ಸೌತೆಕಾಯಿ ತಿಂದು ದೇಹವನ್ನು ಕೂಲ್ ಮಾಡಿಕೊಳ್ಳೋಣ ಅಂತ ಅದನ್ನು ಕತ್ತರಿಸಿ ಬಾಯಿಗೆ ಇಡ್ತೇವೆ. ಆದ್ರೆ ಕಹಿಯಿಂದ ಸೌತೆಕಾಯಿ ತಿನ್ನೋಕೆ ಸಾಧ್ಯವಾಗೋದಿಲ್ಲ. ಮಾರುಕಟ್ಟೆಯಿಂದ ತಂದ ಸೌತೆ ಕಹಿಯಾಗ್ಬಾರದು ಅಂದ್ರೆ ಈ ಟಿಪ್ಸ್ ಫಾಲೋ ಮಾಡಿ.
ಸೌತೆಕಾಯಿಯ ಸೇವನೆ ಶರೀರಕ್ಕೆ ಬಹಳ ಒಳ್ಳೆಯದು. ಅದರಲ್ಲೂ ಬೇಸಿಗೆಯಲ್ಲಿ ಇದನ್ನು ಹೆಚ್ಚಿನ ಮಂದಿ ಕೊಳ್ಳುತ್ತಾರೆ. ಇದನ್ನು ತಿನ್ನುವುದರಿಂದ ದೇಹಕ್ಕೆ ಅಗತ್ಯವಾದ ಜೀವಸತ್ವಗಳು, ಪೌಷ್ಟಿಕಾಂಶಗಳು ಸಿಗುತ್ತದೆ. ಸೌತೆಕಾಯಿ ವಿಟಮಿನ್ ಸಿ, ವಿಟಮಿನ್ ಕೆ, ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ ಅನ್ನು ಹೊಂದಿದೆ. ತರಕಾರಿಯನ್ನು ಇಷ್ಟಪಡದ ಮಕ್ಕಳು ಕೂಡ ಇದನ್ನು ಇಷ್ಟಪಟ್ಟು ತಿನ್ನುತ್ತಾರೆ. ಸೌತೆಕಾಯಿಯನ್ನು ಸಲಾಡ್ ರೀತಿಯಲ್ಲಿ, ಊಟದ ಜೊತೆಗೆ ಸೇವಿಸುತ್ತಾರೆ. ಸೌತೆಕಾಯಿಯ ಸಿಪ್ಪೆ, ತಿರುಳು ಎಲ್ಲದೂ ಆರೋಗ್ಯಕ್ಕೆ ಒಳ್ಳೆಯದೇ ಆಗಿದೆ.
ನಿಯಮಿತವಾಗಿ ಸೌತೆಕಾಯಿ (Cucumber) ಯನ್ನು ಸೇವಿಸುವುದರಿಂದ ರಕ್ತದೊತ್ತಡ, ಉರಿಯೂತ ನಿವಾರಣೆಯಾಗುತ್ತದೆ. ಸೌತೆಕಾಯಿಯಲ್ಲಿ ನೀರಿನಾಂಶ ಹೆಚ್ಚಾಗಿ ಇರುವುದರಿಂದ ಇದು ದೇಹದಲ್ಲಿ ನೀರಿನ ಪ್ರಮಾಣವನ್ನು ಕಾಪಾಡುತ್ತದೆ ಹಾಗೂ ರಕ್ತದೊತ್ತಡವನ್ನು ನಿಯಂತ್ರಿಸಿ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. ಆರೋಗ್ಯ (Health) ದೃಷ್ಟಿಯಿಂದ ಉತ್ತಮವಾಗಿರುವ ಸೌತೆಕಾಯಿ ಸೌಂದರ್ಯ ವರ್ಧಕವೂ ಹೌದು. ಇದು ಚರ್ಮದ ಕಾಂತಿಯನ್ನು ಹೆಚ್ಚಿಸಲು ಮತ್ತು ಮೊಡವೆಗಳಿಂದ ರಕ್ಷಣೆ ಪಡೆಯಲು ಕೂಡ ಸಹಕಾರಿಯಾಗಿದೆ. ಆರೋಗ್ಯ ಹಾಗೂ ಸೌಂದರ್ಯ (Beauty) ವರ್ಧಕವಾದ ಈ ಸೌತೆಕಾಯಿ ಕೆಲವೊಮ್ಮೆ ಕಹಿಯಾಗುತ್ತದೆ. ಅಂಗಡಿಗಳಿಂದ ಖರೀದಿಸಿದ ಸೌತೆಕಾಯಿ ಹೀಗೆ ಕಹಿಯಾದರೆ ಅದನ್ನು ಬಿಸಾಡದೇ ಬೇರೆ ದಾರಿಯಿರುವುದಿಲ್ಲ.
ಚಹಾ ಜೊತೆ ಪರೋಟ ತಿಂತೀರಾ? ಹೊಟ್ಟೆ ಸಮಸ್ಯೆ ಖಚಿತ
ನೋಡಲು ತಾಜಾ ಹಾಗೂ ಸುಂದರವಾಗಿ ಕಾಣುವ ಸೌತೆಕಾಯಿ ಕೆಲವೊಮ್ಮೆ ಬಾಯಿಗೆ ಇಟ್ಟ ತಕ್ಷಣ ಕಹಿಯಾಗುತ್ತದೆ. ಒಮ್ಮೆ ಹೀಗೆ ಕಹಿಯ ಅನುಭವವಾದರೆ ಮತ್ತೆ ಸೌತೆಕಾಯಿಯನ್ನು ಖರೀದಿಸಲು ಅನುಮಾನ ಪಡುವಂತಾಗುತ್ತದೆ. ಹೀಗೆ ಕಹಿಯಾಗಿರುವ ಸೌತೆಕಾಯಿಯ ಕಹಿಯನ್ನು ಹೋಗಲಾಡಿಸಲು ಕೆಲವು ಸುಲಭ ಉಪಾಯಗಳು ಇಲ್ಲಿವೆ. ಈ ವಿಧಾನಗಳನ್ನು ಅನುಸರಿಸಿದರೆ ಸೌತೆಕಾಯಿಯ ಕಹಿ ದೂರವಾಗುತ್ತದೆ. ನಂತರ ನೀವು ಅದನ್ನು ನಿಸ್ಸಂದೇಹವಾಗಿ ಅಡುಗೆಯಲ್ಲಿ ಬಳಸಬಹುದು.
ಸೌತೆಕಾಯಿಯ ಕಹಿಯನ್ನು ಹೋಗಲಾಡಿಸಲು ಹೀಗೆ ಮಾಡಿ :
ಸೌತೆಕಾಯಿಯನ್ನು ಮಧ್ಯದಲ್ಲಿ ಕತ್ತರಿಸಿ : ಸೌತೆಕಾಯಿಯನ್ನು ಸೇವಿಸುವ ಮೊದಲು ಅದನ್ನು ಚೆನ್ನಾಗಿ ತೊಳೆಯಿರಿ. ನಂತರ ಅದನ್ನು ಸರಿಯಾಗಿ ಮಧ್ಯಭಾಗದಲ್ಲಿ ಕತ್ತರಿಸಿ. ಸೌತೆಕಾಯಿಯ ಬುಡದ ಭಾಗ ಹಾಗೂ ತುದಿಯ ಭಾಗವನ್ನು ಕೂಡ ಕತ್ತರಿಸಿ. ಹೀಗೆ ಮಾಡುವುದರಿಂದ ಸೌತೆಕಾಯಿ ಕಹಿಯಾಗುವುದಿಲ್ಲ. ಸೌತೆಕಾಯಿಯ ಕಹಿಯನ್ನು ಹೋಗಲಾಡಿಸಲು ಇದು ಬಹಳ ಸುಲಭ ವಿಧಾನವಾಗಿದೆ.
Health Food : ಬೆಳ್ಳುಳ್ಳಿ ಪೌಡರಿನಲ್ಲಿದೆ ಆರೋಗ್ಯದ ಗುಟ್ಟು!
ಸೌತೆಕಾಯಿಯನ್ನು ಉಜ್ಜಿ ನಂತರ ಬಳಸಿ : ಸೌತೆಕಾಯಿಯ ಕಹಿಯನ್ನು ಹೋಗಲಾಡಿಸಲು ಮೊದಲು ಸೌತೆಕಾಯಿಯನ್ನು ಗೋಲಾಕಾರದ ಚಿಕ್ಕ ಚಿಕ್ಕ ತುಂಡುಗಳನ್ನಾಗಿ ಮಾಡಿ. ಈಗ ಚಾಕು ತೆಗೆದುಕೊಂಡು ಸೌತೆಕಾಯಿಯ ಚೂರುಗಳ ಮೇಲೆ ತಿರುವು ಮರುವಾದ ಲೈನ್ ಮಾಡಿ. ನಂತರ ಎರಡು ಸೌತೆಕಾಯಿಯ ಚೂರುಗಳನ್ನು ಕೈಯಲ್ಲಿ ಹಿಡಿದುಕೊಂಡು ಪರಸ್ಪರ ಒಂದನ್ನೊಂದು ಉಜ್ಜಿ. ಸೌತೆಕಾಯಿಯ ಚೂರುಗಳನ್ನು ಹೀಗೆ ಉಜ್ಜುವುದರಿಂದ ಅದರಲ್ಲಿರುವ ಕಹಿಯ ಗುಣ ದೂರವಾಗುತ್ತದೆ.
ಉಪ್ಪಿನಿಂದ ದೂರವಾಗುತ್ತೆ ಸೌತೆಕಾಯಿಯ ಕಹಿ : ಮೊದಲು ಸೌತೆಕಾಯಿಯ ಮುಂಭಾಗ ಮತ್ತು ಹಿಂಭಾಗವನ್ನು ಕತ್ತರಿಸಿ ಅದಕ್ಕೆ ಸ್ವಲ್ಪ ಉಪ್ಪು ಹಾಕಿ ಸ್ವಲ್ಪ ಸಮಯ ಹಾಗೇ ಬಿಡಿ. ಕೆಲ ಸಮಯ ಕಳೆದ ನಂತರ ಕತ್ತರಿಸಿದ ಭಾಗವನ್ನು ತೆಗೆದುಕೊಂಡು ಸೌತೆಕಾಯಿಯನ್ನು ಉಜ್ಜಿ. ನಂತರ ಮತ್ತೆ ಸೌತೆಕಾಯಿಯನ್ನು ಕತ್ತರಿಸಿ ಕೆಲವು ನಿಮಿಷಗಳವರೆಗೆ ಅದನ್ನು ಉಪ್ಪು ನೀರಿನಲ್ಲಿಡಿ. ಈ ವಿಧಾನ ಅನುಸರಿಸುವುದರಿಂದ ಸೌತೆಕಾಯಿಯ ಕಹಿ ನಿವಾರಣೆಯಾಗುತ್ತದೆ.
ಮನೆಗೆ ಅತಿಥಿಗಳು ಬಂದಾಗ ಅಥವಾ ಮನೆಯಲ್ಲಿ ಏನಾದರೂ ಸಮಾರಂಭವಿದ್ದಾಗ ಸೌತೆಕಾಯಿ ಹೀಗೆ ಕಹಿಯಾದರೆ ಅತಿಥಿಗಳ ಎದುರು ಮುಜುಗರ ಎದುರಿಸುವ ಪರಿಸ್ಥಿತಿ ಉಂಟಾಗುತ್ತದೆ. ಅತಿಥಿಗಳನ್ನು ಸತ್ಕರಿಸುವಾಗ ಸೌತೆಕಾಯಿ ಹೀಗೆ ಕಹಿಯಾದರೆ ತಿನ್ನುವುದು ಕೂಡ ಅಸಾಧ್ಯ. ಅಷ್ಟೇ ಅಲ್ಲದೇ ಬೆಲೆ ಏರಿಕೆಯ ಬಿಸಿಯಲ್ಲಿ ತರಕಾರಿಗಳ ಬೆಲೆಯೂ ಕೂಡ ಗಗನಕ್ಕೇರಿದೆ. ಹಾಗಿರುವಾಗ ಮಾರುಕಟ್ಟೆಯಿಂದ ಕೊಂಡುತಂದ ಸೌತೆಕಾಯಿ ಹೀಗೆ ಕಹಿ ಬಂದರೆ ಹಣ, ಪರಿಶ್ರಮ ಎರಡೂ ವ್ಯರ್ಥವಾಗುತ್ತದೆ. ಅದರ ಬದಲು ಇಂತಹ ಸುಲಭ ವಿಧಾನಗಳನ್ನು ಅನುಸರಿಸಿದರೆ ಸೌತೆಕಾಯಿಯನ್ನು ಎಸೆಯುವ ಪರಿಸ್ಥಿತಿ ನಿರ್ಮಾಣವಾಗುವುದಿಲ್ಲ.