1 ಕಪ್ ಅವಲಕ್ಕಿ-ರವೆಯಿದ್ರೆ 10 ನಿಮಿಷದಲ್ಲಿ ರೆಡಿಯಾಗುತ್ತೆ ಹೂವಷ್ಟೇ ಸಾಫ್ಟ್ ಆದ ಈ ಸ್ಪಾಂಜ್ ತಿಂಡಿ

Published : Oct 13, 2026, 11:35 PM IST
Poha rava breakfast

ಸಾರಾಂಶ

Poha rava breakfast: ಬೆಳಗ್ಗಿನ ಗಡಿಬಿಡಿಯಲ್ಲಿ ದಿಢೀರನೆ ಏನಾದರೂ ರುಚಿಕರ ಮತ್ತು ಆರೋಗ್ಯಕರ ತಿಂಡಿ ಮಾಡಬೇಕೆಂದರೆ ಈ ಅವಲಕ್ಕಿ-ರವೆ ಸ್ಪಾಂಜ್ ಬ್ರೇಕ್‌ಫಾಸ್ಟ್ ಬೆಸ್ಟ್ ಚಾಯ್ಸ್. ಕೇವಲ ಒಂದು ಚಮಚ ಎಣ್ಣೆಯಲ್ಲಿ ಹತ್ತಿಯಂತೆ ಮೃದುವಾಗಿ ಬರುವ ಈ ತಿಂಡಿ ಮತ್ತು ಖಾರದ ಬೆಳ್ಳುಳ್ಳಿ ಚಟ್ನಿ ಮಾಡುವ ಸುಲಭ ವಿಧಾನ ಇಲ್ಲಿದೆ.

ದಿನಾ ಅದೇ ತಿಂಡಿ ತಿಂದು ಬೋರ್ ಆಗಿದ್ಯಾ? ಹಾಗಿದ್ರೆ ಕೇವಲ 1 ಕಪ್ ಅವಲಕ್ಕಿ ಮತ್ತು ರವೆಯಿಂದ, ಯಾವುದೇ ಹಿಟ್ಟು ಹುದುಗಿಸೋ ಗೋಜಿಲ್ಲದೆ, ಕೇವಲ 10 ನಿಮಿಷದಲ್ಲಿ ಹೂವಿನಂತೆ ಸಾಫ್ಟ್ ಆಗಿರೋ ಈ ಸ್ಪಾಂಜ್ ತಿಂಡಿ ಮಾಡಿ ನೋಡಿ! ಜೊತೆಗೆ ಈ ಖಾರದ ಬೆಳ್ಳುಳ್ಳಿ ಚಟ್ನಿ ಇದ್ರೆ ಮನೆಯಲ್ಲಿ ಎಲ್ಲರೂ ಹೊಟ್ಟೆತುಂಬಾ ಇಷ್ಟಪಟ್ಟು ತಿಂತಾರೆ.

ಖಾರದ ಬೆಳ್ಳುಳ್ಳಿ ಚಟ್ನಿಗೆ (ಸ್ಪೆಷಲ್ ಕಾಂಬಿನೇಷನ್)ಬೇಕಾಗುವ ಸಾಮಗ್ರಿಗಳು

ಒಣ ಕೆಂಪು ಮೆಣಸಿನಕಾಯಿ: 10 ರಿಂದ 15
ಬೆಳ್ಳುಳ್ಳಿ ಎಸಳು: 8 ರಿಂದ 10
ಜೀರಿಗೆ: 1 ಚಮಚ
ಖಾರದ ಪುಡಿ: 1 ಚಮಚ
ಉಪ್ಪು: ರುಚಿಗೆ ತಕ್ಕಂತೆ
ತುಪ್ಪ: 1/2 ಚಮಚ (ಒಗ್ಗರಣೆಗೆ)
ಚಿಕ್ಕದಾಗಿ ಹೆಚ್ಚಿದ ಬೆಳ್ಳುಳ್ಳಿ: 1 ಎಸಳು

ಮಾಡುವ ವಿಧಾನ

*ಒಂದು ಪಾತ್ರೆಯಲ್ಲಿ ನೀರು ಕಾಯಿಸಿ ಒಣ ಮೆಣಸಿನಕಾಯಿಗಳನ್ನು ಹಾಕಿ 2 ನಿಮಿಷ ಕುದಿಸಿ (ಮೆಣಸಿನಕಾಯಿ ಮೆತ್ತಗಾಗಬೇಕು). ನಂತರ ನೀರು ಬಸಿದು ಅದರ ತೊಟ್ಟುಗಳನ್ನು ತೆಗೆಯಿರಿ.

*ಒರಳುಕಲ್ಲು ಅಥವಾ ಮಿಕ್ಸಿ ಜಾರ್‌ಗೆ ಬೇಯಿಸಿದ ಮೆಣಸಿನಕಾಯಿ, ಬೆಳ್ಳುಳ್ಳಿ, ಜೀರಿಗೆ, ಖಾರದ ಪುಡಿ ಮತ್ತು ಉಪ್ಪು ಹಾಕಿ ತರಿತರಿಯಾಗಿ (Coarse paste) ರುಬ್ಬಿಕೊಳ್ಳಿ (ತುಂಬಾ ನುಣ್ಣಗೆ ಮಾಡಬೇಡಿ).

*ಒಗ್ಗರಣೆ ಸೌಟಿನಲ್ಲಿ ಅರ್ಧ ಚಮಚ ತುಪ್ಪ ಕಾಯಿಸಿ, ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿ ಹಾಕಿ ಕೆಂಪಾಗಿಸಿ. ನಂತರ ರುಬ್ಬಿದ ಚಟ್ನಿ ಪೇಸ್ಟ್ ಸೇರಿಸಿ ಕೇವಲ 1 ನಿಮಿಷ ಬಾಡಿಸಿದರೆ ಘಮಘಮಿಸುವ ಖಾರದ ಚಟ್ನಿ ಸಿದ್ಧ!

ಅವಲಕ್ಕಿ-ರವೆ ಸ್ಪಾಂಜ್ ತಿಂಡಿಗೆ ಬೇಕಾಗುವ ಸಾಮಗ್ರಿಗಳು

ಅವಲಕ್ಕಿ: 1 ಕಪ್ (ತೊಳೆದು ನೀರು ಬಸಿದಿದ್ದು)
ರವೆ (ಉಪ್ಪಿಟ್ಟು ರವೆ/ಬಾಂಬೆ ರವೆ): 1 ಕಪ್
ಮೊಸರು: 1/3 ಕಪ್ (ಸ್ವಲ್ಪ ಹುಳಿ ಇದ್ದರೂ ಪರವಾಗಿಲ್ಲ)
ನೀರು: 1/2 ಕಪ್
ಸಕ್ಕರೆ: 1.5 ಚಮಚ (ದೋಸೆಗೆ ಒಳ್ಳೆಯ ಬಣ್ಣ ಮತ್ತು ರುಚಿಗೆ)
ಉಪ್ಪು: ರುಚಿಗೆ ತಕ್ಕಂತೆ
ಇನೋ (Eno Fruit Salt): 1/2 ಚಮಚ (ಅಥವಾ ಅಡುಗೆ ಸೋಡಾ)
ಎಣ್ಣೆ: ಬೇಯಿಸಲು ಸ್ವಲ್ಪ

ಮಾಡುವ ವಿಧಾನ

*1 ಕಪ್ ಅವಲಕ್ಕಿಯನ್ನು 2-3 ಬಾರಿ ಚೆನ್ನಾಗಿ ತೊಳೆದು ನೀರು ಬಸಿದು ಪಕ್ಕಕ್ಕಿಡಿ.

*ಒಂದು ಬಟ್ಟಲಿನಲ್ಲಿ 1 ಕಪ್ ರವೆ, 1/3 ಕಪ್ ಮೊಸರು, ಅರ್ಧ ಕಪ್ ನೀರು ಮತ್ತು 1.5 ಚಮಚ ಸಕ್ಕರೆ ಹಾಕಿ ಕಲಸಿ 5 ನಿಮಿಷ ನೆನೆಯಲು ಬಿಡಿ.

*ನೆನೆಸಿದ ರವೆ-ಮೊಸರಿನ ಮಿಶ್ರಣ ಮತ್ತು ನೆನೆಸಿದ ಅವಲಕ್ಕಿಯನ್ನು ಮಿಕ್ಸಿ ಜಾರ್‌ಗೆ ಹಾಕಿ. ಅಗತ್ಯವಿದ್ದರೆ 2-3 ಚಮಚ ನೀರು ಸೇರಿಸಿ ದೋಸೆ ಹಿಟ್ಟಿಗಿಂತ ಸ್ವಲ್ಪ ಗಟ್ಟಿಯಾಗಿ ನುಣ್ಣಗೆ ರುಬ್ಬಿಕೊಳ್ಳಿ.

*ರುಬ್ಬಿದ ಹಿಟ್ಟಿಗೆ ರುಚಿಗೆ ತಕ್ಕಷ್ಟು ಉಪ್ಪು ಮತ್ತು 1/2 ಚಮಚ ಇನೋ (Eno) ಹಾಕಿ, ಒಂದೇ ದಿಕ್ಕಿನಲ್ಲಿ ಚೆನ್ನಾಗಿ ತಿರುವಿ. ಹಿಟ್ಟು ನೊರೆ-ನೊರೆಯಾಗಿ ಉಬ್ಬಿ ಹಗುರವಾಗುತ್ತದೆ.

*ಒಂದು ಚಿಕ್ಕ ಕಡಾಯಿ ಅಥವಾ ಪ್ಯಾನ್‌ಗೆ ಸ್ವಲ್ಪ ಎಣ್ಣೆ ಸವರಿ. 2 ರಿಂದ 3 ಸೌಟು ಹಿಟ್ಟನ್ನು ಮಧ್ಯಕ್ಕೆ ಹಾಕಿ ಲಘುವಾಗಿ ಹರಡಿ. ಮುಚ್ಚಳ ಮುಚ್ಚಿ ಮಧ್ಯಮ ಉರಿಯಲ್ಲಿ 2 ನಿಮಿಷ ಬೇಯಿಸಿ.

*ಕೆಳಭಾಗ ಬೆಂದ ನಂತರ ತಾನಾಗಿಯೇ ಪ್ಯಾನ್ ಬಿಟ್ಟುಕೊಳ್ಳುತ್ತದೆ, ನಂತರ ಮಗುಚಿ ಹಾಕಿ ಎರಡೂ ಬದಿ ಹೊಂಬಣ್ಣ ಬರುವವರೆಗೆ ಬೇಯಿಸಿ ತೆಗೆಯಿರಿ.

ವಿಶೇಷತೆ

ಕೇವಲ 10 ನಿಮಿಷದಲ್ಲಿ ತಯಾರಾಗುವ ಈ ತಿಂಡಿ ಹತ್ತಿಯಷ್ಟೇ ಹಗುರ ಮತ್ತು ಮೃದುವಾಗಿರುತ್ತದೆ. ಬಿಸಿಬಿಸಿ ಸ್ಪಾಂಜ್ ತಿಂಡಿಯ ಜೊತೆಗೆ ಈ ಖಾರದ ಬೆಳ್ಳುಳ್ಳಿ ಚಟ್ನಿ ನಂಚಿಕೊಂಡು ತಿಂದರೆ ಹೊಟ್ಟೆ ತುಂಬಿದರೂ ನಾಲಿಗೆಗೆ ತೃಪ್ತಿಯಾಗುವುದಿಲ್ಲ! ಮಕ್ಕಳ ಲಂಚ್ ಬಾಕ್ಸ್‌ಗೂ ಇದು ಬೆಸ್ಟ್ ಆಯ್ಕೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕಬ್ಬಿಣದ ತವಾದಲ್ಲೇ ಮಾಡಿ ಹೋಟೆಲ್‌ನಂತಹ ಮೃದುವಾದ ರುಮಾಲಿ ರೊಟ್ಟಿ! ಇಲ್ಲಿದೆ ಸಿಂಪಲ್ ಟ್ರಿಕ್
ಹಿಟ್ಟಿಗೆ ಈ ಪದಾರ್ಥ ಹಾಕಿ ನೋಡ್ರಿ.. ಹುಳಿನೂ ಮಾಯ, ದೋಸೆ-ಇಡ್ಲಿನೂ ಹೂವಿನಂತೆ ಸಾಫ್ಟ್ ಆಗುತ್ತೆ!