ಸಂಕ್ರಾಂತಿಗೆ ಮನೆಗೆ ಬಂದ ಹೊಸ ಅಳಿಯ, ಅತ್ತೆ-ಮಾವನಿಂದ 379 ಬಗೆಯ ಖಾದ್ಯ

By Vinutha Perla  |  First Published Jan 17, 2023, 2:31 PM IST

ಸಂಕ್ರಾಂತಿ ಹಬ್ಬ ಅಂದ್ರೆ ಸಾಕು ನಾಡಿನಾದ್ಯಂತ ಸಂಭ್ರಮ ಮನೆಮಾಡುತ್ತೆ. ಒಂದೊಂದು ರಾಜ್ಯದಲ್ಲಿ ಇದನ್ನು ಒಂದೊಂದು ಹೆಸರಿನಿಂದ ಈ ಹಬ್ಬವನ್ನು ಆಚರಿಸುತ್ತಾರೆ. ಆದರೆ ಎಲ್ಲರೂ ತರಹೇವಾರಿ ಸಿಹಿಭಕ್ಷ್ಯಗಳನ್ನು ತಯಾರಿಸಿ ಸವಿಯುತ್ತಾರೆ. ಸಾಮಾನ್ಯವಾಗಿ ಮೂರ್ನಾಲ್ಕು ಬಗೆಯ ಆಹಾರ ಮಾಡುವುದು ಸಾಮಾನ್ಯ. ಆದ್ರೆ ಆಂಧ್ರದ ಎಲೂರಿನ ಕುಟುಂಬ ಸಂಕ್ರಾಂತಿಯಂದು ಅಳಿಯನಿಗೆ 379 ಖಾದ್ಯಗಳನ್ನು ಸಿದ್ಧಪಡಿಸಿದೆ.


ಸಂಕ್ರಾಂತಿ ಬಂದ್ರೆ ಸಾಕು ಮನೆ-ಮನದಲ್ಲಿ ಸಂಭ್ರಮ ಮೂಡುತ್ತೆ. ಮನೆಯನ್ನು ಸ್ವಚ್ಛಗೊಳಿಸಿ ರಂಗೋಲಿ ಹಾಕಿ, ತೋರಣ ಕಟ್ಟಿ ಎಲ್ಲರೂ ಸಂಭ್ರಮ ಪಡುತ್ತಾರೆ.  ಹಳ್ಳಿಗಳಲ್ಲಿ ಎತ್ತುಗಳಿಗೆ ಈ ದಿನ ಪೂಜೆ ಮಾಡಲಾಗುತ್ತೆ. ಜನರು ಎಳ್ಳು-ಬೆಲ್ಲ ತಿಂದು ಎಲ್ಲರಿಗೂ ಹಂಚಿ ಖುಷಿಪಡುತ್ತಾರೆ. ತರಹೇವಾರಿ ಭಕ್ಷ್ಯಗಳನ್ನು ಸಹ ಸಿದ್ಧಪಡಿಸುತ್ತಾರೆ. ಸಾಮಾನ್ಯವಾಗಿ ಖಾರ ಪೊಂಗಲ್, ಸಿಹಿ ಪೊಂಗಲ್ ಮಾಡಲಾಗುತ್ತದೆ. ಆದರೆ ಇದಲ್ಲದೆಯೂ ಕೆಲವೊಬ್ಬರು ಇತರ ಮೂರ್ನಾಲ್ಕು ಸ್ವೀಟ್ಸ್‌ಗಳನ್ನು ಸಿದ್ಧಪಡಿಸುತ್ತಾರೆ. ಆದ್ರೆ ಆಂಧ್ರದಲ್ಲೊಂದು ಕುಟುಂಬ ಸಂಕ್ರಾಂತಿಗೆ ಬರೋಬ್ಬರಿ 379 ಆಹಾರಗಳನ್ನು ಸಿದ್ಧಪಡಿಸಿದೆ.   ಏಲೂರು ಪೇಟೆಯಲ್ಲಿ ದಂಪತಿ 379 ಪದಾರ್ಥಗಳೊಂದಿಗೆ ಜಂಬೂ ಭೋಜನ ನೀಡಿ ಅಳಿಯನಿಗೆ ಅಚ್ಚರಿ ಮೂಡಿಸಿದ್ದಾರೆ. 

ಸಂಕ್ರಾಂತಿಗೆ ಅಳಿಯನಿಗೆ 379 ಖಾದ್ಯ ಬಡಿಸಿ ಉಪಚಾರ
ಸಂಕ್ರಾಂತಿ ಹಬ್ಬದಂದು ಅಳಿಯಂದಿರನ್ನು ಉಪಚರಿಸುವುದು ಆಂಧ್ರದ ಹಲವು ಮನೆಗಳಲ್ಲಿ ದಶಕಗಳಿಂದ ನಡೆದುಕೊಂಡು ಬಂದಿರುವ ಸಂಪ್ರದಾಯವಾಗಿದೆ. ಅದರಲ್ಲೂ  ಆಂಧ್ರದ ಗೋದಾವರಿ ಜಿಲ್ಲೆ ಸಂಸ್ಕೃತಿ, ಸಂಪ್ರದಾಯಗಳ ತಾಯ್ನಾಡು ಎಂದು ಕರೆಸಿಕೊಂಡಿದೆ. ಗೋದಾವರಿ ಜಿಲ್ಲೆಗಳ ಪಾಕಪದ್ಧತಿಯು ವಿಶೇಷವಾಗಿ ಅದರ ಶ್ರೀಮಂತ ವೈವಿಧ್ಯತೆಯನ್ನು ಎರಡು ತೆಲುಗು ರಾಜ್ಯಗಳಲ್ಲಿ ಅತ್ಯುತ್ತಮವೆಂದು ಪರಿಗಣಿಸಲಾಗಿದೆ. ಏಲೂರು ನಗರದ ಡೊಂಗಲ ಮಂಟಪದ ಭೀಮರಾವ್ ಮತ್ತು ಚಂದ್ರಲೀಲಾ ದಂಪತಿ ತಮ್ಮ ಮಗಳನ್ನು ಅನಕಾಪಲ್ಲಿಯ ಬುದ್ಧ ಮುರಳಿಧರ್​​​ಗೆ ಕೊಟ್ಟು ಕಳೆದ ವರ್ಷ ಏಪ್ರಿಲ್‌ನಲ್ಲಿ ವಿವಾಹ ಮಾಡಿದ್ದರು.

Latest Videos

undefined

ಸಂಕ್ರಾತಿಯಲ್ಲಿ ಪೊಂಗಲ್ ಮಾಡೋದ್ರ ಹಿಂದಿದೆ ವೈಜ್ಞಾನಿಕ ಕಾರಣ, ಆರೋಗ್ಯಕ್ಕಿದು ಒಳ್ಳೇದು!

ಮದುವೆಯ ನಂತರದ ಮೊದಲ ಸಂಕ್ರಾಂತಿ ಇದಾಗಿದ್ದರಿಂದ ಮಗಳು ಮತ್ತು ಅಳಿಯ ಹಬ್ಬಕ್ಕೆ ಬಂದಿದ್ದರು. ಹೀಗಾಗಿ ಗೋದಾವರಿ ಆತಿಥ್ಯವನ್ನು ತೋರಿಸಲು ದಂಪತಿಗಳು ಅಳಿಯನಿಗೆ 379 ಆಹಾರ ಪದಾರ್ಥಗಳನ್ನು ಬಡಿಸಿದ್ದಾಗಿ ಮಾವ ಹೇಳಿದ್ದಾರೆ. ಇಡೀ ಊಟದ ಮೇಜಿನ ಮೇಲೆ ಮನೆಯಲ್ಲಿ ಮಾಡಿದ ಖಾದ್ಯಗಳು ತುಂಬಿದ್ದರಿಂದ ಅಳಿಯ ದಿಗ್ಭ್ರಮೆಗೊಂಡರು.ಅಳಿಯ ಮುರಳೀಧರ್ ವಿಶಾಖಪಟ್ಟಣಂ ಬಳಿಯ ಅನಕಾಪಲ್ಲಿ ಪಟ್ಟಣದಲ್ಲಿ ವಾಸ್ತುಶಿಲ್ಪಿಯಾಗಿದ್ದಾರೆ. 

ಒಂದು ವಾರದ ಹಿಂದೆಯೇ ಅದ್ಧೂರಿ ಹಬ್ಬದ ತಯಾರಿ
ಮುರಳೀಧರ್ ಅವರು ಗೋದಾವರಿ ಜಿಲ್ಲೆಯಿಂದ ಹುಡುಗಿಯನ್ನು ಮದುವೆಯಾಗಲು ಬಯಸಿದ್ದರು. ಹೀಗಾಗಿ ಕಳೆದ ವರ್ಷ ಎಲ್ಲೂರಿನ ಕೋರುಬಳ್ಳಿ ಕುಸುಮಾ ಅವರ ಪೋಷಕರಿಂದ ಪ್ರಸ್ತಾಪ ಬಂದಾಗ ಅವರು ತಕ್ಷಣ ಒಪ್ಪಿಗೆ ಸೂಚಿಸಿರು. ಕಳೆದ ವರ್ಷ ಏಪ್ರಿಲ್ 16ರಂದು ಅರಕುವಿನಲ್ಲಿ ವಿವಾಹ ನೆರವೇರಿತ್ತು. ಈ ಭಾಗದ ಸಂಪ್ರದಾಯದಂತೆ, ಕುಸುಮಾ ಅವರ ಪೋಷಕರು ತಮ್ಮ ಅಳಿಯನಿಗೆ ಒಂದು ವಾರದ ಹಿಂದೆಯೇ ಅದ್ಧೂರಿ ಹಬ್ಬದ ತಯಾರಿಯನ್ನು ಪ್ರಾರಂಭಿಸಿದರು ಮತ್ತು 379 ಭಕ್ಷ್ಯಗಳನ್ನು ತಯಾರಿಸಿದರು.

'ನಾವು ಎಲ್ಲಾ ರೀತಿಯ ಆಹಾರ ಪದಾರ್ಥಗಳನ್ನು ಸಿದ್ಧಪಡಿಸಲು ಯೋಜನೆ ರೂಪಿಸಿದ್ದೆವು. ನನ್ನ ಪೋಷಕರು ಕಳೆದ 10 ದಿನಗಳಲ್ಲಿ ಮೆನುವನ್ನು ಸಿದ್ಧಪಡಿಸಿದ್ದಾರೆ. ನನ್ನ ಪತಿ ಆಹಾರವನ್ನು ನೋಡಿದ ನಂತರ ಅಚ್ಚರಿಗೊಂಡರು' ಎಂದು ಉದ್ಯಮಿ ಭೀಮಾ ರಾವ್ ಅವರ ಪುತ್ರಿ ಕುಸುಮಾ ತಿಳಿಸಿದ್ದಾರೆ.

ಇಂಗ್ಲಿಷ್​ನಲ್ಲಿ ಎಂ. ಎ, ಬ್ರಿಟಿಷ್​ ಕೌನ್ಸಿಲ್​ನಲ್ಲಿ ಕೆಲಸ, ಎಲ್ಲಾ ಬಿಟ್ಟು ಟೀ ಮಾರ್ತಿರೋ ಯುವತಿ!

ಡೈನಿಂಗ್ ಟೇಬಲ್ ಪೂರ್ತಿ ತಿನಿಸುಗಳಿಂದ ತುಂಬಿತ್ತು. ರೊಟ್ಟಿ, ಕರ್ರಿ, ಸಿಹಿತಿಂಡಿ, ಹಣ್ಣುಗಳು, ಕೂಲ್ ಡ್ರಿಂಕ್ಸ್, ಉಪ್ಪಿನಕಾಯಿ ಹೀಗೆ 379 ಬಗೆಯ ಖಾದ್ಯಗಳಿದ್ದವು. ಅತ್ತೆ ಬಡಿಸಿದ ಅಷ್ಟೂ ತಿನಿಸುಗಳನ್ನು ಬಹಳ ಪ್ರೀತಿಯಿಂದ ತಿನ್ನುವುದು ಕಷ್ಟವಾದರೂ ಅಳಿಯ ಎಲ್ಲ ಖಾದ್ಯಗಳನ್ನು ಇಷ್ಟಪಟ್ಟು ಸವಿಯುತ್ತಿದ್ದರು. ಇತ್ತೀಚೆಗೆ ಪಶ್ಚಿಮ ಗೋದಾವರಿ ಜಿಲ್ಲೆಯ ಭೀಮಾವರದ ಉದ್ಯಮಿ ತಟವರ್ತಿ ಬದ್ರಿ ಮತ್ತು ಸಂಧ್ಯಾ ತಮ್ಮ ಅಳಿಯನಿಗೆ 173 ಬಗೆಯ ಖಾದ್ಯಗಳನ್ನು ತಯಾರಿಸಿ ಬಡಿಸಿದ್ದರು.

'ನಾನು ಎಲ್ಲಾ ಪದಾರ್ಥಗಳನ್ನು ರುಚಿ ನೋಡಿದ್ದೇನೆ ಮತ್ತು ಪ್ರತಿಯೊಂದಕ್ಕೂ ವಿಭಿನ್ನ ರುಚಿ ಇತ್ತು. ಇದು ವಿಭಿನ್ನ ಭಾವನೆ. ಕೋನಸೀಮಾ ಮತ್ತು ಗೋದಾವರಿ ಜಿಲ್ಲೆಗಳಲ್ಲಿನ ಸಂಸ್ಕೃತಿಯು ವೈಜಾಗ್ ಪ್ರದೇಶಕ್ಕಿಂತ ಸಾಕಷ್ಟು ಭಿನ್ನವಾಗಿದೆ' ಎಂದು 28 ವರ್ಷದ ಮುರಳೀಧರ್ ಹೇಳಿದರು. ಸದ್ಯ ಅಳಿಯನಿಗಾಗಿ 379 ಬಗೆಯ ರುಚಿರುಚಿಯಾದ ಆಹಾರ ಮಾಡಿಟ್ಟ ಅತ್ತೆ-ಮಾವನ ಕಾರ್ಯ ಇಂಟರ್‌ನಟ್‌ನಲ್ಲಿ ವೈರಲ್ ಆಗ್ತಿದೆ. 

click me!