ಹಣ್ಣಿನ ಸಿಪ್ಪೆಯಲ್ಲಿಯೇ ಇರೋದು ಆರೋಗ್ಯಕಾರಿ ಅಂಶ, ಎಸೆಯೋ ಮುನ್ನ ಒಮ್ಮೆ ಯೋಚಿಸಿ

By Contributor AsianetFirst Published Sep 30, 2022, 3:39 PM IST
Highlights

ಸಾಮಾನ್ಯವಾಗಿ ಕಿತ್ತಳೆ, ಮೂಸಂಬಿ ಮುಂತಾದ ಹಣ್ಣುಗಳ ಸಿಪ್ಪೆ ಸುಲಿದು ತಿರುಳು ತಿನ್ನುತ್ತೀರಿ. ಹೆಚ್ಚಿನವರು ರಾಸಾಯನಿಕಗಳ ಭಯದಿಂದ ಸೇಬಿನ ಸಿಪ್ಪೆಯನ್ನೂ ಸುಲಿದು ಒಳಗಿನ ಭಾಗ ಮಾತ್ರ ತಿನ್ನುತ್ತಾರೆ. ಆದರೆ ಇದು ನಿಮಗೆ ಗೊತ್ತಿರಲಿ- ನೀವು ಸೇವಿಸುವ ತಿರುಳಿಗಿಂತಲೂ ಸಿಪ್ಪೆಯೇ ಹತ್ತಾರು ಪಟ್ಟು ಹೆಚ್ಚಿನ ವಿಟಮಿನ್ ಹೊಂದಿರುತ್ತದೆ!

ಇದು ವೈಜ್ಞಾನಿಕ ಸಂಗತಿ. ಸಿಪ್ಪೆ ಸುಲಿದ ಹಣ್ಣು (fruit)- ತರಕಾರಿಗಳಿಗಿಂತಲೂ (vegetables) ಸಿಪ್ಪೆ (peel) ಇರುವ ಹಣ್ಣು ತರಕಾರಿಗಳೇ ಹೆಚ್ಚಿನ ಪ್ರಮಾಣದ ವಿಟಮಿನ್‌ಗಳು (vitamines), ಖನಿಜಗಳು ಮತ್ತು ಇತರ ಪ್ರಯೋಜನಕಾರಿ ಪೋಷಕಾಂಶಗಳನ್ನು ಹೊಂದಿರುತ್ತವೆ. ಒಂದು ಕಚ್ಚಾ ಸೇಬಿನ (apple) ಸಿಪ್ಪೆಯು ತಿರುಳಿಗಿಂತ 332% ಹೆಚ್ಚು ವಿಟಮಿನ್ ಕೆ, 142% ಹೆಚ್ಚು ವಿಟಮಿನ್ ಎ, 115% ಹೆಚ್ಚು ವಿಟಮಿನ್ ಸಿ, 20% ಹೆಚ್ಚು ಕ್ಯಾಲ್ಸಿಯಂ ಮತ್ತು 19% ವರೆಗೆ ಹೆಚ್ಚು ಪೊಟ್ಯಾಸಿಯಮ್ ಅನ್ನು ಸಿಪ್ಪೆ ಸುಲಿದ ಸೇಬಿಗಿಂತ ಹೊಂದಿರುತ್ತದಂತೆ. ಅದೇ ರೀತಿ, ಚರ್ಮದೊಂದಿಗೆ ಬೇಯಿಸಿದ ಆಲೂಗಡ್ಡೆ (potato) 175% ಹೆಚ್ಚು ವಿಟಮಿನ್ ಸಿ, 115% ಹೆಚ್ಚು ಪೊಟ್ಯಾಸಿಯಮ್, 111% ಹೆಚ್ಚು ಫೋಲೇಟ್ ಮತ್ತು 110% ಹೆಚ್ಚು ಮೆಗ್ನೀಸಿಯಮ್ ಮತ್ತು ರಂಜಕವನ್ನು ಸಿಪ್ಪೆ ಸುಲಿದ ಆಲೂಗಿಂತ ಹೊಂದಿರುತ್ತದೆ.

ತರಕಾರಿ ಸಿಪ್ಪೆಗಳು ಗಮನಾರ್ಹವಾಗಿ ಹೆಚ್ಚಿನ ನಾರಿನಂಶ ಮತ್ತು ಉತ್ಕರ್ಷಣ ನಿರೋಧಕಗಳನ್ನು (ಆಂಟಿ ಆಕ್ಸಿಡೆಂಟ್) ಹೊಂದಿರುತ್ತವೆ. ಉದಾಹರಣೆಗೆ, ತರಕಾರಿಯಲ್ಲಿರುವ ಒಟ್ಟು ಫೈಬರ್‌ನ 31%ರಷ್ಟು ಅದರ ಸಿಪ್ಪೆಯಲ್ಲಿ ಕಂಡುಬರುತ್ತದೆ. ಆಂಟಿಆಕ್ಸಿಡೆಂಟ್ ಮಟ್ಟ ಹಣ್ಣಿನ ಸಿಪ್ಪೆಗಳಲ್ಲಿ ತಿರುಳಿನಲ್ಲಿಗಿಂತ 328 ಪಟ್ಟು ಹೆಚ್ಚಿರಬಹುದು. ಆದ್ದರಿಂದ, ಹಣ್ಣುಗಳು ಮತ್ತು ತರಕಾರಿಗಳ ಸಿಪ್ಪೆ ತೆಗೆಯದೆ ತಿನ್ನುವುದು ನಿಜವಾಗಿಯೂ ನಿಮ್ಮ ಪೋಷಕಾಂಶಗಳ ಸೇವನೆಯ ಪ್ರಮಾಣವನ್ನು ಹೆಚ್ಚಿಸುತ್ತದೆ.

ಹಣ್ಣು ಮತ್ತು ತರಕಾರಿ ಸಿಪ್ಪೆ ಸೇವಿಸುವುದರಿಂದ ಹೆಚ್ಚು ಕಾಲ ಹೊಟ್ಟೆ ತುಂಬಿದಂತಿರುತ್ತದೆ. ಇದು ಹೆಚ್ಚಾಗಿ ಅವುಗಳಲ್ಲಿರುವ ಹೆಚ್ಚಿನ ಫೈಬರ್ ಅಂಶದಿಂದಾಗಿ. ತಾಜಾ ಹಣ್ಣುಗಳು ಮತ್ತು ತರಕಾರಿಗಳ ಹೊರಗಿನ ಪದರ ಅದರ ಮೂರನೇ ಒಂದು ಭಾಗದಷ್ಟು ನಾರಿನಂಶ ಹೊಂದಿರಬಹುದು. ಫೈಬರ್ ಹೆಚ್ಚು ಕಾಲ ಹಸಿವಾಗದಂತಿರಲು ಸಹಾಯ ಮಾಡುತ್ತದೆ ಎಂದು ಹಲವಾರು ಅಧ್ಯಯನಗಳು ತೋರಿಸಿವೆ. ನಾರಿನಂಶ ಪಚನಕ್ರಿಯೆಗೂ ವಿಸರ್ಜನೆಗೂ ಸಹಾಯ ಮಾಡುತ್ತದೆ. ಫೈಬರ್ ನಿಮ್ಮ ಕರುಳಿನಲ್ಲಿ ವಾಸಿಸುವ ಬ್ಯಾಕ್ಟೀರಿಯಾಗಳಿಗೆ ಆಹಾರವಾಗಿಯೂ ಕಾರ್ಯನಿರ್ವಹಿಸುತ್ತದೆ. ಫೈಬರ್-ಸಮೃದ್ಧ ಆಹಾರ ಹಸಿವನ್ನು ಕಡಿಮೆ ಮಾಡುವುದರಿಂದಾಗಿ, ದಿನಕ್ಕೆ ಸೇವಿಸುವ ಕ್ಯಾಲೊರಿಗಳ ಸಂಖ್ಯೆಯೂ ಕಡಿಮೆಯಾಗಿ ದೇಹತೂಕ ಇಳಿಸಲು ಕಾರಣವಾಗಬಹುದು ಎಂದು ಹಲವಾರು ಅಧ್ಯಯನಗಳು ಗಮನಿಸಿವೆ.

ಸಿಪ್ಪೆಗಳು ಕೆಲವು ರೋಗಗಳನ್ನು ತಡೆಗಟ್ಟಲು ಸಹಾಯ ಮಾಡುತ್ತವೆ. ಯಾಕೆಂದರೆ ಅವು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತವೆ, ಆಂಟಿಆಕ್ಸಿಡೆಂಟ್‌ಗಳ ಮುಖ್ಯ ಕಾರ್ಯವೆಂದರೆ ಸ್ವತಂತ್ರ ರಾಡಿಕಲ್ ಎಂದು ಕರೆಯಲ್ಪಡುವ ಅಸ್ಥಿರ ಅಣುಗಳ ವಿರುದ್ಧ ಹೋರಾಡುವುದು. ಹೆಚ್ಚಿನ ಮಟ್ಟದ ಸ್ವತಂತ್ರ ರಾಡಿಕಲ್‌ಗಳು ರೋಗದ ಅಪಾಯವನ್ನು ಹೆಚ್ಚಿಸುತ್ತದೆ. ಆಂಟಿಆಕ್ಸಿಡೆಂಟ್‌ಗಳು ಹೃದ್ರೋಗ ಮತ್ತು ಕೆಲವು ರೀತಿಯ ಕ್ಯಾನ್ಸರ್‌ಗಳ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ ಎಂದು ಸಂಶೋಧಕರು ನಂಬಿದ್ದಾರೆ.

ಹಣ್ಣುಗಳು ಮತ್ತು ತರಕಾರಿಗಳಲ್ಲಿ ಕಂಡುಬರುವ ಕೆಲವು ಉತ್ಕರ್ಷಣ ನಿರೋಧಕಗಳು (anti oxidents) ಆಲ್ಝೈಮರ್‌ನಂತಹ (alzimers) ನರವೈಜ್ಞಾನಿಕ ಕಾಯಿಲೆಗಳ ಅಪಾಯ ಕಡಿಮೆ ಮಾಡುತ್ತವಂತೆ. ಹಣ್ಣುಗಳು ಮತ್ತು ತರಕಾರಿಗಳಲ್ಲಿ ನೈಸರ್ಗಿಕವಾಗಿಯೇ ಉತ್ಕರ್ಷಣ ನಿರೋಧಕಗಳು ಅಧಿಕ. ಸಂಶೋಧನೆಯ ಪ್ರಕಾರ, ಉತ್ಕರ್ಷಣ ನಿರೋಧಕಗಳು ಹೊರ ಪದರದಲ್ಲಿ ಹೆಚ್ಚು ಕೇಂದ್ರೀಕೃತವಾಗಿರುತ್ತವೆ. ಒಂದು ಅಧ್ಯಯನದಲ್ಲಿ, ಉತ್ಕರ್ಷಣ ನಿರೋಧಕ ಮಟ್ಟವು ಹಣ್ಣು ಮತ್ತು ತರಕಾರಿ ಸಿಪ್ಪೆಗಳಲ್ಲಿ ಅವುಗಳ ತಿರುಳುಗಳಿಗಿಂತ 328 ಪಟ್ಟು ಹೆಚ್ಚಿದೆ ಎಂದು ಹೇಳಿದೆ. ಆದ್ದರಿಂದ, ನೀವು ಹಣ್ಣುಗಳು ಮತ್ತು ತರಕಾರಿಗಳಿಂದ ಹೆಚ್ಚಿನ ಆಂಟಿ ಆಕ್ಸಿಡೆಂಟ್ ಪಡೆಯಬೇಕು ಎಂದಿದ್ದರೆ ಅವುಗಳನ್ನು ಸಿಪ್ಪೆ ತೆಗೆಯದೆ ತಿನ್ನಬೇಕು.

ದಿನಾಲೂ ತಿನ್ನಿ ಬ್ಲೂ ಬೆರಿ, ಇದು ಬದಲಿಸಬಲ್ಲದು ನಮ್ಮ ದಿನಚರಿ

ಆದರೆ ಇದು ಗೊತ್ತಿರಲಿ!
ಹಣ್ಣು ಮತ್ತು ತರಕಾರಿಗಳ ಸಿಪ್ಪೆಗಳಲ್ಲಿ ಕೀಟನಾಶಕಗಳು ಇರಬಹುದು. ಸಾಮಾನ್ಯವಾಗಿ ಕೀಟಗಳ ಹಾವಳಿ ಕಡಿಮೆ ಮಾಡಲು, ಬೆಳೆ ಹಾನಿ ಕಡಿಮೆ ಮಾಡಲು ಮತ್ತು ಇಳುವರಿಯನ್ನು ಹೆಚ್ಚಿಸಲು ಕ್ರಿಮಿನಾಶಕ ಬಳಸಲಾಗುತ್ತದೆ. ಕೆಲವೊಮ್ಮೆ ಸಾವಯವ ಮತ್ತು ಸಹಜ ಎಂದು ಹೇಳಲಾದ ಹಣ್ಣುಗಳು ಮತ್ತು ತರಕಾರಿಗಳಲ್ಲಿಯೂ ಕೀಟನಾಶಕಗಳನ್ನು ಕಾಣಬಹುದು. ಹೀಗೆ ಹೊಡೆಯುವ ಕೀಟನಾಶಕಗಳು (Pestisides) ಹೊರಗಿನ ಸಿಪ್ಪೆಯಲ್ಲಿ ಸೀಮಿತವಾಗಿರುತ್ತವೆ. ದ್ರಾಕ್ಷಿ (Grapes), ಸೇಬಿನಂಥ (Apple) ಹಣ್ಣುಗಳಲ್ಲಿ ಅಪಾರವಾದ ಕೀಟನಾಶಕಗಳ ಪ್ರಮಾಣವನ್ನು ಕಾಣಬಹುದು. ಇವೆಲ್ಲವೂ ಸಿಪ್ಪೆಯಲ್ಲಿಯೇ ಕೇಂದ್ರೀಕೃತಗೊಂಡಿರುತ್ತದೆ.

ಕೀಟನಾಶಕಗಳನ್ನು ತೆಗೆಯಲು ಚೆನ್ನಾಗಿ ತೊಳೆಯುವುದು ಉತ್ತಮ ಮಾರ್ಗ. ಉಪ್ಪು ಅಥವಾ ಅರಶಿನ ಅಥವಾ ಇವೆರಡೂ ಬೆರೆಸಿದ ನೀರಿನಲ್ಲಿ ತೊಳೆಯುವುದು ಇನ್ನಷ್ಟು ಉತ್ತಮ. ಹಣ್ಣುಗಳ ಮೇಲೆ ಕಂಡುಬರುವ ಸುಮಾರು 41%ನಷ್ಟು ಕೀಟನಾಶಕವನ್ನು ನೀರಿನಿಂದ ತೊಳೆಯುವ ಮೂಲಕ ತೆಗೆದುಹಾಕಬಹುದಂತೆ. ಆದರೆ ಸಿಪ್ಪೆ ಸುಲಿಯುವುದೇ ಇದಕ್ಕಿಂತೆಲ್ಲಾ ಉತ್ತಮ ಮಾರ್ಗ. ಹೀಗಾಗಿ ಕೀಟನಾಶಕಗಳ ಬಗ್ಗೆ ಆತಂಕ ಹೊಂದಿರುವವರು ತರಕಾರಿ- ಹಣ್ಣುಗಳ ಸಿಪ್ಪೆ ಸುಲಿದು ತಿನ್ನುವುದು ರೂಢಿ. ಕೀಟನಾಶಕ, ಕ್ರಿಮಿನಾಶಕ ಬಳಸಿಲ್ಲ ಎಂಬುದು ನಿಮಗೆ ಖಾತ್ರಿಯಾಗಿದ್ದರೆ ಮಾತ್ರ, ಸಿಪ್ಪೆ ಸಮೇತ ಸೇವಿಸುವುದು ತುಂಬ ಉತ್ತಮ. ಸಾವಯವ, ಸಹಜ ಎನ್ನಲಾಗುವ ತರಕಾರಿ - ಹಣ್ಣುಗಳನ್ನು ಸಹ ಪರಿಶೀಲಿಸಿ.

ಮಧುಮೇಹ ನಿಯಂತ್ರಣಕ್ಕೆ ಈ ಆಹಾರ ಪದಾರ್ಥಗಳು ಸಹಕಾರಿ..

click me!