ಮಗುವನ್ನೆತ್ತಿಕೊಂಡು ಫುಡ್ ಡೆಲಿವರಿ: ಝೋಮ್ಯಾಟೋ ಬಾಯ್ ವಿಡಿಯೋ ವೈರಲ್

By Anusha KbFirst Published Aug 23, 2022, 1:07 PM IST
Highlights

ಜೊಮ್ಯಾಟೋ  ಡೆಲಿವರಿ ಬಾಯ್ ಒಬ್ಬರು ಮಗುವೊಂದನ್ನು ಸೊಂಟದಲ್ಲಿ ಜೋತಾಡಿಸಿಕೊಂಡು ಆಹಾರ ಡೆಲಿವರಿ ಕೆಲಸ ಮಾಡುತ್ತಿದ್ದು, ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ದುಡಿದು ಬದುಕುವ ಛಲವಿದ್ದರೆ ಯಾವುದು ಅಸಾಧ್ಯವಲ್ಲ. ಇದಕ್ಕೆ ನಮ್ಮ ಸಮಾಜದಲ್ಲಿ ಹಲವು ನಿದರ್ಶನಗಳಿವೆ. ಸಾಮಾಜಿಕ ಜಾಲತಾಣಗಳಲ್ಲಿ ಸ್ಕ್ರಾಲ್‌ ಮಾಡುತ್ತಿದ್ದರೆ. ಇಂತಹ ಸಾವಿರಾರು ಸ್ಪೂರ್ತಿದಾಯಕ ಕತೆಗಳು ನಮಗೆ ಸಿಗುತ್ತವೆ. ನಿನ್ನೆಯಷ್ಟೇ ಹುಡುಗಿಯೊಬ್ಬಳು ತನ್ನ ಶಿಕ್ಷಣದ ವೆಚ್ಚ ಪೂರೈಸುವುದಕ್ಕಾಗಿ ಸಂಜೆ ವೇಳೆ ಪಾನಿಪುರಿ ಮಾರಾಟ ಮಾಡಿ ಗಳಿಕೆ ಮಾರಾಟ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಅದೇ ರೀತಿ ಈಗ ಜೊಮ್ಯಾಟೋ  ಡೆಲಿವರಿ ಬಾಯ್ ಒಬ್ಬರು ಮಗುವೊಂದನ್ನು ಸೊಂಟದಲ್ಲಿ ಜೋತಾಡಿಸಿಕೊಂಡು ಆಹಾರ ಡೆಲಿವರಿ ಕೆಲಸ ಮಾಡುತ್ತಿದ್ದು, ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರೆ ಪುಟ್ಟ ಮಗುವನ್ನು ಎತ್ತಿಕೊಂಡು ಆಹಾರ ಡೆಲಿವರಿ ಮಾಡುವ ಕಷ್ಟ ಏನು ಬಂತು ಮಗುವಿಗೆ ತಾಯಿ ಇಲ್ಲವೇ. ಅಥವಾ ಆಕೆಯೂ ಕೆಲಸ ಮಾಡುತ್ತಿದ್ದಾರೆಯೇ ಎಂಬ ಬಗ್ಗೆ ಈ ವಿಡಿಯೋದಲ್ಲಿ ಯಾವುದೇ ಮಾಹಿತಿ ಇಲ್ಲ. 

ಫುಡ್ ಬ್ಲಾಗರ್ ಸೌರಭ್‌ ಪಂಜ್ವಾನು ಅವರು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಸ್ವಿಗ್ಗಿ ಪುಡ್ ಡೆಲಿವರಿ ಬಾಯ್ ಒಬ್ಬರು ಮಗುವನ್ನು ಸೊಂಟದಲ್ಲಿ ನೇತಾಡಿಸಿಕೊಂಡು ಆಹಾರ ಡೆಲಿವರಿ ಮಾಡುತ್ತಿದ್ದಾರೆ. ಈ ಡೆಲಿವರಿ ಏಜೆಂಟ್ ಅವರ ಮಗ ಈತನೊಂದಿಗೆ ಹಿಂದೆ ಕುಳಿತುಕೊಂಡು ಡೆಲಿವರಿ ಕೆಲಸಕ್ಕೆ ಸಹಾಯ ಮಾಡುತ್ತಿದ್ದಾನೆ. ಈ ವಿಡಿಯೋ ಪೋಸ್ಟ್ ಮಾಡಿ ಬರೆದುಕೊಂಡ ಅವರು ಈ ಘಟನೆಯನ್ನು ನೋಡಿ ನಾನು ತುಂಬಾ ಸ್ಪೂರ್ತಿಗೊಂಡಿದ್ದೇನೆ. ಈ ಜೊಮೆಟೋ ಡೆಲಿವರಿ ಬಾಯ್ ದಿನವಿಡೀ ಈ ಮಕ್ಕಳ ಜೊತೆ ಬಿಸಿಲಿನಲ್ಲಿ ಓಡಾಡುತ್ತಾ ಆಹಾರ ಡೆಲಿವರಿ ಮಾಡುತ್ತಾರೆ. ಮನುಷ್ಯ ಏನಾದರೂ ಮಾಡಬೇಕು ಜೀವನದಲ್ಲಿ ಸಾಧಿಸಬೇಕು ಎಂದು ಬಯಸಿದರೆ ಅವರಿಗೆ ಯಾವುದು ಅಡ್ಡಿಯಾಗದು ಎಂದು ಸೌರಭ್‌ ಪಂಜ್ವಾನು ಬರೆದುಕೊಂಡಿದ್ದಾರೆ. 

ಈ ವಿಡಿಯೋ ನೋಡಿದ ಜೊಮೆಟೋ ಆಹಾರ ಪೂರೈಕೆ ಸಂಸ್ಥೆ ಕೂಡ ಈ ವಿಡಿಯೋಗೆ ಪ್ರತಿಕ್ರಿಯಿಸಿದ್ದು, ಈ ಡೆಲಿವರಿ ಏಜೆಂಟ್‌ನ್ನು ಸಂಪರ್ಕ ಸಂಖ್ಯೆ ನೀಡುವಂತೆ ಕೇಳಿದ್ದಾರೆ. ಡೆಲಿವರಿ ಬಾಯ್ ಮಕ್ಕಳಿಗೆ ಸಂಸ್ಥೆಯಿಂದ ನೀಡುವ ಸೌಲಭ್ಯಗಳನ್ನು ಒದಗಿಸುವ ಸಲುವಾಗಿ ಈ ಮನವಿ ಮಾಡಿದ್ದಾರೆ. ಜೊತೆಗೆ ವಿಡಿಯೋ ನೋಡಿದವರು ಕೂಡ ಈ ಡೆಲಿವರಿ ಬಾಯ್ ಶ್ರಮಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. 

ಮಕ್ಕಳಿಗಾಗಿ ತಾಯಿ ತನ್ನೆಲ್ಲಾ ಕಷ್ಟಗಳನ್ನು ಸಹಿಸಿ ಅವುಗಳ ಆರೈಕೆ ಮಾಡುವುದನ್ನು ನೋಡಿದ್ದೇವೆ. ತಂದೆಯೂ ತಾಯಿಯಷ್ಟೇ ಶ್ರಮಜೀವಿಯೇ. ತಂದೆ ಹೊರಗಡೆ ದುಡಿದು ತಂದು ಮನೆಯವರ ಬದುಕಿನ ಬಂಡಿ ಸಾಗಿಸಲು ಶ್ರಮ ಪಟ್ಟರೇ ತಾಯಿ ಮಕ್ಕಳನ್ನು ಆರೈಕೆ ಮಾಡುವ ಮೂಲಕ ಗಂಡು ಹೆಣ್ಣು ಇಬ್ಬರು ಬದುಕಿನ ಬಂಡಿಯನ್ನು ಸಾಗಿಸಲು ಶ್ರಮ ವಹಿಸುತ್ತಾರೆ. ಮೊದಲೆಲ್ಲಾ ಸ್ತ್ರಿಯರೇ ಮನೆ, ಮಕ್ಕಳನ್ನು ನಿರ್ವಹಿಸುತ್ತಿದ್ದರು. ಆದರೆ ಇತ್ತೀಚೆಗೆ ಗಂಡು ಹೆಣ್ಣು ಮನೆ ಹಾಗೂ ಹೊರಗೆ ಸಮಾನವಾಗಿ ದುಡಿಯುವುದರಿಂದ ಮಕ್ಕಳ ಆರೈಕೆಯಲ್ಲೂ ಗಂಡಸರು ಕೂಡ ಸಮಾನ ಕರ್ತವ್ಯ ಹಾಗೂ ಜವಾಬ್ದಾರಿ ನಿರ್ವಹಿಸುತ್ತಿರುವುದು ಇತ್ತೀಚೆಗೆ ಕಂಡು ಬರುತ್ತಿದೆ. ಇದಕ್ಕೊಂದು ಉದಾಹರಣೆ ಈ ಜೊಮೆಟೋ ಡೆಲಿವರಿ ಬಾಯ್‌.

ಸ್ವಿಗ್ಗಿ ಹಾಗೂ ಜೊಮೆಟೋ ಮುಂತಾದ ಆನ್‌ಲೈನ್‌ ಡೆಲಿವರಿ ಆಪ್‌ಗಳಲ್ಲಿ ಸಾವಿರಾರು ಯುವಕ ಯುವತಿಯರು ಪಾರ್ಟ್‌ಟೈಮ್‌ ಫುಲ್‌ಟೈಮ್‌ ಕೆಲಸ ಮಾಡುವ ಮೂಲಕ ತಮ್ಮ ಶಿಕ್ಷಣದ ವೆಚ್ಚವನ್ನು ಹಾಗೆಯೇ ತಮ್ಮ ಕುಟುಂಬದ ವೆಚ್ಚವನ್ನು ಪೂರೈಸಿಕೊಂಡು ಸ್ವಾಭಿಮಾನದ ಜೀವನ ನಡೆಸುತ್ತಿದ್ದಾರೆ. ಕೆಲವು ದಿವ್ಯಾಂಗ ವ್ಯಕ್ತಿಗಳು ಕೂಡ ಈ ಡೆಲಿವರಿ ಆಪ್‌ನಲ್ಲಿ ಕೆಲಸ ಮಾಡಿಕೊಂಡು ತಮ್ಮ ಬದುಕು ಕಟ್ಟಿಕೊಂಡಿದ್ದಾರೆ. 
 

click me!