
ಆನ್‌ಲೈನ್‌ನಲ್ಲಿ ಮನೆ ಬಾಗಿಲಿಗೆ ಬರುವ ಆಹಾರ ತಿನ್ನಲು ಬಹಳ ರುಚಿಯಾಗಿರುತ್ತದೆ. ಆದರೆ ಈಗ ನಾವು ಇಲ್ಲಿ ತಿಳಿಸುತ್ತಿರುವ ವಿಚಾರ ಓದಿದರೆ ನೀವು ಅದರಲ್ಲೂ ಸಸ್ಯಾಹಾರಿಗಳಾಗಿದ್ದಲ್ಲಿ ಹೌಹಾರುವುದು ಪಕ್ಕಾ. ನಿನ್ನೆಯಷ್ಟೇ ಬ್ರಿಟನ್‌ನಲ್ಲಿ ಆನ್‌ಲೈನ್‌ನಲ್ಲಿ ಸ್ಯಾಂಡ್ವಿಚ್ ಆರ್ಡರ್ ಮಾಡಿದ ಮಹಿಳೆಗೆ ಜೊತೆಯಲ್ಲೊಂದು ಚಾಕು ಸಿಕ್ಕಿತ್ತು. ಆದರೆ ಈಗ ಗೀತರಚನೆಕಾರರೊಬ್ಬರಿಗೆ ಸಸ್ಯಹಾರಿ ಆಹಾರದಲ್ಲಿ ಚಿಕನ್ ತುಂಡೊಂದು ಸಿಕ್ಕಿದ್ದು, ಆಹಾರ ಸೇವಿಸುತ್ತಿದ್ದ ಅವರು ಬೆಚ್ಚಿ ಬಿದ್ದಿದ್ದಾರೆ. ಈ ವಿಚಾರವನ್ನು ಅವರು ಫೋಟೋ ಸಮೇತ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ನೆಟ್ಟಿಗರು ಕೂಡ ಈ ಘಟನೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಮಿಳು ಗೀತರಚನೆಕಾರರಾದ ಕೋ ಸೆಶಾ ಎಂಬುವರು ಮೂಲತಃ ಸಸ್ಯಹಾರಿಯಾಗಿದ್ದು, ಸ್ವಿಗ್ಗಿ ಮೂಲಕ @tbcಯಿಂದ ಆನ್‌ಲೈನ್ ಆಹಾರ ಪೂರೈಕೆ ಸಂಸ್ಥೆಯಾಗಿರುವ ಸ್ವಿಗ್ಗಿ ಮೂಲಕ ಗೋಬಿ ಮಂಚೂರಿ ಜೊತೆ ಕೋರ್ನ್ ಪ್ರೈಡ್ ರೈಸ್ ಆರ್ಡರ್ ಮಾಡಿದ್ದರು. ಅದರಂತೆ ಮನೆಗೆ ಬಂದ ಆಹಾರ ಪೊಟ್ಟಣ ತೆಗೆದು ಸೇವಿಸಲು ಆರಂಭಿಸಿದ ಅವರಿಗೆ ಮಧ್ಯದಲ್ಲಿ ಚಿಕನ್ ತುಂಡು ಸಿಕ್ಕಿದ್ದು, ಅವರು ತೀವ್ರವಾಗಿ ಗಾಬರಿಯಾಗಿದ್ದಾರೆ. ಈ ವಿಚಾರವನ್ನು ತಮ್ಮ ಸಾಮಾಜಿಕ ಜಾಲತಾಣಲ್ಲಿ ಹಂಚಿಕೊಂಡು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆನ್‌ಲೈನ್ ಫುಡ್ ಆರ್ಡರ್ ಮಾಡಿದ ಗರ್ಭಿಣಿಗೆ ಶಾಕ್: ಸ್ಯಾಂಡ್‌ವಿಚ್ ಒಳಗಿದ್ದಿದ್ದು ಏನು?
ತಮ್ಮ ಈ ಕ್ಷಮಿಸಲಾಗದ ತಪ್ಪಿಗೆ ಸ್ವಿಗ್ಗಿ ಆಹಾರ ಸಂಸ್ಥೆ ಜೀವನಪೂರ್ತಿ ಶಿಸ್ತುಬದ್ಧ ಸಸ್ಯಹಾರಿಯಾಗಿದ್ದ, ನನ್ನ ಬದುಕಿನ ಮೌಲ್ಯಗಳನ್ನು ಸಮಾಧಿ ಮಾಡಲು ಯತ್ನಿಸಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಗೋಬಿ ಮಂಚೂರಿಯನ್ ಜೊತೆ ಕೋರ್ನ್ ಫ್ರೈಡ್ ರೈಸ್‌ನಲ್ಲಿ ಚಿಕನ್ ತುಂಡು ಸಿಕ್ಕಿದೆ. ಇದನ್ನು ನಾನು ಸ್ವಿಗ್ಗಿ ಮೂಲಕ @tbc_india ದಿಂದ ಆರ್ಡರ್ ಮಾಡಿದ್ದೆ. ಇದಕ್ಕಿಂತ ಕೆಟ್ಟದು ಏನೆಂದರೆ ಸ್ವಿಗ್ಗಿಯ ಕಸ್ಟಮರ್ ಕೇರ್ ನನಗೆ, ನನ್ನ ಧಾರ್ಮಿಕ ಭಾವನೆಗಳಿಗೆ ಅಪಚಾರ ಎಸಗಿದ ಈ ಪ್ರಮಾದಕ್ಕೆ ಕೇವಲ 70 ರೂಪಾಯಿಗಳ ಪರಿಹಾರ ನೀಡಿದೆ ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಈ ಫೋಸ್ಟ್‌ಗೆ 600ಕ್ಕೂ ಹೆಚ್ಚು ಜನ ಮೆಚ್ಚುಗೆ ವ್ಯಕ್ತಪಡಿಸಿದ್ದು, 200ಕ್ಕೂ ಹೆಚ್ಚು ಜನ ಈ ಪೋಸ್ಟ್‌ನ್ನು ರಿಟ್ವಿಟ್ ಮಾಡಿದ್ದಾರೆ.
ಅಲ್ಲದೇ ಈ ಬಗ್ಗೆ ಸ್ವಿಗ್ಗಿ ಪ್ರತಿನಿಧಿ ತಮ್ಮಲ್ಲಿ ವೈಯಕ್ತಿಕವಾಗಿ ಕ್ಷಮೆ ಕೇಳಬೇಕೆಂದು ಅವರು ಆಗ್ರಹಿಸಿದ್ದಾರೆ. ಅಲ್ಲದೇ ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳಲು ತಾವು ಸ್ವತಂತ್ರರಾಗಿರುವುದಾಗಿ ಅವರು ಹೇಳಿಕೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಅನೇಕರು ಈ ಗೀತರಚನೆಕಾರನಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಮತ್ತೆ ಕೆಲವರು ನೀವೇಕೆ ಮಾಂಸಹಾರಿ ರೆಸ್ಟೋರೆಂಟ್‌ನಿಂದ ಆಹಾರ ಆರ್ಡರ್ ಮಾಡಿದ್ದೀರಿ ಎಂದು ಅವರನ್ನು ಪ್ರಶ್ನಿಸಿದ್ದಾರೆ. ನೀವು ಮಾಂಸಹಾರಿ ರೆಸ್ಟೋರೆಂಟ್‌ನಿಂದ ಆಹಾರ ಆರ್ಡರ್ ಮಾಡಿದ್ದೀರಿ ಎಂದ ಮೇಲೆ ಅದರಲ್ಲಿ ದೂರುವುದರಲ್ಲಿ ಅರ್ಥವಿಲ್ಲ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಬೀಫ್ ಸ್ಯಾಂಡ್‌ವಿಚ್‌ನಲ್ಲಿ ಸಿಕ್ಕಿದ ಅರ್ಧ ಕತ್ತರಿಸಿದ ಕೈ ಬೆರಳು !
ಮತ್ತೆ ಕೆಲವರು ಸ್ವಿಗ್ಗಿ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗುವಂತೆ ಆಗ್ರಹಿಸಿದರು. ಮತ್ತೆ ಕೆಲವರು ಸಂಪೂರ್ಣ ಶುದ್ಧ ಸಸ್ಯಹಾರಿ ಮಾಂಸಹಾರದ ರುಚಿ ನೋಡಿದರು. ನೀವು ಕೇಸು ದಾಖಲಿಸಿದರು ನೀವು ಈ ವಿಚಾರದಲ್ಲಿ ಯಥಾಸ್ಥಿತಿ ಮರಳುವುದಿಲ್ಲ. ಹೀಗಾಗಿ ಘಟನೆಯನ್ನು ಪಾಠವೆಂದು ತಿಳಿದು ಪ್ರಕರಣ ಕೈ ಬಿಡಿ ಎಂದು ಮತ್ತೊಬ್ಬರು ಸಲಹೆ ನೀಡಿದರು.
ಆನ್‌ಲೈನ್ ಆಹಾರ ಪೂರೈಕೆ ತುರ್ತಿನ ಸಮಯದದಲ್ಲಿ ಬಹುತೇಕರ ಪಾಲಿಗೆ ಒಂದು ರೀತಿಯ ಆರಾಮದ ಬದುಕನ್ನು ನೀಡುತ್ತದೆ. ಕೆಲಸದ ಒತ್ತಡ ಸಮಯದ ಅಭಾವ ಮುಂತಾದ ಕಾರಣಗಳಿಂದ ಕೆಲವೊಮ್ಮೆ ಆಹಾರ ತಯಾರಿಸಲು ಸಮಯ ಇರುವುದಿಲ್ಲ. ಮತ್ತೆ ಕೆಲವೊಮ್ಮ ಆಹಾರ ತಯಾರಿಸುವ ಮೂಡಿರುವುದಿಲ್ಲ. ಇಂತಹ ಸಂದರ್ಭಗಳಲ್ಲಿ ಈ ಆನ್‌ಲೈನ್ ಆಹಾರ ವ್ಯವಸ್ಥೆ ಅನೇಕರಿಗೆ ವರದಾನವಾಗಿದೆ. ಜೋರಾಗಿ ಹಸಿವಾಗುತ್ತಿರುವ ಸಮಯದಲ್ಲಿ ಬುಕ್ ಮಾಡಿದ ನಿಮಿಷಗಳಲ್ಲಿ ಮನೆ ಬಳಿ ತಲುಪುವ ಆಹಾರ ಹೊಟ್ಟೆಯನ್ನು ತಣ್ಣಗೆ ಮಾಡಿ ಮನಸ್ಸಿಗೆ ನೆಮ್ಮದಿ ನೀಡುತ್ತದೆ. ಆದರೆ ಎಲ್ಲಾ ವ್ಯವಸ್ಥೆಗಳಲ್ಲಿ ಹೇಗೆ ಹಿನ್ನಡೆ ಅಥವಾ ಆಡಚಣೆಗಳಿರುತ್ತವೋ ಅದೇ ರೀತಿ ಈ ಆನ್‌ಲೈನ್ ಫುಡ್ ಡೆಲಿವರಿಯಲ್ಲೂ ಹಲವು ಸಣ್ಣಪುಟ್ಟ ಆಡಚಣೆಗಳಿವೆ. ಕೆಲವೊಮ್ಮೆ ಪಾರ್ಸೆಲ್ ಮನೆ ತಲುಪುವ ವೇಳೆ ತಣ್ಣಗಾಗಿರುತ್ತದೆ. ಕೆಲವೊಮ್ಮೆ ಪ್ರೆಶ್ ಎನಿಸುವುದಿಲ್ಲ. ಮತ್ತೆ ಕೆಲವೊಮ್ಮೆ ಇನೇನೂ ಅನಾಹುತಗಳಾಗಿರುತ್ತವೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.