ಭಟ್ಕಳದಲ್ಲಿ 11 ಮಂದಿಯ ಸಾವಿಗೆ ಕಾರಣವಾದ ಕಳಿನಡ ಹೆಕ್ಕುವ ಹವ್ಯಾಸ, ಇದರ ಖಾದ್ಯ ಸಖತ್‌ ಫೇಮಸ್‌!

Published : May 25, 2026, 05:27 PM IST
kalinada craze

ಸಾರಾಂಶ

ಭಟ್ಕಳದ ವೆಂಕಟಾಪುರ ನದಿಯಲ್ಲಿ 'ಕಳಿನಡ' ಚಿಪ್ಪು ಸಂಗ್ರಹಿಸಲು ಹೋದ ಒಂದೇ ಗ್ರಾಮದ 11 ಮಂದಿ, ನೀರಿನ ಮಟ್ಟ ದಿಢೀರ್ ಏರಿಕೆಯಾದ ಕಾರಣ ಮುಳುಗಿ ಸಾವನ್ನಪ್ಪಿದ್ದಾರೆ. ನಾಲಿಗೆಯ ರುಚಿಯ ಹವ್ಯಾಸವೇ ಈ ಮಹಾ ದುರಂತಕ್ಕೆ ಕಾರಣವಾಗಿ, ಇಡೀ ಜಿಲ್ಲೆಯನ್ನೇ ಶೋಕದಲ್ಲಿ ಮುಳುಗಿಸಿದೆ.

ಭಟ್ಕಳ (ಮೇ.25): ಕರಾವಳಿ ಭಾಗದ ಜನರಿಗೆ ಬೇಸಿಗೆ ಬಂತೆಂದರೆ ಸಾಕು, ನದಿ-ಸಮುದ್ರದ ಕಲ್ಲುಬಂಡೆಗಳ ನಡುವೆ ಸಿಗುವ ಶೆಲ್‌ ಫಿಶ್‌ಗಳನ್ನು ಹಿಡಿದುತಂದು ಮನೆಯಲ್ಲಿ ಗಮ್ಮತ್ತಾಗಿ ಮಸಾಲಾ ಸಾಂಬಾರ್, ಸುಕ್ಕದಂತಹ ಸಾಂಪ್ರದಾಯಿಕ ರುಚಿಕರ ಖಾದ್ಯಗಳನ್ನು ತಯಾರಿಸಿ ಸವಿಯುವ ದೊಡ್ಡ ಹವ್ಯಾಸ. ಆದರೆ, ಭಾನುವಾರದ ರಜಾದಿನದಂದು ಮನೆಮಂದಿಯಲ್ಲಾ ಸೇರಿ ಸವಿಯಬೇಕಿದ್ದ ಅದೇ ಕಪ್ಪೆಚಿಪ್ಪಿನ ಖಾದ್ಯದ ಕ್ರೇಜ್, ಕೊನೆಗೆ 11 ಅಮಾಯಕ ಜೀವಗಳನ್ನು ಬಲಿಪಡೆದ ಮಹಾ ದುರಂತವಾಗಿ ಮುಕ್ತಾಯಗೊಂಡಿದೆ. ಶೆಲ್‌ ಫಿಶ್‌ಗಳಲ್ಲಿ ನೂರಾರು ವಿಧಗಳಿವೆ. ಇದರಲ್ಲಿ ಮಳುವೆ ಸಖತ್‌ ಫೇಮಸ್‌. ಅಷ್ಟೇ ಫೇಮಸ್‌ ಆಗಿರುವ ಮತ್ತೊಂದು ಶೆಲ್‌ ಫಿಶ್‌. ಕಳಿನಡ ಅಥವಾ ಕಳಿನೆಟ್ಟಿ.

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಶಿರಾಲಿ ಸಾರದಹೊಳೆಯ ಗ್ರಾಮಸ್ಥರು ಪ್ರತಿ ಬೇಸಿಗೆಯಲ್ಲಿ ವೆಂಕಟಾಪುರ ನದಿಗೆ ಹೋಗಿ ಕಳಿನಡ ಆರಿಸಿಕೊಂಡು ಬರುವುದು ವಾಡಿಕೆಯಾಗಿತ್ತು. ಅದರಂತೆ ಭಾನುವಾರ ತಟ್ಟಿಹಕ್ಕಲ ಸಮೀಪ ಎಂದಿನ ಉತ್ಸಾಹದಲ್ಲೇ ನದಿಗೆ ಇಳಿದಿದ್ದ ಒಂದೇ ಗ್ರಾಮದ 14 ಜನರ ಪೈಕಿ 11 ಮಂದಿ ಹೆಣವಾಗಿ ತೇಲಿಬಂದ ಘಟನೆ ಇಡೀ ಜಿಲ್ಲೆಯನ್ನೇ ಕಣ್ಣೀರಿನಲ್ಲಿ ಮುಳುಗಿಸಿದೆ.

ನಾಲಿಗೆಯ ರುಚಿಗಾಗಿ ಜೀವ ಪಣಕ್ಕಿಟ್ಟ ಹವ್ಯಾಸಿಗಳು!

ಕಳಿನಡ ಹೆಕ್ಕಿ ತರುವುದು ಇವರ ವೃತ್ತಿಯೇನಲ್ಲ. ಕೇವಲ ವರ್ಷಕ್ಕೊಮ್ಮೆ ಬರುವ ಈ ಸೀಸನ್‌ನಲ್ಲಿ ನಾಲಿಗೆಗೆ ವಿಭಿನ್ನ ರುಚಿ ನೀಡುವ ಕಳಿನಡ ಊಟ ಸವಿಯಬೇಕು ಎಂಬ ಹವ್ಯಾಸಕ್ಕಾಗಿ ಇವರೆಲ್ಲರೂ ಗುಂಪು ಗುಂಪಾಗಿ ನದಿಗೆ ಬಂದಿದ್ದರು. ಕಲ್ಲುಬಂಡೆಗಳ ಪ್ರದೇಶಗಳಲ್ಲಿ ಚಿಪ್ಪುಗಳು ಹೆಚ್ಚು ಸಿಗುವುದರಿಂದ ಚೀಲಗಳನ್ನು ಹಿಡಿದು ನದಿಯ ತಳಕ್ಕೆ ಇಳಿದಿದ್ದರು. ಆದರೆ, ಈ ಬಾರಿ ಅವರು ಆರಿಸಿಕೊಂಡ ದಿನವೇ ದುರದೃಷ್ಟಕರವಾಗಿ ಪರಿಣಮಿಸಿತ್ತು.

ಕಳೆದ ಎರಡು ಮೂರು ದಿನಗಳಿಂದ ಅಲ್ಲಲ್ಲಿ ಮಳೆಯಾಗುತ್ತಿದ್ದರೂ ನದಿಯಲ್ಲಿ ನೀರಿನ ಹರಿವು ಹೆಚ್ಚಿರಲಿಲ್ಲ. ಆದರೆ, ಸಮುದ್ರದ ಅಬ್ಬರದ ಅಲೆಗಳು ನದಿಯೊಳಗೆ ಒತ್ತಿ ಬರುತ್ತಿದ್ದ (ಉಬ್ಬರ) ಪರಿಣಾಮ, ನದಿಯ ನೀರಿನ ಮಟ್ಟ ದಿಢೀರನೆ ಏರತೊಡಗಿತ್ತು. ಇದರ ಪರಿವೇ ಇಲ್ಲದೆ ಕಳಿನಡ ಚಿಪ್ಪು ಹೆಕ್ಕುವುದರಲ್ಲೇ ಮಗ್ನರಾಗಿದ್ದ ಗ್ರಾಮಸ್ಥರು, ಇನ್ನೇನು ದಡ ಸೇರಬೇಕು ಎನ್ನುವಷ್ಟರಲ್ಲಿ ನದಿ ತುಂಬಿಹೋಗಿತ್ತು. ವೃತ್ತಿಪರರಲ್ಲದ ಕಾರಣ ಇವರಿಗೆ ತಟ್ಟಿಹಕ್ಕಲ ಬಳಿಯ ವೆಂಕಟಾಪುರ ನದಿಯ ಆಳ ಮತ್ತು ಇಳಿಜಾರಿನ ಅಂದಾಜಿರಲಿಲ್ಲ. ನೀರು ಏರುತ್ತಿರುವುದನ್ನು ಕಂಡು ಗಾಬರಿಯಲ್ಲಿ ಎಲ್ಲರೂ ಒಟ್ಟಾಗಿ ನದಿ ದಾಟಲು ಮುಂದಾದಾಗ, ನೇರವಾಗಿ ನದಿಯ ಅತ್ಯಂತ ಆಳವಾದ ಸುಳಿಗೆ ಸಿಲುಕಿದ್ದಾರೆ.

ಕರಾವಳಿಗರ ಹಾಟ್ ಫೇವರಿಟ್ ಕಳಿನಡ ಖಾದ್ಯದ ವೈಶಿಷ್ಟ್ಯ

ನದಿಯ ಸಿಹಿನೀರು ಹಾಗೂ ಸಮುದ್ರದ ಉಪ್ಪುನೀರು ಸಂಗಮಿಸುವ ಕಲ್ಲುಬಂಡೆಗಳ ಭಾಗಗಳಲ್ಲಿ ಸಾಮಾನ್ಯವಾಗಿ ಮಳವಿ ಮತ್ತು ಕಳಿನಡ ಅತ್ಯಧಿಕವಾಗಿ ದೊರೆಯುತ್ತವೆ. ಬೇಸಿಗೆ ಕಾಲವೇ ಇವುಗಳನ್ನು ಸಂಗ್ರಹಿಸಲು ಸೂಕ್ತ ಸಮಯ. ಸಮುದ್ರ ತೀರದ ಕಲ್ಲುಗಳಿಗೆ ಗಟ್ಟಿಯಾಗಿ ಅಂಟಿಕೊಂಡಿರುವ ಈ ಚಿಪ್ಪುಗಳನ್ನು ಜನರು ಕಬ್ಬಿಣದ ಸಲಾಕೆಗಳಿಂದ ಬೇರ್ಪಡಿಸಿಕೊಂಡು ಬಂದು ಚೀಲಗಳಲ್ಲಿ ತುಂಬಿಕೊಳ್ಳುತ್ತಾರೆ. ಬಳಿಕ ಮನೆಗಳಲ್ಲಿ ಅವುಗಳನ್ನು ಬಿಸಿ ನೀರಿನಲ್ಲಿ ಬೇಯಿಸಿ ಅಥವಾ ಒಡೆದು ಒಳಗಿನ ಮಾಂಸದ ಭಾಗವನ್ನು ಪ್ರತ್ಯೇಕಿಸುತ್ತಾರೆ. ಕರಾವಳಿ ಶೈಲಿಯ ಮಸಾಲೆ, ತೆಂಗಿನಕಾಯಿ ತುರಿ ಬಳಸಿ ಮಾಡುವ ಇದರ ಸಾಂಬಾರ್ ಹಾಗೂ ಸುಕ್ಕ ಅತ್ಯಂತ ಜನಪ್ರಿಯ. ಕರಾವಳಿ ಜನರಿಗೆ ಇದೊಂದು ಅತ್ಯಂತ ಪ್ರೀತಿಯ ಸೀಸನಲ್ ಖಾದ್ಯವಾಗಿದೆ.

ಜೀವದ ಹಂಗು ತೊರೆದು ಮೂವರ ರಕ್ಷಿಸಿದ ಮೀನುಗಾರ!

ನೋಡನೋಡುತ್ತಿದ್ದಂತೆ ಹತ್ತಾರು ಜನ ನೀರಿನಲ್ಲಿ ಮುಳುಗುತ್ತಿರುವುದನ್ನು ಗಮನಿಸಿದ ಸ್ಥಳೀಯ ಮೀನುಗಾರರೊಬ್ಬರು ತಕ್ಷಣ ತಮ್ಮ ದೋಣಿಯೊಂದಿಗೆ ಧಾವಿಸಿ, ಜೀವದ ಹಂಗು ತೊರೆದು ಮೂವರನ್ನು ನೀರಿನಿಂದ ಮೇಲಕ್ಕೆತ್ತಿ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಉಳಿದ 11 ಜನರನ್ನು ರಕ್ಷಿಸಲು ಸಾಧ್ಯವಾಗದೆ ಅವರು ನೀರು ಪಾಲಾಗಿದ್ದಾರೆ. ಮಧ್ಯಾಹ್ನದ ಊಟಕ್ಕೆ ಸವಿಯಬೇಕಿದ್ದ ಕಳಿನಡ ಖಾದ್ಯದ ಹವ್ಯಾಸ, ಮನೆಮಂದಿಯನ್ನು ಹೆಣವಾಗಿಸಿ ಭೀಕರ ಶೋಕ ತಂದಿಟ್ಟಿದೆ.

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬೆಂಗಳೂರಿಗರಲ್ಲಿ ಹೆಚ್ಚುತ್ತಿದೆ ಪ್ರೋಟೀನ್ ಕ್ರೇಜ್‌! ಕೇವಲ 'ಪ್ರೋಟೀನ್ ಬಾರ್'ಗಾಗಿಯೇ ₹2 ಲಕ್ಷ ಖರ್ಚು ಮಾಡಿದ ಗ್ರಾಹಕ!
ಯಾವ ಫೈವ್ ಸ್ಟಾರ್ ಹೋಟೆಲ್‌ಗಳಲ್ಲಿ ಸಿಗದ ಫುಡ್, ಉತ್ತರ ಕರ್ನಾಟಕದ ಮನೆ ಮನೆಯಲ್ಲಿಯೂ ಸಿಗುತ್ತೆ!