ಯಾವಾಗಲೂ ಮಾಡುವ ಬಿರಿಯಾನಿ ಅಥವಾ ಟೊಮೆಟೊ ಬಾತ್‌ಗಿಂತ ಭಿನ್ನವಾಗಿ ಏನಾದರೂ ಹೊಸದಾಗಿ, ನಾಲಿಗೆಗೆ ರುಚಿ ನೀಡುವಂತಹ ಅಡುಗೆ ಮಾಡಬೇಕೆಂದು ಯೋಚಿಸುತ್ತಿದ್ದೀರಾ? ಹಾಗಾದರೆ ನಿಮಗಾಗಿ ಇಲ್ಲಿದೆ ಒಂದು ಅದ್ಭುತವಾದ ಖಾದ್ಯ. ಅದೇ ಕರ್ನಾಟಕದಲ್ಲಿ ಅತ್ಯಂತ ಜನಪ್ರಿಯವಾಗಿರುವ ಬಾಯಲ್ಲಿ ನೀರೂರಿಸುವ ‘ತರಕಾರಿ ಪಲಾವ್’ (Veg Pulao). ಇದು ನಾವು ಸಾಮಾನ್ಯವಾಗಿ ಮಾಡುವ ಸಾದಾ ಪಲಾವ್ ತರಹ ಇರುವುದೇ ಇಲ್ಲ!
ಇದರಲ್ಲಿ ಬಳಸುವ ತಾಜಾ ರುಬ್ಬಿದ ಹಸಿ ಮಸಾಲೆ ಮತ್ತು ತರಕಾರಿಗಳು ಇದಕ್ಕೆ ವಿಶಿಷ್ಟವಾದ ಘಮ ಹಾಗೂ ಅದ್ಭುತ ರುಚಿಯನ್ನು ನೀಡುತ್ತವೆ. ಹಾಗಾದರೆ ಮತ್ಯಾಕೆ ತಡ ಮನೆ ಮಂದಿಯೆಲ್ಲಾ ಇಷ್ಟಪಟ್ಟು ತಿನ್ನುವ, ಘಮಘಮಿಸುವ ಕರ್ನಾಟಕ ಸ್ಟೈಲ್ ತರಕಾರಿ ಪಲಾವ್ ಹೇಗೆ ಮಾಡುವುದು ಎಂಬುದನ್ನು ಇಲ್ಲಿ ನೋಡಿ.
ಕೊತ್ತಂಬರಿ ಸೊಪ್ಪು - 1 ಸಣ್ಣ ಕಟ್ಟು
ಪುದೀನಾ ಸೊಪ್ಪು - 1 ಸಣ್ಣ ಕಟ್ಟು
ಹಸಿ ತೆಂಗಿನಕಾಯಿ ತುರಿ - 1/4 ಕಪ್
ಬೆಳ್ಳುಳ್ಳಿ ಎಸಳು - 6
ಶುಂಠಿ - ಅರ್ಧ ಇಂಚು ತುಂಡು
ಈರುಳ್ಳಿ - 1/4 ಕಪ್ (ಹೆಚ್ಚಿದ್ದು)
ಹಸಿಮೆಣಸಿನಕಾಯಿ - 3
ನೀರು - 1/2 ಕಪ್
ಅಕ್ಕಿ (ಸೋನಾ ಮಸೂರಿ ಅಥವಾ ಜೀರಾ ರೈಸ್) - 1 ಕಪ್
ಕಡಲೆಕಾಯಿ ಎಣ್ಣೆ - 3 ಚಮಚ
ಪಲಾವ್ ಎಲೆ (ಬಿರಿಯಾನಿ ಎಲೆ) - 2
ಏಲಕ್ಕಿ - 1
ಲವಂಗ - 1
ಚಕ್ಕೆ (ದಾಲ್ಚಿನ್ನಿ) - 1 ಇಂಚು ತುಂಡು
ಚಕ್ರಮೊಗ್ಗು (ಅನಾಸ ಹೂವು) - 1
ಸಣ್ಣಗೆ ಹೆಚ್ಚಿದ ಈರುಳ್ಳಿ - 1/4 ಕಪ್
ಹೆಚ್ಚಿದ ಟೊಮೆಟೊ - 1
ಕರಿಬೇವಿನ ಸೊಪ್ಪು - 2 ಕಡ್ಡಿ
ಕಡಲೆಕಾಯಿ ಬೀಜ (ಶೇಂಗಾ) - 2 ಚಮಚ
ತರಕಾರಿ ತುಂಡುಗಳು (ಕ್ಯಾರೆಟ್, ಬೀನ್ಸ್, ಆಲೂಗಡ್ಡೆ, ಬಟಾಣಿ) - 2 ಕಪ್
ಉಪ್ಪು - ರುಚಿಗೆ ತಕ್ಕಷ್ಟು
ನೀರು - 2 ಕಪ್
*ಮೊದಲಿಗೆ 1 ಕಪ್ ಅಕ್ಕಿಯನ್ನು ಶುದ್ಧವಾಗಿ ತೊಳೆದು, ಕನಿಷ್ಠ 30 ನಿಮಿಷಗಳ ಕಾಲ ನೀರಿನಲ್ಲಿ ನೆನೆಸಿಟ್ಟುಕೊಳ್ಳಿ.
*ಒಂದು ಮಿಕ್ಸಿ ಜಾರ್‌ಗೆ ಕೊತ್ತಂಬರಿ ಸೊಪ್ಪು, ಪುದೀನಾ ಸೊಪ್ಪು, ಹಸಿ ತೆಂಗಿನತುರಿ, ಶುಂಠಿ, ಬೆಳ್ಳುಳ್ಳಿ, ಈರುಳ್ಳಿ ಮತ್ತು ಹಸಿಮೆಣಸಿನಕಾಯಿ ಹಾಕಿ. ಅದಕ್ಕೆ ಅರ್ಧ ಕಪ್ ನೀರು ಸೇರಿಸಿ ನುಣ್ಣಗೆ ಪೇಸ್ಟ್‌ನಂತೆ ರುಬ್ಬಿ ಪಕ್ಕಕ್ಕೆ ಇಡಿ.
*ಒಲೆಯ ಮೇಲೆ ಪ್ರೆಶರ್ ಕುಕ್ಕರ್ ಇಟ್ಟು, ಎಣ್ಣೆ ಹಾಕಿ ಬಿಸಿ ಮಾಡಿ. ಎಣ್ಣೆ ಕಾದ ನಂತರ ಪಲಾವ್ ಎಲೆ, ಏಲಕ್ಕಿ, ಲವಂಗ, ಚಕ್ಕೆ ಮತ್ತು ಚಕ್ರಮೊಗ್ಗು ಹಾಕಿ ಘಮ ಬರುವವರೆಗೆ ಹುರಿಯಿರಿ.
*ಈಗ ಹೆಚ್ಚಿದ ಈರುಳ್ಳಿ ಹಾಕಿ ಹೊಂಬಣ್ಣ ಬರುವವರೆಗೆ 2-3 ನಿಮಿಷ ಹುರಿಯಿರಿ. ನಂತರ ಟೊಮೆಟೊ, ಕರಿಬೇವಿನ ಸೊಪ್ಪು ಮತ್ತು ಕಡಲೆಕಾಯಿ ಬೀಜಗಳನ್ನು ಹಾಕಿ ಟೊಮೆಟೊ ಮೆತ್ತಗಾಗುವವರೆಗೆ ಬಾಡಿಸಿ.
*ನಂತರ ಮಿಕ್ಸಿಯಲ್ಲಿ ರುಬ್ಬಿಟ್ಟುಕೊಂಡ ಹಸಿ ಮಸಾಲೆ ಪೇಸ್ಟ್ ಅನ್ನು ಕುಕ್ಕರ್‌ಗೆ ಹಾಕಿ, ಹಸಿ ವಾಸನೆ ಹೋಗುವವರೆಗೆ ಸುಮಾರು 2 ನಿಮಿಷಗಳ ಕಾಲ ಚೆನ್ನಾಗಿ ಎಣ್ಣೆಯಲ್ಲಿ ಫ್ರೈ ಮಾಡಿ.
*ಮಸಾಲೆ ಬೆಂದ ನಂತರ ಕತ್ತರಿಸಿಟ್ಟುಕೊಂಡ ಮಿಶ್ರ ತರಕಾರಿಗಳನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ರುಚಿಗೆ ತಕ್ಕಷ್ಟು ಉಪ್ಪು ಮತ್ತು 2 ಕಪ್ ನೀರು ಸೇರಿಸಿ ಚೆನ್ನಾಗಿ ಕಲಕಿ ಕುದಿಯಲು ಬಿಡಿ.
*ನೀರು ಕುದಿಯಲು ಪ್ರಾರಂಭಿಸಿದಾಗ, ನೆನೆಸಿಟ್ಟ ಅಕ್ಕಿಯಲ್ಲಿರುವ ನೀರನ್ನೆಲ್ಲಾ ಸೋಸಿ ಅಕ್ಕಿಯನ್ನು ಮಾತ್ರ ಕುಕ್ಕರ್‌ಗೆ ಸೇರಿಸಿ. ನೀರು ಮತ್ತು ಅಕ್ಕಿ ಒಟ್ಟಿಗೆ ಕುದಿಯುವಾಗ, ಕುಕ್ಕರ್ ಮುಚ್ಚಳ ಮುಚ್ಚಿ ಮಧ್ಯಮ ಉರಿಯಲ್ಲಿ ಸರಿಯಾಗಿ 2 ವಿಷಲ್ ಕೂಗಿಸಿ ಒಲೆ ಆಫ್ ಮಾಡಿ.
*ಪ್ರೆಶರ್ ತಣ್ಣಗಾದ ನಂತರ ಮುಚ್ಚಳ ತೆರೆದು ಲಘುವಾಗಿ ಕಲಕಿದರೆ, ಘಮಘಮಿಸುವ, ಅತ್ಯಂತ ರುಚಿಕರವಾದ ಬಿಸಿಬಿಸಿಯಾದ ಕರ್ನಾಟಕ ಸ್ಟೈಲ್ ತರಕಾರಿ ಪಲಾವ್ ಸವಿಯಲು ಸಿದ್ಧ!
ಇದನ್ನು ಗಟ್ಟಿ ಮೊಸರು ಬಜ್ಜಿ (ರಾಯ್ತಾ) ಜೊತೆ ಸವಿದರೆ ಆಹಾ... ಸ್ವರ್ಗವೇ ಧರೆಗಿಳಿದ ಅನುಭವ!
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.