ಸಂಭ್ರಮದ ಗಣೇಶ ಹಬ್ಬಕ್ಕಿನ್ನು ಕೆಲವೇ ದಿನಗಳು ಬಾಕಿ. ಭಾದ್ರಪದ ಮಾಸದ ಶುಕ್ಲಪಕ್ಷ ಗಣೇಶನ ಆರಾಧನೆಗೆ ವಿಶೇಷವಾಗಿ ಮೀಸಲಾಗಿದೆ. ಈ ದಿನ ಮನೆ ಮನೆಗಳಲ್ಲಿ ಗಣೇಶನನ್ನು ಕೂರಿಸಿ ಪೂಜೆ ಮಾಡಲಾಗುತ್ತದೆ. ವಿಶೇಷ ಸಿಹಿತಿಂಡಿಗಳನ್ನು ತಯಾರಿಸಲಾಗುತ್ತದೆ. ಗಣೇಶ ಚತುರ್ಥಿ ಅಂದ್ರೆ ಮೋದಕ ಇರ್ಲೇಬೇಕು. ಅದನ್ನು ಮನೆಯಲ್ಲೇ ಸುಲಭವಾಗಿ ಮಾಡೋದು ಹೇಗೆ ತಿಳ್ಕೊಳ್ಳೋಣ.
ಗಣೇಶ ಚತುರ್ಥಿ ಬಂತು ಅಂದ್ರೆ ಎಲ್ಲೆಡೆ ಸಂಭ್ರಮ ಮನೆ ಮಾಡುತ್ತದೆ. ದೇಶವೇ ವೈಭವದಿಂದ ಆಚರಿಸುವ ಒಂದು ಹಬ್ಬವೆಂದರೆ ಗನೇಶನ ಹಬ್ಬ. ಪ್ರತಿ ವರ್ಷದ ಭಾದ್ರಪದ ಮಾಸದ ಶುಕ್ಲಪಕ್ಷದ ಚೌತಿಯ ದಿನ ಈ ಹಬ್ಬ ಆಚರಿಸಲಾಗುತ್ತದೆ. ಮೊದಲು ಗೌರಿ ಪೂಜೆ ನಡೆಯುತ್ತದೆ. ನಂತರ ಗಣಪತಿಯನ್ನು ಪೂಜಿಸಲಾಗುತ್ತದೆ. ಜನರು ಬೀದಿ ಬೀದಿಗಳಲ್ಲಿ, ಮನೆ ಮನೆಗಳಲ್ಲಿ ಗಣೇಶನ ಮೂರ್ತಿಯನ್ನು ಕೂರಿಸಿ ಪೂಜೆ ಸಲ್ಲಿಸುತ್ತಾರೆ. ಹಲವು ಸಿಹಿತಿಂಡಿಗಳನ್ನು ಮನೆಯಲ್ಲೇ ತಯಾರಿಸಿ, ವಿಘ್ನ ವಿನಾಯಕನಿಗೆ ನೈವೇದ್ಯವಾಗಿ ಸಲ್ಲಿಸಿ ಖುಷಿ ಪಡುತ್ತಾರೆ. ಗಣೇಶನ ಹಬ್ಬ ಅಂದ್ರೆ ಅಲ್ಲಿ ಮೋದಕ ಇರ್ಲೇಬೇಕು. ಮೋದಕ ಗಣೇಶನಿಗೆ ಅತ್ಯಂತ ಪ್ರಿಯವಾದುದಾಗಿದೆ. ಆದ್ದರಿಂದ ಗಣೇಶ ಚತುರ್ಥಿಯಂದು ಇದನ್ನು ಎಲ್ಲರ ಮನೆಯಲ್ಲಿಯೂ ತಯಾರು ಮಾಡುತ್ತಾರೆ.
ಸಾಮಾನ್ಯವಾಗಿ ಗಣೇಶ ಚತುರ್ಥಿಯಂದು ಗಣೇಶನಿಗೆ ಚಕ್ಕುಲಿ, ಉಂಡೆ, ಎಳ್ಳುಂಡೆ, ಕರ್ಜಿಕಾಯಿ, ಕಡುಬು, ಸಿಹಿ ಕಡುಬು, ಖಾರ ಕಡುಬು ಈ ರೀತಿ ಅನೇಕ ತಿಂಡಿಗಳನ್ನು ಮಾಡಿ ನೈವೇದ್ಯಗೆ ಇಡಲಾಗುತ್ತದೆ. ಆದರೆ ಇದೆಲ್ಲದಕ್ಕಿಂತಲೂ ಮೋದಕ ತುಂಬಾ ಸ್ಪೆಷಲ್. ಯಾಕೆಂದರೆ ಗಣಪ ಮೋದಕ ಪ್ರಿಯ. ಹೀಗಾಗಿಯೇ ಈತನನ್ನು ಮೋದಕ ಪ್ರಿಯ ಎಂದು ಸಹ ಕರೆಯುತ್ತಾರೆ. ಹಾಗಿದ್ರೆ ಮೋದಕವನ್ನು ಮನೆಯಲ್ಲೇ ಸಿಂಪಲ್ ಆಗಿ ತಯಾರಿಸೋದು ಹೇಗೆ ತಿಳಿಯೋಣ.
ಗೌರಿ ಹಬ್ಬ 2022 ಯಾವಾಗ? ಶುಭ ಮುಹೂರ್ತವೇನು?
ಬೇಕಾಗುವ ಪದಾರ್ಥಗಳು
ಒಂದೂವರೆ ಕಪ್ ತೆಂಗಿನ ಹಾಲು
ಗೋಡಂಬಿ
ಚಿರೋಟಿ ರವೆ ಅಥವಾ ಅಕ್ಕಿ ಹಿಟ್ಟು
ಸ್ವಲ್ಪ ಗೋದಿ ಹಿಟ್ಟು
ತೆಂಗಿನ ಹಾಲು ಅಥವಾ ತೆಂಗಿನ ನೀರು
ಪಿಸ್ತಾ
ಏಲಕ್ಕಿ
ಬೆಲ್ಲ
ತುಪ್ಪ
ಚಿಟಿಕೆ ಉಪ್ಪು
ತೆಂಗಿನ ಹೂರ್ಣ
ಮಾಡುವ ವಿಧಾನ: ಕಡಿಮೆ ಉರಿಯಲ್ಲಿ ನೀರು ಕುದಿಸಿ ಅದರಲ್ಲಿ ಅಕ್ಕಿ ಹಿಟ್ಟು (Rice flour) ಅಥವಾ ಚಿರೋಟಿ ರವೆ ಸ್ವಲ್ಪ ಗೋದಿ ಹಿಟ್ಟು ಹಾಕಿ ಸ್ವಲ್ಪ ಬೇಯಿಸಿಕೊಳ್ಳಿ. ಅದಕ್ಕೆ ತೆಂಗಿನ ಹಾಲು (Coconut milk) ಅಥವಾ ತೆಂಗಿನ ನೀರನ್ನು ಅಲ್ಪ ಪ್ರಮಾಣದಲ್ಲಿ ಹಾಕಿ ಮಿಕ್ಸ್ ಮಾಡಿ ಕಟ್ಟಿಯಾಗಿ ನಾದಿಕೊಳ್ಳಿ. ಕಾಯಿ ಹಾಲು ಅಥವಾ ಕಾಯಿ ನೀರು ಹಾಕಿ ಹಿಟ್ಟನ್ನು ಕಲಸಿಕೊಂಡರೆ, ಮೋದಕ ಕ್ರಿಸ್ಪಿಯಾಗಿರುತ್ತದೆ. ನಂತರ ತೆಂಗಿನ ಕಾಯಿ ತುರಿಗೆ ಬೆಲ್ಲವನ್ನು ಹಾಕಿ, ಪಿಸ್ತಾ, ಗೋಡಂಬಿ ಹಾಕಿ ಬೇಯಿಸಿ ಹೂರ್ಣ ತಯಾರಿಸಿಕೊಳ್ಳಿ. ಮಿಕ್ಸ್ ಮಾಡಿದ ಹಿಟ್ಟು ಸಣ್ಣದಾಗಿ ಲಟ್ಟಿಸಿ ಅದಕ್ಕೆ ಕಾಯಿ ಹೂರ್ಣ ತುಂಬಿ ಮೋದಕ ತಯಾರಿಸಿಕೊಳ್ಳಿ. ನಂತರ ಕಾದ ಎಣ್ಣೆಗೆ ಹಾಕಿ. ತುಸು ಬ್ರೌನ್ ಬಣ್ಣಕ್ಕೆ ಬರುವ ತನಕ ಮಂದ ಉರಿಯಲ್ಲಿ ಕರಿದರೆ ಗಣೇಶನಿಗೆ ಪ್ರಿಯವಾದ ಮೋದಕ ಸಿದ್ಧ.
ಗಣೇಶನ ಹಬ್ಬ ಬಂತು, ಅಪ್ಪಿ ತಪ್ಪಿಯೂ ಅವತ್ತು ಚಂದ್ರ ದರ್ಶನ ಮಾಡ್ಬೇಡಿ!
ಮೋದಕ ನೈವೇದ್ಯದ ಹಿನ್ನೆಲೆಯೇನು ?
ಪಾರ್ವತಿ ದೇವಿ ಗಣಪನ ಜನ್ಮದಿನದಂದು ಪ್ರತಿಬಾರಿಯೂ ರುಚಿಕರವಾದ ಮೋದಕವನ್ನು ಮಾಡಿ ನೀಡುತ್ತಿದ್ದಳು. ಹೀಗಾಗಿಯೇ ಗಣೇಶ ಚತುರ್ಥಿಯಂದು ಮನೆ ಮನೆಗಳಲ್ಲಿ ಮೋದಕವನ್ನು ಮಾಡಿ ಗಣೇಶನಿಗೆ ನೈವೇದ್ಯ ಇಡಲಾಗುತ್ತದೆ. ಇನ್ನೊಂದು ಕಥೆಯೆಂದರೆ ಒಮ್ಮೆ ದೇವಾನುದೇವತೆಗಳು ಶಿವ-ಪಾರ್ವತಿ ಮನೆಗೆ ಹೋಗಿರುತ್ತಾರೆ. ಆಗ ತುಂಬಾ ರುಚಿಯಾಗಿರುವ ಮೋದಕವನ್ನು ತರುತ್ತಾರೆ. ಇದನ್ನು ಸೇವಿಸಿದವರು ಬುದ್ಧಿಶಾಲಿಯೂ, ಶಕ್ತಿವಂತರೂ ಆಗುತ್ತಾರೆ ಎಂಬುದು ಪಾರ್ವತಿ ನಂಬಿರುತ್ತಾಳೆ. ಆದ್ರೆ ಒಂದೇ ಮೋದಕವಿರುವ ಕಾರಣ ಪಾರ್ವತಿ ಅದನ್ನು ಗಣೇಶ ಮತ್ತು ಕಾರ್ತಿಕ ಇಬ್ಬರಲ್ಲಿ ಯಾರಿಗೆ ಕೊಡುವುದು ಎಂದು ಗೊಂದಲಕ್ಕೊಳಗಾಗುತ್ತಾಳೆ. ಕೊನೆಗೆ ಮಕ್ಕಳಿಬ್ಬರನ್ನು ಕರೆದು, ನಿಮ್ಮಿಬ್ಬರಲ್ಲಿ ಯಾರಲ್ಲಿ ನಿಜವಾದ ಶ್ರದ್ಧೆ, ಭಕ್ತಿ ಇದೆಯೆಂದು ಸಾಧಿಸಿ ತೋರಿಸುವಿರೋ ಅವರಿಗೆ ಮೋದಕ ಸಿಗುತ್ತದೆ ಎಂದು ಹೇಳುತ್ತಾಳೆ.
ತಕ್ಷಣ ಕಾರ್ತಿಕ ತನ್ನ ವಾಹನ ಏರಿ ಆಧ್ಯಾತ್ಮ ಮತ್ತು ಭಕ್ತಿ ಕ್ಷೇತ್ರಗಳನ್ನು ಹುಡುಕುತ್ತಾ ಹೊರಡುತ್ತಾನೆ. ಆದರೆ ಗಣೇಶ ಮಾತ್ರ ಶಿವ-ಪಾರ್ವತಿಯರ ಹತ್ತಿರವೇ ಇದ್ದುಬಿಡುತ್ತಾನೆ. ತಂದೆ ತಾಯಿಯನ್ನು ಭಕ್ತಿಯಿಂದ, ಪ್ರೀತಿಯಿಂದ ಕಾಣುವುದಕ್ಕಿಂತ ಹೆಚ್ಚಿನ ಶ್ರದ್ಧೆ, ಭಕ್ತಿ ಯಾವುದೇ ಪವಿತ್ರ ಸ್ಥಳಗಳನ್ನು ಭೇಟಿ ಮಾಡುವುದರಿಂದ ಸಿಗುವುದಿಲ್ಲ ಎಂದು ಹೇಳುತ್ತಾನೆ. ಇದರಿಂದ ಪ್ರಭಾವಿತಳಾದ ಪಾರ್ವತಿ ಮೋದಕವನ್ನು ಗಣೇಶನಿಗೆ ನೀಡುತ್ತಾಳೆ. ಅಂದಿನಿಂದ ಗಣೇಶ ಹಬ್ಬಕ್ಕೆ ಮೋದಕ ನೈವೇದ್ಯ ಮಾಡುವುದು ಚಾಲ್ತಿಗೆ ಬಂದಿದೆ ಎಂಬ ಕಥೆಯಿದೆ.