ಬೆಂಗಳೂರಿನ ದಿ ರಾಮೇಶ್ವರಂ ಕೆಫೆ ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ವಿವಾಹ ಮಹೋತ್ಸವದಲ್ಲಿ ವಿವಿಧ ಬಗೆಯ ರುಚಿರುಚಿಯಾದ ಅಡುಗೆ ಮಾಡಿ ಬಡಿಸಲು ಸಿದ್ಧವಾಗಿದೆ. ಇದರೊಂದಿಗೆ ಮತ್ತೊಂದು ಬೆಂಗಳೂರು ಕೆಫೆ ಕೂಡ ಅಂಬಾನಿ ವಿವಾಹ ಭಾಗವಾಗಿದೆ.
ದಕ್ಷಿಣ ಭಾರತದ ಖಾದ್ಯಗಳಿಗೆ ಹೆಸರುವಾಸಿಯಾಗಿರುವ ಬೆಂಗಳೂರಿನ ದಿ ರಾಮೇಶ್ವರಂ ಕೆಫೆ ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ವಿವಾಹ ಮಹೋತ್ಸವದಲ್ಲಿ ವಿವಿಧ ಬಗೆಯ ರುಚಿರುಚಿಯಾದ ಅಡುಗೆ ಮಾಡಿ ಬಡಿಸಲು ಸಿದ್ಧವಾಗಿದೆ. ಮುಂಬೈ - ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ನಲ್ಲಿರುವ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ಅದ್ಧೂರಿ ವಿವಾಹ ಸಮಾರಂಭ ನಡೆಯುತ್ತಿದ್ದು, ಈ ತಾರಾ ಮೆರುಗಿನ ಕಣ್ಣು ಕುಕ್ಕುವ ಸಮಾರಂಭದಲ್ಲಿ ಬೆಳಗ್ಗಿನ ಚಹಾ ಮತ್ತು ರಾತ್ರಿಯ ಊಟದ ಸಮಯದಲ್ಲಿ ಆಹಾರವನ್ನು ನೀಡುವುದಾಗಿ ದೃಢಪಡಿಸಿದೆ.
ಚಹಾ ಮೆನುವಿನಲ್ಲಿ ತೆಂಗಿನ ಪುರನ್ ಪೋಲಿ, ಪೆಸರಟ್ಟು ದೋಸೆ, ತಟ್ಟೆ ಇಡ್ಲಿ, ಬೋಂಡಾ ಸೂಪ್ ಮತ್ತು ಸರ್ವೋತ್ಕೃಷ್ಟ ಫಿಲ್ಟರ್ ಕಾಫಿ ಇರಲಿದೆ ಎಂದು ರಾಮೇಶ್ವರಂ ಕೆಫೆ ಕಡೆಯಿಂದ ಮಾಹಿತಿ ಸಿಕ್ಕಿದೆ.
undefined
ಈ ಹಿಂದೆ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಮಾಹಿತಿ ನೀಡಿದಂತೆ ಇಟಲಿಯಲ್ಲಿ ನಡೆದ ಎರಡನೇ ವಿವಾಹಪೂರ್ವ ಸಮಯದಲ್ಲಿ ತನ್ನ ಪಾಕ ಕೌಶಲ್ಯವನ್ನು ರಾಮೇಶ್ವರಂ ಕೆಫೆ ಪ್ರದರ್ಶಿಸಿತ್ತು. ಸಹ-ಸಂಸ್ಥಾಪಕ ರಾಘವೇಂದ್ರ ರಾವ್ ಈ ಬಗ್ಗೆ ಮಾತನಾಡಿದ್ದರು.
ಜುಲೈ 8 ರಂದು ಮುಂಬೈನಲ್ಲಿರುವ ಅಂಬಾನಿ ಮನೆ ಆಂಟಿಲಿಯಾದಲ್ಲಿ ವಿವಾಹಪೂರ್ವ ಸಾಂಪ್ರದಾಯಿಕ ಕಾರ್ಯಕ್ರಮ ಮೆಹಂದಿ ಸಮಾರಂಭಕ್ಕೂ ರಾಮೇಶ್ವರಂ ಕೆಫೆಯಿಂದ ದಕ್ಷಿಣದ ಅಡುಗೆ ಇತ್ತು ಎಂದು ಕೆಫೆ ಬಹಿರಂಗಪಡಿಸಿದೆ.
ಈ ನಡುವೆ ಬೆಂಗಳೂರಿನ ಮತ್ತೊಂದು ಫೇಮಸ್ " ಚಿನಿತಾ ರಿಯಲ್ ಮೆಕ್ಸಿಕನ್ ಫುಡ್ (Chinita Real Mexican Food) ಅಂಬಾನಿ ಆಂಟಿಲಿಯಾದಲ್ಲಿ ನಡೆದ ಮದುವೆಯ ಪೂರ್ವ ಆಚರಣೆಗಳಲ್ಲಿ ಆಹಾರ ತಯಾರಿಸಿ ಬಡಿಸಿದ ಬಗ್ಗೆ Instagram ನಲ್ಲಿ ತನ್ನ ಖುಷಿಯನ್ನ ಹಂಚಿಕೊಂಡಿದೆ.
ಚಿನಿಟಾ (Chinita) ಆಂಟಿಲಿಯಾದಲ್ಲಿ ಅಂಬಾನಿ ವಿವಾಹ ಕಾರ್ಯಕ್ರಮಗಳಲ್ಲಿ ಕ್ಯಾಟರಿಂಗ್ ಮಾಡಿದೆ. ಇದು ಖಂಡಿತವಾಗಿಯೂ ಜೀವಮಾನದುದ್ದಕ್ಕೂ ಅತ್ಯಂತ ಸುಂದರ ಅನುಭವವಾಗಿದೆ ಎಂದು ರೆಸ್ಟೋರೆಂಟ್ ಪೋಸ್ಟ್ ನಲ್ಲಿ ಬರೆದುಕೊಂಡಿದೆ.
ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ವಿವಾಹ ಪೂರ್ವ ಆಚರಣೆಗಳು ಈ ವರ್ಷದ ಆರಂಭದಲ್ಲಿ ಜಾಮ್‌ನಗರದ ರಿಲಯನ್ಸ್ ಎಸ್ಟೇಟ್‌ನಲ್ಲಿ (ಅಂಬಾನಿ ಕುಟುಂಬದ ಮೂಲ ಮನೆ) ಮೂರು ದಿನಗಳ ಕಾಲ ನಡೆಯಿತು. ಖ್ಯಾತ ಗಾಯಕಿ ರಿಹಾನ್ನಾ ಅವರ ಖಾಸಗಿ ಸಂಗೀತ ಕಚೇರಿ ಮತ್ತು ದಿಲ್ಜಿತ್ ದೋಸಾಂಜ್ ಪ್ರದರ್ಶನ ಈ ಸಮಾರಂಭದ ಹೈಲೈಟ್ ಆಗಿತ್ತು.
ಬಳಿಕ ಇಟಲಿಯಿಂದ ಫ್ರಾನ್ಸ್ ತನಕ ಐಷಾರಾಮಿ ಹಡಗಿನಲ್ಲಿ ನಡೆದ ಎರಡನೇ ವಿವಾಹ ಮಹೋತ್ಸವ ನಂತರ ಲಂಡನ್‌ನಲ್ಲಿ ವಿಶೇಷ ಕೂಟ ಏರ್ಪಡಿಸುವ ಮೂಲಕ ಕೊನೆಗೊಂಡಿತ್ತು. ಇದೀಗ ಜುಲೈ 12, 13, 14 ಮೂರು ದಿನ ವಿವಾಹ ಮಹೋತ್ಸವ ನಡೆಯಲಿದ್ದು, ಜುಲೈ 12ರಂದು ರಾತ್ರಿ ಅನಂತ್ ಅಂಬಾನಿ ರಾಧಿಕಾ ಮರ್ಚೆಂಟ್ ವಿವಾಹ, ಜು. 13ರಂದು 'ಶುಭ್ ಆಶೀರ್ವಾದ್' ಮತ್ತು ಜು. 14ರಂದು ಅಂತಿಮ ಸುತ್ತಿನ 'ಮಂಗಲ್ ಉತ್ಸವ್' (ಆರತಕ್ಷತೆ) ಕಾರ್ಯಕ್ರಮ ನಡೆಯಲಿದೆ.