Healthy Food : ನೆನೆಸಿಟ್ಟ ನೆಲ್ಲಿಕಾಯಿ ತಿಂದ್ರೆ ಸಿಗುತ್ತೆ ಅದ್ಭುತ ರಿಸಲ್ಟ್

By Suvarna News  |  First Published Jun 23, 2023, 3:28 PM IST

ನೆಲ್ಲಿಕಾಯಿ ಎಂದ ತಕ್ಷಣ ಬಾಯಲ್ಲಿ ನೀರೂರುತ್ತೆ. ಅದಕ್ಕೆ ಉಪ್ಪು, ಮೆಣಸು ಬೆರೆಸಿ ತಿಂದ್ರೆ ಅದ್ರ ಮಜವೇ ಬೇರೆ. ನೆಲ್ಲಿಕಾಯಿ ಆರೋಗ್ಯ ವೃದ್ಧಿ ಮಾಡ್ಬೇಕು ಎನ್ನುವವರು ಸರಿಯಾದ ವಿಧಾನದಲ್ಲಿ ಅದನ್ನು ತಿನ್ನಬೇಕು. 
 


ಬಹಳ ಹಿಂದಿನಿಂದಲೂ ನೆಲ್ಲಿಕಾಯಿ ಆಯುರ್ವೇದ ಪದ್ಧತಿಯ ಔಷಧಿಯಲ್ಲಿ ಬಳಕೆಯಾಗುತ್ತಿದೆ. ಅನೇಕ ಖಾಯಿಲೆಗಳಿಗೆ ರಾಮಬಾಣವಾದ, ಸೌಂದರ್ಯವರ್ಧಕವೂ ಆದ ನೆಲ್ಲಿಕಾಯಿ ಹಲವು ರೀತಿಯಲ್ಲಿ ಪ್ರಯೋಜನಕಾರಿ. ಇದರಲ್ಲಿರುವ ವಿಟಮಿನ್ ಸಿ ಆರೋಗ್ಯಕ್ಕೆ ಉತ್ತಮವಾಗಿದೆ.

ನೆಲ್ಲಿಕಾಯಿ (Amla) ಯಲ್ಲಿ ವಿಟಮಿನ್ ಸಿ, ಪೊಟ್ಯಾಶಿಯಮ್, ಕ್ಯಾಲ್ಶಿಯಮ್, ಐರನ್ (Iron) ಮತ್ತು ಎಂಟಿ ಆಕ್ಸಿಡೆಂಟ್ ಮುಂತಾದ ಪೋಷಕಾಂಶಗಳು ಹೇರಳವಾಗಿದೆ. ಈ ಎಲ್ಲ ಪೌಷ್ಠಿಕ ಸತ್ವಗಳು ಶರೀರವನ್ನು ಅನೇಕ ರೋಗದಿಂದ ದೂರಮಾಡುತ್ತವೆ. ಇದನ್ನು ಹಲವು ವಿಧದಲ್ಲಿ ಸೇವಿಸಲಾಗುತ್ತದೆ. ನೆಲ್ಲಿಕಾಯಿಯನ್ನು ಹಸಿಯಾಗಿ ಅಥವಾ ಒಣಗಿಸಿ ಕೂಡ ತಿನ್ನುತ್ತಾರೆ. ನೆಲ್ಲಿಕಾಯಿಯ ಉಪ್ಪಿನಕಾಯಿ, ಜ್ಯೂಸ್, ಜಾಮ್, ಮುರಬ್ಬಾ, ಚಟ್ನಿ ಕೂಡ ಬಹಳ ಫೇಮಸ್ ಆಗಿದೆ. ಅನೇಕ ಮಂದಿ ಇದನ್ನು ಬೆಳಗ್ಗೆ ಖಾಲಿ ಹೊಟ್ಟೆ (Stomach) ಯಲ್ಲಿ ಸೇವಿಸುತ್ತಾರೆ. ಇನ್ಕೆಲವರು ರಾತ್ರಿ ಮಲಗುವ ಮುನ್ನ ನೆಲ್ಲಿಕಾಯಿಯ ಸೇವನೆ ಮಾಡುತ್ತಾರೆ. ನೆಲ್ಲಿಕಾಯಿಯನ್ನು ರಾತ್ರಿ ಪೂರ್ತಿ ನೀರಿನಲ್ಲಿ ನೆನೆಸಿ ಬೆಳಿಗ್ಗೆ ಇದನ್ನು ಸೇವಿಸುವುದರಿಂದ ಅನೇಕ ಸಮಸ್ಯೆಗಳು ದೂರವಾಗುತ್ತವೆ. ಇದು ಜೀರ್ಣಕ್ರಿಯೆಯನ್ನು ಸರಾಗ ಮಾಡುತ್ತದೆ ಮತ್ತು ತೂಕವನ್ನು ಕೂಡ ಕಡಿಮೆ ಮಾಡುತ್ತದೆ. ರಾತ್ರಿ ನೆನೆಸಿಟ್ಟ ನೆಲ್ಲಿಕಾಯಿಯನ್ನು ತಿನ್ನುವುದರಿಂದ ಇನ್ನೂ ಅನೇಕ ಪ್ರಯೋಜನಗಳಿವೆ.

Tap to resize

Latest Videos

ಮಧುಮೇಹಿಗಳು ಮಾವು ಮತ್ತು ಹಲಸಿನ ಹಣ್ಣು ತಿನ್ಬೋದಾ..ಆರೋಗ್ಯ ತಜ್ಞರು ಏನಂತಾರೆ?

ನೆನೆಸಿಟ್ಟ ನೆಲ್ಲಿಕಾಯಿ ಸೇವನೆ ಮಾಡಿದ್ರೆ ಈ ಎಲ್ಲ ಲಾಭ :
ರೋಗನಿರೋಧಕ ಶಕ್ತಿ ವೃದ್ಧಿ :
 ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಮತ್ತು ಎಂಟಿಆಕ್ಸಿಡೆಂಟ್ ಅಂಶವು ಅಧಿಕ ಪ್ರಮಾಣದಲ್ಲಿ ಇರುತ್ತದೆ. ಇದು ಶರೀರದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತದೆ. ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೆಲ್ಲಿಕಾಯಿ ತಿನ್ನೋದ್ರಿಂದ ಅನೇಕ ತರಹದ ಸೋಂಕುಗಳಿಂದ ದೂರವಿರಬಹುದು.

ತೂಕ ಇಳಿಸಲು ಸಹಾಯಕಾರಿ : ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿರುವವರು ತೂಕ ಇಳಿಸಲು ಹತ್ತು ಹಲವು ವಿಧಾನಗಳನ್ನು ಅನುಸರಿಸುತ್ತಾರೆ. ತೂಕ ಕಡಿಮೆ ಮಾಡಿಕೊಳ್ಳಲು ಬಯಸುವವರು ಮುಂಜಾನೆ ಖಾಲಿ ಹೊಟ್ಟೆಯಲ್ಲಿ ನೆನೆಸಿಟ್ಟ ನೆಲ್ಲಿಕಾಯಿಯನ್ನು ತಿನ್ನಬೇಕು. ನೆಲ್ಲಿಕಾಯಿಯಲ್ಲಿ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುವ ಗುಣವಿದೆ. ಇದರಿಂದ ದೇಹದಲ್ಲಿ ಸಂಗ್ರಹವಾಗುವ ಹೆಚ್ಚುವರಿ ಕೊಬ್ಬು ಮತ್ತು ಕ್ಯಾಲೊರಿಗಳು ಹೊರಹೋಗುತ್ತವೆ. ದೇಹದಲ್ಲಿನ ಕೊಬ್ಬು ಕರಗಿದಾಗ ತೂಕದಲ್ಲಿ ಇಳಿಕೆಯಾಗುತ್ತದೆ.

ಉದರ ಸಮಸ್ಯೆಗಳು ದೂರ : ನೆಲ್ಲಿಕಾಯಿ ಸೇವನೆ ಜೀರ್ಣಕ್ರಿಯೆಗೆ ಬಹಳ ಒಳ್ಳೆಯದು. ಇದರಲ್ಲಿರುವ ಫೈಬರ್ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ಬೆಳಿಗ್ಗೆ ಎದ್ದೊಡನೆ ಖಾಲಿ ಹೊಟ್ಟೆಯಲ್ಲಿ ನೆನೆಸಿಟ್ಟ ನೆಲ್ಲಿಕಾಯಿಯನ್ನು ತಿನ್ನುವುದರಿಂದ ಗ್ಯಾಸ್, ಮಲಬದ್ಧತೆ, ಅಜೀರ್ಣ, ವಾಕರಿಕೆ ಮುಂತಾದ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳಿಂದ ಮುಕ್ತಿ ಹೊಂದಬಹುದು.

ಚಪಾತಿ ಮಿಕ್ಕಿದ್ಯಾ? ಚಿಂತೆ ಬಿಡಿ, ಅದ್ರಿಂದಾನೇ ಗರಿಗರಿಯಾದ ದೋಸೆ ಮಾಡಿ

ದೇಹದಲ್ಲಿರುವ ವಿಷದ ಅಂಶವನ್ನು ಹೊರಹಾಕುತ್ತೆ :  ಪ್ರತಿನಿತ್ಯ ನಾವು ಸೇವಿಸುವ ಆಹಾರದಲ್ಲಿ ನಮಗೇ ತಿಳಿಯದಂತೆ ಅನೇಕ ವಿಷಯುಕ್ತ ಪದಾರ್ಥಗಳು ಅಡಗಿರುತ್ತವೆ. ಅವು ಶರೀರದ ಒಳಗಡೆ ಪ್ರವೇಶಿಸಿ ತಮ್ಮ ಕೆಲಸವನ್ನು ಆರಂಭಿಸುತ್ತವೆ. ಬೆಳಿಗ್ಗೆ ನೆಲ್ಲಿಕಾಯಿಯನ್ನು ತಿಂದರೆ ಅದು ನಮ್ಮ ದೇಹದಲ್ಲಿನ ವಿಷಕಾರಿ ಅಂಶವನ್ನು ಹೊರಹಾಕುತ್ತದೆ. ದೇಹದಿಂದ ವಿಷಕಾರಿ ಅಂಶ ಹೊರನಡೆದಾಗ ಲಿವರ್ ಚೆನ್ನಾಗಿ ಕೆಲಸ ಮಾಡುತ್ತದೆ. ಅದರಿಂದ ಲಿವರ್ ಗೆ ಸಂಬಂಧಿಸಿದ ಸಮಸ್ಯೆಗಳೂ ಉದ್ಭವಿಸುವುದಿಲ್ಲ.

ಹೃದಯವನ್ನು ಆರೋಗ್ಯವಾಗಿರಿಸುತ್ತೆ : ರಾತ್ರಿ ನೆನೆಸಿಟ್ಟ ನೆಲ್ಲಿಕಾಯಿಯನ್ನು ಬೆಳಿಗ್ಗೆ ತಿನ್ನುವುದರಿಂದ ಹೃದಯ ಸಂಬಂಧಿ ತೊಂದರೆಗಳು ಕಡಿಮೆಯಾಗುತ್ತದೆ. ನೆಲ್ಲಿಕಾಯಿಯಿಂದ ರಕ್ತದೊತ್ತಡ ಕೂಡ ನಿಯಂತ್ರಣದಲ್ಲಿರುತ್ತದೆ. ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಿ ಹೃದಯ ಆರೋಗ್ಯವನ್ನು ಕಾಪಾಡುತ್ತದೆ. ನೆಲ್ಲಿಕಾಯಿ ಎಷ್ಟೇ ಒಳ್ಳೆಯದಾಗಿದ್ದರೂ ಕೂಡ ಕೆಲವು ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಇದರಿಂದ ತೊಂದರೆಯಾಗಬಹುದು. ಹಾಗಾಗಿ ಪ್ರತಿನಿತ್ಯ ಸೇವಿಸುವ ಮೊದಲು ಒಮ್ಮೆ ವೈದ್ಯರ ಸಲಹೆ ಪಡೆದುಕೊಳ್ಳಿ. ಸಾಮಾನ್ಯವಾಗಿ ಈ ಕೆಳಗಿನ ತೊಂದರೆ ಇರುವವರಿಗೆ ನೆಲ್ಲಿಕಾಯಿ ವರ್ಜ್ಯ.

ಶೀತ, ನೆಗಡಿಯಿಂದ ಬಳಲುತ್ತಿರುವವರು ನೆಲ್ಲಿಕಾಯಿ ತಿನ್ನಬೇಡಿ. ರಕ್ತದಲ್ಲಿ ಸಕ್ಕರೆಯ ಪ್ರಮಾಣ ಕಡಿಮೆ ಇರುವವರಿಗೆ ಕೂಡ ನೆಲ್ಲಿಕಾಯಿ ಒಳ್ಳೆಯದಲ್ಲ. ನೆಲ್ಲಿಕಾಯಿ ಸೇವನೆಯಿಂದ ದೇಹದಲ್ಲಿ ಸೋಡಿಯಂ ಪ್ರಮಾಣ ಹೆಚ್ಚುತ್ತದೆ ಹಾಗಾಗಿ ಮೂತ್ರಪಿಂಡದ ಸಮಸ್ಯೆ ಹೊಂದಿರುವವರು ನೆಲ್ಲಿಕಾಯಿಯನ್ನು ಸೇವಿಸದೇ ಇರುವುದು ಉತ್ತಮ.

click me!