ್‌ನಿಂದ ಕೆಳಗಿಡಿ. ಈಗ ಈ ಬಾಣಲೆಗೆ ಮಿಕ್ಸಿ ಮಾಡಿದ ಅವಲಕ್ಕಿ ಮಿಶ್ರಣವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಈ ಅವಲಕ್ಕಿಗೆ ಹಾಲು ಮತ್ತು ಸಣ್ಣದಾಗಿ ಕೊಚ್ಚಿದ ಡ್ರೈ ಫ್ರೂಟ್ಸ್ ಸೇರಿಸಿ. ಕೈಗಳ ಸಹಾಯದಿಂದ ಲಡ್ಡುಗಳನ್ನು ತಯಾರಿಸಿ. ಬೇಕಿದ್ದರೆ ತೆಂಗಿನ ಪುಡಿಯನ್ನು ಮತ್ತೆ ಹಾಕಿಯೂ ಲಡ್ಡು ಕಟ್ಟಬಹುದು.
ಕಡಲೇ ಕಾಳಿನ ಜೊತೆ ಬೆಲ್ಲ ತಿಂದ್ರೆ ಬುದ್ಧಿ ಚುರುಕಾಗುತ್ತೆ
ರುಚಿ ರುಚಿಯಾದ ಅವಲಕ್ಕಿ ಲಡ್ಡು ಸಿದ್ಧವಾಗಿದೆ. ಅದನ್ನು ನೀವು ಗಣಪತಿಗೆ ಅರ್ಪಿಸಿ ನಂತ್ರ ಸೇವನೆ ಮಾಡಿ. ಅವಲಕ್ಕಿಯಲ್ಲಿ ಸಾಕಷ್ಟು ಪೌಷ್ಟಿಕಾಂಶವಿದೆ. ಅವಲಕ್ಕಿಯನ್ನು ಉಪವಾಸದ ಸೂಪರ್ ಫುಡ್ ಎಂದು ಕರೆಯಲಾಗುತ್ತದೆ. ತೂಕ ಇಳಿಸಿಕೊಳ್ಳಲು ಇದು ಪ್ರಯೋಜನಕಾರಿಯಾಗಿದೆ. ಕಾರ್ಬೋಹೈಡ್ರೇಟ್, ಫೈಬರ್ ಮತ್ತು ಪ್ರೊಟೀನ್ ಸಮೃದ್ಧವಾಗಿರುವ ಅವಲಕ್ಕಿ ತಿನ್ನಲು ರುಚಿಯಾಗಿರುತ್ತದೆ. ದೀರ್ಘಕಾಲದವರೆಗೆ ಹೊಟ್ಟೆ ತುಂಬಿದ ಅನುಭವವಾಗುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.