ಗೌರಿ-ಗಣೇಶ ಹಬ್ಬ ಬಂತೆಂದರೆ ಮನೆಮನೆಗಳಲ್ಲೂ ಸಂಭ್ರಮವೋ ಸಂಭ್ರಮ. ವಿಘ್ನವಿನಾಶಕ ಗಣಪತಿಗೆ ಬಗೆಬಗೆಯ ನೈವೇದ್ಯಗಳನ್ನು ಅರ್ಪಿಸುವುದು ನಮ್ಮ ಸಂಪ್ರದಾಯ. ಅದರಲ್ಲಿಯೂ ಗಣೇಶನಿಗೆ ಅತ್ಯಂತ ಪ್ರಿಯವಾದದ್ದು ‘ಆವಿಯಲ್ಲಿ ಬೇಯಿಸಿದ ಸಿಹಿ ಕಡುಬು’ (ಹಬೆ ಕಡುಬು). ಹಬ್ಬದ ದಿನ ಕಡುಬು ಮಾಡುವುದು ಕೆಲವರಿಗೆ ಕಷ್ಟದ ಕೆಲಸ ಅನ್ನಿಸಬಹುದು. ಆದರೆ ಯಾವುದೇ ಗೊಂದಲವಿಲ್ಲದೆ, ಅಕ್ಕಿ ಹಿಟ್ಟು ಒಡೆಯದಂತೆ ಅತ್ಯಂತ ಸಾಫ್ಟ್ ಮತ್ತು ರುಚಿಕರವಾದ ಸಾಂಪ್ರದಾಯಿಕ ಸಿಹಿ ಕಡುಬನ್ನು ಮನೆಯಲ್ಲೇ ಸರಳವಾಗಿ ಹೇಗೆ ಮಾಡಬಹುದು ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.
ಬೆಲ್ಲ - 200 ಗ್ರಾಂ (2 ಕಪ್)
ಹಸಿ ತೆಂಗಿನತುರಿ - 3 ರಿಂದ 4 ಕಪ್
ಏಲಕ್ಕಿ ಪುಡಿ - 1/4 ಚಮಚ
ತುಪ್ಪ - 1 ಚಮಚ
ನೀರು - ಸ್ವಲ್ಪ
ಅಕ್ಕಿ ಹಿಟ್ಟು - 5 ಕಪ್ (ಸುಮಾರು 800 ಗ್ರಾಂ)
ನೀರು - ಅರ್ಧ ಲೀಟರ್
ತುಪ್ಪ - 1 ಚಮಚ
ತಟ್ಟಲು - ಬಾಳೆ ಎಲೆ ಮತ್ತು ಸ್ವಲ್ಪ ಎಣ್ಣೆ/ತುಪ್ಪ
*ಒಂದು ಬಾಣಲೆಗೆ 200 ಗ್ರಾಂ ಬೆಲ್ಲ ಹಾಕಿ, ಅದಕ್ಕೆ ಸ್ವಲ್ಪವೇ ನೀರನ್ನು ಚಿಮುಕಿಸಿ ಕರಗಲು ಬಿಡಿ.
*ಬೆಲ್ಲ ಕರಗಿ, ನೊರೆ ಬಂದು ಸ್ವಲ್ಪ ಗಟ್ಟಿಯಾದ ಹದಕ್ಕೆ ಬಂದಾಗ, ತುರಿದ ತೆಂಗಿನಕಾಯಿಯನ್ನು ಸೇರಿಸಿ ಚೆನ್ನಾಗಿ ತಿರುವಿ.
*ತೆಂಗಿನಕಾಯಿ ಹಾಕಿದ ನಂತರ ಮಿಶ್ರಣ ಕೊಂಚ ನೀರಾಗುತ್ತದೆ. 2 ನಿಮಿಷ ಸಣ್ಣ ಉರಿಯಲ್ಲಿ ಬೇಯಿಸಿದರೆ ಹೂರಣ ಗಟ್ಟಿಯಾಗುತ್ತದೆ.
*ನಂತರ ಒಲೆ ಆಫ್ ಮಾಡಿ, ಮಿಶ್ರಣ ತಣ್ಣಗಾದ ಮೇಲೆ ಏಲಕ್ಕಿ ಪುಡಿ ಮತ್ತು ಒಂದು ಚಮಚ ತುಪ್ಪ ಸೇರಿಸಿ ಚೆನ್ನಾಗಿ ಬೆರೆಸಿ ಪಕ್ಕಕ್ಕಿಡಿ.
*ಒಂದು ಪಾತ್ರೆಯಲ್ಲಿ ಅರ್ಧ ಲೀಟರ್ ನೀರು ಹಾಕಿ, ಅದಕ್ಕೆ ಒಂದು ಚಮಚ ತುಪ್ಪ ಸೇರಿಸಿ ಕುದಿಯಲು ಬಿಡಿ.
*ನೀರು ಕುದಿಯುತ್ತಿದ್ದಂತೆ ಉರಿ ಕಡಿಮೆ ಮಾಡಿ, ಅಕ್ಕಿ ಹಿಟ್ಟನ್ನು ಸೇರಿಸಿ ಗಂಟಾಗದಂತೆ ಮುದ್ದೆಯ ಹದಕ್ಕೆ ಚೆನ್ನಾಗಿ ತಿರುವಿ, ಒಲೆ ಆಫ್ ಮಾಡಿ ಮುಚ್ಚಿಡಿ.
*ಹಿಟ್ಟು ಸ್ವಲ್ಪ ಬೆಚ್ಚಗಿರುವಾಗಲೇ ಕೈಗೆ ಸ್ವಲ್ಪ ನೀರು ತಾಗಿಸಿಕೊಂಡು, ಹಿಟ್ಟನ್ನು ನುಣ್ಣಗೆ ನಾದಿಕೊಳ್ಳಿ. ಹಿಟ್ಟನ್ನು ಚೆನ್ನಾಗಿ ನಾದಿದಷ್ಟೂ ಕಡುಬು ಲಟ್ಟಿಸುವಾಗ ಒಡೆಯುವುದಿಲ್ಲ.
*ಈಗ ಕಣಕ ಮತ್ತು ಹೂರಣ ಎರಡನ್ನೂ ನಿಂಬೆಹಣ್ಣಿನ ಗಾತ್ರದ ಸಮಾನ ಉಂಡೆಗಳನ್ನಾಗಿ ಮಾಡಿಟ್ಟುಕೊಳ್ಳಿ.
*ಬಾಳೆ ಎಲೆಗೆ ಸ್ವಲ್ಪ ತುಪ್ಪ ಅಥವಾ ಎಣ್ಣೆ ಸವರಿ, ಅದರ ಮೇಲೆ ಹಿಟ್ಟಿನ ಉಂಡೆಯನ್ನಿಡಿ.
*ಅದರ ಮೇಲೆ ಮತ್ತೊಂದು ಬಾಳೆ ಎಲೆಯಿಟ್ಟು, ಫ್ಲಾಟ್ ಆಗಿರುವ ಸಣ್ಣ ಪಾತ್ರೆಯಿಂದ ಲಘುವಾಗಿ ಒತ್ತಿದರೆ (ಪ್ರೆಸ್ ಮಾಡಿದರೆ) ಸುಲಭವಾಗಿ ಪೂರಿಯಂತೆ ಹರಡಿಕೊಳ್ಳುತ್ತದೆ.
*ಈಗ ಅದರ ಮಧ್ಯಭಾಗದಲ್ಲಿ ಹೂರಣದ ಉಂಡೆಯನ್ನಿಟ್ಟು, ಅರ್ಧ ಚಂದ್ರಾಕಾರದಲ್ಲಿ ಮಡಚಿ ಅಂಚುಗಳನ್ನು ಬೆರಳುಗಳಿಂದ ಒತ್ತಿ ಮುಚ್ಚಿ.
*ಇಡ್ಲಿ ಪಾತ್ರೆ ಅಥವಾ ಸ್ಟೀಮರ್‌ನಲ್ಲಿ ನೀರನ್ನು ಚೆನ್ನಾಗಿ ಕಾಯಿಸಿ, ನಂತರ ಈ ಕಡುಬುಗಳನ್ನು ತಟ್ಟೆಯಲ್ಲಿ ಜೋಡಿಸಿ ಇಡಿ.
*ಜೋರು ಉರಿಯಲ್ಲಿ ಸರಿಯಾಗಿ 15 ರಿಂದ 16 ನಿಮಿಷಗಳ ಕಾಲ ಆವಿಯಲ್ಲಿ ಬೇಯಿಸಿ, ಒಲೆ ಆಫ್ ಮಾಡಿ.
ಬಿಸಿಬಿಸಿಯಾದ ಹಬೆ ಕಡುಬಿನ ಮೇಲೆ ಒಂದು ಚಮಚ ತುಪ್ಪ ಹಾಕಿಕೊಂಡು ತಿಂದರೆ ಆ ಬೆಲ್ಲ, ತೆಂಗಿನಕಾಯಿ ಹಾಗೂ ಏಲಕ್ಕಿಯ ಘಮ ಬಾಯಲ್ಲಿ ಕರಗಿ ಅಮೃತದಂತೆ ಭಾಸವಾಗುತ್ತದೆ. ಗಣಪತಿಗೆ ನೈವೇದ್ಯ ಅರ್ಪಿಸಲು ಇದು ಹೇಳಿಮಾಡಿಸಿದ ಸಾಂಪ್ರದಾಯಿಕ ತಿನಿಸು. ಈ ಹಬ್ಬಕ್ಕೆ ನೀವೂ ಒಮ್ಮೆ ಈ ಸುಲಭ ವಿಧಾನವನ್ನು ಪ್ರಯತ್ನಿಸಿ ನೋಡಿ!
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.